ಹೈದರಾಬಾದನಲ್ಲಿ ‘ಪ್ರಸಾದ ಕಾಯವ ಕೆಡಿಸಲಾಗದು’ ಶ್ರಾವಣ ಪ್ರವಚನ

ಸುಪ್ರೀತ ಪತಂಗೆ
ಸುಪ್ರೀತ ಪತಂಗೆ

ಹೈದರಾಬಾದ

ನಗರದ ಅತ್ತಾಪುರನಲ್ಲಿರುವ ಮಹಾತ್ಮ ಬಸವೇಶ್ವರ ಅನುಭವ ಮಂಟಪದಲ್ಲಿ ಲಿಂಗಾಯತ ಮಹಾಮಠ ಬಸವಗಿರಿಯ ಪೂಜ್ಯ ಪ್ರಭುದೇವ ಶ್ರೀಗಳಿಂದ ‘ಪ್ರಸಾದ ಕಾಯವ ಕೆಡಿಸಲಾಗದು’ ಶ್ರಾವಣ ಪ್ರವಚನ ಶುರುವಾಗಿದೆ.

ಈಗಾಗಲೇ ನಗರದಲ್ಲಿ ತಿಂಗಳುಪೂರ್ತಿ ‘ದೇವನೆಡೆಗೆ’ ಎನ್ನುವ ವಿಷಯ ಕುರಿತು ಪ್ರವಚನ ಮಾಡಿದ್ದ ಪೂಜ್ಯರು ಈಗ 23 ದಿನಗಳ ಕಾಲದ ಪ್ರವಚನ ಮಾಡುತ್ತಿದ್ದಾರೆ, ಎಂದು ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ನಾಗರಾಜ ಸೊರಳಿ ಹೇಳಿದರು.

ಲಿಂಗೈಕ್ಯ ಪೂಜ್ಯ ಅಕ್ಕ ಅನ್ನಪೂರ್ಣತಾಯಿ ನಮ್ಮೆಲ್ಲರಿಗೂ ಮಾತೃ ಸ್ವರೂಪಿಯಾಗಿದ್ದರು. ನಮ್ಮ ಯಾವುದೇ ಕಾರ್ಯಕ್ರಮಗಳಿದ್ದರೂ ತಪ್ಪುತಿರಲಿಲ್ಲ. ಅಕ್ಕನವರು ಲಿಂಗೈಕರಾದ ಮೇಲೆ ನಮಗೆ ಅನಾಥ ಪ್ರಜ್ಞೆ ಕಾಡುತ್ತಿತ್ತು. ಆದರೆ ಅಕ್ಕನ ಪ್ರತಿರೂಪವಾಗಿ ಪೂಜ್ಯರು ನಮ್ಮೊಂದಿಗೆ ಇದ್ದಾರೆ. ಅಕ್ಕನವರಂತೆ ಅನುಭಾವ ನೀಡುತ್ತ ಹಳ್ಳಿಹಳ್ಳಿಗಳಲ್ಲಿ ಬಸವಜ್ಯೋತಿಗಳನ್ನು ಬೆಳಗುತ್ತಾ ಬಸವ ತತ್ವದ ಕಂಪು ಎಲ್ಲಾ ಕಡೆ ಹರಡುತ್ತಿದ್ದಾರೆ, ಎಂದು ಹೇಳಿದರು.

ಪ್ರವಚನದಲ್ಲಿ ಪೂಜ್ಯರು ಜಗತ್ತಿನಲ್ಲಿ ಬೆಲೆ ಕಟ್ಟಲಾಗದ ವಸ್ತು ಎಂದರೆ ಮುತ್ತು ಮಾಣಿಕ್ಯಗಳಲ್ಲ, ವಜ್ರ-ವೈಡೂರಗಳಲ್ಲ, ಬೆಲೆ ಕಟ್ಟಲಾಗದ ವಸ್ತುವೆಂದರೆ ಮಾನವನ ಶರೀರ. ಇದನ್ನು ಹಾಳು ಮಾಡದೆ ಉಳಿಸಿಕೊಳ್ಳಬೇಕು. ದೇವರು ಅತ್ಯಂತ ಕರುಣಾಮಯಿ ನಮಗಾಗಿ ಎಲ್ಲವನ್ನು ನಿರ್ಮಿಸಿರುವನು. ಇಳೆ, ಮಳೆ, ಗಾಳಿಯನ್ನು ಕೊಟ್ಟು ಸಲಹುತ್ತಿರುವನು. ಅಂತಹ ದೇವನಿಗೆ ಶರಣಾಗುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ ಎಂದು ತಿಳಿಸಿದರು.

ಭೌತಿಕ ಸಂಪತ್ತಿನ ಬೆನ್ನು ಹತ್ತಿ ಮಾನವ ನಿಜಾನಂದವನ್ನು ಕಳೆದುಕೊಳ್ಳುತ್ತಿದ್ದಾನೆ. ನಾವು ಹಿಡಿದಿದ್ದು ಪದಾರ್ಥವಾದರೆ ಗುರುವಿನ ಹಸ್ತದಿಂದ ಬಂದಿರುವುದು ಪ್ರಸಾದವಾಗುತ್ತದೆ.

ಮನುಷ್ಯನ ಜನನ 2 ಸಾರಿ ಆಗುತ್ತದೆ. ತಂದೆ ತಾಯಿಯ ಉದರದಿಂದ ಬಂದದ್ದು ಮಾಂಸ ಪಿಂಡವಾದರೆ, ಗುರುವಿನ ಹಸ್ತದಲ್ಲಿ ಜನನವಾದದ್ದು ಮಂತ್ರ ಪಿಂಡವಾಗುತ್ತದೆ.

ನರಜನ್ಮವ ತೊಡೆದು
ಹರಜನ್ಮವ ಮಾಡಿದ ಗುರುವೇ.
ಭವ ಬಂಧನ ಬಿಡಿಸಿ
ಪರಮ ಸುಖವ ತೋರಿದ ಗುರುವೇ, ಎಂದು ಅಕ್ಕ ಹೇಳುತ್ತಾಳೆ.

ನರ ಜನ್ಮದಿಂದ ಹರಜನ್ಮ ಮಾಡುವ ದೇವನ ಎತ್ತರಕ್ಕೆ ಏರಿಸುವ ಶಕ್ತಿ ಗುರುವಿನ ಮಾತಿನಲ್ಲಿ. ಅಜ್ಞಾನದ ಕತ್ತಲನ್ನು ಹೊಡೆದು ಓಡಿಸಿ ಜ್ಞಾನದ ಬೆಳಕನ್ನು ಹೊತ್ತಿಸುವವನೇ ನಿಜವಾದ ಗುರು. ಅಂತಹ ಗುರುವನ್ನು ಪಡೆಯಬೇಕಾದರೆ ಗುರುವಿನಲ್ಲಿ ಪ್ರಮುಖವಾಗಿ ನಾಲ್ಕು ಲಕ್ಷಣಗಳಿರಬೇಕು.

1)ಗುರು ಜ್ಞಾನಿಯಾಗಿರಬೇಕು
2)ಗುರು ಅನುಭಾವಿಯಾಗಿರಬೇಕು
3)ಗುರು ಕರುಣಾಮಯಿಯಾಗಿರಬೇಕು
4)ಗುರು ಬೋಧನೆ ಕಲೆಯನ್ನು ಹೊಂದಿರಬೇಕು.

ಈ ನಾಲ್ಕು ಲಕ್ಷಣ ಹೊಂದಿರುವ ಗುರು ದೊರೆತರೆ ಬದುಕು ಆನಂದಮಯವಾಗುತ್ತದೆ. ಗುರು ಸಿಗುವುದೇ ದುರ್ಲಭ, ಸಿಕ್ಕರೆ ನಮಗೆ ಬಹುಲಾಭ. ಎನ್ನುತ್ತಾರೆ ಅನುಭವಿಗಳು.

ಇಂತಹ ನಾಲ್ಕು ಲಕ್ಷಣ ಹೊಂದಿರುವ ಗುರು ಯಾರೆಂದರೆ ಬಸವಣ್ಣನವರು.
ಜಗತ್ತಿನ ವಿಸ್ಮಯ ಬಸವಣ್ಣ. ಜಗತ್ತು ಪರಮಾತ್ಮನ ಆಜ್ಞೆಯಂತೆ ನಡೆಯುತ್ತದೆ. ಆದರೆ ಪರಮಾತ್ಮ ಬಸವಣ್ಣನವರ ಆಜ್ಞೆಯಂತೆ ನಡೆಯುತ್ತಾನೆ ಎನ್ನುತ್ತಾರೆ ಶಿವಯೋಗಿ ಸಿದ್ದರಾಮೇಶ್ವರರು.

ಪ್ರಕೃತಿ ಪರಮಾತ್ಮನ ಮನೆ. ಪರಮಾತ್ಮನ ಮನೆ ಹಾಳಾಗಿ ಹೋಗುವಾಗ ಅದನ್ನು ಸುಂದರಗೊಳಿಸಲು ಬಂದವರೇ ಬಸವಣ್ಣನವರು. ನಾನೊಂದು ಕಾರಣ ಮರತಕ್ಕೆ ಬಂದೇನು ಎಂದು ಬಸವಣ್ಣನವರು ಹೇಳಿದರೆ. ಮರ್ತ್ಯದ ಮನೆ ಹಾಳಾಗಿ ಹೋಗಬಾರದೆಂದು ಕರ್ತ ನಟಿದನಯ್ಯ ಒಬ್ಬ ಶರಣನನ್ನು ಎಂದು ಅಲ್ಲಮ ಪ್ರಭುದೇವರು ಹೇಳುತ್ತಾರೆ.

ಪರಮಾತ್ಮನ ಅಣತಿಯಂತೆ ಧರೆಗೆ ಅವತರಿಸಿದ ಬಸವಣ್ಣನವರು ಜಾತಿ, ವರ್ಣ, ವರ್ಗರಹಿತ ಸುಂದರ ಸದೃಢ ಸಮಾಜವನ್ನು ನಿರ್ಮಿಸಿದರು. ಪ್ರತಿಯೊಬ್ಬರು ದೇವನನ್ನು ಪೂಜಿಸಲೆಂದು ಇಷ್ಟಲಿಂಗವನ್ನು ಕರುಣಿಸಿದರು.
ಜಾತಿ ಭೇದದ ಕಟ್ಟನ್ನು ಸಡಿಲಿಸಿ ಮುಕ್ತ ಅವಕಾಶವಾಗಿ ಅನುಭವ ಮಂಟಪ ಕಟ್ಟಿದರು.

ಕಲ್ಯಾಣ ಅನುಭಾವಿಗಳ ತಾಣವಾಯಿತು. ನಾಡಿನ ಮೂಲೆ ಮೂಲೆಯಿಂದ ಕಲ್ಯಾಣಕ್ಕೆ ಹರಿದು ಬಂದ ಶರಣಬಳಗವೆಲ್ಲ ವಚನ ರಚನೆ, ಕಾಯಕ, ದಾಸೋಹದ, ತಳಹದಿಯ ಮೇಲೆ ಸದೃಢ ಸಮಾಜವನ್ನು ನಿರ್ಮಿಸಿದರು. ಅಂತಹ ಕಾರ್ಯ ಇಂದು ಮರುಕಳಿಸಬೇಕಾಗಿದೆ. ಅದಕ್ಕಾಗಿ ಒಂದು ತಿಂಗಳು ಪರ್ಯಂತರ ಒಂದೇ ವಚನದ ಮೇಲೆ ಪ್ರವಚನ ನಡೆಯಲಿದೆ ಎಂದು ತಿಳಿಸಿದರು.

ರವೀಂದ್ರ ಪಾಟೀಲ ಅವರು ಪ್ರಾರ್ಥನೆಯನ್ನು ನಡೆಸಿಕೊಟ್ಟರು. ನೀಲಮ್ಮನ ಬಳಗದ ಶರಣೆಯರು ಹಾಗೂ ಮಹಾತ್ಮ ಬಸವೇಶ್ವರ ಅನುಭವ ಮಂಟಪದ ಎಲ್ಲಾ ಶರಣರು ಸೇರಿ ಕಾರ್ಯಕ್ರಮ ಉದ್ಘಾಟನೆ ಮಾಡಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/GC2sh4ZJxi0HaucjgFblZs

Share This Article
Leave a comment

Leave a Reply

Your email address will not be published. Required fields are marked *