ಹೊಳಲ್ಕೆರೆ
ಪಟ್ಟಣದ ವಾಲ್ಮೀಕಿ ಸಮುದಾಯ ಭವನದ ಮೈದಾನದಲ್ಲಿ ನೊಳಂಬ ಲಿಂಗಾಯತ ಸಮಾಜ ಬುಧವಾರ ಅಯೋಜಿಸಿದ್ದ 853ನೇ ಸಿದ್ದರಾಮೇಶ್ವರ ಜಯಂತಿಯಲ್ಲಿ ಸಾವಿರಾರು ಭಕ್ತರು ಸಂಭ್ರಮದಿಂದ ಭಾಗವಹಿಸಿದರು.
ಜಯಂತ್ಯುತ್ಸವದ ಅಂಗವಾಗಿ ಪಟ್ಟಣದ ಪ್ರಮುಖ ರಸ್ತೆಯಲ್ಲಿ ಶ್ರೀ ಸಿದ್ದರಾಮೇಶ್ವರಸ್ವಾಮಿ ದೇವರ ಉತ್ಸವ ವೈಭವದಿಂದ ನಡೆಯಿತು.

ಉತ್ಸವ ಉದ್ಘಾಟಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸಿದ್ದರಾಮೇಶ್ವರರು 12ನೇ ಶತಮಾನದಲ್ಲಿ ಶರಣ ಸಂಸ್ಕೃತಿಗೊಳಗಾಗಿ ಸಮಾಜದಲ್ಲಿನ ಎಲ್ಲಾ ವರ್ಗದ ಪ್ರಗತಿಗೆ ಪೂರಕವಾದ ಜಲ ಸಂರಕ್ಷಣೆಯಂತಹ ಕಾರ್ಯಗಳಿಗೆ ಒತ್ತು ಕೊಟ್ಟಿದ್ದರು.
ವಚನ ಸಾಹಿತ್ಯದ ಮೂಲಕ ಜನರಲ್ಲಿ ಜಾತ್ಯಾತಿತ ಸಮಸಮಾಜದ ನಿರ್ಮಾಣಕ್ಕೂ ಸಿದ್ದರಾಮೇಶ್ವರರು ಶ್ರಮಿಸಿದ್ದರು ಎಂದರು.

ನೊಳಂಬ ಸಮುದಾಯ ಸಮಾಜ ಕಟ್ಟುವ ಕೆಲಸ ಮಾಡಿದೆ. ಆದರೆ, ರಾಜಕೀಯ ದುಷ್ಟ ಶಕ್ತಿಗಳು ತಮ್ಮ ರಾಜಕೀಯ ಬೆಳೆ ಬೇಯಿಸಿಕೊಳ್ಳಲು ನೊಳಂಬ, ವೀರಶೈವ ಸಮಾಜವನ್ನು ಒಡೆದು ಹಾಕುವ ಕೆಲಸಕ್ಕೆ ಕೈ ಹಾಕಲಾಗಿದೆ. ಇದೆಲ್ಲವನ್ನು ಸಮುದಾಯ ಅರಿತುಕೊಂಡು ಸಮಾಜಕ್ಕೆ ಶಕ್ತಿ ತುಂಬುವ ಜೊತೆಗೆ ಸರಿದಾರಿಗೆ ಕರೆದೊಯ್ಯುವ ಕೆಲಸ ಮಾಡಬೇಕು ಎಂದು ತಿಳಿಸಿದರು.
ಸಮಾರಂಭ ಸಾನ್ನಿಧ್ಯ ವಹಿಸಿದ್ದ ಸಿರಿಗೆರೆ ತರಳಬಾಳು ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಆಶೀರ್ವಚನ ನೀಡಿ ಭಾರತೀಯರಲ್ಲಿರುವ ಕಾಲೆಳೆಯುವ ಪ್ರವೃತ್ತಿಯಿಂದ ಹೊರ ಬಂದು ಸಮ ಸಮಾಜದ ನಿರ್ಮಾಣದತ್ತ ಚಿಂತನೆ ಮಾಡಬೇಕೆಂದು ಹೇಳಿದರು.

ಸಮಾರಂಭದಲ್ಲಿ ಸಿದ್ದಗಂಗ ಮಠದ ಕಿರಿಯ ಶ್ರೀಗಳಾದ ಶಿವಸಿದ್ದೇಶ್ವರ ಸ್ವಾಮೀಜಿ, ಕುಂಚಿಟಿಗ ಸಂಸ್ಥಾನದ ಶಾಂತವೀರ ಸ್ವಾಮೀಜಿ, ಭಗೀರಥ ಪೀಠದ ಪುರಷೋತ್ತಮಾನಂದ ಸ್ವಾಮೀಜಿ, ಕೆರೆಗೋಡಿ ರಾಮಗಾಪುರದ ಗುರುಪರದೇಶಿ ಕೇಂದ್ರ ಸ್ವಾಮೀಜಿ, ಪುಷ್ಪಗಿರಿ ಸಂಸ್ಥಾನದ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ, ತಮ್ಮಡಿಹಳ್ಳಿ ಡಾ.ಅಭಿನವ ಮಲ್ಲಿಕಾರ್ಜನ ಸ್ವಾಮೀಜಿ, ಸಾನ್ನಿಧ್ಯ ವಹಿಸಿ ಮಾತನಾಡಿದರು.
ಮಾಜಿ ಸಚಿವ ಎಂ.ಪಿ.ರೇಣುಕಚಾರ್ಯ ನೊಳಂಬ ಲಿಂಗಾಯತ ಪುಸ್ತಕ ಬಿಡುಗಡೆ ಮಾಡಿ, ಶಾಮನೂರು ಶಿವಶಮಕರಪ್ಪ ಲಿಂಗೈಕ್ಯರಾಗಿರುವುದರಿಂದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಸ್ಥಾನಕ್ಕೆ ಸಮಾಜದ ಎಲ್ಲಾ ಧಾರ್ಮಿಕ ಗುರುಗಳು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರನ್ನು ಅಯ್ಕೆ ಮಾಡಬೇಕು ಎಂದು ಸಮಾರಂಭದಲ್ಲಿ ಮನವಿ ಮಾಡಿದರು.

ಸಂಸದ ಗೋವಿಂದ ಕಾರಜೋಳ ನೊಳಂಬವಾಣಿ ಸಂಚಿಕೆ, ತುಮಕೂರು ಶಾಸಕ ಜ್ಯೋತಿ ಗಣೇಶ ಸ್ಮರಣ
ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದರು. ನೊಳಂಬ ಸಮಾಜದ ಕೇಂದ್ರ ಸಮಿತಿ ಅಧ್ಯಕ್ಷ ಬಿ.ಕೆ.ಚಂದ್ರಶೇಖರ, ಕಾರ್ಯದರ್ಶಿ ಶಶಿದರ, ನಿವೃತ್ತ ಎಡಿಜಿಪಿ ಸಿದ್ದರಾಮಪ್ಪ, ನಿ, ಎಸಿಪಿ ಲೋಕೇಶ್ವರಪ್ಪ, ಶಾಸಕರಾದ ಎಂ.ಚಂದ್ರಪ್ಪ, ಎಚ್.ಕೆ.ಸುರೇಶ, ಮಾಜಿ ಶಾಸಕರಾದ ಕೆ.ಎಸ.ಲಿಂಗೇಶ, ಕೆ.ಸಿ.ರಮೇಶ, ಬಿಜೆಪಿ ವಕ್ತಾರ ಚಂದ್ರಶೇಖರ್, ಸ್ವಾಗತ ಸಮಿತಿ ಅಧ್ಯಕ್ಷ ಶಶಿದರ, ಬಿಜೆಪಿ ಮುಖಂಡರಾದ ವಸಂತ ಕುಮಾರ, ಲಿಂಗಮೂರ್ತಿ, ಇತರರು ಉಪಸ್ಥಿತರಿದ್ದರು.
ಭವ್ಯ ಮೆರವಣಿಗೆ
ಜಯಂತ್ಯುತ್ಸವದ ಅಂಗವಾಗಿ ಪಟ್ಟಣದ ಪ್ರಮುಖ ರಸ್ತೆಯಲ್ಲಿ ಶ್ರೀ ಸಿದ್ದರಾಮೇಶ್ವರಸ್ವಾಮಿ ದೇವರ ಉತ್ಸವ ವೈಭವದಿಂದ ನಡೆಯಿತು. ಪಟ್ಟಣದ ಸಿದ್ದರಾಮೇಶ್ವರ ದೇವಾಲಯದಿಂದ ಹೊರಟ ಉತ್ಸವ ಯಕ್ಷಗಾನ, ಬೊಂಬೆ ಕುಣಿತ, ಕಂಸಾಳೆ ಗೊರವರ ಕುಣಿತ, ವೀರಗಾಸೆ, ಕೋಲಾಟ, ನಂದಿ ಧ್ವಜ ಕುಣಿತ ಮುಂತಾದ ಕಲಾ ತಂಡಗಳು ಉತ್ಸವದಲ್ಲಿ ಭಾಗವಹಿಸಿದ್ದವು. 1108 ಪೂರ್ಣ ಕುಂಭ ಹೊತ್ತ ಮಹಿಳೆಯರು ಸಾಲು ಉತ್ಸವ ಅಕರ್ಷಣೆಯಾಗಿತ್ತು.
ಸಾವಿರಾರು ಭಕ್ತರು ಭಾಗವಹಿಸಿದ ಮೆರವಣಿಗೆ ವಿಜೃಂಭನೆಯಿಂದ ಜರಗಿತು.

ಮೆರವಣಿಗೆಯಲ್ಲಿ ಮೈಸೂರಿನ ಬಸವ ಮಂದಿರದ ಮಾತೆ ಬಸವಾಂಜಲಿ, ಮಾಜಿ ಶಾಸಕ ಉಮಾಪತಿ, ಪುರಸಭೆ ಉಪಾಧ್ಯಕ್ಷೆ ನಾಗರತ್ನ ವೇದಮೂರ್ತಿ, ನೊಳಂಬ ಸಮಾಜದ ಮುಖಂಡರಾದ ಧನಂಜಯ, ರಂಗೇಶ, ಮರಿದಿಮ್ಮಪ್ಪ, ಲೋಕೇಶ್ವರಪ್ಪ, ಪಾಲಾಕ್ಷಪ್ಪ ಕಬ್ಬಳ, ಶೆಟ್ಟಿಹಳ್ಳಿ ನಾಗಭೂಷಣ, ಸೇರಿದಂತೆ ಸಾವಿರಾರು ಭಕ್ತರು ಭಾಗವಹಿಸಿದ್ದರು.
