ಬೆಳಗಾವಿ:
ಜಾಗತಿಕ ಲಿಂಗಾಯತ ಮಹಾಸಭಾ ಹಾಗೂ ನಾಗನೂರು ಶ್ರೀ ರುದ್ರಾಕ್ಷಿಮಠ ಇವುಗಳ ಸಂಯುಕ್ತ ಆಶ್ರಯದಲ್ಲಿ 25 ನೇ ಮಾಸಿಕ ಇಷ್ಟಲಿಂಗ ಪೂಜಾ ಕಾರ್ಯಕ್ರಮ ರವಿವಾರ ನಡೆಯಿತು.
ಶಿವಬಸವ ನಗರದ ನಾಗನೂರು ರುದ್ರಾಕ್ಷಿ ಮಠದ ಶ್ರೀ ಪ್ರಭುದೇವ ಸಭಾಮಂಟಪದಲ್ಲಿ ಪೂಜ್ಯ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ಮಾರ್ಗದರ್ಶನ ಮಾಡಿದರು. ಕಾರ್ಯಕ್ರಮದ ಸಾನಿಧ್ಯವನ್ನು ಪೂಜ್ಯ ವಿಶ್ವನಾಥ ದೇವರು ವಹಿಸಿದ್ದರು.

ಪ್ರಾತ್ಯಕ್ಷಿಕೆಯನ್ನು ಸಂಚಾರಿ ಗುರುಬಸವ ಬಳಗದ ಮಹಾಂತೇಶ ತೋರಣಗಟ್ಟಿ ತೋರಿಸಿಕೊಟ್ಟು ಮಾತನಾಡುತ್ತ, ಇಷ್ಟಲಿಂಗ ಬರೀ ಪೂಜಾ ಸಾಮಗ್ರಿ ಎಂದು ಭಾವಿಸಬೇಕಿಲ್ಲ. ಸ್ವಾಭಿಮಾನ, ಸ್ವಾತ್ರಂತ್ರ್ಯ, ಸಹೋದರತೆ, ಸಮಾನತೆ, ಮಾನವೀಯತೆಯ ಕುರುಹು ಇದಾಗಿದೆ.
ಇಷ್ಟಲಿಂಗಧಾರಿಗಳು ನ್ಯಾಯ ನಿಷ್ಠುರಿಗಳು ಆಗಿರುತ್ತಾರೆ. ಯಾರ ದಾಕ್ಷಿಣ್ಯಕ್ಕೆ ಅವರು ಒಳಗಾಗುವುದಿಲ್ಲ. ಅನ್ಯಾಯ ಸಹಿಸಿಕೊಳ್ಳುವುದಿಲ್ಲ. ದಯಾಪರ ಗುಣದವರು ಅವರಾಗುತ್ತಾರೆ ಎಂದರು.

ಜಿಲ್ಲಾ ಜಾಗತಿಕ ಲಿಂಗಾಯತ ಮಹಾಸಭೆಯ ಅಧ್ಯಕ್ಷರಾದ ಬಸವರಾಜ ರೊಟ್ಟಿ ಸಹ ಮಾತನಾಡಿದರು.
ಜೆ.ಎಲ್.ಎಂ., ಗುರು ಬಸವ ಬಳಗದ ಪದಾಧಿಕಾರಿಗಳು, ಉಚಿತ ಪ್ರಸಾದ ನಿಲಯದ ವಿದ್ಯಾರ್ಥಿಗಳು, ಮೇಲ್ವಿಚಾರಕರು ಸಾಮೂಹಿಕ ಇಷ್ಟಲಿಂಗ ಪೂಜೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.

