ಹಾವೇರಿ
ಉತ್ತರ ಕರ್ನಾಟಕದ ಹೆಬ್ಬಾಗಿಲು ಅಂತಲೇ ಹಾವೇರಿ ನಗರ ಪ್ರಸಿದ್ಧವಾಗಿದೆ. ಇಲ್ಲಿನ ಹುಕ್ಕೇರಿಮಠದ ಜಾತ್ರೆಯು ವಿಭಿನ್ನ ರೀತಿಯಲ್ಲಿ ಜರುಗುತ್ತಿದೆ.

6 ಸಾವಿರ ಮಹಿಳೆಯರಿಂದ ಶಿವಬಸವ ಬುತ್ತಿ ಮೆರವಣಿಗೆಯ ನಂತರ 51 ಸಾವಿರ ಜನರಿಂದ 11 ವಚನ ಗಾಯನ ಮಾಡಿದ ಹುಕ್ಕೇರಿಮಠದ ಭಕ್ತರು ಶನಿವಾರ ದಾಖಲೆ ನಿರ್ಮಿಸಿದರು.

ಹುಕ್ಕೇರಿಮಠ ಜಾತ್ರಾ ಮಹೋತ್ಸವ, ಶಿವಲಿಂಗ ಮತ್ತು ಶಿವಬಸವ ಸ್ವಾಮೀಜಿ ಪುಣ್ಯಸ್ಮರಣೋತ್ಸವ ಅಂಗವಾಗಿ ವಿಭಿನ್ನವಾದ ಕಾರ್ಯಕ್ರಮಗಳು ನಡೆದವು.

ಜಿಲ್ಲಾ ಕ್ರೀಡಾಂಗಣದಲ್ಲಿ ಹುಕ್ಕೇರಿಮಠದ ಸದಾಶಿವ ಶ್ರೀಗಳು ಹ್ಯಾಲಿಕ್ಟಾಪರ್ ಮೂಲಕ ಪುಷ್ಪಿವೃಷ್ಟಿ ಮಾಡಿದರು. ಏಕಕಾಲದಲ್ಲಿ 51 ಸಾವಿರ ಜನರು 11 ವಚನಗಳ ಗಾಯನ ನಡೆಸಿದರು.

ಬಸವಣ್ಣನವರ 3 ವಚನ, ಚೆನ್ನಬಸವಣ್ಣನವರ 2 ವಚನ, ಅಲ್ಲಮಪ್ರಭುಗಳ 1 ವಚನ ಹಾಗೂ ಅಕ್ಕಮಹಾದೇವಿಯ ವಚನ ಸೇರಿದಂತೆ ಶಿವಶರಣೆಯರ ವಚನಗಾಯನ ನಡೆಯಿತು.

6 ಸಾವಿರ ಮಹಿಳೆಯರು ರಾಷ್ಟ್ರಧ್ವಜ ಮಾದರಿಯ ಸೀರೆ ಧರಿಸಿ ಶಿವಬಸವ ಬುತ್ತಿಯನ್ನ ಹೊತ್ತು ತಂದಿದ್ದರು.
ಹುಕ್ಕೇರಿಮಠದಿಂದ ಶೇಂಗಾ ಹೋಳಿಗೆಯ ಶಿವಬಸವ ಬುತ್ತಿ ಹೊತ್ತು, ರಾಷ್ಟ್ರ ಧ್ವಜ ಮಾದರಿಯಲ್ಲಿ ಮೆರವಣಿಗೆ ಮಾಡಿದರು. ಜಿಲ್ಲೆಯ 70 ಕ್ಕೂ ಹೆಚ್ಚು ಗ್ರಾಮದ ಮಹಿಳೆಯರು 6 ಲಕ್ಷ ಹೋಳಿಗೆಯೊಂದಿಗೆ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಅದೇ ಬುತ್ತಿಯ ಹೋಳಿಗೆಯನ್ನು ಸಾವಿರಾರು ಭಕ್ತರಿಗೆ ಪ್ರಸಾದ ರೂಪದಲ್ಲಿ ನೀಡಲಾಯಿತು.
