ಹುಬ್ಬಳ್ಳಿ
ವಚನ ಶ್ರಾವಣ ಅಂಗವಾಗಿ ವಾಸವಿ ಕಲ್ಯಾಣ ಮಂಟಪದಲ್ಲಿ ಬಸವಾದಿ ಶರಣ ಶಂಕರ ದಾಸಿಮಯ್ಯ ಅವರ ಜಯಂತಿ, ಅವರ ವಚನಾನುಭಾವ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಪ್ರೊ. ರವೀಂದ್ರ ಪಟ್ಟಣ, ಮುಳಗುಂದ ಇವರು ಮುಖ್ಯ ಅತಿಥಿಗಳಾಗಿ ಅನುಭಾವ ನೀಡುತ್ತ, ಲಿಂಗವಂತ ಧರ್ಮದ ಮಹತ್ವ, ವೈಶಿಷ್ಟ್ಯ, ಅದರ ಪ್ರತ್ಯೇಕತೆಯ ಬಗ್ಗೆ ಚಿಂತನೆ ಮಾಡುತ್ತ, ಧರ್ಮಗುರು ಬಸವಣ್ಣನವರ ಕುರಿತು ಅನೇಕ ವಚನಗಳ ಆಧಾರದ ಮೇಲೆ ಬಸವತತ್ವದ ಭಿನ್ನತೆ ಮತ್ತು ಸ್ಪಷ್ಟತೆ ಬಗ್ಗೆ ಬೆಳಕು ಚೆಲ್ಲಿದರು.

ನಂತರ ಶರಣ ಶಂಕರ ದಾಸೀಮಯ್ಯ ಅವರ ಬಗ್ಗೆ ಅವರ ಲಭ್ಯವಿರುವ ಕೆಲವೇ ಕೆಲವು ವಚನಗಳ ಆಧಾರದ ಮೇಲೆ ಅವರ ಕೊಡುಗೆಯನ್ನು ಕೊಂಡಾಡಿದರು.
ಬಣಗಾರ ಸಮಾಜದ ಗೌರವಾಧ್ಯಕ್ಷ ಸುರೇಶ ಚೆನ್ನಿ ಮಾತನಾಡಿ, ಪಟ್ಟಣ ಅವರ ಶರಣ ವಿಚಾರದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.
ಅನಿಲ ಕವಿಶೆಟ್ಟಿ ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ ಬಸವ ಕೇಂದ್ರದೊಂದಿಗೆ ತಮ್ಮ ಸಮಾಜದ ಭಕ್ತಿ ಸಂಬಂಧ ಇದೇ ರೀತಿ ಮುಂದುವರೆಯುವದಾಗಿ ತಿಳಿಸಿ, ತಮ್ಮ ಸಂತೋಷವನ್ನು ಹಂಚಿಕೊಂಡರು.

ಬಸವ ಕೇಂದ್ರದ ಅಧ್ಯಕ್ಷರಾದ ಪ್ರೊ. ಜಿ. ಬಿ. ಹಳ್ಯಾಳ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ನಿರೂಪಣೆಯನ್ನು ಶ್ರೀಶೈಲ ಜೋಡಳ್ಳಿ ಮಾಡಿದರು. ಉಮಾತಾಯಿ ಸಾಮೂಹಿಕ ಪ್ರಾರ್ಥನೆ ಮಾಡಿಸಿದರು. ವಿದ್ಯಾವತಿಯವರು ವಚನ ಪ್ರಾರ್ಥನೆ ಮಾಡಿದರು. ಸಮಾಜದ ಶರಣ ಶರಣೆಯರು ಉಪಸ್ಥಿತರಿದ್ದರು.