“ಐಕ್ಯವೆನ್ನುವುದು ಬದುಕಿರುವಾಗಲೇ ಸಾಧಿಸಬೇಕಾದದ್ದು”

‘ಇಂದೂ ದಲಿತ ಶರಣ ಉರಿಲಿಂಗ ಪೆದ್ದಿಗಳ 27 ಮಠಗಳಿವೆ’

ಗುಳೇದಗುಡ್ಡ:

ಬಸವ ಕೇಂದ್ರದ ಮನೆಯಲ್ಲಿ ಮಹಾಮನೆ ಕಾರ್ಯಕ್ರಮ ಈರಣ್ಣ ಶಿವಪ್ಪ ಚಾರಖಾತಿ ಮನೆಯಲ್ಲಿ ಶನಿವಾರ ನಡೆಯಿತು.

ಚಿಂತನೆಗೆ ಆಯ್ದುಕೊಂಡ ವಚನ ಹೀಗಿದೆ-

ಸಾಕಾರವಿಡಿದು ಅರ್ಚನೆ ಪೂಜನೆಯಂ ಮಾಡುವುದಲ್ಲದೆ
ನಿರಾಕಾರವ ನಂಬಲಾಗದು
ಅಗ್ನಿಯಲ್ಲಿಹ ಗುಣವು ಪ್ರಕಾಶದಲುಂಟೆ?
ಶ್ರೀಗುರು ಕರಸ್ಥಲದಲ್ಲಿ ಬಿಜಯಂಗೈಸಿಕೊಟ್ಟ ಇಷ್ಟಲಿಂಗವಿದ್ದ ಹಾಗೆ.
ವಜ್ರದೊಳಗೆ ಬಯಲನರಸುವರೇ?
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
~ ಉರಿಲಿಂಗಪೆದ್ದಿ ತಂದೆ

ಶರಣ ಉರಿಲಿಂಗ ಪೆದ್ದಿ ತಂದೆಗಳ ಈ ವಚನವನ್ನು ಚಿಂತನೆಗೆ ತೊಡಗಿಸಿದ ಪ್ರೊ. ಶ್ರೀಕಾಂತ ಗಡೇದ ಅವರು ಉರಿಲಿಂಗ ಪೆದ್ದಿ ತಂದೆಗಳ ಪರಿಚಯವನ್ನು ಮಾಡಿಕೊಡುತ್ತ ‘ಗುರುಮುಟ್ಟಿ ಗುರು ಆಗುವುದಕ್ಕೆ’ಈ ಉರಿಲಿಂಗ ಪೆದ್ದಿ ಶರಣರೇ ಶ್ರೇಷ್ಠ ಉದಾಹರಣೆ.

ಒಬ್ಬ ವ್ಯಕ್ತಿ ಪೂರ್ವಾಶ್ರಮದಲ್ಲಿ ಕಳ್ಳನಾಗಿದ್ದು, ಗುರುಗಳಾದ ಶರಣ ಜಂಗಮ ಉರಿಲಿಂಗದೇವರು ಸಿಟ್ಟಿನಿಂದ ಒಗೆದ ಕಲ್ಲನ್ನೇ ಸ್ವೀಕರಿಸಿ ಅದನ್ನೇ ಇಷ್ಟಲಿಂಗವೆಂದು ಭಾವಿಸಿ ಶಿವಯೋಗ ಸಾಧನೆಗೈಯುತ್ತಿರಲು ಗುರು ಉರಿಲಿಂಗದೇವರು ಮೆಚ್ಚಿ ಕರುಣಿಸಲು ಅವರು ಪೂರ್ವ ವರ್ತನೆಯನ್ನು ತೊರೆದು ತನ್ನ ಗುರುವಿನ ಮೇಲಿನ ಭಕ್ತಿಯಿಂದ ತಮ್ಮ ಅಂಕಿತವನ್ನು ಉರಿಲಿಂಗ ಪೆದ್ದಿಪ್ರಿಯ ವಿಶ್ವೇಶ್ವರಾ ಎಂಬುದನ್ನಾಗಿಸಿಕೊಂಡು ಅನೇಕ ವಚನಗಳನ್ನು ಬರೆದಿದ್ದಾರೆ.

ಇವುಗಳಲ್ಲಿ ಇಂದಿನ ವಚನವೂ ಒಂದು ಎಂದರು. ಸಾಕಾರ ರೂಪವನ್ನು ಹಿಡಿದು ನಿರಾಕಾರವಾದ ಬಯಲು ಸ್ವರೂಪವನ್ನು ಹಿಡಿಯುವುದು ಅವರ ನಿಲುವಾಗಿತ್ತು ಎಂದು ವಿವರಿಸಿದರು.

ಪ್ರೊ. ಗಾಯತ್ರಿದೇವಿ ಕಲ್ಯಾಣಿಯವರು ಇದೇ ವಚನವನ್ನು ಇನ್ನು ಹೆಚ್ಚಿಸಿ ಚಿಂತನೆಗೆ ಒಳಪಡಿಸುತ್ತ; ಒಟ್ಟಾರೆ ಹನ್ನೆರಡನೆಯ ಶತಮಾನದ ಶರಣರ ವಚನಗಳು ಬದುಕಿಗೆ ದಾರಿದೀಪವಾಗಿವೆ. ಅಂದು ಪೂರ್ವಾಶ್ರಮದ ದಲಿತ ಶರಣ ಉರಿಲಿಂಗ ಪೆದ್ದಿಗಳ ಮಠವೆಂದು ಇಂದೂ ಇಪ್ಪತ್ತೇಳು ಮಠಗಳಿವೆ.

ಅಂದು ಕಲ್ಯಾಣಕ್ಕೆ ಗೋಳಿಲ್ಲದ, ಸುಖ ಸಮಾಜವನ್ನು ಕಟ್ಟಿದ ಅಪ್ಪ ಬಸವಣ್ಣವನವರ ಹೆಗಲಿಗೆ ಹೆಗಲನ್ನು ಸೇರಿಸಲು ಇಡೀ ಭಾರತದ ನಾಡಿನ ಮೂಲೆ ಮೂಲೆಗಳಿಂದ ಬಂದರು, ಬಂದವರು ಶರಣರೇ ಆದರು.  ಕನ್ನಡ ಕಲಿತು ವಚನ ರಚಿಸಿದರು.

ಇಲ್ಲಿ ಉರಿಲಿಂಗ ಪೆದ್ದಿಗಳು ‘ಅಗ್ನಿಯಲ್ಲಿನ ಶಾಖವು ಅದರ ಪ್ರಕಾಶದಲ್ಲಿ ಹೇಗೆ ಕಾಣದೋ ಹಾಗೆ, ಅಲ್ಲದೆ ಸಾಕಾರವಲ್ಲದೆ ನಿರಾಕಾರವ ನಂಬಲಾಗದು ಈ ಕಾರಣಕ್ಕಾಗಿ ಸಾಕಾರ ರೂಪವಾದ ಗುರುಕೊಟ್ಟ ಇಷ್ಟಲಿಂಗದಿಂದ ನಿರಾಕಾರದತ್ತ ಅಂದರೆ ಬಯಲಿನತ್ತ ಸಾಗಿಬಯಲೇ ಆಗುವುದು ಶರಣಸ್ಥಿತಿ, ಶರಣನಾದಾತ ಈ ಬಯಲೇ ಆಗಬೇಕು’ ಎಂದು ಹೇಳಿದರು.

ನಂತರದಲ್ಲಿ ಮಾತನಾಡಿದ ಹಿರಿಯ ಅನುಭಾವಿಗಳಾದ ಪ್ರೊ. ಸುರೇಶ ರಾಜನಾಳ ಅವರು– ಇಷ್ಟಲಿಂಗವೆಂಬುದು ಗುರು ಕರುಣಿಸಿದ ಅರುಹಿನ ಕುರುಹು.  ಅದರ ಬಲದಿಂದಲೇ ಮಹಾಲಿಂಗವಾಗಬೇಕು.  ಕಾಯಕ ದಾಸೋಹಗಳು ಅದರ ಇನ್ನೊಂದು ಮೂಲ.   ಹೀಗಾಗಿ ದೇವರಿಗೂ ದುಡಿಯಲು ಕಲಿಸಿದವರು ಶರಣರು, ಇಷ್ಟಲಿಂಗದ ಮೂಲಕ ಧಾರ್ಮಿಕ ಶೋಷಣೆಗೆ ಒಳಗಾದವರಿಗೆ ನ್ಯಾಯವನ್ನು ಒದಗಿಸಿದವರು ಸಹ ಶರಣರೇ.

ಬ್ರಹ್ಮಾಂಡದಲ್ಲಿನ ಚೈತನ್ಯ ನಿರಾಕಾರದ ಸ್ವರೂಪ. ಅದನ್ನು ಹೊಂದಲು ಇರುವ ಮಾರ್ಗವೆಂದರೆ ಸಾಕಾರ ರೂಪವಾದ ಇಷ್ಟಲಿಂಗ.  ಶರಣರ ಈ ಎಲ್ಲ ವಿಚಾರಗಳನ್ನು ಜನರಿಗೆ ತಲುಪಿಸುವ, ಅರ್ಥೈಸುವ ಕಾರ್ಯವನ್ನು ಮಾಡುವ ಗುರಿ ಹೊಂದಿರುವುದೇ ಸ್ಥಳೀಯ ಬಸವಕೇಂದ್ರದ ಗುರಿಯಾಗಿದೆ ಎಂದರು.

ಕೊನೆಯಲ್ಲಿ ಮಾತನಾಡಿದ ಮುರುಗೇಶ ಶೇಖಾ ಅವರು, ಈ ವಚನವನ್ನು ಸಮಾರೋಪಗೊಳಿಸುತ್ತ – ಮಹಾನುಭಾವಿ ಶರಣ ಉರಿಲಿಂಗ ಪೆದ್ದಿಗಳ ಈ ವಚನ ನಮ್ಮನ್ನು ಆಳವಾಗಿ ಚಿಂತನೆಗೆ ಹಚ್ಚುತ್ತದೆ. ಬಯಲು, ಶೂನ್ಯ, ಘನ ಎಂದೆಲ್ಲ ಕರೆಯಿಸಿಕೊಳ್ಳುವ ಪರವಸ್ತುವನ್ನು ಹೊಂದಿ ಸಮರಸವಾಗಲು ಆತ ನಿರಾಕಾರವಾಗಿರುವುದರಿಂದ ಅಲ್ಲಿ ಕಾಣದಿರುವ ಆ ಪರಮವಸ್ತುವನ್ನು ಹೊಂದಲು ಸಾಕಾರ ಹಿಡಿದು ಹೋಗಬೇಕು.

ಇಲ್ಲಿ ಸಾಕಾರ ರೂಪವೆಂದರೆ ಕರದೊಳಗಿನ ಇಷ್ಟಲಿಂಗವೇ ವಿನಃ ಮತ್ತಾವುದೂ ಅಲ್ಲ.  ಇದನ್ನು ಭಕ್ತರಾದವರು ಸ್ಪಷ್ಟವಾಗಿ ಅರಿತುಕೊಂಡಿರತಕ್ಕದ್ದು.  ಕಲ್ಲುದೇವರು ದೇವರಲ್ಲ, ಮಣ್ಣು ದೇವರು ದೇವರಲ್ಲ, ಲೋಹರೂಪದಲ್ಲಿರುವ ದೇವರು ದೇವರಲ್ಲ ಎಂದು  ಶರಣರ ತತ್ವವೇ ಸ್ಪಷ್ಟವಿರುವಾಗ, ಇಲ್ಲಿ ಉರಿಲಿಂಗ ಪೆದ್ದಿಗಳು ಸಾಕಾರವಿಡಿದು ಅರ್ಚನೆಯ ಮಾಡಬೇಕೆಂದು ಮತ್ತೇಕೆ ಹೇಳಿದರು? ಎಂಬ ಸಂಶಯ ನಮಗೆ ಬಂದಿರಬಹುದಾದರೂ ಅದರ ನಿವಾರಣೆಗೆಂದೇ ನಮ್ಮ ಭ್ರಮೆಯನ್ನು ಪರಿಹರಿಸಲೆಂದೇ ವಚನದ ಮುಂದಿನ ಸಾಲುಗಳಲ್ಲಿ ‘ಶ್ರೀ ಗುರುಸ್ಥಲದಲ್ಲಿ ಬಿಜಯಂಗೈಸಿಕೊಟ್ಟ ಇಷ್ಟಲಿಂಗ’ ಎನ್ನುವುದನ್ನು ಸ್ಪಷ್ಟ ಪಡಿಸಿದ್ದಾರೆ.

ಸಾಕಾರದಲ್ಲಿ ಎರಡು ವಿಧ.  ಒಂದು ಸ್ಥಾವರ, ಇನ್ನೊಂದು ಇಷ್ಟಲಿಂಗ. ಇಷ್ಟಲಿಂಗವು ತನ್ನ ಅರಿವಿನ ಕುರುಹು. ಅದು ನಿರಾಕಾರ ಬಯಲಿನಿಂದ ಬಂದ ಚುಳುಕಾಗಿ ಬಂದ ವಿಶ್ವಚೈತನ್ಯ.  ಹಸ್ತ-ಮಸ್ತಕ ಸಂಯೋಗದಿಂದ ಬಂದ ಅದು ತನ್ನಲ್ಲಿರುವ ಅಂಗ ಗುಣದ ಅವಗುಣಗಳನ್ನು ಕಳೆದು, ಎಲ್ಲ ವಿಷಯಂಗಳ ಇಂದ್ರಿಯಗಳ ಮುಖದ್ವಾರದಲ್ಲಿ ಸ್ವಚ್ಛಗೊಳಿಸುತ್ತ ಲಿಂಗಿಯನ್ನಾಗಿಸುತ್ತವೆ.  ಹೀಗಾಗಿ ಮಾನವ ಮಹಾದೇವನೇ ಆಗುತ್ತಾನೆ.

ವ್ಯಕ್ತಿ ಹಂತ ಹಂತವಾಗಿ ವಿಕಸನಗೊಳ್ಳುತ್ತ ಸೃಷ್ಟಿಯ ಭಾಗವೇ ಆಗಿ ಬದುಕುತ್ತಾನೆ.  ಇದೇ ಲಿಂಗಾಂಗ ಸಾಮರಸ್ಯ; ಐಕ್ಯವೆನ್ನುವದು. ಮರಣದ ನಂತರವಲ್ಲ ಅದು ಬದುಕಿರುವಾಗಲೇ ಸಾಧಿಸಬೇಕಾದದ್ದು. ಇಂತಹ ಬಯಲ ರೂಪವನ್ನು ಸಾಕಾರ ರೂಪವಾದ ಇಷ್ಟಲಿಂಗದ ಮೂಲಕವೇ ವಿನಃ ಇತರ ಸಾಕಾರ ರೂಪಗಳಿಂದಲ್ಲ ಎಂಬುದನ್ನೂ ಅರಿಯಬೇಕೆಂದು ವಿವರವಾಗಿ ತಿಳಿಸಿದರು. 

ಶ್ರೀದೇವಿ ಶೇಖಾ, ಶರಣೆ ಗೀತಾ ತಿಪ್ಪಾ ಹಾಗೂ ಸಂಗಡಿಗರಿಂದ ವಚನ ಪ್ರಾರ್ಥನೆಯೊಂದಿಗೆ ಪ್ರಾರಂಭವಾಗಿ, ಅನುಭಾವದ ನಂತರ ವಚನ ಮಂಗಲವಾಯಿತು.  ಮಹಾಮನೆ ಜರುಗಲು ಅವಕಾಶ ಮಾಡಿಕೊಟ್ಟ ಮಹಾಮನೆಯ ಕುಟುಂಬದವರಿಗೆ ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರೆಲ್ಲರಿಗೂ ಕಾರ್ಯಕ್ರಮದ ಆಯೋಜಕರು ಸ್ವಾಗತಿಸಿ ಕೊನೆಯಲ್ಲಿ ಶರಣು ಸಮರ್ಪಣೆಯನ್ನುಗೈದರು.

ಪತ್ರಿಕಾ ವರದಿಗಾರರಾದ ಮಲ್ಲಿಕಾರ್ಜುನ ರಾಜನಾಳ, ರಾಚಣ್ಣ ಕೆರೂರ, ಮಹಾಲಿಂಗಪ್ಪ ಕರನಂದಿ,  ಪ್ರೊ. ಬಸವರಾಜ ಕಂಬಾಳಿಮಠ, ಪುತ್ರಪ್ಪ ಬೀಳಗಿ, ಪಾಂಡಪ್ಪ ಕಳಸಾ, ಚಂದ್ರಶೇಖರ ತೆಗ್ಗಿ, ಪ್ರೊ. ಸುರೇಶ ರಾಜನಾಳ, ದಾಕ್ಷಾಯಣಿ ತೆಗ್ಗಿ, ಪ್ರೊ. ಸುರೇಶ ರಾಜನಾಳ ದಂಪತಿ, ಬಸವರಾಜ ಖಂಡಿ, ಕುಮಾರ ಅರುಟಗಿ, ಸಮಾಜದ ಹಿರಿಯ ಜೀವಿಗಳು, ಮಹಾಮನೆಯ ಕುಟುಂಬದ ಬಂಧುಗಳಲ್ಲದೆ ನೆರೆಹೊರೆಯವರು, ಸೇರಿದಂತೆ ಬಸವ ಭಾಂಧವರಲ್ಲದೆ ಪಟ್ಟಣದ ಹೊರವಲಯದ ಬಸವ ಕೇಂದ್ರದ ಸದಸ್ಯರು google meet ಮೂಲಕ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/H81yNL3dGRcHb7EBxL5oqr

Share This Article
Leave a comment

Leave a Reply

Your email address will not be published. Required fields are marked *