ಹುಬ್ಬಳ್ಳಿ ವಚನದರ್ಶನ ಕಾರ್ಯಕ್ರಮದಿಂದ ಕೊನೆಗಳಿಗೆಯಲ್ಲಿ ಹಿಂದೆ ಸರಿದ ಮೂರು ಸಾವಿರ ಮಠದ ಸ್ವಾಮೀಜಿ

ರವೀಂದ್ರ ಹೊನವಾಡ
ರವೀಂದ್ರ ಹೊನವಾಡ

ಹುಬ್ಬಳ್ಳಿ:

ನಗರದ ಸವಾಯಿ ಗಂಧರ್ವ ಸಭಾಂಗಣದಲ್ಲಿ ಬುಧವಾರ ನಡೆದ ವಚನದರ್ಶನ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮೂರುಸಾವಿರ ಮಠದ ಜಗದ್ಗುರು ಗುರುಸಿದ್ಧ ರಾಜಯೋಗೇಂದ್ರ ಮಹಾಸ್ವಾಮಿಗಳು ನಿರಾಕರಿಸಿದರು.

ಅಖಿಲ ಭಾರತೀಯ ಸಾಹಿತ್ಯ ಪರಿಷದ್, ಅರಿವು ಹಾಗೂ ಸಾಮರಸ್ಯ ವೇದಿಕೆ ಆಶ್ರಯದಲ್ಲಿ ನಡೆದ ಕಾರ್ಯಕ್ರಮದ ಸಾನಿಧ್ಯ ವಹಿಸಲು ಶ್ರೀಗಳು ಒಪ್ಪಿಕೊಂಡಿದ್ದರೂ ಲಿಂಗಾಯತ ಗುಂಪುಗಳ ಆಗ್ರಹಕ್ಕೆ ಮಣಿದು ಕಾರ್ಯಕ್ರಮಕ್ಕೆ ಗೈರು ಹಾಜರಾದರು.

ಎರಡು ವಾರಗಳಿಂದ ವ್ಯಾಪಕವಾಗಿ ಹಂಚಿಕೆಯಾಗಿದ್ದ ವಚನ ದರ್ಶನ ಪುಸ್ತಕದ ಲೋಕಾರ್ಪಣೆ ಕಾರ್ಯಕ್ರಮದ ಅಹ್ವಾನ ಪತ್ರಿಕೆಯಲ್ಲಿ ರಾಜಯೋಗೇಂದ್ರ ಮಹಾಸ್ವಾಮಿಗಳು ದಿವ ಸಾನಿಧ್ಯವಹಿಸುತ್ತಿದ್ದರೆಂದು ಪ್ರಮುಖವಾಗಿ ಮುದ್ರಣವಾಗಿತ್ತು.

ಕೊನೆ ಗಳಿಗೆಯಲ್ಲಿ ಶ್ರೀಗಳು ಕಾರ್ಯಕ್ರಮಕ್ಕೆ ಹೋಗಲು ನಿರಾಕರಿಸಿದ್ದರಿಂದ ಆಯೋಜಕರು ಅವರ ಬದಲು ದೇವರಹುಬ್ಬಳ್ಳಿ ಮಠದ ಸಿದ್ದಶಿವಯೋಗಿ ಸ್ವಾಮೀಜಿ‌ಯನ್ನು ಸಾನಿಧ್ಯ ವಹಿಸಲು ಆಹ್ವಾನಿಸಿದರು.

ಸಂಘ ಪರಿವಾರ ಪ್ರಾಯೋಜಿತ ವಚನದರ್ಶನ ಪುಸ್ತಕ ವಚನಗಳನ್ನು ತಿರುಚಿ ಬಸವಣ್ಣನವರನ್ನು ವಿರೂಪಗೊಳಿಸಿದೆ ಎಂದು ಬಸವ ಪರ ಸಂಘಟನೆಗಳು ರಾಜ್ಯಾದ್ಯಂತ ಆಪಾದಿಸಿ, ವಿವಿಧ ಜಿಲ್ಲೆಗಳಲ್ಲಿ ನಡೆಯುತ್ತಿರುವ ಪುಸ್ತಕದ ಬಿಡುಗಡೆ ಕಾರ್ಯಕ್ರಮಗಳನ್ನು ವಿರೋಧಿಸುತ್ತಿವೆ.

ಇತ್ತೀಚೆಗೆ ಬಸವಪರ ಸಂಘಟನೆಗಳ ಒಕ್ಕೂಟದವರು ರಾಜಯೋಗೇಂದ್ರ ಮಹಾಸ್ವಾಮಿಗಳನ್ನು ಭೇಟಿಯಾಗಿ, ವಚನದರ್ಶನ ಪುಸ್ತಕ ಸಂಘ ಪರಿವಾರದವರು ಬಸವಾದಿ ಶರಣರಿಗೆ ಅಪಚಾರವೆಸಗಲು ಮಾಡಿದ ಹುನ್ನಾರವಾಗಿದೆ, ಹಾಗಾಗಿ ತಾವು ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಹೋಗಬಾರದು ಎಂದು ಮನವಿ ಮಾಡಿಕೊಂಡಿದ್ದರು.

ರಾಜಯೋಗೇಂದ್ರ ಮಹಾಸ್ವಾಮಿಗಳು ವಚನದರ್ಶನ ಪುಸ್ತಕ ದೋಷಪೂರಿತವೆಂದು ಗೊತ್ತಿರಲಿಲ್ಲ, ಅದಕ್ಕೆ ಕಾರ್ಯಕ್ರಮಕ್ಕೆ ಹೋಗಲು ಒಪ್ಪಿಕೊಂಡಿದ್ದೆ ಎಂದು ಹೇಳಿದ್ದರು.

ಬುಧವಾರ ನಡೆದ ಕಾರ್ಯಕ್ರಮದಲ್ಲಿ ಕೆ.ಎಲ್.ಇ.ನಿರ್ದೇಶಕ ಶಂಕರ ಮುನವಳ್ಳಿ ಮಾತನಾಡಿದರು. ಶರತ್ ದೇಶಪಾಂಡೆ, ದೇವರಹುಬ್ಬಳ್ಳಿ ಮಠದ ಸಿದ್ಧಯೋಗಿ ಸ್ವಾಮೀಜಿ, ಸುನಿಲ ಚಿಲ್ಲಾಳ, ಗುರು ಬನ್ನಿಕೊಪ್ಪ, ಸುಶೀಲೇಂದ್ರ ಕುಂದರಗಿ, ಪೂರ್ಣಾನಂದ ಮಳಲಿ, ಗಾಯತ್ರಿ ಕ್ಷೀರಸಾಗರ, ರೂಪಾ ಶೆಟ್ಟಿ ಮತ್ತಿತರರು ಹಾಜರಿದ್ದರು.

Share This Article
Leave a comment

Leave a Reply

Your email address will not be published. Required fields are marked *