ಬಸವ-ಭೀಮ ಸಂಗಮ: ಬಂಧುತ್ವಕ್ಕೆ ಬೆಂಕಿ ಹಚ್ಚಿದ ಹಿಂದೂತ್ವ ಬೇಡ
ಕೂಡಲಸಂಗಮ
ಹಿಂದುತ್ವವಾದಿಗಳು ಬಸವಣ್ಣನನ್ನು ವಿಶ್ವಗುರುವಾಗಲು ಬಿಡುತ್ತಿಲ್ಲ. ಬಸವ-ಅಂಬೇಡ್ಕರ ಅವರ ಬೀಜವನ್ನು ಮನೆ ಮನದಲ್ಲಿ ಭಿತ್ತಿದರೆ ಹಿಂದುತ್ವದ ಬೀಜ ನಾಶವಾಗುವುದು ಎಂದು ಮೈಸೂರು ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಹೇಳಿದರು.
ಭಾನುವಾರ ಕೂಡಲಸಂಗಮ ಸಂಗಮೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದ ಬಸವ-ಭೀಮ ಸಂಗಮ ಸಮಾರಂಭ ಉದ್ಘಾಟಿಸಿ ಮಾತನಾಡಿ, ಮನುವಾದಕ್ಕೆ ಬೆಂಕಿ ಹಚ್ಚಿ, ಮಟ್ಟಹಾಕಿದ ಕ್ರಾಂತಿ ಭೂಮಿ ಕೂಡಲಸಂಗಮದಲ್ಲಿ ಬಸವ-ಭೀಮ ಸಂಗಮ ಕಾರ್ಯಕ್ರಮ ಹಮ್ಮಿಕೊಂಡಿದ್ದು ಅರ್ಥಪೂರ್ಣ.

ಬಂಧುತ್ವಕ್ಕೆ ಬೆಂಕಿ ಹಚ್ಚಿದ ಹಿಂದೂತ್ವ ಬೇಡ, ಬಂಧುತ್ವ ಇಲ್ಲದ ಹಿಂದೂತ್ವ ದೇಶದ ಭೂಪಟವು ಅಪಾಯಕಾರಿ. ಬಂಧುತ್ವದ ಭೂಮಿಯಲ್ಲಿ ಹಿಂದುತ್ವ ಬಿತ್ತಲು ಸಾಧ್ಯವಿಲ್ಲ, ಬಿತ್ತಲು ಬಿಡುವುದಿಲ್ಲ. ಹಿಂದುತ್ವದಲ್ಲಿ ಏನು ಇಲ್ಲ ಅದು ಕೇವಲ ಮತಬ್ಯಾಂಕ ಆಗಿದೆ.
ಬಸವ-ಭೀಮರ ಸಂಗಮವಾದರೆ ವಿಧಾನಸೌಧ, ಕೆಂಪುಕೋಟೆ ಬಸವ-ಭೀಮರ ಪಾಲಾಗುವುದು. ರಾಜ್ಯದ ರಾಜಕೀಯ, ಆರ್ಥಿಕ, ಸಾಮಾಜಿಕ ಬದಲಾವಣೆಗಾಗಿ ಈ ಕಾರ್ಯಕ್ರಮ ಹಮ್ಮಿಕೊಂಡಿದೆ. ಬಸವಣ್ಣನ ಅನುಯಾಯಿಗಳು ಹಿಂದೂತ್ವದ ಬೀಜ ನಾವು ಅಲ್ಲ, ಬಂಧುತ್ವದ ಬೀಜಗಳು ಎಂದು ಪ್ರತಿಜ್ಞೆ ಮಾಡಿ. ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ವಹಿಸಿ ಮಾತನಾಡಿ, ಭೇದರಹಿತ ಸಮಾಜ ಕಟ್ಟುವುದು ಇಂದಿನ ತುರ್ತು ಅಗತ್ಯ. ಧರ್ಮಕ್ಕೆ ಮಾನವೀಯತೆ ಅಗತ್ಯ. ದಯೆ, ಜನಕಾಳಜಿ, ಸಮಾನತೆಯಂಥ ತತ್ವಗಳ ನೆಲೆಗಟ್ಟಿನ ಮೇಲೆ ಬಸವಣ್ಣನ ವಿಚಾರಗಳಿದ್ದು ಅದರ ಅಳವಡಿಕೆಯೆ ಭಾರತದ ಸಂವಿಧಾನ.

ಬಸವ-ಭೀಮರ ವಿಚಾರಧಾರೆಯ ಬಂಧುತ್ವ ಅನುಕರಣೆ ಇರಲಿ. ಅಂದಾಗ ಸಮಾನತೆಯ ಸೌಖ್ಯ ಸಮಾಜ ನಿರ್ಮಾಣ ಆಗಲು ಸಾಧ್ಯ. ಈ ಅಭಿಯಾನ ರಾಜ್ಯಾದ್ಯಂತ ನಡೆಯುತ್ತದೆ. ಜನಸ್ಪಂದನೆ ಇದ್ದರೆ ಸಾಕು, ಮೂಲಭೂತವಾದಿಗಳ ಮಟ್ಟಹಾಕಲು ಮುಂದಾಗೋಣ ಎಂದರು.
ಮುಖ್ಯ ಅತಿಥಿಯಾಗಿ ಸತ್ಯಶೋಧಕ ಸಂಘದ ರಾಜ್ಯಾಧ್ಯಕ್ಷ ಪರಶುರಾಮ ಮಹಾರಾಜನವರ ಮಾತನಾಡಿ, ಜೈನ, ಲಿಂಗಾಯತ, ಬೌದ್ಧ ಧರ್ಮಗಳು, ಅವೈದಿಕ ಸಂಸ್ಕೃತಿ, ಪರಂಪರೆಯು ಕೃಷ್ಣಾ ನದಿಯ ದಡದಲ್ಲಿ ಬೆಳೆದು ಬಂದಿದ್ದರಿಂದ, ವೈದಿಕರು ಕೃಷ್ಣಾ ನದಿಯನ್ನು ಪವಿತ್ರ ನದಿಯ ಸ್ಥಾನದಲ್ಲಿ ಇಡಲಿಲ್ಲ. ವೈದಿಕರು ವೇದಗಳ ಮೂಲಕ ಸಮಾಜ ಒಡೆಯುವ ಕಾರ್ಯ ಮಾಡಿದರು, ಸಮಾನತೆಯ ಮೂಲಕ ಸಮಾಜ ಕಟ್ಟುವ ಕಾರ್ಯ ಬಸವಣ್ಣನವರು ಮಾಡಿದರು.


ಬಲಪಂಥೀಯ ಸಿದ್ದಾಂತ ರಾಜಕಾರಣದಿಂದ ಇಂದು ಬಸವ ಭೀಮರ ವಿಚಾರಗಳು ಭಾವಚಿತ್ರಕ್ಕೆ ಸೀಮಿತಗೊಂಡಿದ್ದು, ಚಿಂತನೆಯಲ್ಲಿ ಬರುತ್ತಿಲ್ಲ. ಬಹುತ್ವ ಭಾರತದಲ್ಲಿ ಬಸವ-ಭೀಮರ ವಿಚಾರಗಳನ್ನು ಭಿತ್ತಲು ಈ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದರು.
ಸಾನಿಧ್ಯವನ್ನು ತಂಗಡಗಿಯ ಅನ್ನದಾನಿ ಭಾರತಿ ಅಪ್ಪಣ್ಣ ಸ್ವಾಮೀಜಿ ವಹಿಸಿದರು. ಸಮಾರಂಭದಲ್ಲಿ ಮುಖಂಡರಾದ ಶರಣಪ್ಪ ಆಗಮದಿಹಾಳ, ಎಂ. ಗೋಪಿನಾಥನ್, ಮಹಾಂತೇಶ ಅವಾರಿ, ಎಸ್.ಎಂ. ಪುರಾಣಿಕ, ಗಂಗಣ್ಣ ಬಾಗೇವಾಡಿ, ಶಿವಾನಂದ ಕಂಠಿ, ವಿಜಯಮಹಾಂತೇಶ ಗದ್ದನಕೇರಿ, ನಾಗರಾಜ ನಾಡಗೌಡ, ಶೇಖರಗೌಡ ಗೌಡರ ಮುಂತಾದವರು ಇದ್ದರು.
