ಇಳಕಲ್ಲ
ಇಲ್ಲಿಯ ವಿಜಯ ಮಹಾಂತೇಶ್ವರ ಸಂಸ್ಥಾನಮಠದಿಂದ ಶರಣ ಸಂಸ್ಕೃತಿ ಮಹೋತ್ಸವದ ಅಂಗವಾಗಿ, ಮಂಗಳವಾರ ವಚನಗಳ ತಾಡೋಲೆ ಕಟ್ಟಿನ ಅಡ್ಡಪಲ್ಲಕ್ಕಿ ಮಹೋತ್ಸವ ಆರಂಭವಾಯಿತು.
ಶ್ರೀಮಠದಲ್ಲಿ ಗುರುಮಹಾಂತ ಶ್ರೀಗಳು ಸಾಯಂಕಾಲ 4ಗಂಟೆಗೆ ಅಡ್ಡಪಲ್ಲಕ್ಕಿ ಉತ್ಸವಕ್ಕೆ ಚಾಲನೆ ನೀಡಿದರು. ಅಹೋರಾತ್ರಿ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸುವ ಪಲ್ಲಕ್ಕಿಗೆ ಭಕ್ತರು ಹೂ, ಹಣ್ಣು ಅರ್ಪಿಸಿ ಪೂಜೆ ಸಲ್ಲಿಸುವರು. 20 ಗಂಟೆಗೂ ಹೆಚ್ಚು ಹೊತ್ತು ಅಡ್ಡಪಲ್ಲಕ್ಕಿಯ ಮೆರವಣಿಗೆ ನಡೆಯುವುದು.

ಅಡ್ಡಪಲ್ಲಕ್ಕಿ ಮಹೋತ್ಸವದಲ್ಲಿ ನಗರದ, ಸುತ್ತಮುತ್ತಲಿನ ಹಳ್ಳಿಗಳ ಹಾಗೂ ಶ್ರೀಮಠದ 62 ಶಾಖಾ ಮಠಗಳ ಸಾವಿರಾರು ಭಕ್ತರು ಪಾಲ್ಗೊಳ್ಳುವರು.
ಚಿತ್ರದುರ್ಗದ ಬೋವಿ ಪೀಠದ ಇಮ್ಮಡಿ ಸಿದ್ಧರಾಮ ಶ್ರೀ, ಬೀದರ ಬೆಲ್ದಾಳದ ಸಿದ್ಧರಾಮ ಶರಣರು, ಲಿಂಗಸೂರಿನ ಸಿದ್ದಲಿಂಗ ಶ್ರೀಗಳು, ಶಿರೂರಿನ ಬಸವಲಿಂಗ ಶ್ರೀಗಳು, ಸಂತೆಕಡೂರಿನ ನವಲಿಂಗ ಶರಣರು, ಸಿದ್ದಯ್ಯನಕೋಟೆಯ ಬಸವಲಿಂಗ ಶರಣರು, ಪಾಂಡೋಮಟ್ಟಿಯ ಗುರುಬಸವ ಶ್ರೀಗಳು, ಬಸವ ಬೆಳವಿಯ ಗುರುಬಸವ ಶ್ರೀಗಳು ಸಾನಿಧ್ಯ ವಹಿಸಿದ್ದರು.

ಶಾಸಕ ವಿಜಯಾನಂದ ಕಾಶಪ್ಪನವರ, ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಸೇರಿದಂತೆ ಸಾವಿರಾರು ಭಕ್ತರು ಪಲ್ಲಕ್ಕಿಗೆ ಪೂಜೆ ಸಲ್ಲಿಸಿದರು.
20ಕ್ಕೂ ಹೆಚ್ಚು ಜಾನಪದ ಕಲಾ ತಂಡಗಳು, ವಾದ್ಯ ಮೇಳಗಳು ಪಲ್ಲಕ್ಕಿಯ ಮೆರವಣಿಗೆಯಲ್ಲಿ ಭಾಗವಹಿಸಿ ಮನಸೂರೆಗೊಂಡವು. ಆಗಸದಲ್ಲಿ ಚಿತ್ತಾರ ಮೂಡಿಸಿದ ಪಟಾಕಿಗಳು ಸೇರಿದ ಜನರನ್ನು ಆಕರ್ಷಿಸಿದವು.
ಕಂಠಿ ವೃತ್ತದ ಹತ್ತಿರದ ವಿಜಯ ಮಹಾಂತೇಶ ಅನುಭವ ಮಂಟಪದಲ್ಲಿ ಉತ್ಸವ ನಡೆಯುವ 3 ದಿನವೂ ಸಹಸ್ರಾರು ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ. ಅನೇಕ ಸಂಘ-ಸಂಸ್ಥೆಗಳವರು ದಾಸೋಹ ಸೇವೆ ಸಲ್ಲಿಸಿದ್ದಾರೆ.