ಅರಿವಿನ ದಾರಿ ತೋರಿಸುವ ಇಷ್ಟಲಿಂಗ ಶಿವಯೋಗ: ಮಂಜುನಾಥ ಸುಳ್ಳೊಳ್ಳಿ

ಬಸವ ಮೀಡಿಯಾ
ಬಸವ ಮೀಡಿಯಾ

ಬೀದರ

ಲಿಂಗಾಯತ ಧರ್ಮ ಸ್ಥಾಪನೆಗೆ ಇಷ್ಟಲಿಂಗವೇ ಮೂಲ ಕಾರಣ ಬಸವಣ್ಣನವರೇ ಇಷ್ಟಲಿಂಗದ ಜನಕ ಬಸವಣ್ಣನವರ ಉದರದಲ್ಲಿ ಇಷ್ಟಲಿಂಗ ಹುಟ್ಟಿತ್ತು ಎಂದು ಹಲವಾರು ವಚನಗಳು ಸಾಬೀತು ಪಡಿಸುತ್ತವೆ ಎಂದು ಬೀದರ ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ ಸುಳ್ಳೊಳ್ಳಿ ಹೇಳಿದರು.

ಅವರು ಬಸವ ಸೇವಾ ಪ್ರತಿಷ್ಠಾನದ ವತಿಯಿಂದ ನಗರದ ಶರಣ ಉದ್ಯಾನದಲ್ಲಿ ನಡೆದ ಶರಣ ಸಂಗಮ, ಬಸವ ಜಯಂತೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಮ್ಮನ್ನು ನಾವು ಅರಿಯಲು ಇಷ್ಟಲಿಂಗ ಶಿವಯೋಗ ದೃಷ್ಟಿಯೋಗ ನಿಖರ ಮಾರ್ಗವಾಗಿದೆ. ಮನುಷ್ಯ ದೇವನಾಗಬಹುದೆಂದು ತೋರಿಸಿಕೊಟ್ಟವರು ಶರಣರು ಎಲ್ಲ ಲಿಂಗವಂತರು ಇಷ್ಟಲಿಂಗ- ಶಿವಯೋಗ ಮಾಡಿದಾಗ ಸಮಾನತೆಯ ಗಾಢ ನೈಜತೆ ತನ್ನಿಂದ ತಾನೆ ಪಸರಿಸುತ್ತದೆ ಎಂದರು.

ಸಾನಿಧ್ಯ ವಹಿಸಿದ ಪ್ರತಿಷ್ಠಾನದ ಅಧ್ಯಕ್ಷರಾದ ಪೂಜ್ಯ ಡಾ. ಗಂಗಾಂಬಿಕಾ ಅಕ್ಕ ಮಾತನಾಡಿ, ಬಸವಣ್ಣನವರು ಜಾಗತಿಕ ಪುಣ್ಯ ಪುರುಷರಲ್ಲಿ ಅಗ್ರಗಣ್ಯರು. ಸಮಾಜೋಧಾರ್ಮಿಕ ಚಳವಳಿಯ ನೇತಾರರಾಗಿದ್ದ ಅವರು ಲೋಕದಲ್ಲಿ ಸದಾಚಾರ ಶಿವಾಚಾರಗಳನ್ನು ನೆಲೆಗೊಳಿಸುವುದಕ್ಕಾಗಿ ಭಕ್ತಿಯ ಮಹಾ ಪ್ರವಾಹವನ್ನೇ ಹರಿಸಿದರು. ಬಸವಣ್ಣನವರದ್ದು ಉಪಮಿಸಬಾರದ ವ್ಯಕ್ತಿತ್ವ, ನಡೆ-ನುಡಿ, ದೃಷ್ಟಿ, ಹಸ್ತ ಮನ ಭಾವಗಳೆಲ್ಲವೂ ಪರುಷಮಯವಾಗಿದ್ದವು ಎಂದರು.

ಮಾತೋಶ್ರೀ ಆಸ್ಪತ್ರೆಯ ಡಾ. ವಿಜಯಶ್ರೀ ಡಾ. ಸುಭಾಷ ಬಶೆಟ್ಟಿ ದಂಪತಿಗಳು ಡಾ. ಸೋಮನಾಥ ಯಾಳವಾರ ವಿರಚಿತ ಮಹಾಮಹಿಮ ಸಂಗನ ಬಸವಣ್ಣನವರು ಘನಮಹಿಮ ಸಂಗನ ಬಸವಣ್ಣನವರು ಗ್ರಂಥ ಲೋಕಾರ್ಪಣೆ ಮಾಡಿದರು.

ಗ್ರಂಥಕರ್ತರಾದ ಹಿರಿಯ ಸಾಹಿತಿ ಡಾ. ಸೋಮನಾಥ ಯಾಳವಾರ ಮಾತನಾಡಿ, ಭಕ್ತಿಯೆಂಬುದ ಅತಿ ಪ್ರಾಚೀನವಾದದು ಅದು ಪರಮಾತ್ಮನ ಆರಾಧನೆಯ ಮಾರ್ಗವಾಗಿತ್ತು. ಆದರೆ ಬಸವಾದಿ ಶರಣರು ಅದನ್ನು ಮಾನವನ ಬದುಕಿನ ಮೂಲ ಸೂತ್ರವಾಗಿ ಹೇಳಿದ್ದು ವಿಶೇಷವಾಗಿದೆ. ಅಹಂಕಾರರಹಿತವಾದುದು, ಭ್ರಮಿತದಿಂದ ದೂರವಾಗಿರುವುದು ಮತ್ತು ಸುಖ ದುಃಖಗಳಿಂದ ಹೊರತಾಗಿರುವುದು ಸದ್ಭಕ್ತಿ ಎಂದು ಶರಣರು ತಿಳಿಸಿದ್ದನ್ನು ಹಲವು ನೆಲೆಯಲ್ಲಿ ವಿವರಿಸಿದರು.

ಮುಖಂಡರಾದ ಹಣಮಂತರಾವ ಪಾಟೀಲ ಅಧ್ಯಕ್ಷತೆ ವಹಿಸಿಕೊಂಡಿದ್ದರು. ಹುಮನಾಬಾದ ಬಸವಸೇವಾ ಪ್ರತಿಷ್ಠಾನದ ಅಧ್ಯಕ್ಷ ಚನ್ನಬಸಪ್ಪ ವಡ್ಡನಕೇರೆ, ಮಲ್ಲಿಕಾರ್ಜುನ ರಟಕಲೆ ಧ್ವಜಾರೋಹಣಗೈದರು.

ಶಿವರಾಜ ಗುಮ್ಮಾ ಧ್ವಜಾರೋಹಣಗೈದರೆ, ರಾಣಿ ಪಸಾರ್ಗೆ ವಚನ ಪಠಣ ಮಾಡಿಸಿದರು. ಆಕಾಶವಾಣಿ ಕಲಾವಿದರಾದ ಶಿವಕುಮಾರ ಪಂಚಾಳ ವಚನ ಸಂಗೀತ ನಡೆಸಿಕೊಟ್ಟರೆ, ಜಹೀರಾಬಾದನ ಲಕ್ಷ್ಮೀನರಸಿಂಹರೆಡ್ಡಿ ಅವರು ನುಡಿಸಿದ ಕೊಳಲು ವಾದನ ಸೇರಿದ ಜನರನ್ನು ಮಂತ್ರಮುಗ್ದಗೊಳಿಸಿತು.

ನಿರ್ಮಲಾ ಮಸೂದೆ ಸ್ವಾಗತಿಸಿದರೆ, ವಿಜಯಲಕ್ಷ್ಮೀ ಸುಲೇಪೇಟ ನಿರೂಪಿಸಿದರು. ಡಾ. ವಿಜಯಶ್ರೀ ಡಾ. ಸುಭಾಷ ಬಶೆಟ್ಟಿ ಭಕ್ತಿ ದಾಸೋಹಗೈದರು. ಬೀದರ ಬಸವ ನಗರದ ನೀಲಮ್ಮನ ಬಳಗದವರು ವಚನ ಪ್ರಾರ್ಥನೆ ನಡೆಸಿಕೊಟ್ಟರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FYCnBXoFfiK0GH4dAJvoia/

Share This Article
Leave a comment

Leave a Reply

Your email address will not be published. Required fields are marked *