ಇಲಕಲ್ಲ
ಇಳಕಲ್ ವಿಜಯ ಮಹಾಂತೇಶ್ವರ ಸಂಸ್ಥಾನಮಠದಲ್ಲಿ ಮಹಾಂತ ಶ್ರೀಗಳ ಜನ್ಮದಿನದ ನಿಮಿತ್ತ, ಶುಕ್ರವಾರ ನಡೆದ ವ್ಯಸನಮುಕ್ತ ದಿನಾಚರಣೆಯಲ್ಲಿ ಪಾಲ್ಗೊಂಡ ಸಾವಿರಾರು ವಿದ್ಯಾರ್ಥಿಗಳು ವ್ಯಸನದಿಂದ ದೂರವಿರುವ ಪ್ರತಿಜ್ಞೆ ಮಾಡಿದರು.

ನಗರದ ವಿವಿಧ ಶಾಲಾ ಕಾಲೇಜುಗಳ ಸಾವಿರಾರು ವಿದ್ಯಾರ್ಥಿಗಳು ಪ್ರಮುಖ ಬೀದಿಗಳಲ್ಲಿ ದುಶ್ಚಟಗಳ ವಿರುದ್ದ ಭಿತ್ತಿ ಪತ್ರ ಹಿಡಿದು, ಘೋಷಣೆಗಳನ್ನು ಕೂಗಿ ಜಾಥಾ ನಡೆಸುವ ಮೂಲಕ ಜಾಗೃತಿ ಮೂಡಿಸಿದರು.
ಜಾಥಾಗಳು ಶ್ರೀಮಠ ತಲುಪಿ ಸಮಾವೇಶಗೊಂಡವು.
ಈ ಸಂದರ್ಭದಲ್ಲಿ ಬೀದರ ಜಿಲ್ಲೆಯ ಬೆಲ್ದಾಳ ಮಠದ ಸಿದ್ಧರಾಮ ಶರಣರು ನೆರೆದ ವಿದ್ಯಾರ್ಥಿಗಳಿಗೆ ದುಶ್ಚಟಗಳಿಂದ ದೂರವಿರಲು ಪ್ರತಿಜ್ಞೆ ಬೋಧಿಸಿದರು.

ಇಳಕಲ್ಲ-ಚಿತ್ತರಗಿ ಶ್ರೀ ವಿಜಯಮಹಾಂತೇಶ್ವರ ಸಂಸ್ಥಾನಮಠದ ಗುರುಮಹಾಂತ ಶ್ರೀಗಳು ಶಾಲಾ ವಿದ್ಯಾರ್ಥಿಗಳಿಗೆ ತಂಬಾಕು, ಗುಟುಕಾ, ಬೀಡಿ, ಸಿಗರೇಟ ಹಾಗೂ ಮದ್ಯಪಾನದಂತ ದುಶ್ಚಟಗಳಿಂದ ದೂರವಿದ್ದು, ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದು ಹೇಳಿದರು.
ಮುಂದುವರೆದು ಮಾತನಾಡಿ, ‘ಭಕ್ತರಿಂದ ಕಾಣಿಕೆ ಬಯಸುವ ಸ್ವಾಮಿಗಳೇ ಹೆಚ್ಚು. ಆದರೆ ಇಳಕಲ್ ಮಹಾಂತೇಶ್ವರ ಮಠದ ಲಿಂಗೈಕ್ಯ ಮಹಾಂತಪ್ಪ ಶ್ರೀಗಳು ಭಕ್ತರಿಂದ ದುಶ್ಚಟ ಬೇಡಿ ವ್ಯಸನಮುಕ್ತ ಆರೋಗ್ಯಕರ ಸಮಾಜಕ್ಕಾಗಿ ಹಂಬಲಿಸಿದರು. ಶ್ರೀಗಳು ಸಾವಿರಾರು ಹಳ್ಳಿಗಳಿಗೆ ಸಂಚರಿಸಿ, ಸುಮಾರು 3 ಲಕ್ಷ ಜನರನ್ನು ವ್ಯಸನಮುಕ್ತರನ್ನಾಗಿ ಮಾಡಿದರು ಎಂದರು.

ಶಿರೂರಿನ ಬಸವಲಿಂಗ ಶ್ರೀ, ಸಂತೆಕಡೂರಿನ ನಾಗಲಿಂಗ ಶ್ರೀ ಸಮ್ಮುಖ ವಹಿಸಿದ್ದರು. ವಿವಿಧ ಶಾಲಾ ಕಾಲೇಜುಗಳ ಆಡಳಿತ ಮಂಡಳಿ ಪದಾಧಿಕಾರಿಗಳು, ಪ್ರಾಚಾರ್ಯರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.