ಇಳಕಲ್
ಚಿತ್ತರಗಿ ವಿಜಯ ಮಹಾಂತ ಶಿವಯೋಗಿಗಳ ಶರಣ ಸಂಸ್ಕೃತಿ ಮಹೋತ್ಸವದ ಅಂಗವಾಗಿ ವಿಶೇಷ ಕಾರ್ಯಕ್ರಮಗಳು ಪಟ್ಟಣದಲ್ಲಿ ನಡೆದವು.
ಶ್ರಾವಣದ ಕೊನೆಯ ಸೋಮವಾರ ಸೆ. 2 ರಂದು ವಿಜಯ ಮಹಾಂತ ಶಿವಯೋಗಿಗಳ ಕರ್ತೃ ಗದ್ದುಗೆ ಆವರಣದಲ್ಲಿ ಸಾಮೂಹಿಕ ಕಲ್ಯಾಣ ಮಹೋತ್ಸವ, ವಚನ ಗ್ರಂಥಗಳ ರಥೋತ್ಸವ ಹಾಗೂ ಸೆ. 3ರಂದು ವಚನಗಳ ತಾಡೋಲೆ ಕಟ್ಟಿನ ಅಡ್ಡಪಲ್ಲಕ್ಕಿ ಮಹೋತ್ಸವ ನಡೆದವು.
ಈ ನಿರಂಜನ ಪೀಠದ 16 ನೇ ಪೀಠಾಧಿಪತಿ ಆಗಿದ್ದವರು ಪರಮ ದಾಸೋಹಿ ಎಂದೇ ಖ್ಯಾತರಾದ ವಿಜಯ ಮಹಾಂತ ಶಿವಯೋಗಿಗಳು. ಇವರು ಲಿಂಗೈಕ್ಯರಾಗಿ 110 ವರ್ಷಗಳಾಗಿದ್ದರೂ ಅವರ ಪ್ರಭಾವ ಭಕ್ತರ ಮನಸ್ಸಿನಲ್ಲಿ ಇವತ್ತಿಗೂ ಅಚ್ಚೊತ್ತಿದೆ.
ಬಸವತತ್ವದ ಪರಿಪಾಲಕರಾಗಿದ್ದ ವಿಜಯ ಮಹಾಂತರ ಕೊಡುಗೆಯಿಂದ ಚಿತ್ತರಗಿ–ಇಳಕಲ್ ಪೀಠ ನಾಡಿನಲ್ಲಿ ಖ್ಯಾತಿ ಗಳಿಸಿದೆ.
ವಿಜಯ ಮಹಾಂತೇಶ್ವರ ಮಠವು ಯಡೆಯೂರು ಸಿದ್ದಲಿಂಗೇಶ್ವರ ಶಿವಯೋಗಿಗಳ ಪ್ರೇರಣೆಯಿಂದ 1462 ರಲ್ಲಿ ಚಿತ್ತರಗಿಯಲ್ಲಿ ಸ್ಥಾಪನೆಯಾಗಿತು. ಅಂದಿನಿಂದ ಈ ಪೀಠದ ಪರಂಪರೆಯಲ್ಲಿ ಬಂದ 19 ಸ್ವಾಮೀಜಿಗಳೆಲ್ಲರೂ ‘ಗುರು ಮಹಾಂತ’, ‘ವಿಜಯ ಮಹಾಂತ’ ಹಾಗೂ ‘ಮಹಾಂತ’ ನಾಮಾಂಕಿತರಾಗಿದ್ದಾರೆ.