ಬೆಂಗಳೂರು ಪ್ರತಿಭಟನೆ ನಂತರ iLYF ವಿರುದ್ಧ ಸದಸ್ಯರ ತೀವ್ರ ಆಕ್ರೋಶ

ಬಸವ ಮೀಡಿಯಾ
ಬಸವ ಮೀಡಿಯಾ

ಯೂ ಟ್ಯೂಬ್ ನಲ್ಲಿ ಕನ್ನೇರಿ ಸ್ವಾಮಿ ವಿಡಿಯೋ ಹಾಕಲು ಹಿಂಜರಿದ iLYF

ಬೆಂಗಳೂರು

ಕನ್ನೇರಿ ಸ್ವಾಮಿಯನ್ನು ಕರೆದು ಬಸವ ಭಕ್ತರಿಂದ ಛೀಮಾರಿ ಹಾಕಿಸಿಕೊಂಡ ಅಂತರರಾಷ್ಟ್ರೀಯ ಲಿಂಗಾಯತ ಯುವ ವೇದಿಕೆ (iLYF) ಪದಾಧಿಕಾರಿಗಳ ಬಗ್ಗೆ ಸದಸ್ಯರಿಂದಲೇ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

ಹಠಾತ್ತಾಗಿ ಸ್ಪೋಟಗೊಂಡಿರುವ ಈ ವಿವಾದದ ಬಗ್ಗೆ iLYFನ ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಬೆಳಗಾವಿ, ಶಿವಮೊಗ್ಗ ಘಟಕಗಳ ಅನೇಕ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.

ಬೆಂಗಳೂರಿನಲ್ಲಿ ನಡೆದ iLYFನ ಜಾಗತಿಕ ಉದ್ಯಮ ಸಮ್ಮೇಳನದಲ್ಲಿ ಬಸವ ಸಂಘಟನೆಗಳು ನಡೆಸಿದ ಮಿಂಚಿನ ಪ್ರತಿಭಟನೆಯ ನಂತರ ಬಂದಿರುವ ಕೆಲವು ಪ್ರತಿಕ್ರಿಯೆ:

  • * ಸಮಾವೇಶಕ್ಕೆ ಬರಬೇಕಿದ್ದ ಹಲವಾರು ಉದ್ಯಮಿಗಳು ಬಹಿಷ್ಕಾರ ಹಾಕಿದರು.
  • * ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾದ ಕೆಲವರು ಹಿಂದೆ ಸರಿದರು.
  • * ಕೆಲವು ಜಿಲ್ಲಾ ಘಟಕಗಳ ಪದಾಧಿಕಾರಿಗಳು ಸಿಟ್ಟಿನಲ್ಲಿರುವ ಸದಸ್ಯರನ್ನು ಭೇಟಿ ಮಾಡಿ ಸಮಾಧಾನ ಮಾಡಲು ಪ್ರಯತ್ನಿಸುತ್ತಿದ್ದಾರೆ.
  • * ಈ ಅನಗತ್ಯ ವಿವಾದದ ಮೂಲ ಕಾರಣವೆಂದು ಬೇಲೂರಿನ ಬಿಜೆಪಿ ಟಿಕೆಟ್ ಆಕಾಂಕ್ಷಿ ಹಾಗೂ iLYF ಅಧ್ಯಕ್ಷ ಸಂತೋಷ ಕೆಂಚಾಂಬ ಹಾಗೂ ಅವರ ಆಪ್ತರ ಕಡೆ ಬೆರಳು ತೋರಿಸಲಾಗುತ್ತಿದೆ.

ಬಸವ ಮೀಡಿಯಾದೊಂದಿಗೆ ಮಾತನಾಡಿದ ಮಾಜಿ ಪದಾಧಿಕಾರಿಯೊಬ್ಬರು ಕನ್ನೇರಿ ಸ್ವಾಮಿ ವಿರುದ್ಧ ಪ್ರತಿಭಟನೆ ನಡೆಯುತ್ತದೆ ಎಂದು ಗೊತ್ತಿತ್ತು, ಆದರೂ ಆಯೋಜಕರು ಹುಂಬತನದಿಂದ ಮುಂದುವರೆದರು, ಎಂದು ಹೇಳಿದರು.

ಸಮಾವೇಶಕ್ಕೆ ಬರಬೇಕಿದ್ದ ಹಲವಾರು ಉದ್ಯಮಿಗಳು
ಬಹಿಷ್ಕಾರ ಹಾಕಿದರು.

ಧಾರವಾಡದ ಒಬ್ಬರು ಉದ್ಯಮಿ ಲಿಂಗಾಯತ ಧರ್ಮದ ಬಗ್ಗೆ ಬದ್ಧತೆಯಿರುವ ಪರ್ಯಾಯ ವೇದಿಕೆ ಕಟ್ಟುವ ಅಗತ್ಯವಿದೆ ಎಂದು ಹೇಳಿದರು.

iLYFಗೆ ಭಾರಿ ಹಿನ್ನಡೆ

ಬೆಂಗಳೂರಿನ ಒಬ್ಬ ಹಿರಿಯ ವೈದ್ಯರು, “ಪ್ರತಿಭಟನೆ ವಿಡಿಯೋಗಳು ಎಲ್ಲೆಡೆ ವೈರಲ್ ಆಗಿವೆ. ಈ ಘಟನೆಯಿಂದ iLYFಗೆ ರಾಜ್ಯ ಮಟ್ಟದಲ್ಲಿ ಬಸವ ವಿರೋಧಿ ಸಂಘಟನೆ ಅಂತ ಕೆಟ್ಟ ಪ್ರಚಾರ ಆಗಿದೆ,” ಎಂದು ಆಕ್ರೋಶ ವ್ಯಕ್ತಪಡಿಸಿದರು.

“ಆಯೋಜಕರಿಗೆ ಬಿಸಿ ಮುಟ್ಟಿದ ಮೇಲೆ ಬುದ್ದಿ ಬಂದ ಹಾಗೆ ಕಾಣುತ್ತದೆ. ನಾಲ್ಕು ದಿನವಾದರೂ ಯೂ ಟ್ಯೂಬ್ ನಲ್ಲಿ ಕನ್ನೇರಿ ಸ್ವಾಮಿಯ ಭಾಷಣದ ವಿಡಿಯೋ ಹಾಕಿಲ್ಲ. ಅದೇ ಸಮಯದಲ್ಲಿ ಮಾತಾಡಿದ ಅಜಿತ್ ಹನುಮಕ್ಕನವರ್ ಅವರ ವಿಡಿಯೋ ಹಾಕಿದ್ದಾರೆ.

ಇದೇ ಸೂಕ್ಷ್ಮತೆ ಮುಂಚೆ ತೋರಿಸಿದ್ದಾರೆ ಇದು ಲಿಂಗಾಯತ ವಿರೋಧಿ ಸಂಘಟನೆ ಅಂತ ಇಷ್ಟೊಂದು ಪ್ರಚಾರವಾಗುತ್ತಿರಲಿಲ್ಲ. iLYF ಸಮುದಾಯದ ಒಂದು ದೊಡ್ಡ ಭಾಗದ ವಿರೋಧ ಕಟ್ಟಿಕೊಂಡಿರುವುದು ಮೂರ್ಖತನ,” ಎಂದು ಖಂಡಿಸಿದರು.

iLYF ಸಮುದಾಯದ ಒಂದು ದೊಡ್ಡ ಭಾಗದ ವಿರೋಧ ಕಟ್ಟಿಕೊಂಡಿರುವುದು ಮೂರ್ಖತನ

iLYFಗೆ ಬೌನ್ಸರ್ ಜೊತೆ ಬಂದ ಕನ್ನೇರಿ ಸ್ವಾಮಿ, ಕರಿ ಕೋಟಿನಲ್ಲಿ ಸಂತೋಷ್ ಕೆಂಚಾಂಬ. (ಬಲ) ಅಜಿತ್ ಹನುಮಕ್ಕನವರ್ ಭಾಷಣ.

ಲಿಂಗಾಯತ ಹೆಸರಿಗೆ ದ್ರೋಹ

ಲಿಂಗಾಯತ ಧರ್ಮದ ವಿರೋಧಿ ಎಂದು ಹಣೆಪಟ್ಟಿ ಕಟ್ಟಿಕೊಂಡಿರುವ ಕನ್ನೇರಿ ಸ್ವಾಮಿ ಮತ್ತು ಅಜಿತ್ ಹನುಮಕ್ಕನವರ್ ಅವರನ್ನು ಸಮ್ಮೇಳನಕ್ಕೆ ಕರೆದು ಸಮುದಾಯದ ವಿರೋಧ ಕಟ್ಟಿಕೊಳ್ಳುವ ಅಗತ್ಯವವೇನಿತ್ತು ಎಂದು ಹಲವಾರು ಸದಸ್ಯರು ಪ್ರಶ್ನಿಸಿದ್ದಾರೆ.

ಲಿಂಗಾಯತ ವಿರೋಧಿ ಕನ್ನೇರಿ ಸ್ವಾಮಿ, ಅಜಿತ್
ಹನುಮಕ್ಕನವರ್ ಅವರನ್ನು ಕರೆದ ಉದ್ದೇಶವೇನು?

“ಲಿಂಗಾಯತರ ಹೆಸರಿನಲ್ಲಿ ನಡೆಯುವ ಸಂಸ್ಥೆ ಸಮುದಾಯಕ್ಕೆ ದ್ರೋಹ ಬಗೆಯುವ ಕೆಲಸ ಮಾಡಬಾರದು. ಕನ್ನೇರಿ ಸ್ವಾಮಿ ಬಸವ ಸಂಸ್ಕೃತಿ ಅಭಿಯಾನದಲ್ಲಿ ಪಾಲ್ಗೊಂಡ ನೂರಾರು ಪೂಜ್ಯರನ್ನು ಅವಾಚ್ಯ ಪದಗಳಲ್ಲಿ ನಿಂದಿಸಿದ್ದಾರೆ, ಬಸವ ತಾಲಿಬಾನ್ ಪದ ಬಳಸುತ್ತಿದ್ದಾರೆ. ಇದೆಲ್ಲಾ ಗೊತ್ತಿದ್ದೂ ಆಯೋಜಕರು ಕನ್ನೇರಿ ಸ್ವಾಮಿಗೆ ಅಹ್ವಾನ ನೀಡಿದ ಉದ್ದೇಶವೇನು,” ಎಂದು ಬೆಳಗಾವಿಯ ಒಬ್ಬ ಸದಸ್ಯರು ಕೇಳಿದರು.

“ಈ ಸಂಸ್ಥೆ ಶುರುವಾದಾಗ ಬರೀ ಲಿಂಗಾಯತ ಹೆಸರಿತ್ತು. ಆಮೇಲೆ ವೀರಶೈವ ತಂದು ಕೂರಿಸಿದರು. ಈಗ ಬೋರ್ಡುಗಳಲ್ಲಿ ಲಿಂಗಾಯತಕ್ಕಿಂತ ವೀರಶೈವವನ್ನೇ ದೊಡ್ಡದಾಗಿ ಬರೆಯುತ್ತಾರೆ. ಬೆಂಗಳೂರಿನಲ್ಲಿ ‘ವೀರಶೈವ ಚಿತ್ರ ಪ್ರದರ್ಶನ’ ಏರ್ಪಡಿಸಿದ್ದರು. ಇವರು ಕ್ರಮೇಣ ಲಿಂಗಾಯತ ಹೆಸರನ್ನೇ ಮಾಯ ಮಾಡಿಬಿಡುತ್ತಾರೆ. ಇವರಿಗೆ ತಮ್ಮ ಲಾಭಕ್ಕೆ ಲಿಂಗಾಯತರು ಬೇಕು ಆದರೆ ಲಿಂಗಾಯತ ಬೇಡ,” ಎಂದು ಹೇಳಿದರು.

ಇವರಿಗೆ ತಮ್ಮ ಲಾಭಕ್ಕೆ ಲಿಂಗಾಯತರು ಬೇಕು ಆದರೆ
ಲಿಂಗಾಯತ ಬೇಡ

ರಾಜಕಾರಣಕ್ಕೆ ಬಳಕೆ

ಇಲ್ಲಿಯವರೆಗೆ ಬೇಲೂರಿನಲ್ಲಿ ಟಿಕೆಟ್ ಪಡೆಯಲು ವಿಫಲರಾಗಿರುವ ಬಿಜೆಪಿ ರಾಜಕಾರಣಿ ಸಂತೋಷ್ ಕೆಂಚಾಂಬ ತಮ್ಮ ಸ್ವಾರ್ಥಕ್ಕೆ iLYF ಬಳಸಿಕೊಳ್ಳುತ್ತಿದ್ದಾರೆ ಎಂಬ ಮಾತು ಸಾಮಾನ್ಯವಾಗಿ ಕೇಳಿಬರುತ್ತಿದೆ.

“ಇಂದು ಕನ್ನೇರಿ ಸ್ವಾಮಿಗೆ ಆರೆಸ್ಸೆಸ್ ಬೆಂಬಲ ಇರುವುದರಿಂದ ಅನೇಕ ರಾಜಕಾರಣಿಗಳು ಅವರನ್ನು ಓಲೈಸುತ್ತಿದ್ದಾರೆ. ಬಿಜೆಪಿ ಪತ್ರಕರ್ತ ಅಜಿತ್ ಹನುಮಕ್ಕನವರ್ ಯಾವ ರೀತಿಯ ವಾಣಿಜ್ಯ ಪರಿಣಿತ ಎಂದು ಅಲ್ಲಿಗೆ ಕರೆಸಿದ್ದರು. ಇವೆಲ್ಲಾ ಪಕ್ಷದಲ್ಲಿ ಬೆಳೆಯುವ ಪ್ರಯತ್ನವಷ್ಟೇ,” ಎಂದು ಶಿವಮೊಗ್ಗದ ಒಬ್ಬರು ಉದ್ಯಮಿ ಕೇಳಿದರು.

ಟಿಕೆಟ್ ಪಡೆಯಲು ವಿಫಲರಾಗಿರುವ
ಸಂತೋಷ್ ಕೆಂಚಾಂಬ ತಮ್ಮ ಸ್ವಾರ್ಥಕ್ಕೆ iLYF ಬಳಸಿಕೊಳ್ಳುತ್ತಿದ್ದಾರೆ

“ಮೋದಿಯ ನೋಟ್ ಬಂದಿಯಿಂದ ಎಂತಹ ಆರ್ಥಿಕ ಕುಸಿತವಾಯಿತು. ಆದರೆ ಅಜಿತ್ ಪ್ರಕಾರ ಅದರಿಂದ ಜನ ಸಂತೃಪ್ತರಾಗಿದ್ದಾರಂತೆ. ಅದಾನಿ, ಅಂಬಾನಿ ಬಗ್ಗೆ ಹೊಟ್ಟೆಕಿಚ್ಚು, ಅಸಮಾಧಾನ ಪಡಬಾರದಂತೆ. ಈ ರೀತಿ ಮಾತನಾಡುವ ಮನುಷ್ಯನನ್ನು ಕರೆದಿದ್ದು ರಾಜಕಾರಣಕ್ಕೆ ಮಾತ್ರ ಅಂತ ಎಲ್ಲರಿಗೂ ಗೊತ್ತು. iLYFನಿಂದ ಸಕ್ರಿಯ ರಾಜಕಾರಣಿಗಳನ್ನು ಆಚೆ ಕಳಿಸಬೇಕು,” ಎಂದು ಅವರು ಹೇಳಿದರು.

ಲಿಂಗಾಯತದ ಬಗ್ಗೆ ಬದ್ಧತೆಯಿಲ್ಲ, ಅರಿವೂ ಇಲ್ಲ

ಬೆಂಗಳೂರಿನ ಒಬ್ಬರು ಯುವ ಉದ್ಯಮಿ ಮಾತನಾಡಿ iLYF ಪದಾಧಿಕಾರಿಗಳಲ್ಲಿ ಲಿಂಗಾಯತ ಧರ್ಮ, ಸಂಸ್ಕೃತಿ, ಪರಂಪರೆಯ ಬಗ್ಗೆ ಯಾವುದೇ ಅರಿವು ಅಥವಾ ಬದ್ಧತೆಯಿಲ್ಲ. ಇವರಿಗೆ ಲಿಂಗಾಯತರಿಗೆ, ವೀರಶೈವರಿಗೆ ಇರುವ ವ್ಯತ್ಯಾಸವೂ ಗೊತ್ತಿಲ್ಲ, ಎಂದು ಹೇಳಿದರು.

“ಕೆಲವು ಶ್ರೀಮಂತರು ಸಮಾಜದ ಹೆಸರಿನಲ್ಲಿ ಹಣ ಮಾಡುವ ದಂಧೆಯಾಗಿದೆ ಇದು. ಇಲ್ಲಿರುವ ಬಹಳಷ್ಟು ಜನರಿಗೆ 5 ನಿಮಿಷ ಕನ್ನಡದಲ್ಲಿ ಮಾತನಾಡಲೂ ಬರುವುದಿಲ್ಲ.

ಇವರ ಕಾರ್ಯಕ್ರಮಗಳಲ್ಲಿ ಬಸವಣ್ಣನವರ ಫೋಟೋ ಹಾಕುವುದಿಲ್ಲ, ಸಂಸ್ಕೃತ ಶ್ಲೋಕ ಹೇಳುತ್ತಾರೆ. ಇವರ ವಿಡಿಯೋಗಳಲ್ಲಿ ಶರಣರಿಗೆ ಕುಂಕುಮ, ಜನಿವಾರ ಹಾಕುತ್ತಾರೆ. ಇಲ್ಲಿರೋ ಅನೇಕರು ವಿಜಯ ಸಂಕೇಶ್ವರರ ಗರಡಿಯಲ್ಲಿ ಬೆಳೆದವರು,” ಎಂದು ಅವರು ಹೇಳಿದರು.

ಬಸವಣ್ಣನವರ ಫೋಟೋ ಹಾಕುವುದಿಲ್ಲ, ಸಂಸ್ಕೃತ ಶ್ಲೋಕ ಹೇಳುತ್ತಾರೆ, ವಿಡಿಯೋಗಳಲ್ಲಿ ಶರಣರಿಗೆ ಕುಂಕುಮ,
ಜನಿವಾರ ಹಾಕುತ್ತಾರೆ.

“ಅನೇಕ ಪದಾಧಿಕಾರಿಗಳು ಪಕ್ಷಾತೀತವಾಗಿ ಇರೋಣ, ಪ್ರತ್ಯೇಕ ಧರ್ಮದ ಹೋರಾಟದ ಬಗ್ಗೆ, ಲಿಂಗಾಯತ ವೀರಶೈವ ವಿವಾದದ ಬಗ್ಗೆ ತಟಸ್ಥ ನಿಲುವು ತಾಳೋಣ, ಒಡಕುಂಟು ಮಾಡುವುದು ಬೇಡ, ಎಂದು ಹೇಳುತ್ತಾರೆ. ಆದರೆ ಕನ್ನೇರಿ ಸ್ವಾಮಿ, ಅಜಿತ್ ರಂತವರನ್ನು ಕರೆಯುವುದು ಯಾವ ರೀತಿಯ ತಟಸ್ಥ ನಿಲುವು,” ಎಂದು ಹುಬ್ಬಳಿಯ ಒಬ್ಬ ಸದಸ್ಯರು ಪ್ರಶ್ನಿಸಿದರು.

ಪ್ರತಿಭಟನೆ ಮುಂದುವರೆಯುತ್ತದೆ

“iLYF ಪ್ರತಿಭಟನೆ ವಿಡಿಯೋಗಳು ರಾಜ್ಯವಿಡಿ ಲಿಂಗಾಯತ ಸಮಾಜದಲ್ಲಿ ಸಂಚಲನ, ಜಾಗೃತಿ ಮೂಡಿಸಿದೆ. ಸದ್ಯದಲ್ಲೇ ಸಭೆ ನಡೆಸಿ ಈ ಸಂಸ್ಥೆಯ ನಡೆನುಡಿಯನ್ನು ಸಮಗ್ರವಾಗಿ ಚರ್ಚಿಸಲಾಗುವುದು. iLYFನಲ್ಲಿ ಅರವಿಂದ ಜತ್ತಿ, ಮತ್ತು ಇತರ ಗಣ್ಯರ ಪಾತ್ರವೇನಿದೆ ಎನ್ನುವುದನ್ನೂ ಗಮನಿಸಲಾಗುವುದು,” ಎಂದು ಬೆಂಗಳೂರಿನಲ್ಲಿ ಪ್ರತಿಭಟನೆ ಮಾಡಿದವರು ಒಂದು ಬಸವ ಸಂಘಟನೆಯ ಪ್ರಮುಖರು ಹೇಳಿದರು.

iLYFನಲ್ಲಿ ಅರವಿಂದ ಜತ್ತಿ ಅವರ ಪಾತ್ರವೇನಿದೆ
ಎನ್ನುವುದನ್ನೂ ಗಮನಿಸಲಾಗುವುದು

“ಇತ್ತೀಚಿಗೆ ಒಕ್ಕಲಿಗರಲ್ಲಿ ಒಂದು ಸಮಾವೇಶ ನಡೆಯಿತು. ಅಲ್ಲಿ ಯಾರಾದರು ಒಕ್ಕಲಿಗ ಸ್ವಾಮೀಜಿ, ಸಮಾಜದ ವಿರುದ್ಧ ಮಾತಾಡಿದ್ದರೆ ಚಪ್ಪಲಿ ಏಟು ಬೀಳುತ್ತಿತ್ತು,” ಎಂದು ಪ್ರತಿಭಟನೆಯಲ್ಲಿ ಪಾಲ್ಗೊಂಡ ಇನ್ನೊಬ್ಬರು ಹೇಳಿದರು.

“ಲಿಂಗಾಯತ ಸಮಾಜದಲ್ಲಿ ಒಳಗಿದ್ದುಕೊಂಡು ಏನು ಬೇಕಾದರೂ ಮಾಡಬಹುದಾ? ಅದನ್ನು ನೋಡಿಕೊಂಡು ನಾವು ಸುಮ್ಮನಿರಬೇಕಾ,” ಎಂದು ಕೇಳಿದರು.

“ಮೈಸೂರಿನಲ್ಲಿ iLYF ಈ ರೀತಿ ಕಾರ್ಯಕ್ರಮ ಮಾಡಿದರೆ ನಾವು ಹೋಗಿ ವಿರೋಧಿಸುತ್ತೇವೆ,” ಎಂದು ಚಾಮರಾಜನಗರದಿಂದ ಒಬ್ಬರು ಕರೆ ಮಾಡಿ ಹೇಳಿದರು. iLYFಗೆ ಇನ್ನು ಮೇಲೆ ಈ ರೀತಿ ಪ್ರತಿಭಟನೆ ಎಲ್ಲಾ ಜಿಲ್ಲೆಗಳಲ್ಲಿಯೂ ಬರಲಿದೆ, ಎಂದು ಅವರು ಎಚ್ಚರಿಸಿದರು.

ಏನಿದು iLYF?

ಲಿಂಗಾಯತ ಸಮಾಜದಲ್ಲಿ ಉದ್ಯಮಶೀಲತೆ ಬೆಳೆಸಲು 2013ರಲ್ಲಿ ಶುರುವಾದ ಸಂಸ್ಥೆ iLYF. ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಬೆಳಗಾವಿ, ಶಿವಮೊಗ್ಗದಲ್ಲಿ ಇದರ ಘಟಕಗಳಿವೆ.

50,000 ರೂಪಾಯಿ ಕೊಟ್ಟು ಜೀವನ ಪರ್ಯಂತ ಸದಸ್ಯರಾಗಬಹುದು ಅಥವಾ ವಾರ್ಷಿಕ ಶುಲ್ಕ 5,000 ರೂಪಾಯಿ ನೀಡಬಹುದು.

ಸದಸ್ಯರು ತಿಂಗಳಿಗೆ ಒಂದು ಬಾರಿ ಯಾವುದಾದರೂ ಹೋಟೆಲ್ ನಲ್ಲಿ ಭೇಟಿಯಾಗಿ ಪರಸ್ಪರ ನೆರವಾಗಲು ಪ್ರಯತ್ನಿಸುತ್ತಾರೆ. ಪ್ರತಿ ಸಭೆಗೆ 500 ರೂಪಾಯಿ ಪ್ರತ್ಯೇಕ ಶುಲ್ಕವಿರುತ್ತದೆ.

2023ರಿಂದ ‘ಜಾಗತಿಕ ಉದ್ಯಮ ಸಮ್ಮೇಳನ’ ನಡೆಸಲು iLYF ಶುರು ಮಾಡಿದೆ. ಕಳೆದ ವಾರ ಬೆಂಗಳೂರಿನಲ್ಲಿ ನಡೆದಿದ್ದು ಇಂತಹ ನಾಲ್ಕನೇ ಕಾರ್ಯಕ್ರಮ.

“ಒಂದು ಒಳ್ಳೆಯ ಉದ್ದೇಶದಿಂದ ಶುರುವಾದ ಸಂಸ್ಥೆ ಕೆಟ್ಟ ರಾಜಕಾರಣಕ್ಕೆ ಬಳಕೆಯಾಗಿ ಬಸವ ದ್ರೋಹ ಮಾಡುತ್ತಿರುವುದು ದುರದೃಷ್ಟ. ಇನ್ನು ಇವರ ಮೇಲೆ ಕಣ್ಣಿಟ್ಟಿರುತ್ತೇವೆ. ಅಗತ್ಯಬಿದ್ದರೆ ಇವರ ತಿಂಗಳ ಸಭೆಗಳಿಗೂ ಭೇಟಿ ನೀಡುತ್ತೇವೆ,” ಎಂದು ಹುಬ್ಬಳಿಯ ಒಬ್ಬ ಬಸವ ಕಾರ್ಯಕರ್ತರು ಹೇಳಿದರು.

“ಇವರು ವೀರಶೈವ ಅಂತ ಕರೆದುಕೊಂಡು ಏನು ಬೇಕಾದರೂ ಮಾಡಲಿ. ಆದರೆ ಲಿಂಗಾಯತ ಹೆಸರು ಬಳಸಿಕೊಂಡು ಕೊಂಡಿ ಮಂಚಣ್ಣ ಕೆಲಸ ಮಾಡಿದರೆ ಒಳ್ಳೆಯದಾಗುವುದಿಲ್ಲ,” ಎಂದು ಎಚ್ಚರಿಸಿದರು.

ಲಿಂಗಾಯತ ಹೆಸರು ಬಳಸಿಕೊಂಡು ಕೊಂಡಿ ಮಂಚಣ್ಣ ಕೆಲಸ ಮಾಡಲು ಬಿಡುವುದಿಲ್ಲ

“iLYFನವರು ಪ್ರಾಯೋಜಕರಿಂದ 5ರಿಂದ 25 ಲಕ್ಷ ವಸೂಲು ಮಾಡುತ್ತಾರೆ. ಇವರ ವಸ್ತುಪ್ರದರ್ಶನದಲ್ಲಿ ಮಳಿಗೆ ಹಾಕಲು ಪ್ರತ್ಯೇಕ ಶುಲ್ಕ. ಇವರಿಗೆಲ್ಲಾ ಲಿಂಗಾಯತ ಸಮಾಜದ ಹಣ ಬೇಕು, ಮತಗಳು ಬೇಕು. ಆದರೆ ಲಿಂಗಾಯತ ಧರ್ಮ ಬೇಡ, ಬಸವಣ್ಣ ಬೇಡ,” ಎಂದು ಹೇಳಿದರು.

ಬಸವ ಮೀಡಿಯಾ Facebook ಪುಟ ಸೇರಲು ಕ್ಲಿಕ್ ಮಾಡಿ
https://www.facebook.com/basavamedia1/

Share This Article
6 Comments
  • ನಮ್ಮ ಬೆಂಬಲ ಸದಾ ನಿಮಗೆ ಇರುತ್ತದೆ ಹೀಗೆ ಮುಂದುವರೆಯಿರಿ

  • ಈ ಸಂಸ್ಥೆ ಶುರುವಾದಾಗ ಬರೀ ಲಿಂಗಾಯತ ಹೆಸರಿತ್ತು. ಆಮೇಲೆ ವೀರಶೈವ ತಂದು ಕೂರಿಸಿದರು. ಈಗ ಬೋರ್ಡುಗಳಲ್ಲಿ ಲಿಂಗಾಯತಕ್ಕಿಂತ ವೀರಶೈವವನ್ನೇ ದೊಡ್ಡದಾಗಿ ಬರೆಯುತ್ತಾರೆ. ಬೆಂಗಳೂರಿನಲ್ಲಿ ‘ವೀರಶೈವ ಚಿತ್ರ ಪ್ರದರ್ಶನ’ ಏರ್ಪಡಿಸಿದ್ದರು. ಇವರು ಕ್ರಮೇಣ ಲಿಂಗಾಯತ ಹೆಸರನ್ನೇ ಮಾಯ ಮಾಡಿಬಿಡುತ್ತಾರೆ. ಇವರಿಗೆ ತಮ್ಮ ಲಾಭಕ್ಕೆ ಲಿಂಗಾಯತರು ಬೇಕು ಆದರೆ ಲಿಂಗಾಯತ ಬೇಡ,” ಎಂದು ಹೇಳಿದರು

    This has to be taken very seriously
    lets unite & fight.

  • ILYF ಗೂ ವೀರಶೈವಕ್ಕೂ ಎತ್ತಣಿoದೆತ್ತ ಸಂಬಂಧ. ಎಲ್ಲೆಡೆ ಇದೆ ಕುತಂತ್ರ ನಡೆಯುತ್ತಿದೆ. ಇನ್ನಾದರೂ ಲಿಂಗಾಯಿತರು ಜಾಗೃತಗೊಳ್ಳಬೇಕಿದೆ. ಇಂತಹ ಅಂಧ ಶಿಶುಗಳನ್ನು ದೂರವಿಡಬೇಕಿದೆ.

  • ಕಲ್ಯಾಣಮ್ಮ ಅಕ್ಕ ಮಹಾದೇವಿ ಗವಿ ಬಂದವರ ಓಣಿ ಬಸವಕಲ್ಯಾಣ says:

    ಓಂ ಶ್ರೀ ಗುರು ಬಸವಲಿಂಗಾಯ ನಮಃ 🙏ಆತ್ಮೀಯ ಶರಣ ಬಾಂಧವರೀಗೆಲ್ಲಾ ಶರಣು ಶರಣಾರ್ಥಿ ಗಳು 🙏 ನಾನು ನನ್ನ ಅನಿಸಿಕೆ ವ್ಯಕ್ತ ಪಡಿಸುತಿದ್ದೇನೆ . ನಮ್ಮ ದೇಶದ ಸಂಪತ್ತು ಬಹುಜನರ ಬಳಿ ಇರಬೇಕಾದ ಆಸ್ತಿ ಕೆಲವರ ಕೈಯಲ್ಲಿ ಇದೆ ಇದಕ್ಕೆಲ್ಲ ಕಾರಣ ಬಂಡವಾಳ ಶಾಹಿಗಳ ಕೈಗೊಂಬೆ ಆಗಿರೋ ಬಿಜೆಪಿ ಕಾಂಗ್ರೆಸ್ ಜೆಡಿಎಸ್ ನವರಿಂದ ಶ್ರೀ ಮಂತರು ಶ್ರೀ ಮಂತರು ಶ್ರೀಮಂತರಾಗಿ ಬಡವರು ಬಡವರಾಗಿ ಉಳಿದಿದ್ದಾರೆ ‌ಇದು ಬದಲಾಗಬೇಕಾದರೆ ನಮ್ಮ ಮೊಬೈಲ್ ನಲ್ಲಿ ಸಿಮ್ BSNL ಆಗಿರಬೇಕು ಮಕ್ಕಳಿಗೆ ಸರಕಾರಿ ಶಾಲೆಗಳಲ್ಲಿಗೆ ಸೇರಿಸಬೇಕು ಮುಂದೆ ಬರುವ ಚುನಾವಣೆಯಲ್ಲಿ ಬಿಜೆಪಿ ಕಾಂಗ್ರೆಸ್ ಜೆಡಿಎಸ್ ಗೆ ಮತದಾನ ಮಾಡದೆ ಬೇರೆ ಪಕ್ಷಕ್ಕೆ ಮತ ಚಲಾಯಿಸಬೇಕು. ಅಮೇರಿಕಾ ವನ್ನು ಹಿಂದೆ ಹಾಕೋದು ನಂತರ ವಿಚಾರ ಮಾಡಿ ಈಗ ಚೀನಾ ಮಾದರಿಯಲ್ಲಿ ನಾವು ನಮ್ಮ ಸರ್ಕಾರಕ್ಕೆ ಸಹಕರಿಸಬೇಕು ಮತ್ತು ಸರಕಾರಕ್ಕೆ ಶ್ರೀ ಮಂತಗೋಳಿಸಬೇಕು.ಆಗಲೆ ದೇಶದಲ್ಲಿ ಬಡತನ ನಿರ್ಮೂಲನೆ ಮಾಡಲಿಕ್ಕೆ ಸಾಧ್ಯ ಎಂದು ನನ್ನ ಅನಿಸಿಕೆ ಧನ್ಯವಾದಗಳು.

  • ಇಲ್ಲಿ ಮುಖ್ಯವಾಗಿ ಲಿಂಗಾಯತಕ್ಕೆ ಮಸಿಬಳಿಯುವ ಕೆಲಸ ಕಾಣದ ಮತ್ತು ಕಣುವ ಕೖಗಳಿಂದ ನಡೆದಿರುವದು ಗುಟ್ಟಾಗಿ ಉಳಿದಿಲ್ಲ. iLYF ಲೋಗೋ International Lingayath Youth Forum ಎಂದು ಸೂಚಿಸುವದು. ಆದರೆ ಈಗ ದೊಡ್ಡದಾಗಿ Veerashaiva Lingayath ಅಂಥ ಸುರುಹಚ್ಚಿಕೊಂಡಿರುವುದೇ ಮೊದಲ ತಪ್ಪು. ಇನ್ನಾದರೂ ಆಯೋಜಕರು ಸರಿಯಾಗಿ ಆಲೋಚನೆ ಮಾಡಲಿ, ಲಿಂಗಾಯತ ಮುಖಂಡರ ಸಲಹೆ ಸೂಚನೆ ಪಡೆಯಲಿ. ಆ ಅಜಿತ್ ಹನಮಕ್ಕನವರ ಕೆಲಸ ಇಲ್ಲಿ ಏನು? ಮೊದಲೇ ಕನ್ನೇರಿ ಸ್ವಾಮಿ ತಳಬುಡವಿಲ್ಲದೆ ಬುಡಬುಡಿಕೆ ಆಟ ನಡೆಸಿ ಸಮಾಜದ ಏಕತೆಗೆ ಘಾಸಿಮಾಡಿರುವದನ್ನು ಕೋರ್ಟ್ ಹೇಳಿದಾಗ್ಯೂ ನೀವು ಕರೆದಿದ್ದೀರೆಂದರೆ ನಿಮಗೂ ಸಮಾಜದ ಸ್ವಾಸ್ಥ ಬೇಡವೆಂದಾಯಿತು. ಇಲ್ಲಿ ಬಸವಣ್ಣನವರ ಫೋಟೋ ಹಾಕಿದ್ದರೆ ನಿಮ್ಮ ಗಂಟು ಹೋಗುತ್ತಿರಲಿಲ್ಲ, ಬದಲಾಗಿ ದೊಡ್ಡಮಟ್ಟದ ಗಂಟು ಬಂದು ಆರ್ಥಿಕತೆ ಬಲಗೊಳ್ಳುತ್ತಿತ್ತು ಮತ್ತು ಬಸವಣ್ಣನವರ ಜಾಗತಿಕ ಚಿಂತನೆಯೂ ಬಲಗೊಳ್ಳುತ್ತಿತ್ತು.

Leave a Reply

Your email address will not be published. Required fields are marked *