ಸಾಣೇಹಳ್ಳಿ
ರಾಜಕಾರಣಿಯಾದ ಮೇಲೆ ಆರನ್ನು ಬಿಟ್ಟು ಮೂರನ್ನು ಉಳಿಸಿಕೊಂಡಿದ್ದೇನೆ. ಈ ವೇದಿಕೆಯಿಂದ ನನ್ನನ್ನು ತಿದ್ದಿಕೊಳ್ಳಲು ಸಾದ್ಯವಾಗುತ್ತಿದೆ ಎಂದು ಜಗಳೂರು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು.
ರಾಷ್ಟ್ರೀಯ ನಾಟಕೋತ್ಸವ ಅಂಗವಾಗ ಶುಕ್ರವಾರ ಆಯೋಜಿಸಿದ ಸಮಾರಂಭದಲ್ಲಿ ʼನೈತಿಕ ರಾಜಕಾರಣʼ ಕುರಿತು ಅವರು ಮಾತನಾಡಿದರು.
ತರಳಬಾಳು ಶಿಕ್ಷಣ ಸಂಸ್ಥೆಯಲ್ಲಿ ೩೦ ವರ್ಷಗಳವರೆಗೆ ಜವಾನನಾಗಿದ್ದೆ. ಭ್ರಷ್ಟಾಚಾರ ಮುಕ್ತಕ್ಷೇತ್ರವೆಂದು ಸಿರಿಗೆರೆ ಗುರುಗಳು ಜಗಳೂರು ಕ್ಷೇತ್ರವನ್ನು ಆಯ್ಕೆ ಮಾಡಿ ನನಗೆ ಚುನಾವಣೆಗೆ ನಿಲ್ಲಲು ತಿಳಿಸಿದರು. ೨೦೧೮ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಸೋತೆ. ೨೦೨೩ರಲ್ಲಿ ಕಾಂಗ್ರೆಸ್ ಪಕ್ಷವು ಟಿಕೆಟ್ ಕೊಟ್ಟಿತು. ಮೂರು ಬಾರಿ ಗೆದ್ದ ಶಾಸಕರನ್ನು ೮೫೦ ಮತಗಳಿಂದ ಸೋಲಿಸಿ ಜಗಳೂರು ಕ್ಷೇತ್ರದಿಂದ ಶಾಸಕನಾಗಿ ಆಯ್ಕೆಯಾದೆ. ನನ್ನನ್ನು ತಿದ್ದುವ, ಅಂಕುಶವಾಗಿರುವ ಗುರುಗಳಿದ್ದಾರೆ ಎಂದು ತಿಳಿಸಿದರು.
ಮಾನಾಪಮಾನ ಸಹಿಸಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದರಲ್ಲಿದ್ದೆ. ಆದರೆ ಈಗ ಶಾಸಕನಾಗಿರುವೆ. ಇದನ್ನು ಸಿರಿಗೆರೆ ಮಠಕ್ಕೆ ಹಾಗೂ ಸಾಣೇಹಳ್ಳಿ ಮಠಕ್ಕೆ ಅರ್ಪಿಸುವೆ. ನನ್ನನ್ನು ಜನಪ್ರಿಯ ಶಾಸಕ ಎನ್ನುತ್ತಾರೆ. ನಾನು ಜನಸೇವಕ. ಪೌರಕಾರ್ಮಿಕರ ಜೊತೆಗೆ ಕಸ ಗುಡಿಸಲು ಪ್ರತಿ ತಿಂಗಳು ಹೋಗುವೆ ಎಂದರು.
ನೈತಿಕ ರಾಜಕಾರಣಕ್ಕೆ ಕರೆ
ನಿಮ್ಮ ಮತವು ನಿಮ್ಮ ಮಕ್ಕಳ ಭವಿಷ್ಯವನ್ನು ತೀರ್ಮಾನಿಸುತ್ತದೆ. ಇದಕ್ಕಾಗಿ ಕುಲಾತೀತ, ಜಾತ್ಯತೀತ ಆಗಿರುವ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ. ಈ ಮೂಲಕ ನೈತಿಕ ರಾಜಕಾರಣಕ್ಕೆ ನಾಂದಿ ಹಾಡಿ ಎಂದು ರಾಷ್ಟ್ರ ಸಮಿತಿ ಪಕ್ಷದ ಅಧ್ಯಕ್ಷ ಡಾ.ರವಿ ಕೃಷ್ಣರೆಡ್ಡಿ ಕರೆ ನೀಡಿದರು.
ಸದ್ಭಕ್ತನಾದವನಿಗೆ ಸತ್ಯ, ಸದ್ಭಾವ, ಸಹಜ ಸದ್ವರ್ತನೆ ಇರಬೇಕೆಂದು ಬಸವಣ್ಣನವರು ಹೇಳುತ್ತಾರೆ. ಇಂಥ ಗುಣಗಳು ರಾಜಕಾರಣದಲ್ಲಿರಬೇಕು. ಆದರೆ ನಮ್ಮ ಬದುಕನ್ನು ಪ್ರತ್ಯಕ್ಷವಾಗಿ, ಪರೋಕ್ಷವಾಗಿ ನಿಯಂತ್ರಿಸುತ್ತಿರುವುದು ರಾಜಕಾರಣ ಎಂಬುದನ್ನು ಮರೆಯಬೇಡಿ ಎಂದು ಎಚ್ಚರಿಸಿದರು.
ಪರೋಪಕಕಾರಿಯಾಗಿರುವ, ಸಮಾಜಕ್ಕೆ ಮಾರ್ಗದರ್ಶನ ಮಾಡುವ ರಾಜಕಾರಣಿಗಳಿದ್ದರೆ ಅದು ನೈತಿಕ ರಾಜಕಾರಣ. ಅಂಥ ರಾಜಕಾರಣಿಗಳು ನೈತಿಕ ಬದುಕನ್ನು ಕಟ್ಟುತ್ತಾರೆ. ಹಿಂದೆ ಅರಿಷಡ್ವರ್ಗಗಳನ್ನು ಬಿಟ್ಟು ಸಮಾಜಮುಖಿ ಚಿಂತಕರನ್ನು ಸನ್ಮಾನಿಸುತ್ತಿದ್ದರು. ಈಗ ಮೂರೂ ಬಿಟ್ಟವರನ್ನೂ ಸನ್ಮಾನಿಸಲಾಗುತ್ತಿದೆ. ಅಂದರೆ ನಾಚಿಕೆ, ಮಾನ ಹಾಗೂ ಮರ್ಯಾದೆ ಬಿಟ್ಟ ರಾಜಕಾರಣಿಗಳನ್ನು ಆಯ್ಕೆಗೊಳಿಸುತ್ತಿದ್ದೇವೆ. ಅದರಲ್ಲೂ ಭ್ರಷ್ಟಾತಿಭ್ರಷ್ಟ, ಜೈಲಿಗೆ ಹೋಗಿಬಂದವರನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದೇವೆ. ಹೀಗೆ ಆಯ್ಕೆಯಾಗುವ ನಮ್ಮ ರಾಜಕಾರಣಿಗಳು ಬಡವರಲ್ಲ. ಆದರೆ ಜನರು ಮಾತ್ರ ಬಡತನದಲ್ಲಿದ್ದಾರೆ. ಕಡಕಷ್ಟದಲ್ಲಿದ್ದಾರೆ. ಬಡತನ, ನಿರುದ್ಯೋಗ, ಅಸಮಾನತೆ ಇಂಥ ಸಾರ್ವಕಾಲಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ ಎಂದು ಆತಂಕ ವ್ಯಕ್ತಪಡಿಸಿದರು.
ಇವತ್ತು ಅಮೆರಿಕದಲ್ಲಿ ತುಚ್ಛವಾಗಿ ಮಾತನಾಡಿದವನನ್ನು ಚುನಾವಣೆಯಲ್ಲಿ ಗೆಲ್ಲಿಸಿದ್ದಾರೆ. ಇದು ಯಾರ ತಪ್ಪು? ಎಲ್ಲಿದೆ ಮಾದರಿ? ಎಲ್ಲರನ್ನೂ ಮೆಚ್ಚಿಸುವ ಹಾಗೆ ಮಾತನಾಡುವುದು ಸುಲಭ. ಆದರೆ ನಿಷ್ಠುರವಾಗಿ ಮಾತನಾಡುವುದು ಕಡುಕಷ್ಟ ಎಂದರು.
ಗಂಡನಿಗೆ ಇನ್ನೊಂದು ಸಂಬಂಧವಿರುವ, ಅತ್ತೆಯನ್ನು ದ್ವೇಷಿಸುವ ಸೊಸೆ, ಸೊಸೆಯನ್ನು ವಿಲನ್ ಆಗಿ ತೋರಿಸುವ ಧಾರಾವಾಹಿಗಳನ್ನು ನೋಡುತ್ತ ಕಾಲ ಕಳೆಯುತ್ತೇವೆ. ಅಲ್ಲದೆ ಜೈಲಿಗೆ ಹೋಗಿಬಂದವರು ರಿಯಾಲಿಟಿ ಷೋಗಳಲ್ಲಿ ಭಾಗವಹಿಸುತ್ತಿದ್ದಾರೆ. ಇದು ದುರಂತ ಎಂದರು.