(ವಚನ ದರ್ಶನ ಬೆಂಬಲಕ್ಕೆ ನಿಂತಿರುವ ಶಿವಾನಂದ ಶ್ರೀಗಳಿಗೆ ಅಲ್ಲಮಪ್ರಭು ಅನುಭಾವ ಪೀಠದ ಪೂಜ್ಯ ಜಗನ್ನಾಥಪ್ಪ ಪನಸಾಲೆ ಶ್ರೀಗಳಿಂದ ಬಂದಿರುವ ಪ್ರತಿಕ್ರಿಯೆ.)
ಪೂಜ್ಯ ಶಿವಾನಂದ ಆರೂಢ ಸ್ವಾಮಿಗಳೇ, ದಯವಿಟ್ಟು ಗಮನಿಸಿ,

1) ಮೊದಲು ನೀವು ಕರಲಿಂಗಧಾರಿಗಳಾಗಿ ವಿಭೂತಿಧಾರಣ ಮಾಡಿ, ತ್ರಾಟಕಯೋಗ ಮಾಡುತ್ತಿರುವಂತೆ ಕಾಣುವುದಿಲ್ಲ. ಅಪ್ಪ ಸಂಗನಬಸವಣ್ಣ ಅವರು ವೈದಿಕರು ಜನಿವಾರ ಧರಿಸುವುದು ಕರ್ಮಠವೆಂದು ಅದನ್ನು ತೊರೆದು ಕರಲಿಂಗ ಧಾರಣವನ್ನು ಜಾರಿಗೆ ತಂದಿದ್ದರಿಂದ ಅಂಥ ವಿವೇಕದೊಂದಿಗ ಇಂದಿನ ಜನಿವಾರಧಾರಿಗಳು ಜನಿವಾರವನ್ನು ತ್ಯಜಿಸಬೇಕಲ್ಲವೇ. ಆಗ ಅಪ್ಪ ಸಂಗನಬಸವಣ್ಣ ಅವರನ್ನು ಹಿಂದೂ ಎಂದು ಒಪ್ಪಿಕೊಳ್ಳೊಣ ಅಲ್ಲವೇ.
2) ವಚನ ಸಿದ್ಧಾಂತದಲ್ಲಿ “ಓಂ ನಮ: ಶಿವಾಯ” ಎಂಬ ವಾಕ್ಯದಲ್ಲಿರುವ ಅಕ್ಷರಗಳನ್ನು ಆಜ್ಞಾ ಚಕ್ರದಿಂದ ಮೂಲಾಧಾರದವರೆಗೆ ತತ್ವವಾಗಿ ಉಪಯೋಗಿಸಿದ್ದು, ಅದು ಬಸವಾದಿ ಶರಣ ಪರಂಪರೆಯ ವಚನ ಸಿದ್ಧಾಂತ ಆಧಾರಿತ ಲಿಂಗ ಧರ್ಮದ ಮಂತ್ರವಲ್ಲ. ಲಿಂಗ ಧರ್ಮದ ಲಿಂಗವಂತರ ಮಂತ್ರವು “ಬಸವ+ಲಿಂಗ” ಎಂಬುದಾಗಿದ್ದು “ಬಸವ” ಎಂಬ ಪದವು ಉಚ್ಛಾಸವಾಗಿ ಹಾಗು “ಲಿಂಗ” ಎಂಬ ಪದವನ್ನು ನಿಚ್ಛಾಸವಾಗಿ ಉಪಯೋಗಿಸುತ್ತಾರೆ. ಬಸವಾದಿ ಶರಣರು ಹರ ಮೂಲಿಗರೇ ಹೊರತು ಹರಿಮೂಲಿಗರಲ್ಲ,
3) ಹರಮೂಲಿಗರೆಂದರೆ ಶೂದ್ರರು, ಅಸ್ಪೃಶರು, ಚಾಂಡಾಲರು, ಚಾರ್ವಾಕರು, ದಲಿತರು, ದಮನಿತರು, ಮೂಲನಿವಾಸಿಗಳು ಹಾಗು ವಿಶೇಷವಾಗಿ ಶವವನ್ನು ಹೂಳುವವರು, ದೇವಸ್ಥಾನಗಳಿಗೆ ಹೋಗದವರು ಮಾತ್ರ. ನಮ್ಮ ನಮ್ಮ ದೇಹವೆ ದೇಗುಲ ಮಾಡಿ, ಆವರಿಸಿರುವ ಆತ್ಮ ಅರ್ಥಾತ ಚೈತನ್ಯವನ್ನೆ ದೇವನಾಗಿಸಿಕೊಂಡು, ಕರಲಿಂಗನಿಷ್ಟೆಯಿಂದ ಲಿಂಗಾಂಗ ಸಾಮರಸ್ಯ ಹೊಂದುವುದರೊಂದಿಗೆ ಪರಮಾತ್ಮನಾಗಬೇಕು. ಇದಕ್ಕೇನೇ ಹನ್ನೆರಡನೆ ಶತಮಾನದ ಅಪ್ಪ ಸಂಗನಬಸವಣ್ಣ ಅವರು ವಚನ ಸಿದ್ಧಾಂತದ ಆಧಾರದಲ್ಲಿ ಲಿಂಗ ಧರ್ಮವನ್ನು ಸ್ಥಾಪಿಸಿದ್ದು, ಎಲ್ಲರೂ ಸ್ವಾನುಭಾವದಿಂದ ಲಿಂಗವಂತರಾಗಿ ಸ್ವಾಭಿಮಾನದ ಬಾಳುವಿಕೆಗಾಗಿ ಮನಾಂತರಗೊಳ್ಳುವ ದಾರಿ ತೋರಿಸಿದ್ದು.
4) ವೈದಿಕ ವೈಷ್ಣವ ಪಂಥವು ಯಾವತ್ತು ಮೈಲಿಗೆ ಮುಡಚೆಟ್ಟು ಮಾಡುವುದು. ವ್ಯಕ್ತಿಪೂಜೆ, ಮೂರ್ತಿಪೂಜೆ ಆಚರಿಸುವುದು ಅವರ ಜನ್ಮಸಿದ್ಧ ಹಕ್ಕು. ಇನ್ನಾದರು ಜನಿವಾರಧಾರಿಗಳಲ್ಲದ ಜನಾಂಗದವರೆಲ್ಲಾ ಲಿಂಗ ಧರ್ಮವನ್ನು ಆಶ್ರಯಿಸಿ ಸ್ವಾಭಿಮಾನದಿಂದ ಸ್ವತಂತ್ರ ಬದುಕನ್ನು ಕಟ್ಟಿಕೊಳ್ಳಿ. ಇಲ್ಲವಾದಲ್ಲಿ ಗುಲಾಮರಾಗಿ ಬಾಳಬೇಕಾಗುತ್ತದೆ.
5) ಬಸವಾದಿ ಶರಣರ ಲಿಂಗ ಧರ್ಮದಲ್ಲಿ ಯಾತ್ರೆ ಇದ್ದು, ತೀರ್ಥಯಾತ್ರೆ ಇಲ್ಲ. ಭಕ್ತನಂಗಳವೇ ವಾರಣಾಸಿ ಕಾಯವೇ ಕೈಲಾಸವಾಗಿರುವುದರಿಂದ ದೇವನೆಂಬ ಭ್ರಾಂತಿಯಲ್ಲಿ ತಮ್ಮತನವನ್ನು ಕಳೆದುಕೊಳ್ಳಬೇಡಿ.
6) ವಚನ ಸಿದ್ಧಾಂತ ಆಧಾರಿತ ಲಿಂಗ ಧರ್ಮವು ಈ ಲೋಕದಲ್ಲಿರುವ ಏಕೈಕ ಧರ್ಮವಾಗಿದ್ದು ಉಳಿದವುಗಳೆಲ್ಲಾ ಮತ, ಪಂಥ, ಪಂಗಡ, ರೂಢಿ, ಸಂಪ್ರದಾಯ ಹೇಳಿಕೆ ಕೇಳಿಕೆಗಳಾಗಿವೆ. ಧರ್ಮದ ವ್ಯಾಖ್ಯಾನವನ್ನು ಅರಿಯದವರು ಲಿಂಗ ಧರ್ಮದ ನಿಜಾಚರಣೆಗಳನ್ನು ಮರೆತಿರುವುದರಿಂದ ಅವರಿಗೆ ಉಳಿದವುಯೆಲ್ಲಾ ಧರ್ಮಗಳಾಗಿ ಗೋಚರಿಸುತ್ತಿರುವುದು ಅಂಥವರ ದಿವಾಳಿತ ತೋರಿಸುತ್ತದೆ.
7) ಲಿಂಗ ಧರ್ಮದಲ್ಲಿ ಯಾವುದೇ ತರಹದ ಭಯವಾಗಲಿ ಇಲ್ಲ, ಭೀತಿಯಾಗಲಿ ಇಲ್ಲ, ಭ್ರಾಂತಿಯಾಗಲಿ ಇಲ್ಲ, ಭ್ರಮೆಯಾಗಲಿ ಇಲ್ಲ, ಇವೆಲ್ಲವುಕ್ಕಿಂತ ಮುಖ್ಯವಾಗಿ ಮಾನವ ನಿರ್ಮಿತ ಭೇದವೆಂಬುದೇ ಇಲ್ಲ. ಹಾಗಾಗಿ ಲಿಂಗ ಧರ್ಮವು ಮಾನವ ಧರ್ಮವಾಗಿದ್ದು ಇದೊಂದರಿಂದಲೆ ಜಗತ್ ಕಲ್ಯಾಣ ಸಾಧ್ಯವೆಂಬ ಅರೂಹು ಎಲ್ಲರೊಳು ಮೂಡಬೇಕು.
8) ಬಸವಾದಿ ಶರಣ ಪರಂಪರೆಯ ವಚನ ಸಿದ್ಧಾಂತ ಆಧಾರಿತ ಲಿಂಗ ಧರ್ಮವು ಈ ಲೋಕದ ಪ್ರತಿಯೊಂದು ತತ್ವಸಿದ್ಧಾಂತದೊಂದಿಗೆ ತನ್ನ ಅಂತರವನ್ನು ಕಾಯ್ದುಕೊಂಡಿದೆ. ಹೆಚ್ಚಿನ ಶರಣರು ಶೈವ ಮೂಲದಿಂದ ಬಂದಿರುವುದರಿಂದ ಸಹಜವಾಗಿಯೆ ಆತುರಾತುರದಲ್ಲಿ ಕೆಲವೊಂದು ಶೈವಾಚರಣೆಯ ಪ್ರಕ್ತೀಪ್ತ ವಚನಗಳನ್ನು ನೀವು ಕಂಡು ಅಪ್ಪ ಸಂಗನಬಸವಣ್ಣ ಅವರು ಹಿಂದೂ ಎಂಬು ಹೇಳುತ್ತಿರುವುದು ಸರಿಯಲ್ಲ.
9) ವಚನ ಸಿದ್ಧಾಂತ ಆಧಾರಿತ ಲಿಂಗ ಧರ್ಮದಲ್ಲಿ ಆಯಾ ಭಕ್ತಸಾಧಕನೆ ದೇವನಾಗುವುದರಿಂದ ಅಲ್ಲಿ ದೇವೆನೆಂಬ ಮತ್ತೊಂದು ಆಕಾರವಾಗಲಿ ಯಾ ನಿರಾಕಾರವಾಗಲಿ ಇಲ್ಲ. ಅಪ್ಪ ಸಂಗನಬಸವಣ್ಣ ಅವರನ್ನು ಗುರವೆಂದು ಸಂಭೋದಿಸುತ್ತೆವೆಯೆ ಹೊರತು ದೇವರಾಗಿ ಅಲ್ಲ.
10) ಬಸವಾದಿ ಶರಣರ ಲಿಂಗ ಧರ್ಮದಲ್ಲಿ ಅಪ್ಪ ಸಂಗನಬಸವಣ್ಣ ಧರ್ಮಗುರವಾದರೆ, ಲಿಂಗವಂತ ಹಡೆದ ತಾಯಿಯೆ ಮೊದಲ ದೀಕ್ಷಾ ಗುರವಾಗಿದ್ದಾಳೆ. ಜಂಗಮರಾದವರು ಲಿಂಗ ಧರ್ಮಕ್ಕೆ ಮನಾಂತರಗೊಳ್ಳುವವರಿಗೆ ಮಾತ್ರ ಕರಲಿಂಗ ದೀಕ್ಷೆ ನೀಡುತ್ತಾರೆ. ಇಲ್ಲಿ ಜಂಗಮನೆಂದರೆ ಯಾರೇ ಅನುಭಾವಿ ಲಿಂಗವಂತರಾಗಿರಬಹುದು.
11) ಜಂಗಮ ಎಂಬುದು ಚರಸ್ಥಿತಿಯನ್ನು ಹೊಂದಿದ್ದು ಅಂಥವರು ಖಾಯಂ ಆಗಿ ನೆಲೆಸುವಂತಿಲ್ಲ. ಹಾಂ ಇನ್ನೊಂದು ವಿಷಯ ನಿಮ್ಮ ಗಮನಕ್ಕೆ ತರಬಯಸುವುದೆನೆಂದರೆ ಸನ್ಯಾಸಿ ಬೇರೆ ಹಾಗು ಲಿಂಗ ಧರ್ಮದಲ್ಲಿರುವ ಜಂಗಮನೆ ಬೇರೆ. ಸನ್ಯಾಸಿಗಳಿಗೆ ಲಿಂಗ ಧರ್ಮದಲ್ಲಿ ಪ್ರವೇಶವಿಲ್ಲ. ಸನ್ಯಾಸಿಯು ಜಗತ್ತನ್ನು ನಶ್ವರವೆಂದು ತಿಳಿದು ಅಲಕ್ಷಿಸುತ್ತಾನೆ ಆದರೆ ಜಂಗಮನು ಜಗತ್ತನ್ನು ಶಾಶ್ವತವೆಂದು ತಿಳಿದು ಬದುಕಿನ ಪಯಣದಲ್ಲಿ ತನ್ನೊಂದಿಗಿರುವವರನ್ನು ಮಕ್ಕಳೆಂದು ಪಡೆದು ತನ್ನ ತಾಯಿತನದ ಪ್ರೀತಿಯಿಂದ ಪೊರೆಯುತ್ತಾರೆ.
12) ನೀವು ಉಲ್ಲೇಖಿಸಿದ ಪದ ಹಿಂದೂ ಎಂಬ ಜನರು ಸ್ವರ್ಗ ನರಕಗಳನ್ನು ಸೃಷ್ಟಿಸಿ ಅವುಗಳನ್ನು ನಂಬುತ್ತಾರೆ. ಆದರೆ ಲಿಂಗ ಧರ್ಮದ ಲಿಂಗವಂತರು ಆಚಾರಗಳನ್ನೆ ಸ್ವರ್ಗವೆಂದು ಅನಾಚಾರಗಳನ್ನು ನರಕವೆಂದು ತಿಳಿದು ಕಾಲೆ ಕಂಬವಾಗಿ ದೇಹವನ್ನೆ ದೇಗುಲಮಾಡಿ ಶಿರವನ್ನೆ ಕಳಸದೊಂದಿಗೆ ಆವರಿಸಿರುವ ಚೈತನ್ಯದೊಂದಿಗೆ ಸದಾ ಸುಖದಿಂದ ಬದುಕನ್ನು ಪೂರೈಸಿ ಲಿಂಗೈಕ್ಯಗೊಳ್ಳುತ್ತಾರೆ.
13) ವಚನ ದರ್ಶನ ಎಂಬ ಪುಸ್ತಕದ ಕುರಿತು ನೀವು ಮಾಧ್ಯಮದಲ್ಲಿ ಮಾತಾಡಿದ್ದನ್ನು ನಾವು ಕೇಳಿಸಿಕೊಂಡಿದ್ದು, ಈಗಾಗಲೆ ಪ್ರಕಟಗೊಂಡ ೨೩೮೦೦ ವಚನಗಳನ್ನು ಸಂಪೂರ್ಣವಾಗಿ ಓದಿಲ್ಲವೆಂದು ಕಂಡುಬರುತ್ತಿದೆ. ಶ್ರೇಷ್ಟಮಠದ ಸ್ವಾಮಿಯಾಗಿ ಅರೇ ಜ್ಞಾನದೊಂದಿಗೆ ಹೆಸರಿಗೋಸ್ಕರ ಹಾಗು ಲಾಭಗೊಸ್ಕರ ಸಂದರ್ಶನ ನೀಡಬೇಡಿ. ಅದು ನಿಮ್ಮ ಮಠದ ಹಿರಿಯರಿಗೆ ಹಾಗು ಸಮಾಜಕ್ಕೆ ಮಾಡುವ ಘೋರ ಪಾಪವಾಗುತ್ತದೆ.
14) ಇನ್ನು ಅನೇಕ ವಿಶೇಷ ಸಂಗತಿಗಳನ್ನು ವಿವರಿಸಬಹುದು. ಒಟ್ಟಾರೆಯಾಗಿ ಹೇಳಬೇಕೆಂದರೆ ಬಸವಾದಿ ಶರಣರು ತೋರಿದ ಲಿಂಗ ಧರ್ಮವು ಈ ಲೋಕದ ಅತ್ಯಂತ ವಿಶಿಷ್ಟ ಧರ್ಮವಾಗಿದ್ದರಿಂದ ಈ ಧರ್ಮವನ್ನು ಸರಿಯಾಗಿ ತಿಳಿದುಕೊಂಡು ಆಚರಿಸಿಕೊಂಡು ನಿಮ್ಮಂಥವರು ತಮ್ಮ ಅನಿಸಿಕೆಗಳನ್ನು ದಾಖಲಿಸಬೇಕೆಂದು ಪ್ರಾರ್ಥಿಸುತ್ತಿದ್ದೆವೆ.
15) ಸದರಿ ವಚನ ದರ್ಶನ ಪುಸ್ತಕದ ಮುಖಪುಟದ ಯೋಗಿಸಾಧಕನ ಹಿಂದುಗಡೆ ವೈದಿಕರ ಶ್ರೀ ಚಕ್ರವನ್ನು ತೋರಿಸಿದ್ದು ಸರಿಯಲ್ಲ. ಲಿಂಗವಂತರು ಷಟಸ್ಥಲವನ್ನು ಅನುಸರಿಸುತ್ತಾರೆ ಎಂಬ ಕನಿಷ್ಟ ಜ್ಞಾನ ಪುಸ್ತಕದ ಪ್ರಕಟಣೆಗಾರರಿಗೆ ಇದ್ದಂತೆ ಇಲ್ಲ.
16) ವಚನ ದರ್ಶನ ಪುಸ್ತಕದ ಮುಖಪುಟದಲ್ಲಿ ಯೋಗಿ ಸಾಧಕನ ದೇಹದೊಳಗೆ ಕರಲಿಂಗದ ಗುರುತನ್ನು ತೋರಿಸಿ ಅವನನ್ನು ಧ್ಯಾನಮುದ್ರೆಯಲ್ಲಿ ಚಿತ್ರಿಸಿದ್ದು ಸರಿಯಲ್ಲ. ಲಿಂಗ ಧರ್ಮದಲ್ಲಿ ಪೂರ್ಣವಾಗಿ ಕಣ್ಣು ಮುಚ್ಚದೆ ಯಾ ಸಂಪೂರ್ಣ ಕಣ್ಣು ತೆರೆಯದೆ ಅರೆತೆರೆದ ಸಹಜ ಕಣ್ಣಿನಿಂದ ಕರಲಿಂಗಕ್ಕೆ ತೋರುವ ನಿಷ್ಟೆ ಮನಶೋಧನೆಗಾಗಿ ಇರುತ್ತದೆ. ಅದಕ್ಕೆ ಆನಿಮಿಷಯೋಗ ಅರ್ಥಾತ ತ್ರಾಟಕ ಯಾ ದೃಷ್ಟಿಯೋಗವೆಂದು ಕರೆಯಲಾಗಿದ್ದು ಅದನ್ನು ಮಾಡಲಾಗುತ್ತದೆ.
17) ಲಿಂಗ ಧರ್ಮದ ಸಾಧಕನು ದೇವನಲ್ಲದ ಕರಲಿಂಗದೊಂದಿಗೆ ಯಾವುದೇ ತರಹದ ಪೂಜೆ ಯಾ ಪ್ರಾರ್ಥನೆ ಯಾ ಆರಾಧನೆ ಯಾ ಧ್ಯಾನ ಯಾ ತಪಸ್ಸು ಇತ್ಯಾದಿಗಳನ್ನು ಮಾಡುವುದಿಲ್ಲ. ತನ್ನ ತಾನರಿಯಲು ಬಳಸುವ ಅರೂಹುವಿನ ಉದ್ದೀಪನದ ಸಾಧನವೇ ಕರಲಿಂಗವಾಗಿದೆ. ಅದೊಂದು ವೈಜ್ಞಾನಿಕ ಸಾಧನವಾಗಿದ್ದು ಲಿಂಗಾಂಡದ ರಹಸ್ಯವೇ ಅದರಲ್ಲಡಗಿದ್ದು ನೀವು ಭೌತ ವಿಜ್ಞಾನವನ್ನು ಅಭ್ಯಾಸ ಮಾಡಿದರೆ ಆ ಗಾಢ ಕಪ್ಪು ವಸ್ತುವಿನ ಮಹತ್ವ ತಿಳಿಯುತ್ತದೆ.
18) ಈ ಲಿಂಗಾಂಡದಲ್ಲಿ ಕೇವಲ ಎರಡೇ ಎರಡು ಬಣ್ಣಗಳಿದ್ದು ಒಂದು ಬಿಳಿ ಬಣ್ಣ, ಅದಿಲ್ಲದಿದ್ದರೆ ಕಪ್ಪು. ಕಪ್ಪು ಬಣ್ಣವು ಜೀವೋತ್ಪತ್ತಿಯ ಪ್ರತೀಕವಾದರೆ ಬಿಳಿ ಬಣ್ಣವು ಇರುವಿಕೆಯ ಪ್ರತೀಕವಾಗಿದೆ. ಲಿಂಗವಂತರು ಉಪಯೋಗಿಸುವ ಕರಲಿಂಗವು ಕಪ್ಪು ಬಣ್ಣದಾಗಿದ್ದು ಅದರೊಂದಿಗೆ ಬಳಸುವ ವಿಭೂತಿ ಬಿಳಿ ಬಣ್ಣದಾಗಿದೆ. ಅವುಗಳೊಂದಿಗೆ ಧಾರಣ ಮಾಡುವ ರುದ್ರಾಕ್ಷಿಯು ಅಯಸ್ಕಾಂತದ ಗುಣವನ್ನು ಹೊಂದಿದ್ದು ಅದು ಜೈವಿಕಗುಣ ಹೊಂದಿದೆ. ಹಾಗಾಗಿ ರುದ್ರಾಕ್ಷಿಯನ್ನು ರಕ್ತದ ಉತ್ಪತ್ತಿ ಹಾಗು ಶುದ್ಧತೆ ಮತ್ತು ಸರಾಗವಾಗಿ ಪರಿಚಲನೆಗಾಗಿ ಬಳಸಲಾಗುತ್ತದೆ.
19) ಶೈವರು ಧರಿಸುವ ಭಸ್ಮವನ್ನು ಗೋವಿನ ಸೆಗಣಿಯಿಂದ ತಯ್ಯಾರಿಸಲಾಗುತ್ತದೆ. ಆದರೆ ಲಿಂಗವಂತರು ಧರಿಸುವ ವಿಭೂತಿಯನ್ನು ಔಷಧಿಯ ಗಿಡ ಸಸ್ಯಗಳಿಂದ ಸಿದ್ಧಪಡಿಸಲಾಗುತ್ತದೆ. ಇಂಥ ವೈಜ್ಞಾನಿಕ ವಿಚಾರದ ಅರೂಹು ಅನೇಕ ಲಿಂಗಾಯತರಿಗೆ ಹಾಗು ವೀರಶೈವರಿಗೆ ಇಲ್ಲದಿರುವುದು ಶೋಚನಿಯ ಸಂಗತಿಯಾಗಿದೆ. ಆದುದರಿಂದ ಇನ್ನಾದರು ಲಿಂಗ ಧರ್ಮದ ಲಿಂಗವಂತರಾಗಲು ಅಧ್ಯಯನ ನಿರತರಾಗಬೇಕೆಂದು ಕರೆಕೊಡುತ್ತಿದ್ದೆವೆ.
20) ಶ್ವಾಸ ಗುರುಗಳೆಂದು ಹೇಳಿಕೊಳ್ಳುತ್ತಿರುವ ಮಹನೀಯರು ಅಷ್ಟಾಂಗಯೋಗಕ್ಕಿಂತ ಸರಿಯಾದ ಮಾರ್ಗದರ್ಶನದಲ್ಲಿ ಕರಲಿಂಗಯೋಗವನ್ನು ರೂಢಿಸಿಕೊಂಡರೆ ಅವರು ಸರ್ವ ರೀತಿಯಲ್ಲೂ ಮಹಾನುಭಾವಿಗಳಾಗುವುದರಲ್ಲಿ ಸಂಶಯವೇ ಇಲ್ಲ. ಆದುದರಿಂದ ಈ ಕರಲಿಂಗಯೋಗವನ್ನು ದೈನಂದಿನಲ್ಲಿ ಕಡ್ಡಾಯವಾಗಿ ರೂಢಿಸಿಕೊಳ್ಳಿ.