ಹೊಸವರ್ಷಕ್ಕೆ ಮಾನವೀಯತೆ ಬೆಸೆಯುವ ಸಮಾಜ ನಿರ್ಮಾಣಕ್ಕೆ ಸಿದ್ಧಗಂಗಾ ಶ್ರೀ ಕರೆ

ಬಸವ ಮೀಡಿಯಾ
ಬಸವ ಮೀಡಿಯಾ

ತುಮಕೂರು:

ನೂತನ ಕ್ಯಾಲೆಂಡರ್ ವರ್ಷದ ಆರಂಭದ ಹಿನ್ನೆಲೆಯಲ್ಲಿ ಸಿದ್ಧಗಂಗಾ ಮಠಾಧ್ಯಕ್ಷರಾದ ಪರಮಪೂಜ್ಯ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳವರು ನಾಡಿನ ಜನತೆಗೆ 2026ರ ಹೊಸ ವರ್ಷದ ಶುಭಾಶಯಗಳನ್ನು ಕೋರಿದ್ದಾರೆ.

ಹಳೆಯ ಕಹಿ ಘಟನೆಗಳನ್ನು ಮರೆತು, ಹೊಸತನದೊಂದಿಗೆ ಪ್ರಕೃತಿ ಮತ್ತು ಮಾನವೀಯತೆಯನ್ನು ಬೆಸೆಯುವ ಸಮಾಜ ನಿರ್ಮಾಣಕ್ಕೆ ಶ್ರೀಗಳು ಆಶೀರ್ವಚನ ನೀಡಿದ್ದಾರೆ.

ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ನಾವು “ಯುಗಾದಿಯನ್ನು ಹೊಸ ವರ್ಷವಾಗಿ” ಪ್ರಕೃತಿಯ ಜೊತೆ ಆಚರಿಸುತ್ತೇವೆ. ಆದರೆ ವ್ಯವಹಾರಿಕ ದೃಷ್ಟಿಯಿಂದ ಇಂದು 2025ಕ್ಕೆ ವಿದಾಯ ಹೇಳಿ 2026ಕ್ಕೆ ಕಾಲಿಡುತ್ತಿದ್ದೇವೆ ಎಂದು ಶ್ರೀಗಳು ನೆನಪಿಸಿದರು.

ಕಳೆದ ವರ್ಷದ ಪ್ರಗತಿ, ಸಾಧನೆ ಮತ್ತು ದುಃಖಕರ ಸನ್ನಿವೇಶಗಳನ್ನು ಮೆಲುಕು ಹಾಕುತ್ತಾ, ಹೊಸ ವರ್ಷದಲ್ಲಿ ಅಂತಹ ಅಹಿತಕರ ಘಟನೆಗಳು ಮರುಕಳಿಸದಿರಲಿ ಎಂದು ಶ್ರೀಗಳು ಹಾರೈಸಿದರು.

ಸಂತೋಷ ಮತ್ತು ನೆಮ್ಮದಿ ನಮ್ಮೊಳಗಿರಲಿ ಮನುಷ್ಯನ ಇಂದಿನ ಅತಿದೊಡ್ಡ ಅವಶ್ಯಕತೆ ನೆಮ್ಮದಿ ಎಂದು ಪ್ರತಿಪಾದಿಸಿದ ಶ್ರೀಗಳು, ನೆಮ್ಮದಿ ಮತ್ತು ಸಂತೋಷವನ್ನು ನಾವು ನಮ್ಮೊಳಗೆ ಕಂಡುಕೊಳ್ಳಬೇಕು.

ಹೊರಗಿನ ವಸ್ತುಗಳು ಕೇವಲ ಪೂರಕ ಅಷ್ಟೇ. ಪ್ರತಿಯೊಬ್ಬರೂ ಪ್ರೀತಿ-ವಿಶ್ವಾಸದಿಂದ ಬದುಕುವ ವಾತಾವರಣ ಸೃಷ್ಟಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಅಶಾಂತಿಯನ್ನು ತೊರೆದು ತನ್ಮನಗಳಲ್ಲಿ ಶಾಂತಿ ನೆಲೆಸುವಂತೆ ಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಹೊಸ ವರ್ಷದಲ್ಲಿ ರಾಜ್ಯದಲ್ಲಿ ಉತ್ತಮ ಮಳೆ-ಬೆಳೆಯಾಗಲಿ ಎಂದು ಶ್ರೀಗಳು ಹಾರೈಸಿದರು. “ರೈತರು ಚೆನ್ನಾಗಿದ್ದಾಗ ಮಾತ್ರ ಜಗತ್ತು ಶಾಂತಿಯಿಂದ ಇರಲು ಸಾಧ್ಯ. ಪ್ರಾಕೃತಿಕವಾಗಿ ಮಳೆ ಚೆನ್ನಾಗಿ ಆದಾಗ ಎಲ್ಲರಿಗೂ ನೆಮ್ಮದಿ ಸಿಗುತ್ತದೆ. ಕಳೆದ ವರ್ಷ ಅನಾಹುತಕ್ಕೆ ಒಳಗಾದವರಿಗೆ ದುಃಖ ಭರಿಸುವ ಶಕ್ತಿ ಸಿಗಲಿ ಹಾಗೂ ಇನ್ನು ಮುಂದೆ ಇಂತಹ ಅವಘಡಗಳು ಸಂಭವಿಸದಿರಲಿ” ಎಂದು ಶ್ರೀಗಳು ಪ್ರಾರ್ಥಿಸಿದರು.

ಇಂದಿನ ಮಾಲಿನ್ಯಯುತ ಜಗತ್ತಿನಲ್ಲಿ ಪ್ರಕೃತಿಯನ್ನು ಉಳಿಸುವುದು ನಮ್ಮೆಲ್ಲರ ಹೊಣೆ ಎಂದು ಶ್ರೀಗಳು ಕರೆ ನೀಡಿದರು. ‘ಪ್ರತಿಯೊಬ್ಬರೂ ಈ ವರ್ಷ ಒಂದು ಗಿಡ ನೆಟ್ಟು ಅದನ್ನು ಕಾಪಾಡುವ ಸಂಕಲ್ಪ ಮಾಡಬೇಕು. ಪ್ರಕೃತಿಯ ರಕ್ಷಣೆ ನಮ್ಮ ಮೊದಲ ಕೊಡುಗೆಯಾಗಲಿ. ಕಾಯಾ-ವಾಚಾ-ಮನಸಾ ದೇಶಕ್ಕೆ ಮತ್ತು ಜನತೆಗೆ ಒಳಿತನ್ನು ಮಾಡುವ ಕೆಲಸವಾಗಲಿ’ ಎಂದು ಪರಿಸರ ಜಾಗೃತಿಯ ಮಂತ್ರ ಬೋಧಿಸಿದರು.

ಮನುಷ್ಯರು ಮಾತ್ರವಲ್ಲದೆ ಸಕಲ ಜೀವರಾಶಿಗಳು ಸುಖವಾಗಿ ಬದುಕಲು ನಾವು ಉತ್ತಮ ಪರಿಸರ ನಿರ್ಮಾಣ ಮಾಡೋಣ. ಪ್ರತಿಯೊಬ್ಬರ ಜೀವನದಲ್ಲಿ ಹೊಸತನ ಬರಲಿ ಎಂದು ಆಶಿಸುತ್ತಾ ಶ್ರೀಗಳು ಮತ್ತೊಮ್ಮೆ ಸಮಸ್ತ ಜನತೆಗೆ 2026ರ ಹೊಸ ವರ್ಷದ ಶುಭ ಹಾರೈಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HxAWJ403uVgK5HFZlxTVut

Share This Article
Leave a comment

Leave a Reply

Your email address will not be published. Required fields are marked *