ಭದ್ರಾವತಿ:
ಜನಪದ ಹಾಡುಗಳಲ್ಲಿ ಮಾನವೀಯ ಮೌಲ್ಯಗಳು ಜೀವಂತವಾಗಿವೆ ಎಂದು ಗೋಟಗೋಡಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಟಿ.ಎಂ. ಭಾಸ್ಕರ್ ಹೇಳಿದರು.
ಇಲ್ಲಿನ ವಿಐಎಸ್ಎಲ್ ಮೈದಾನದ ಮಹಾಮಂಟಪದಲ್ಲಿ ಭಾನುವಾರ ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಭಜನಾ ಮೇಳ ಸ್ಪರ್ಧೆಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು. ನುಡಿ, ಜೀವನಶೈಲಿ, ಜನಪರ ಸೇವೆ, ಆದರ್ಶಗಳು ಹಾಗೂ ಮೌಲ್ಯಗಳನ್ನು ಪೀಳಿಗೆಯಿಂದ ಪೀಳಿಗೆಗೆ ಕೊಂಡೊಯ್ಯುವ ಮಹತ್ತರ ಜವಾಬ್ದಾರಿಯನ್ನು ತರಳಬಾಳು ಮಠ ನಿರ್ವಹಿಸುತ್ತಿದೆ’ ಎಂದು ಹೇಳಿದರು.

‘ತಾಳ, ಲಯ, ಸಂಗೀತ, ಸಂಸ್ಕಾರ ಮತ್ತು ನಡವಳಿಕೆಗಳಿಗೆ ಜಾನಪದವೇ ಮೂಲ ಬೇರು. ಚರಿತ್ರೆ ಹಾಗೂ ಪುರಾಣಗಳಲ್ಲಿ ಭಜನೆಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಜಾತ್ರೆ ಹಾಗೂ ಗ್ರಾಮದ ವಿವಿಧ ಕಾರ್ಯಕ್ರಮಗಳಲ್ಲಿ, ಚರಿತ್ರೆ, ಪುರಾಣಗಳಲ್ಲಿ ಭಜನೆಗಳ ಪಾತ್ರ ಮುಖ್ಯವಾಗಿದೆ. ಆಧುನಿಕತೆಯಿಂದ ಜಾನಪದಕ್ಕೆ ಪೆಟ್ಟು ಬಿದ್ದಿದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಭಜನಾ ಮೇಳದಲ್ಲಿ ಭದ್ರಾವತಿ, ಕಡೂರು, ಚನ್ನಗಿರಿ, ತರೀಕೆರೆ, ಶಿವಮೊಗ್ಗ ತಾಲ್ಲೂಕಿನ 56 ಭಜನಾ ತಂಡಗಳು ಭಾಗವಹಿಸಿದ್ದವು.

ಭಜನಾ ಮೇಳ ವಿಜೇತರು
ಸ್ಪರ್ಧೆಯಲ್ಲಿ ಚನ್ನಗಿರಿ ತಾಲ್ಲೂಕಿನ ನೀತಿಗೆರೆ ಗ್ರಾಮದ ವೀರಭದ್ರೇಶ್ವರ ಭಜನಾ ತಂಡ ಪ್ರಥಮ ಸ್ಥಾನ ಗಳಿಸಿ 10 ಸಾವಿರ ನಗದು, ಕಡೂರು ತಾಲ್ಲೂಕು ಅಣಿಗೆರೆ ಗ್ರಾಮದ ಈಶ್ವರ ಸ್ವಾಮಿ ಭಜನಾ ಮಂಡಳಿ ದ್ವಿತೀಯ ಸ್ಥಾನ ಪಡೆದು 8 ಸಾವಿರ ನಗದು ಹಾಗೂ ಚನ್ನಗಿರಿ ತಾಲ್ಲೂಕು ಹೊದಿಗೆರೆಯ ಮೈಲಾರಲಿಂಗೇಶ್ವರ ಭಜನಾ ಮಂಡಳಿ ಮೂರನೇ ಸ್ಥಾನ ಪಡೆದು 6 ಸಾವಿರ ನಗದು ಪರಿತೋಷಕ ಹಾಗೂ ಪ್ರಶಸ್ತಿ ಪತ್ರ ಪಡೆದವು.

ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು.
