ಶರಣರ ಮೇಲೆ ಭರ್ಜರಿ ಭಾಷಣ ಮಾಡಿ ಚಪ್ಪಾಳೆ ಗಿಟ್ಟಿಸಿಕೊಂಡ ಪೊಲೀಸ್ ಅಧಿಕಾರಿ

ಕುಮಾರಣ್ಣ ಪಾಟೀಲ್
ಕುಮಾರಣ್ಣ ಪಾಟೀಲ್

ಹುಬ್ಬಳ್ಳಿ

ನಗರದಲ್ಲಿ ಬುಧವಾರ ನಡೆದ ಯುವ ಸಮಾವೇಶದಲ್ಲಿ ಡೆಪ್ಯುಟಿ ಪೊಲೀಸ್ ಕಮಿಷನರ್ ರವೀಶ್ ಸಿ. ಆರ್. ಅವರ ಶರಣರ ಮೇಲಿನ ಅದ್ಬುತ ಭಾಷಣ ಎಲ್ಲರ ಗಮನ ಸೆಳೆಯಿತು.

ಬಸವ ಕೇಂದ್ರದ ಯುವ ಘಟಕದ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ವಚನಗಳನ್ನು ಹೇಳುತ್ತಾ ಸರಳವಾಗಿ ಮನ ಮುಟ್ಟುವಂತೆ ಶರಣರ ತತ್ವವನ್ನು ಪರಿಚಯ ಮಾಡಿಕೊಟ್ಟರು. ಉದಾಹರಣೆಗೆ ಕಾಯಕ ತತ್ವನನ್ನು ಅವರು ವಿವರಿಸಿದ ರೀತಿ ಇದು:

ಒಬ್ಬ ರೈತ ಹಾಲನ್ನು ಸರಿಯಾದ ಸಮಯಕ್ಕೆ, ಕಲಬೆರಕೆ ಮಾಡದೆ, ಮಾರಾಟ ಮಾಡಿ, ಬಂದ ಹಣದಲ್ಲಿ ತನ್ನ ಜೀವನ ನಡೆಸಲು ಎಷ್ಟು ಬೇಕೊ ಅಷ್ಟನ್ನಿಟ್ಟುಕೊಂಡು ಉಳಿದ ಹಣದಲ್ಲಿ ದಾಸೋಹ ಮಾಡಿದರೆ ಅದು ‘ಕಾಯಕ’. ಇಷ್ಟೆಲ್ಲಾ ಮಾಡಿ ದಾಸೋಹ ಮಾಡದಿದ್ದರೆ ಅದು ‘ಕರ್ತವ್ಯ’. ಹಾಲಿಗೆ ನೀರು ಹಾಕಿ ಲಾಭಕ್ಕೆ ಮಾರಿದರೆ ಅದು ‘ಕೆಲಸ’. ನಾವುಗಳು ಮಾಡುವುದು ಕೆಲಸವೋ, ಕರ್ತವ್ಯವೋ, ಕಾಯಕವೋ ಎಂದು ಆತ್ಮವಿಮರ್ಶೆ ಮಾಡಿಕೊಳ್ಳಬೇಕು ಎಂದರು.

ಸಭೆಯಲ್ಲಿದ್ದವರಿಂದ ಹಲವಾರು ಬಾರಿ ಚಪ್ಪಾಳೆ ಗಿಟ್ಟಿಸಿಕೊಂಡರೂ ರವೀಶ್ ಅವರು ಸಮಯದ ಅಭಾವದಿಂದ ಭಾಷಣವನ್ನು ಮೊಟಕುಗೊಳಿಸುತ್ತಿದ್ದೇನೆ ಇನ್ನೊಂದು ಸಾರಿ ಬೇಕಾದರೆ ಇಡೀ ದಿನ ಶರಣರ ಮೇಲೆ ಪ್ರವಚನ ಮಾಡುತ್ತೇನೆ ಎಂದರು.

ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ, ಹುಬ್ಬಳ್ಳಿ-ಧಾರವಾಡ ಮಹಾನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಅವರು ತಮಗೆ ಬಾಲ್ಯದಿಂದಲೆ ಬಸವ ಕೇಂದ್ರ, ಶರಣ ಸಂಪ್ರದಾಯದ ಮಠಗಳ ಹಾಗೂ ಪೂಜ್ಯ ಮಾತೆ ಮಹಾದೇವಿಯವರ ಪ್ರಭಾವ ಬೀರಿದೆ ಎಂದರು.

ಚಿಕ್ಕವಯಸ್ಸಿನಿಂದಲೇ ವಚನಗಳು, ಮಹಾಪುರುಷರ ಮಾತುಗಳು ನಾಟಿದರೆ ಬಹಳ ದೊಡ್ಡದಾದ ಬದಲಾವಣೆ ಕಾಣುತ್ತೇವೆ. ವಚನಕಾರರ ಮಾತಿನಲ್ಲಿರುವ ತತ್ವ ಹಗಲಲ್ಲಿ ಸೂರ್ಯನಿರುವಷ್ಟೆ ಸತ್ಯ, ನಾವು ಕರ್ತವ್ಯದಲ್ಲಿದ್ದಾಗ ಸಮಯವನ್ನು ವ್ಯರ್ಥ ಮಾಡದೆ ಹೆಚ್ಚಿನ ಸಮಯವನ್ನು ಕಾಯಕದಲ್ಲೆ ತೊಡಗಿಸಿಕೊಳ್ಳಲು ಶರಣರ ವಚನಗಳು ಬೆಳಕು ತೋರಿಸುತ್ತವೆ ಎಂದರು.

ಶರಣರ ಕ್ರಾಂತಿಕಾರಕ ಆಲೋಚನೆಗಳು ಇವತ್ತು ನಾಗರೀಕತೆಯಲ್ಲಿ ಅತ್ಯಂತ ಮುಂದುವರೆದ ದೇಶಗಳಲ್ಲಿಯೂ ಕೂಡ ಇಲ್ಲದೆ ಇರುವಂಥ ಆಲೋಚನೆಗಳು, ಸಾವಿರ ವರುಷಗಳ ಹಿಂದೆ ನಮ್ಮ ಮಣ್ಣಿನಲ್ಲಿ ಇತ್ತು ಅನ್ನೊದಾದರೆ ನಮ್ಮ ಶ್ರೇಷ್ಠತೆ ಎಷ್ಟಿದೆ ಅನ್ನೋದನ್ನು ನಾವು ಅರ್ಥ ಮಾಡಿಕೊಳ್ಳಬೇಕು ಎಂದರು.

ಬೇರೆ ಯಾವುದೆ ಭಾಷೆಯಲ್ಲಿ ಸಿಗದೆ ಇರುವಂಥ ಅತ್ಯಮೂಲ್ಯವಾದ ಜ್ಞಾನ ನಮ್ಮ ಕನ್ನಡ ಭಾಷೆಯಲ್ಲಿದೆ ಇದನ್ನು ಹೆಚ್ಚು ಹೆಚ್ಚು ಶಾಲೆ, ಕಾಲೇಜುಗಳಲ್ಲಿ ಪಠ್ಯವಾಗಿ ಕಲಿಸಬೇಕು.

ಮಕ್ಕಳಿಗೆ ಈಗಿನಿಂದಲೆ ವಚನಗಳನ್ನು ಕಲಿಸಿ, ದಿನದಲ್ಲಿ ಒಂದು ಅರ್ಧ ಗಂಟೆ ಅದಕ್ಕಾಗಿಯೆ ಮೀಸಲಿಡಿ, ಅಮೇಲೆ ನೋಡಿ ಅವರಲ್ಲಿ ಅದ್ಭುತವಾದ ಬದಲಾವಣೆಗಳಾಗುತ್ತವೆ ಎಂದರು.

ಇದೇ ಸಂದರ್ಭದಲ್ಲಿ ಕನ್ನಡ ಮಾಧ್ಯಮದಲ್ಲಿ ಕಲಿತು ದೃಷ್ಟಿದೋಷ ಇದ್ದರೂ ಯಾವುದೇ ಕೋಚಿಂಗ್‌ಗೆ ಹೋಗದೆ ತಮ್ಮ ತಾಯಿಯವರ ಸಹಾಯದಿಂದ ಒಂದೇ ಬಾರಿಗೆ CA ಪಾಸು ಮಾಡಿ ಅಪೂರ್ವ ಸಾಧನೆ ಮಾಡಿದ ಕುಮಾರಿ ಪೂಜಾ ಕರವೀರಶೆಟ್ಟರ ಅವರನ್ನು ಸನ್ಮಾನಿಸಲಾಯಿತು.

ತಮ್ಮ ಈ ಸಾಧನೆಗೆ ವಚನಗಳ ಅಧ್ಯಯನವೆ ಸ್ಪೂರ್ಥಿ ಎಂದು ಕುಮಾರಿ ಪೂಜಾ ಅವರನ್ನು ಪರಿಚಯ ಮಾಡಿಸುವ ಒಂದು ಪುಸ್ತಕವನ್ನು ಬರೆಯುವುದಾಗಿ ರವೀಶ್ ಅವರು ಹೇಳಿದರು.

ಅನಿಲ್ ಲಿಂಗಶೆಟ್ಟರ ಸ್ವಾಗತಿಸಿದರು. ಕುಮಾರಿ ಸಂಜನಾ ಚಪ್ಪಳಗಾವಿ ವಚನ ಪ್ರಾರ್ಥನೆ ಮಾಡಿದರು.
ಪ್ರಾಸ್ತಾವಿಕವಾಗಿ ಸಂತೋಷ ಕತ್ತಿಶೆಟ್ಟರ ಮಾತನಾಡಿದರು. ಬಸವ ಕೇಂದ್ರದ ಅಧ್ಯಕ್ಷರಾದ ಜಿ.ಬಿ. ಹಳ್ಯಾಳ‌ ಹಾಗೂ ಶ್ರೀಗುರುಬಸವ ಮಂಟಪದ ಶೋಭಾತಾಯಿ ಕರವೀರಶೆಟ್ಟರ ಉಪಸ್ಥಿತರಿದ್ದರು. ನಿಖಿಲ ಅಂಗಡಿ ಶರಣು ಸಮರ್ಪಣೆ ಗೈದರು.

Share This Article
2 Comments
  • ಕಮೀಷನ್ ರವರ ಶರಣರ ಮೇಲಿನ ವಿಚಾರವಂತಿಕೆಗೆ ಅನಂತ ಶರಣು.ಯುವ ಸಮುದಾಯಕ್ಕೆ ಈ ರೀತಿಯ ಕಾರ್ಯಕ್ರಮ ಮತ್ತು ಕಾರ್ಯಾಗಾರ ಹಮ್ಮಿಕೊಂಡು ವಚನಗಳಲ್ಲಿರುವ ವ್ಯಕ್ತಿತ್ವ ವಿಕಸನದ ವಿಚಾರಗಳನ್ನ ಹಾಗು ದೇಶದ ಸಮಗ್ರ ಅಭಿವೃದ್ಧಿಗೆ ವಚನಗಳ ಮುಖಾಂತರ ಶರಣರು ಕೊಟ್ಟಿರುವ ಮಹತ್ತರವಾದ ವಿಷಯಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ದೇಶಾದ್ಯಂತ ನಡೆಸಬೇಕಿದೆ…ಯುವ ಸಮಾವೇಶದ ಹುಬ್ಬಳ್ಳಿಯ ಬಸವ ಕೇಂದ್ರದವರಿಗೆ ಅನಂತ ಶರಣು ಶರಣಾರ್ಥಿಗಳು

    • ಬಸವ ಮಿಡಿಯಾ ಈ ಸಂದೇಶವನ್ನು ತುಂಬಾ ಸರಿಯಾದ ರೀತಿಯಲ್ಲಿ ಹೊರತಂದಿರುವುದು ಬಹಳ ಸಂತೋಷ.

Leave a Reply

Your email address will not be published. Required fields are marked *