ಶಹಾಪುರ
ಇವರೊಬ್ಬ ಅಪರೂಪದ ಸ್ವಾಮಿಗಳು, ಮಠ ಪರಂಪರೆಯಿಂದ ಹಿರೇಮಠದವರಾಗಿದ್ದರೂ ಕೂಡಾ ಬಸವತತ್ವ ನಿಷ್ಠೆಯುಳ್ಳ ಸ್ವಾಮಿಗಳಾಗಿದ್ದರು. ಹೆಂಡತಿ, ಮಕ್ಕಳು, ಸಂಸಾರವಂತರಾಗಿದ್ದರೂ, “ಸಂಸಾರವನ್ನು ಕುಂಬಾರ ಹುಳ ಮಣ್ಣಿನಲ್ಲಿದ್ದರು ಮೈಗೆ ಮಣ್ಣು ಹಚ್ಚಿಕೊಳ್ಳದಂತೆ ಸಂಸಾರದೊಳಗಿದ್ದು ಸಂಸಾರವನ್ನು ಮೈತುಂಬಾ ಹೂಸಿಕೊಳ್ಳದೆ ಶರಣತತ್ವ ಬದುಕಿದ ಅಪರೂಪದ ಶರಣ ಜೀವಿಯಾಗಿದ್ದವರು”.

ನಮ್ಮವರೆ ಆದ ಶರಣ ಶ್ರೀ ಇಂದೂಧರ ಮಹಾಸ್ವಾಮಿಗಳು ಗಡಿಸೋಮನಾಳ ಅವರು ತಮ್ಮ ಬದುಕಿನುದ್ದಕ್ಕೂ ಬಸವತತ್ವ ಪ್ರಚಾರವನ್ನೆ ತಮ್ಮ ಹುಸಿರಾಗಿಸಿಕೊಂಡು ಬದುಕಿದ ಮಹಾನ್ ಜೀವ.
ಬಡವರು ಮನೆ ಶಾಂತಿ ಮಾಡಲಿ,ಲಗ್ನ ಮಾಡಲಿ ಬಂದು ಹೇಳಿದರೆ ಸಾಕು ಬಂದು ಕಾರ್ಯಕ್ರಮ ಯಶಸ್ವಿಗೊಳಿಸಿ ಹೋಗುವ ಹಠವಾದಿ ಸ್ವಾಮಿಯಾಗಿದ್ದರು. ಬಂದವರಿಗೆ ನೀವು ಯಾರ ಪೈಕಿ ಎಂದು, ಎಂದೂ ಕೇಳದೆ ಬಸವಣ್ಣನವರ ವಚನ “ಇವನಾರವ ಇವನಾರವ ಎಂದೆನಿಸದಿರಯ್ಯ ಇವ ನಮ್ಮವ ಇವ ನಮ್ಮವನೆಂದೆನಿಸಯ್ಯ ಕೂಡಲಸಂಗಮದೇವ” ಎಂಬ ಅಣ್ಣನವರ ವಚನದಂತೆ ಬದುಕಿದವರು.
ಒಮ್ಮೆ ಸತ್ಯಂಪೇಟೆಯಲ್ಲಿ ಮಹಾದೇವಪ್ಪ ಗಾಳೆನವರ ಮನೆಯಲ್ಲಿ ಮನೆ ಪ್ರವೇಶ ನಿಮಿತ್ಯ ಮಹಾಮನೆ ಕಾರ್ಯಕ್ರಮ ಮಾಡಿದಾಗ ಲಿಂಗಣ್ಣ ಸತ್ಯಂಪೆಟೇಯವರ ಜೊತೆ ಕಾರ್ಯಕ್ರಮದಲ್ಲಿ ಮಾತನಾಡಿ ನೆಲದ ಮೇಲೆಯೆ ಕುಳಿತು ಪ್ರಸಾದ ಮಾಡುವಾಗ, ಅದು ದಲಿತರ ಮನೆಯಾಗಿದ್ದರಿಂದ ಅವರೆ ಅಂಜಿ ಪ್ರಸಾದಕ್ಕೆ ಕರೆದಾಗ “ಏ ಮಹಾದೇವಪ್ಪ ತೊಗಂಬಾ ಅಡುಗೆ ನೀಡು ಎಂದು ನೀಡಿಸಿಕೊಂಡು ಉಂಡು ಹೋದ ಅಪರೂಪದ ಜಂಗಮ” ಇಂದೂಧರ ಮಹಾಸ್ವಾಮಿಗಳಾಗಿದ್ದರು.
ಜಂಗಮತ್ವದ ಜಾಡ್ಯದಿಂದ ದೂರ ಉಳಿದವರು. ಮನೆಯವರ ಅನಾರೋಗ್ಯ, ತಮ್ಮ ಅನಾರೋಗ್ಯದ ನಡುವೆಯು ಬಸವತತ್ವ ಪ್ರಚಾರದವನ್ನು, ಬಸವತತ್ವ ಸಮಾವೇಶವನ್ನು ಮುವ್ವತ್ತು ವರ್ಷ ಮೇಲ್ಪಟ್ಟು ನೆಡಿಸಿಕೊಂಡು ಬಂದದ್ದು ಅವರ ದೊಡ್ಡ ಸಾಧನೆಯೆ ಸೈ.
ಇಂತ ಜೀವ ಇಂದು ಇಲ್ಲವೆಂದು ಅನ್ನಲು ವಿಷಾದವಾಗುತ್ತದೆ.” ಎಮ್ಮವರಿಗೆ ಸಾವಿಲ್ಲ, ಮರಣವೇ ಮಹಾನವಮಿಯೆಂದು ಅರಿವಿನ ದೀಪ ಬೆಳಗಿಸಿದ ಶರಣರ ನುಡಿಯೇ ನಮಗೆ ಮಾರ್ಗದರ್ಶನ”, ಆದರೂ ಕೂಡ ಅದು ನಿಜವೆಂದು ಕೇಳಿದಾಗ ಮನಸ್ಸು ಅಳ್ಳಾಡಿತು.
ಬಸವತತ್ವ ಬಳಗದ ನಿಷ್ಟಾವಂತರು ಬಸವ ಪ್ರೇಮಿಯಾಗಿದ್ದರು. ಬಸವತತ್ವ ಕೊಂಡಿ ಕಳಚಿದ್ದು ಮರೆಯಲಾದ ದುಖ: “ಲೋಕದಂತೆ ಬಾರರು, ಲೋಕದಂತೆ ಇರರು, ಲೋಕದಂತೆ ಹೋಗರು, ನೋಡಯ್ಯಾ. ಪುಣ್ಯದಂತೆ ಬಪ್ಪರು, ಜ್ಞಾನದಂತೆ ಇಪ್ಪರು, ಮುಕ್ತಿಯಂತೆ ಹೋಹರು, ನೋಡಯ್ಯ. ಉರಿಲಿಂಗದೇವಾ, ನಿಮ್ಮ ಶರಣರು ಉಪಮಾತೀತರಾಗಿ ಉಪಮಿಸಬಾರದು.” ಎಂಬ ಶರಣವಾಣಿಯಂತೆ ಬಂದು ಹೋದರೆನ್ನದೆ ವಿಧಿ ಇಲ್ಲ.