‘ಹೊಸ ದಲಿತ ತಲೆಮಾರು ಮಾದಾರ ಚನ್ನಯ್ಯನವರ ಹೊಸ ಅಧ್ಯಯನ ಮಾಡಲಿ’

ಬಸವ ಮೀಡಿಯಾ
ಬಸವ ಮೀಡಿಯಾ

ಕಲಬುರಗಿ:

‘ಮೇಲ್ಜಾತಿ ಅಧ್ಯಯನಕಾರರೇ ಶರಣ ಮಾದಾರ ಚನ್ನಯ್ಯ ಅವರನ್ನು ತಮ್ಮದೇ ದೃಷ್ಟಿಕೋನದಲ್ಲಿ ವ್ಯಾಖ್ಯಾನ ಮಾಡಿದ್ದಾರೆ. ಇದರಲ್ಲಿ ಸಾಂಸ್ಕೃತಿಕ ರಾಜಕಾರಣ ಛಾಯೆ ಕಾಣುತ್ತದೆ.

ದಲಿತ ಸಮುದಾಯದ ಹೊಸ ತಲೆಮಾರು ಈ ಬಗೆಯ ಅಧ್ಯಯನಗಳಲ್ಲಿ ಲೋಪಗಳನ್ನು ಗುರುತಿಸುವುದರ ಜೊತೆಗೆ ಚನ್ನಯ್ಯರ ಬಗೆಗೆ ಹೊಸದಾಗಿ ಅಧ್ಯಯನ ಮಾಡಬೇಕಿದೆ’ ಎಂದು ಡಾ. ಬಿ.ಆರ್. ಅಂಬೇಡ್ಕರ್ ಮಹಾವಿದ್ಯಾಲಯದ  ಪ್ರಾಧ್ಯಾಪಕ ಅರುಣ ಜೋಳದಕೂಡ್ಲಿಗಿ ಹೇಳಿದರು.

ಗುಲಬರ್ಗಾ ವಿಶ್ವವಿದ್ಯಾಲಯದ ಮಹಾತ್ಮಗಾಂಧಿ ಸಭಾಂಗಣದಲ್ಲಿ ಕಾಯಕಪ್ರಿಯ ಶಿವಶರಣ ಮಾದಾರ ಚನ್ನಯ್ಯ ಅಧ್ಯಯನ ಮತ್ತು ಸಂಶೋಧನಾ ಪೀಠದಿಂದ ಶುಕ್ರವಾರ ಆಯೋಜಿಸಿದ್ದ ಮಾದಾರ ಚನ್ನಯ್ಯ ಜಯಂತ್ಯುತ್ಸವ ಸಮಾರಂಭದಲ್ಲಿ ಅವರು ಉಪನ್ಯಾಸ ನೀಡಿದರು.

ಮಾದಾರ ಚನ್ನಯ್ಯ ಕುರಿತು ಇನ್ನಷ್ಟು ಕೂಲಂಕಷ ಅಧ್ಯಯನಗಳು ನಡೆಯಬೇಕಿದೆ ಎಂದು ಹೇಳುತ್ತ, ಸಾಂಸ್ಕೃತಿಕ ರಾಜಕಾರಣದ ದೃಷ್ಟಿಯಲ್ಲಿ ಚನ್ನಯ್ಯ, ಅವರ ತಾತ್ವಿಕತೆ, ವಚನಕಾರರ ದೃಷ್ಟಿಯಲ್ಲಿ ಚನ್ನಯ್ಯ, ಸಾಹಿತ್ಯ–ಕಾವ್ಯದಲ್ಲಿ ಚನ್ನಯ್ಯ, ಜನಪದರ ಬಾಯಲ್ಲಿ ಚನ್ನಯ್ಯನ ಬಗೆಗೆ ಬೆಳಕು ಚೆಲ್ಲಿದರು.

‘ಮಾದಾರ ಚನ್ನಯ್ಯ ಕ್ರಿ.ಶ. 1,162ಕ್ಕೂ ಹಿಂದೆಯೇ ಬದುಕಿದ್ದರು ಎಂಬುದಕ್ಕೆ ಪುರಾವೆಗಳು, ಶಾಸನಗಳು ಸಿಗುತ್ತವೆ. ಈ ಆಧಾರದಲ್ಲಿ ನೋಡಿದರೆ, ಬಸವಣ್ಣ, ಜೇಡರ ದಾಸಿಮಯ್ಯ, ಡೋಹರ ಕಕ್ಕಯ್ಯಕ್ಕಿಂತಲೂ ಮಾದರ ಚನ್ನಯ್ಯ ಮೊದಲಿನವರಾಗುತ್ತಾರೆ. ಈ ಕಾಲಗಣನೆ, ಐತಿಹಾಸಿಕ ಹಿನ್ನೆಲೆಯ ಆಧಾರದಲ್ಲಿ ಮಾದಾರ ಚನ್ನಯ್ಯ ಅವರನ್ನು ಆದ್ಯ ವಚನಕಾರ ಎಂದು ಕರೆಯಬೇಕಿದೆ. ಈ ಬಗೆಗೆ ಇನ್ನಷ್ಟು ಅಧ್ಯಯನ ನಡೆಸಿ, ಹೊಸದಾಗಿ ವ್ಯಾಖ್ಯಾನಿಸಬೇಕಿದೆ’ ಎಂದರು.

‘ಮಾದಾರ ಚನ್ನಯ್ಯ ಅವರದ್ದು ಬರೀ ಹತ್ತು ವಚನಗಳು ಮಾತ್ರವೇ ಸಿಕ್ಕಿವೆ. ಆದರೆ, ಬಸವಣ್ಣನವರ 32 ವಚನಗಳಲ್ಲಿ ಮಾದಾರ ಚನ್ನಯ್ಯರ ಬಗೆಗೆ ಉಲ್ಲೇಖವಿದೆ. ಅಪ್ಪನು ನಮ್ಮ ಮಾದಾರ ಚನ್ನಯ್ಯ ಎಂದು ಸ್ವತಃ ಬಸವಣ್ಣನವರೂ ಕೊಂಡಾಡಿದ್ದಾರೆ. ಅಲ್ಲಮಪ್ರಭು, ಉರಿಲಿಂಗಪೆದ್ದಿ ಸೇರಿದಂತೆ 20ಕ್ಕೂ ಅಧಿಕ ವಚನಕಾರರು ತಮ್ಮ 100ರಷ್ಟು ವಚನಗಳಲ್ಲಿ ಚನ್ನಯ್ಯನ ಹೆಸರು ಪ್ರಾಸ್ತಾಪಿಸಿದ್ದಾರೆ’ ಎಂದು ಹೇಳಿದರು.

‘ಚನ್ನಯ್ಯರ ವಚನಗಳಲ್ಲಿ ವೈದಿಕಶಾಹಿಯ ವಿರೋಧ ಅತ್ಯಂತ ಢಾಳಾಗಿದೆ. ರೂಪಕಗಳಲ್ಲಿ ಅಡಗಿಸಿ ಹೇಳುವ ದರ್ದು ಅವರು ಪ್ರದರ್ಶಿಸಿಲ್ಲ. ವೈದಿಕ, ಸನಾತನ ವಿರುದ್ಧ ಚನ್ನಯ್ಯರ ಈ ಬಗೆಯ ಬಂಡಾಯ ಬಸವಣ್ಣ ಸೇರಿದಂತೆ ಎಲ್ಲರನ್ನೂ ಬದುಕಿಸಿತು. ಚನ್ನಯ್ಯ ಅವರನ್ನು ನಾವು ಕನ್ನಡ ಮತ್ತು ತಮಿಳು ಭಾಷೆಗಳ ಸಾಂಸ್ಕೃತಿಕ ವಿನಿಮಯದ ಭಾಗವಾಗಿ, ಸಂಕೇತವಾಗಿ ನೋಡಬೇಕಿದೆ’ ಎಂದರು.

ಕುಲಪತಿ ಪ್ರೊ. ಶಶಿಕಾಂತ ಎಸ್‌. ಉಡಿಕೇರಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾಯಕ‌ ಪ್ರಿಯ ಶಿವಶರಣ ಮಾದಾರ‌ ಚನ್ನಯ್ಯ ಅಧ್ಯಯನ ‌ಪೀಠದ ನಿರ್ದೇಶಕ ಪ್ರೊ. ದೇವಿದಾಸ ಜಿ. ಮಾಲೆ ಪ್ರಾಸ್ತಾವಿಕ ಮಾತು ಆಡಿದರು.

ವಿಶ್ವವಿದ್ಯಾಲಯ ಸಿಂಡಿಕೇಟ್‌ ಸದಸ್ಯ ಮಲ್ಲಣ್ಣ ಮಡಿವಾಳ, ವಿದ್ಯಾವಿಷಯಕ್‌ ಪರಿಷತ್ ಸದಸ್ಯ ಪ್ರೊ. ದಶರಥ ನಾಯಕ, ಕುಲಸಚಿವರಾದ ಎನ್‌.ಜಿ. ಕಣ್ಣೂರ, ಪ್ರೊ.ರಮೇಶ ಲಂಡನಕರ್‌, ಹಣಕಾಸು ಅಧಿಕಾರಿ ಜಯಾಂಬಿಕಾ ವೇದಿಕೆಯಲ್ಲಿದ್ದರು. ಪ್ರೊ. ಚಂದ್ರಕಾಂತ ‌ಬಿರಾದಾರ ನಿರೂಪಿಸಿದರು. ಪ್ರಕಾಶ ಹದನೂರ ಸ್ವಾಗತಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/H81yNL3dGRcHb7EBxL5oqr

Share This Article
Leave a comment

Leave a Reply

Your email address will not be published. Required fields are marked *