ಹೊಸಪೇಟೆ
ಮಣ್ಣ ಬಿಟ್ಟು ಮಡಿಕೆ ಇಲ್ಲ… ತನ್ನ ಬಿಟ್ಟು ದೇವರಿಲ್ಲ… ಎನ್ನುವ ಶರಣರ ವಾಣಿಯಂತೆ ಭಗವಂತನು ಅಂತರ್ಯಾಮಿ ಆಗಿರುತ್ತಾನೆ …
ದೇವರು ಧರ್ಮದ ಹೆಸರಿನಲ್ಲಿ ಮೂಲಭೂತವಾದಿಗಳು ಅಂಧಕಾರ, ಅಜ್ಞಾನ, ಮೌಢ್ಯ ಬಿತ್ತುವ ಪವಾಡಗಳನ್ನು ಮಾಡುವಲ್ಲಿ ಅತ್ಯಂತ ನಿಸ್ಸೀಮರಾಗಿದ್ದಾರೆ. ಆದ್ದರಿಂದ ಇಂಥವುಗಳ ವಿರುದ್ದ ವಿದ್ಯಾರ್ಥಿ ಸಮೂಹ ಸದಾವಕಾಲ ಜಾಗೃತರಾಗಿ, ವೈಚಾರಿಕ, ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕೆಂದು ಭಾರತ ಜ್ಞಾನ ವಿಜ್ಞಾನ ಸಮಿತಿಯ ವಿಜಯನಗರ ಜಿಲ್ಲಾ ಸಂಚಾಲಕರಾದ ಎಚ್. ಸೌಭಾಗ್ಯಲಕ್ಷ್ಮಿ ಹೇಳಿದರು.
ಪಟ್ಟಣದ ಚಿತ್ತವಾಡಿಗೆಯ ಪ್ರೌಢಶಾಲಾ ವಿಭಾಗದಲ್ಲಿ ಭಾರತ ಜ್ಞಾನ ವಿಜ್ಞಾನ ಸಮಿತಿ, ಮತ್ತು ಸುಭಾಷಚಂದ್ರ ಬೋಸ್ ಇಕೋ ಕ್ಲಬ್ ಆಶ್ರಯದಲ್ಲಿ ಪವಾಡ ಬಯಲು ಕಾರ್ಯಕ್ರಮದಲ್ಲಿ ಹಲವಾರು ಪವಾಡಗಳನ್ನು ತೋರಿಸಿ ವೈಜ್ಞಾನಿಕ ಸತ್ಯಗಳನ್ನು ವಿದ್ಯಾರ್ಥಿಗಳಿಗೆ ಎಳೆಎಳೆಯಾಗಿ ವಿವರಿಸಿದರು.
ನಮ್ಮ ಕರ್ನಾಟಕದಲ್ಲಿ ಖ್ಯಾತ ವೈಚಾರಿಕ ಚಿಂತಕರಾಗಿದ್ದ ಎಚ್. ನರಸಿಂಹಯ್ಯ ಅವರು ಇಂತಹ ಪವಾಡ ಮಾಡುವ ಬಾಬಾಗಳ ವಿರುದ್ಧ ಹಲವಾರು ಸವಾಲುಗಳನ್ನೊಡ್ಡಿ, ಅವರ ಮೋಸದ ಜಾಲವನ್ನು ಸಮಾಜದ ಮುಂದೆ ಬಯಲು ಗೊಳಿಸಿದರು ಎಂದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಕಾಯಿ ಒಡೆಯುವ ಮೂಲಕ, ಕಾಯಿಯಲ್ಲಿ ಹೇಗೆ ಹೂಗಳು ಬರುತ್ತವೆ ಇದರಿಂದ ಜನರನ್ನು ಹೇಗೆ ಮೋಸ ಮಾಡುತ್ತಾರೆ ಇದರ ಹಿಂದಿನ ಗುಟ್ಟು ಬಿಡಿಸುತ್ತಾ, ಕಾಯೊಳಗೆ ಒಂದು ಕಣ್ಣನ್ನು ತೆರೆದು ಅದರೊಳಗೆ ಮುಂಚಿತವಾಗಿ ಮಗ್ಗು ಹೂಗಳನ್ನು ಹಾಕಿ ತಯಾರು ಮಾಡಿಕೊಳ್ಳುತ್ತಾರೆ ಎಂದು ಅದರ ಹಿಂದಿರುವ ಸತ್ಯವನ್ನು ತಿಳಿಸಿದರು.
ವಿದ್ಯಾರ್ಥಿಗಳಿಂದ ನೀರಿನಲ್ಲಿ ದೀಪವನ್ನು ಹಚ್ಚುವ ಮೂಲಕ ವಿದ್ಯಾರ್ಥಿಗಳನ್ನು ಮೂಕವಿಸ್ಮಿತರನ್ನಾಗಿ ಮಾಡಿದರು. ಪವಾಡ ಮಾಡುವವರು ಪ್ರಾರಂಭದಲ್ಲಿ ಬತ್ತಿಗೆ ತುಪ್ಪ, ಮೇಣದಬತ್ತಿಯ ಅಂಶವನ್ನು ಸವರಿ ದಪ್ಪದಾದ ಭತ್ತಿ ತಯಾರು ಮಾಡಿರುತ್ತಾರೆ, ನಂತರ ದೀಪದಲ್ಲಿ ದಪ್ಪದಾದ ಬತ್ತಿಯನ್ನು ಇಟ್ಟು ದೀಪವನ್ನು ಹಚ್ಚುತ್ತಾರೆ. ಇದರ ಹಿಂದಿನ ಮರ್ಮ ಈ ರೀತಿಯಲ್ಲಿ ಇರುತ್ತದೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.

ಕೈಯಲ್ಲಿ ಕರ್ಪೂರ ಹಚ್ಚಿಕೊಳ್ಳುವುದು, ನಾಲಗೆ ಮೇಲೆ ಕರ್ಪೂರವನ್ನು ಹಚ್ಚಿಕೊಳ್ಳುವುದು, ಹಾಗೆಯೇ ಮೈ ಮೇಲೆ ಬೆಂಕಿಯನ್ನು ಸವರಿಕೊಳ್ಳುವುದು, ಇವೆಲ್ಲವೂ ಪವಾಡವಲ್ಲ ಇದರ ಹಿಂದೆ ವೈಜ್ಞಾನಿಕ ನಿಯಮಗಳಿವೆ. ಬೆಂಕಿಯು ಮೇಲ್ಮುಖವಾಗಿ ಉರಿಯುತ್ತದೆ. ಇದನ್ನು ಬಳಸಿಕೊಂಡು ಮೈ ಮೇಲೆ ಬೆಂಕಿಯನ್ನು ಸವರಿ ಕೊಳ್ಳುತ್ತಾರೆ ಆದ್ದರಿಂದ ಅವರಿಗೆ ಏನು ಆಗುವುದಿಲ್ಲವೆಂದು ಅದರ ಹಿಂದಿರುವ ವೈಜ್ಞಾನಿಕ ನಿಯಮಗಳನ್ನು ತಿಳಿದುಕೊಂಡು ಇಂತಹ ಪವಾಡ, ಅಂಧಕಾರ ಮೌಢ್ಯವನ್ನು ಯಾರು ನಂಬಬಾರದು ಎಂದು ತಿಳಿಸಿದರು.
ವಿದ್ಯಾರ್ಥಿಯ ಕಣ್ಣಿನ ಮೂಲಕ ಯಾವುದೇ ಬೆಂಕಿ ಪೊಟ್ಟಣ ಇಲ್ಲದೆ, ತಟ್ಟೆಯಲ್ಲಿ ಬೆಂಕಿಯನ್ನು ತರಿಸಿ ವಿದ್ಯಾರ್ಥಿಗಳನ್ನು ಚಕಿತರನ್ನಾಗಿ ಮಾಡಿದರು. ಇದರ ಹಿಂದಿರುವ ವೈಜ್ಞಾನಿಕ ಸತ್ಯವೇನೆಂದರೆ ತಟ್ಟೆಯೊಳಗೆ ಪೋಟ್ಯಾಸಿಯಂ ಸೇರಿಸಲಾಗುತ್ತದೆ ನಂತರ ಅದಕ್ಕೆ ಜೇನುತುಪ್ಪವನ್ನು ಹಾಕಿದರೆ ಬೆಂಕಿ ಒತ್ತಿಕೊಳ್ಳುತ್ತದೆ. ಇದನ್ನು ಬಳಸಿಕೊಂಡು ಕೆಲವರು ಮಾಟ, ಮಂತ್ರ, ಬಾನಾಮತಿ ಮಾಡುತ್ತಾರೆ. ಆದ್ದರಿಂದ ಇಂತಹುಗಳ ಹಿಂದಿರುವ ವೈಜ್ಞಾನಿಕ ಸತ್ಯವನ್ನು ಅರಿತುಕೊಳ್ಳಬೇಕೆಂದರು.
ಹಾಗೆಯೇ ಕಬ್ಬಿಣದ ಹಾವಿಗೆ, ಹಾವಿಗೆಯ ಮೇಲೆ ನಿಂತು ವಿದ್ಯಾರ್ಥಿಗಳಿಗೆ ಅದರ ಹಿಂದಿರುವ ಮರ್ಮವನ್ನು ತಿಳಿಸಿದರು ಹಾಗೂ ಒಂದು ಚೊಂಬಿನಲ್ಲಿ ಅಕ್ಕಿಯನ್ನು ಹಾಕಿ ಅದರೊಳಗೆ ಚಾಕುವನ್ನು ಸಿಕ್ಕಿಸಿ, ಯಾವುದೇ ಸಹಾಯವಿಲ್ಲದೆ ಚಾಕುವಿನ ಮೂಲಕ ಚೊಂಬನ್ನು ಎತ್ತಿದರು. ಇಲ್ಲಿರುವ ವೈಜ್ಞಾನಿಕ ಸತ್ಯ ಎಂದರೆ ಚೊಂಬಿನೊಳಗೆ ಅಕ್ಕಿಯ ಸಾಂಧ್ರತೆ ಹೆಚ್ಚಾಗದಂತೆ ಅದರೊಳಗೆ ಹಾಕುವ ವಸ್ತುವು ಬಿಗಿಯಾಗಿ ಮಾರ್ಪಟಾಗುತ್ತದೆ ಎಂದು ತಿಳಿಸಿದರು.
ಹೀಗೆ ಕೆಂಡ ಹಾಯುವುದು, ಎಣ್ಣೆಯಲ್ಲಿ ಕೈಯೆದ್ದುವದು, ಕೈಯಲ್ಲಿ ಬೂದಿ ತರಿಸುವುದು, ಬರಿಕೈಯಲ್ಲಿ ವಸ್ತುಗಳನ್ನು ಸೃಷ್ಟಿಸುವುದು, ಹೀಗೆ ಹಲವಾರು ಚಮತ್ಕಾರಗಳು, ಹಲವಾರು ಪವಾಡಗಳನ್ನು ಪ್ರಾತ್ಯಕ್ಷಿಕೆಯ ಮೂಲಕ ವಿದ್ಯಾರ್ಥಿಗಳಿಗೆ ತಿಳಿಸಿ ವಿದ್ಯಾರ್ಥಿಗಳಿಗೆ ವೈಜ್ಞಾನಿಕ ಮತ್ತು ವೈಚಾರಿಕ ಮನೋಭಾವ ಮೂಡಿಸಿದರು.
ಈ ಸಂದರ್ಭದಲ್ಲಿ ಪ್ರೌಢಶಾಲಾ ವಿಭಾಗದ ಉಪ ಪ್ರಾಂಶುಪಾಲ ಬಿ. ವಿ. ಶ್ರೀಧರ, ಲೀಲಾಮೂರ್ತಿ, ಸುಭಾಸ್ಚಂದ್ರ ಬೋಸ್ ಇಕೋ ಕ್ಲಬ್ಬಿನ ವಿದ್ಯಾರ್ಥಿ ಮಾರ್ಗದರ್ಶಕರಾದ ಇಂದ್ರಾ ಮೇಡಂ, ವರಲಕ್ಷ್ಮಿ, ವಸುಧಾ, ಕುಸುಮ, ನಾರಾಯಣಮ್ಮ ಇತರೆ ಶಿಕ್ಷಕರು ಭಾಗವಹಿಸಿದ್ದರು. ನಾಗರಾಜ ಘಂಟಿ ಮತ್ತು ಸಿ. ಶಿವಕುಮಾರ ಪವಾಡ ಬಯಲು ಕಾರ್ಯಕ್ರಮಕ್ಕೆ ಸಹಕರಿಸಿದರು.