ಹುನಗುಂದ
ಲಿಂಗಾಯತ ಧರ್ಮಗುರು ಬಸವಣ್ಣನವರ ಬಗ್ಗೆ ಅಪಾರವಾದ ಗೌರವ ಪ್ರೇಮ ಇರಬೇಕು, ಇಷ್ಟಲಿಂಗದ ಬಗ್ಗೆ ನಿಷ್ಠೆ, ಲಿಂಗಾಯತ ಧರ್ಮದ ಬಗ್ಗೆ ಅಭಿಮಾನ ಇರಬೇಕು. ವಚನಗಳೇ ನಮ್ಮ ಧರ್ಮ ಗ್ರಂಥಗಳು ಎಂಬುವುದನ್ನು ನಮ್ಮ ಮಕ್ಕಳಿಗೆ ತಿಳಿಸಿಕೊಡಬೇಕೆಂದು ಎಂದು ಇಲಕಲ್ಲ ವಿಜಯ ಮಹಾಂತೇಶ್ವರ ಸಂಸ್ಥಾನ ಮಠದ ಗುರುಮಹಾಂತ ಸ್ವಾಮಿಗಳು ಹೇಳಿದರು.

ಹುನಗುಂದ ಬಸವ ಮಂಟಪದಲ್ಲಿ ಸೋಮವಾರ ಸಂಜೆ ಆಯೋಜಿಸಿದ ಜಾಗತಿಕ ಲಿಂಗಾಯತ ಮಹಾಸಭಾ ಹುನಗುಂದ ತಾಲೂಕ ಘಟಕ ಉದ್ಘಾಟನೆ ಹಾಗೂ ವಚನ ದರ್ಶನ ಮಿಥ್ಯ -ಸತ್ಯ ಗ್ರಂಥ ಲೋಕಾರ್ಪಣೆ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದ ಅವರು. ನಾವು ಲಿಂಗಾಯತರಾಗಿ ಉಳಿಯಬೇಕೆಂದರೆ ಲಿಂಗಾಯತ ಧರ್ಮದ ಆಚರಣೆಗೆ ಧೈರ್ಯ ತೋರಿಸಬೇಕು.
ಪ್ರತಿಯೊಬ್ಬ ಲಿಂಗಾಯತರು ನಿತ್ಯ ಇಷ್ಟಲಿಂಗ ಪೂಜೆ ಮಾಡಿಕೊಂಡು ಬಸವಣ್ಣನವರ ಐದು ವಚನ ಪಠಣ ಮಾಡಬೇಕು, ಕಾಯಕದಲ್ಲಿ ನಿಷ್ಠೆ ತೋರಿಸಬೇಕು. ವಂಚನೆ ಮಾಡಬಾರದು. ಕೊರಳಲ್ಲಿ ಲಿಂಗ ಹಾಕಿಕೊಂಡವರು ಜೋತಿಷ್ಯ ಕೇಳಬಾರದು. ಮೂರ್ತಿ ಪೂಜೆಯನ್ನು ಮಾಡಬಾರದು ಎಂದರು.

ಲಿಂಗ ಕಟ್ಟಿಕೊಂಡ ಎಲ್ಲರೂ ಲಿಂಗಾಯತರು. ಲಿಂಗಾಯತ ಧರ್ಮ ಉಳಿಸಿ, ಬೆಳೆಸಲು ಧರ್ಮದ ಬಗ್ಗೆ ಅಭಿಮಾನ ಪ್ರಜ್ಞೆ ಬರಬೇಕು. ನಿಮ್ಮ ಮನೆಯಲ್ಲಿ ವರ್ಷಕ್ಕೊಮ್ಮೆ ಮಹಾಮನೆ ಮಾಡಿಸಿರಿ. ಲಿಂಗಾಯತ ಧರ್ಮ ಆಚರಣೆ ಆದರೆ ಮಾತ್ರ ಬಸವಣ್ಣನವರ ತತ್ವ ಉಳಿಯಲು ಸಾಧ್ಯ ಎಂದು ಹೇಳಿದರು.

ಜಾಗತಿಕ ಲಿಂಗಾಯತ ಮಹಾಸಭಾ ಹುನಗುಂದ ತಾಲೂಕ ಘಟಕ ಉದ್ಘಾಟಿಸಿದ ಜಿಲ್ಲಾಧ್ಯಕ್ಷ ಅಶೋಕ ಬರಗುಂಡಿ ಮಾತನಾಡಿ, ಲಿಂಗಾಯತ ಧರ್ಮವನ್ನು ಉಳಿಸುವುದು ಎಂದರೆ ಮಾನವೀಯತೆಯನ್ನು ಉಳಿಸಿದಂತೆ. ವಿನಯತೆಯಿಂದ ಬದುಕಿದ ಬಸವಣ್ಣ ವಿಶ್ವವ್ಯಾಪಿಯಾದರು, ಅಂಹಕಾರದಿಂದ ಬದುಕಿದವರು ತಮ್ಮ ಗಡಿಯನ್ನೇ ದಾಟಲಿಲ್ಲ. ಲಿಂಗಾಯತ ಚಳುವಳಿಗೆ ೧೩೮ ವರ್ಷಗಳ ಇತಿಹಾಸ ಇದೆ.
ಲಿಂಗಾನಂದ ಪೂಜ್ಯರು ೧೯೯೦ರ ಸುಮಾರಿನಲ್ಲಿಯೇ ಲಿಂಗಾಯತ ಹೋರಾಟದ ಜಾಗೃತಿಯನ್ನು ಜನರಿಗೆ ಮುಟ್ಟಿಸುವ ಕಾರ್ಯ ಮಾಡಿದ್ದಾರೆ. ವಚನಗಳು ಹೊರಬಂದ ಮೇಲೆ ಚಿಂತನೆಗಳು ಆರಂಭವಾದವು. ಲಿಂಗಾಯತ ಧರ್ಮದ ಆಶಯವೇ ಸಮಾನತೆ. ಇದು ಜಗತ್ತಿನ ಯಾವ ಧರ್ಮದಲ್ಲಿಯೂ ಇಲ್ಲ. ಸಾಮಾಜಿಕ ಆಶಯಗಳೊಂದಿಗೆ ಬದುಕಲು ಅಂತರಂಗ ಗಟ್ಟಿಗೊಳ್ಳಬೇಕು. ಪ್ರತಿಯೊಬ್ಬರು ಲಿಂಗಾಯತ ಧರ್ಮದ ತತ್ವಾಚರಣೆಗಳನ್ನು ಅರಿಯುವ ಕಾರ್ಯ ಮಾಡಬೇಕು ಎಂದರು.

ಚಿಂತಕ ಡಾ. ಜೆ. ಎಸ್. ಪಾಟೀಲ ವಚನ ದರ್ಶನ ಮಿಥ್ಯ / ಸತ್ಯ ಗ್ರಂಥ ಕುರಿತು ಮಾತನಾಡಿದರು. ಸಮಾರಂಭದಲ್ಲಿ ಶಿರೂರದ ಡಾ. ಬಸವಲಿಂಗ ಸ್ವಾಮೀಜಿ, ಜಾಗತಿಕ ಲಿಂಗಾಯತ ಮಹಾಸಭಾದ ತಾಲೂಕು ಅಧ್ಯಕ್ಷ ಎಸ್. ಆರ್. ಕಡಿವಾಲ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಉಪಾಧ್ಯಕ್ಷ ಬಸವರಾಜ ಕಡಪಟ್ಟಿ, ತಾಲೂಕ ಮಹಿಳಾ ಘಟಕದ ಅಧ್ಯಕ್ಷೆ ನಾಗರತ್ನ ಭಾವಿಕಟ್ಟಿ ಮುಂತಾದವರು ಇದ್ದರು.

ಪೂಜ್ಯ ಗುರುಮಹಾಂತ ಶ್ರೀಗಳು ನೂತನ ಪದಾಧಿಕಾರಿಗಳಿಗೆ ಸೇವಾದೀಕ್ಷೆಯ ಪ್ರತಿಜ್ಞೆ ಬೋಧಿಸಿದರು. ಆರಂಭದಲ್ಲಿ ಸಂವಿಧಾನ ಪೀಠಿಕೆಯನ್ನು ಸಜ್ಜನ ವಕೀಲರು ಎಲ್ಲರಿಗೂ ಬೋಧಿಸಿದರು.
ನಾಗರತ್ನ ಭಾವಿಕಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು, ಸಂಗಮೇಶ ಹೊದ್ಲೂರ ನಿರೂಪಿಸಿದರು, ನಿವೃತ್ತ ಶಿಕ್ಷಕ ಎಂ.ಎಸ್. ಪಾಟೀಲ ವಂದಿಸಿದರು.