ಜಮಖಂಡಿ
ಜಮಖಂಡಿ ಓಲೆಮಠದ ಪರಮಪೂಜ್ಯ ಶ್ರೀ ಡಾ.ಅಭಿನವ ಚನ್ನಬಸವ ಮಹಾಸ್ವಾಮಿಗಳು ಲಿಂಗೈಕ್ಯರಾಗಿದ್ದಾರೆ.
ವಿಚಾರವಂತ ಹಾಗೂ ಅಪಾರ ಪಾಂಡಿತ್ಯ ಹೊಂದಿದ್ದ ಸ್ವಾಮಿಗಳು ಗುರುವಾರ ರಾತ್ರಿ 10ಗಂಟೆಗೆ ಹೃದಯಾಘಾತದಿಂದ ಮರಣ ಹೊಂದಿದರು ಎಂದು ತಿಳಿದು ಬಂದಿದೆ.
ಶ್ರೀಗಳ ಪಾರ್ಥಿವ ಶರೀರದ ಅಂತಿಮ ದರ್ಶನ ಇಂದು ಬೆಳಗ್ಗೆ 7 ಗಂಟೆಯಿಂದ 9:00ವರೆಗೆ ಗೊರವನಕೊಳ್ಳ ಮಠದಲ್ಲಿ, ತದನಂತರ ಬೆಳಿಗ್ಗೆ 11ಗಂಟೆಗೆ ಜಮಖಂಡಿ ಓಲೆಮಠದಲ್ಲಿ ಅಂತಿಮ ದರ್ಶನಕ್ಕೆ ಏರ್ಪಾಟು ಮಾಡಲಾಗಿದೆ. ಸಂಜೆ 5:00 ಗಂಟೆಗೆ ಜಮಖಂಡಿ ಓಲೆಮಠದ ಆವರಣದಲ್ಲಿ ಅಂತ್ಯಕ್ರಿಯೆ ನೆರವೇರುವದು.
ಅಪರೂಪದ ವಾಗ್ಮಿಗಳು, ಪಂಡಿತರೂ ಆಗಿದ್ದ ಪೂಜ್ಯರು ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಮಗ್ಗೆಯ ಮಾಯಿದೇವರ ಶಿವಾನುಭವ ಸೂತ್ರ ಒಂದು ಅಧ್ಯಯನ ಎಂಬ ಮಹಾಪ್ರಬಂಧ ಬರೆದು ಪಿಎಚ್.ಡಿ ಪದವಿ ಪಡೆದಿದ್ದರು.
ನಾಗನೂರು ರುದ್ರಾಕ್ಷಿಮಠದ ಡಾ. ಶಿವಬಸವ ಸ್ವಾಮೀಜಿ ಅವರ ಪ್ರಸಾದ ನಿಲಯದಲ್ಲಿದ್ದು ಅಧ್ಯಯನ ಮಾಡಿದ್ದ ಪೂಜ್ಯರು ಇತ್ತೀಚೆಗೆ ಬಸವಣ್ಣನವರನ್ನು ಕುರಿತು ದ್ವಿಪದಿ ಮಹಾಕಾವ್ಯ ರಚಿಸಿದ್ದಾರೆ. ಪೂಜ್ಯರ ಅಗಲುವಿಕೆಯಿಂದ ಕನ್ನಡ ನಾಡು ಬಡವಾಗಿದೆ.
ಸಾಣೇಹಳ್ಳಿ ಶ್ರೀಗಳ ಸಂತಾಪ
ಜಮಖಂಡಿ ಓಲೆಮಠದ ಡಾ. ಅಭಿನವ ಚನ್ನಬಸವ ಶ್ರೀಗಳವರ ಲಿಂಗೈಕ್ಯ ವಾರ್ತೆಯನ್ನು ನಂಬಲಾಗುತ್ತಿಲ್ಲ.
ಮೃದು ಸ್ವಭಾವ, ಮಕ್ಕಳ ಮನಸ್ಸಿನ, ತಮಾಷೆಯ ಮಾತುಗಳ ಮೂಲಕ ಕೇಳುಗರ ಮನಸ್ಸನ್ನು ಆವರಿಸುವ ಗುಣ ಅವರಲ್ಲಿತ್ತು. ಸಾಣೇಹಳ್ಳಿಯ ನಾಟಕೋತ್ಸವ ಮತ್ತಿತರ ಕಾರ್ಯಕ್ರಮಗಳಲ್ಲಿ ಅವರು ಭಾಗವಹಿಸಿ ನೀಡಿದ ಆಶೀರ್ವಚನದ ಸಂದೇಶ ಇನ್ನೂ ನಮ್ಮ ಮನದಲ್ಲಿ ಹಸಿರಾಗಿದೆ.
ಅಂಥವರ ಅನಿರೀಕ್ಷಿತ ಅಗಲುವಿಕೆ ಭಕ್ತರ ಮನಸ್ಸಿಗೆ ಅಪಾರ ವೇದನೆಯನ್ನುಂಟುಮಾಡುವಲ್ಲಿ ಅನುಮಾನವಿಲ್ಲ. ಆ ಪೂಜ್ಯರ ಆದರ್ಶಗಳು ಭಕ್ತರ ಆಸ್ತಿಯಾಗಲಿ ಎಂದು ಹಾರೈಸುತ್ತೇವೆ.
-ಪಂಡಿತಾರಾಧ್ಯ ಸ್ವಾಮೀಜಿ, ಸಾಣೇಹಳ್ಳಿ