ಹೈದರಾಬಾದಿನಲ್ಲಿ ಬಸವತತ್ವ ಪ್ರವಚನದ ಮಂಗಲೋತ್ಸವ

ಹೈದರಾಬಾದ

ಮಹಾತ್ಮ ಬಸವೇಶ್ವರ ಅನುಭವ ಮಂಟಪ ಹೈದರಾಬಾದಿನ ಅತ್ತಾಪುರದಲ್ಲಿ ಶ್ರಾವಣ ಮಾಸದ ಅಂಗವಾಗಿ ನಡೆದ ಬಸವತತ್ವ ಪ್ರವಚನದ ಮಂಗಲೋತ್ಸವ ಈಚೆಗೆ ನಡೆಯಿತು.

ಬೀದರಿನ ಲಿಂಗಾಯತ ಮಹಾಮಠದ ಪೂಜ್ಯ ಪ್ರಭುದೇವ ಸ್ವಾಮಿಗಳು “ಪ್ರಸಾದ ಕಾಯವ ಕೆಡಿಸಲಾಗದು” ವಿಷಯ ಕುರಿತು ಒಂದು ತಿಂಗಳ ಕಾಲ ಪ್ರವಚನ ನೀಡಿದ್ದರು.

ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ತೋಂಟದಾರ್ಯ ಅನುಭವ ಮಂಟಪದ ಪೂಜ್ಯ ಕೋರಣೇಶ್ವರ ಸ್ವಾಮೀಜಿ “ಪ್ರಸಾದ ಕಾಯವ ಕೆಡಿಸಲಾಗದು” ಎಂಬುದು ಶರಣರು ಹೇಳಿರುವ ಮಹಾನ್ ವಿಚಾರ. ದೇಹವೇ ದೇವಾಲಯ, ಭಕ್ತನ ಕಾಯವೇ ಕೈಲಾಸ, ಕಾಯಕವೇ ಕೈಲಾಸ, ದಯವೇ ಧರ್ಮದ ಮೂಲ, ದಾಸೋಹ ಮತ್ತು ಶಿವಯೋಗ ಮುಂತಾದವು ಅಂತರಂಗ ಬಹಿರಂಗ ಶುದ್ಧಗೊಳಿಸುವ ಸಿದ್ಧಾಂತಗಳೆಂದರು.

ಅತಿಥಿಯಾಗಿದ್ದ ಬೀದರ ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ ಮಾತನಾಡುತ್ತ, ಶರಣ ಸಮಾಜವು ನನಗೆ ಯಾವುದೇ ಸೇವೆ ಮಾಡಲು ಅವಕಾಶ ಕೊಟ್ಟರೆ ನಾನು ತನು ಮನದಿಂದ ಸೇವೆ ಸಲ್ಲಿಸುತ್ತೇನೆ. ಎಲ್ಲೇ, ಯಾವುದೇ ರಾಜ್ಯದಲ್ಲಿದ್ದರೂ ಬಸವಭಕ್ತರು, ಲಿಂಗಾಯತರೆಲ್ಲರೂ ಒಗ್ಗಟ್ಟಾಗಿರಬೇಕು ಎಂದು ಕರೆ ಕೊಟ್ಟರು.

ಇದೇ ಸಂದರ್ಭದಲ್ಲಿ ಪೂಜ್ಯ ಪ್ರಭುದೇವ ಸ್ವಾಮಿಗಳು ವ್ಯಸನಮುಕ್ತ ಸಮಾಜ ನಿರ್ಮಾಣಕ್ಕಾಗಿ ತಾವೆಲ್ಲರೂ ನನ್ನ ಜೋಳಿಗೆಯಲ್ಲಿ ನಿಮ್ಮ ದುಷ್ಚಟಗಳನ್ನು ಹಾಕಿರೆಂದು ಭಕ್ತರಲ್ಲಿ ಮನವಿ ಮಾಡಿಕೊಂಡು, ಭಕ್ತ ಸಮೂಹದ ಮಧ್ಯೆ ಜೋಳಿಗೆ ಹಿಡಿದು ಸಂಚರಿಸಿದರು. ಅನೇಕರು ತಮ್ಮ ದುಷ್ಚಟಗಳನ್ನು ಜೋಳಿಗೆಗೆ ಹಾಕಿ ಕೃತಾರ್ಥರಾದರು.

ಜಹಿರಾಬಾದಿನ ಮಾಜಿ ಸಂಸದ ಬಿ. ಬಿ. ಪಾಟೀಲ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮಹಾರಾಷ್ಟ್ರ ಲಾತೂರ್ ಲಿಂಗಾಯತ ಸೇವಾಸಂಘದ ಅಧ್ಯಕ್ಷರಾದ ವಿಜಯಕುಮಾರ ಶೆಟೆ, ಸಂಗಪ್ಪ ಜನವಾಡೆ ನಾರಾಯಣಖೇಡ, ರಾಜು ಪೈಲ್ವಾನ, ವೀರಯ್ಯ ಮಠಪತಿ ವೇದಿಕೆಯಲ್ಲಿದ್ದರು.

ಸುನಿಲ ಗೌರ, ನಾಗಿರೆಡ್ಡಿ ತನುಶ್ರೀ ಮಠಪತಿಯವರು ವಚನ ಸಂಗೀತ ನಡೆಸಿಕೊಟ್ಟರು. ರವಿ ಪಾಟೀಲ ಬಸವ ಪ್ರಾರ್ಥನೆ ಮಾಡಿದರು, ನಾಗರಾಜ ಶೋರಳ್ಳಿ ನಿರೂಪಣೆ ಮಾಡಿದರು, ಜಯಶ್ರೀ ಮಾಶೆಟ್ಟೆ ಸ್ವಾಗತಿಸಿದರು. ಶ್ರೀ ಮಹಾತ್ಮ ಬಸವೇಶ್ವರ ಅನುಭವ ಮಂಟಪ ಅತ್ತಾಪುರದ ಸಕಲ ಸದಸ್ಯರು ಮತ್ತು ಅಧ್ಯಕ್ಷರು ಪದಾಧಿಕಾರಿಗಳು ಹಾಗೂ ನಗರದ ನೂರಾರು ಬಸವ ಅನುಯಾಯಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಶರಣ ಮಾಸದ ಕಾರ್ಯಕ್ರಮ ಅರ್ಥಪೂರ್ಣ, ಯಶಸ್ವಿಯಾಗಿ ನಡೆದು ಮಂಗಲಗೊಂಡಿತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KVCwk6IT1VBLPSuFiyKvN1

Share This Article
Leave a comment

Leave a Reply

Your email address will not be published. Required fields are marked *