ವಿಜಯನಗರ:
ಜಾಗತಿಕ ಲಿಂಗಾಯತ ಮಹಾಸಭಾದ ವಿಜಯನಗರ ಜಿಲ್ಲಾ ಘಟಕದ ಉದ್ಘಾಟನೆ ರವಿವಾರ ನಗರದ ವಿಜಯನಗರ ಮಹಾವಿದ್ಯಾಲಯ ಸ್ವತಂತ್ರ ಪದವಿಪೂರ್ವ ಕಾಲೇಜಿನ ಸುವರ್ಣ ಮಹೋತ್ಸವ ಭವನದಲ್ಲಿ ನಡೆಯಲಿದೆ.
ಜೊತೆಗೆ ನಡೆಯುವ ಜಿಲ್ಲಾಮಟ್ಟದ ಸಮಾವೇಶದಲ್ಲಿ ನೂತನ ಜಿಲ್ಲಾ ಪದಾಧಿಕಾರಿಗಳಿಗೆ ಪ್ರಮಾಣವಚನ ನೀಡಲಾಗುವುದು. ಈ ಬಗ್ಗೆ ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಊರುಗಳಲ್ಲಿ ಪ್ರಚಾರ ಜಾಗೃತಿ ಸಭೆಗಳು ನಡೆದಿವೆ.
ಇದೇ ಸಂದರ್ಭದಲ್ಲಿ ನಡೆಯುವ ಜೆ.ಎಲ್.ಎಂ. ಕೇಂದ್ರ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಬಸವ ಸಂಸ್ಕೃತಿ ಅಭಿಯಾನ ಮತ್ತು ನಂತರದ ಬೆಳವಣಿಗೆಗಳನ್ನು ಚರ್ಚಿಸಲಾಗುವುದು.

ಲಿಂಗಾಯತ ನಿಜಾಚರಣೆ ಪದ್ಧತಿ ಹಾಗೂ ವಿವರಗಳನ್ನು ನಿಗದಿ ಪಡಿಸಲು ನೇಮಿಸಿರುವ ಸಮಿತಿಯು ತೆಗೆದುಕೊಂಡಿರುವ ಕ್ರಮಗಳ ಪ್ರಗತಿ ಪರಿಶೀಲನೆ, ಲಿಂಗಾಯತ ಧರ್ಮೀಯರಿಗೆ ಅಲ್ಪಸಂಖ್ಯಾತ ಸ್ಥಾನಮಾನ ಕೊಡುವ ಸಲುವಾಗಿ ಕೇಂದ್ರ ಸರಕಾರಕ್ಕೆ ಪುನಃ ಪ್ರಸ್ತಾವನೆ ಕಳಿಸಲು ರಾಜ್ಯ ಸರ್ಕಾರಕ್ಕೆ ಸಲ್ಲಿಸುವ ಪುಸ್ತಕದ ಕುರಿತು, ಮಹಾಸಭಾದ ತ್ರೈಮಾಸಿಕ ಪತ್ರಿಕೆ, ವಧುವರರ ಕೇಂದ್ರ ಸ್ಥಾಪಿಸುವಲ್ಲಿ ಆಗಿರುವ ಪ್ರಗತಿ ಪರಿಶೀಲನೆ ಮತ್ತಿತರ ಪ್ರಮುಖ ವಿಷಯಗಳೂ ಅಜೇಂಡಾದಲ್ಲಿವೆ.

ಸಮಾವೇಶದಲ್ಲಿ ಗದುಗಿನ ಡಾ. ತೋಂಟದ ಸಿದ್ದರಾಮ ಮಹಾಸ್ವಾಮಿಗಳು, ಇಳಕಲ್ಲ ವಿಜಯಮಹಾಂತ ಮಠದ ಗುರುಮಹಾಂತಪ್ಪ ಸ್ವಾಮೀಜಿ, ಕೊಟ್ಟೂರು ಬಸವಲಿಂಗ ಸ್ವಾಮೀಜಿ, ಬಾಚೇಗೊಂಡನಹಳ್ಳಿ ಶಿವಮಹಾಂತ ಸ್ವಾಮೀಜಿ ಸಾನಿಧ್ಯ ವಹಿಸುವರು.

ಜೆ.ಎಲ್.ಎಂ. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ. ಶಿವಾನಂದ ಜಾಮದಾರ, ಬಸವರಾಜ ರೊಟ್ಟಿ, ಕೆ. ರವೀಂದ್ರನಾಥ, ಡಾ. ಮಹಾಬಲೇಶ್ವರ ರೆಡ್ಡಿ, ರಾಜೇಶ ಕೋರಿಶೆಟ್ರು, ಟಿ.ಹೆಚ್. ಬಸವರಾಜ, ಬಸವರಾಜ ಮಾವಿನಹಳ್ಳಿ ಮತ್ತಿತರ ಪ್ರಮುಖರು ಭಾಗವಹಿಸಲಿದ್ದಾರೆ.
