ವಚನ ನಿರ್ವಚನ: ಪರಿಪೂರ್ಣ ಜಂಗಮ ಸಮಾಜದ ಸ್ವಾಸ್ಥ್ಯ ಕಾಪಾಡಬೇಕು

ಗುಳೇದಗುಡ್ಡ :

ಬಸವ ಕೇಂದ್ರದ ಮನೆಯಲ್ಲಿ ಮಹಾಮನೆ ಕಾರ್ಯಕ್ರಮ ಶನಿವಾರ ಮಲ್ಲಿಕಾರ್ಜುನ ತಿಪ್ಪಣ್ಣ ಚಿಂದಿ ಅವರ ಮನೆಯಲ್ಲಿ ನಡೆಯಿತು.

ಅಂದು ಚಿಂತನೆಗೆ ಆಯ್ದುಕೊಂಡ ಚೆನ್ನಬಸವಣ್ಣನವರ ವಚನ ಹೀಗಿದೆ–

ಜಂಗಮ ಘನವೆಂಬೆನೆ?
ಬೇಡಿ ಕಿರಿದಾಯಿತ್ತು
ಲಿಂಗ ಘನವೆಂಬೆನೆ? ಕಲುಕುಟಿಗರ
ಕೈಯ ಮಾಡಿಸಿಕೊಂಡು ಕಿರಿದಾಯಿತ್ತು.
ಭಕ್ತ ಘನವೆಂಬೆನೆ?
ತನು ಮನ ಧನ ವಂಚನೆಯಿಂದ ಕಿರಿದಾಯಿತ್ತು.
ಇಂತೀ ತ್ರಿವಿಧ ನಿಷ್ಪತ್ತಿಯಾಗದನ್ನಕ್ಕರ
ಕೂಡಲಸಂಗಮದೇವನು ಎಂತೊಲಿವನೊ?

ಪ್ರೊ. ಶ್ರೀಕಾಂತ ಗಡೇದ ಅವರು ಈ ವಚನದ ಚಿಂತನೆಯಲ್ಲಿ ತೊಡಗಿ, “ಸದರಿ ವಚನವು ಅವಿರಳ ಜ್ಞಾನಿ ಚನ್ನಬಸವ ತಂದೆಗಳಿಂದ ರಚಿತವಾಗಿದೆ.  ಚನ್ನಬಸವಣ್ಣನವರ ಸಾವಿರಾರು ವಚನಗಳಲ್ಲಿ ಈಗ ಕೆಲವೇ ನೂರು ವಚನಗಳು ಮಾತ್ರ ಲಭ್ಯವಿವೆ.  ಅನುಭವಮಂಟಪದ ಎರಡನೆಯ ಅಧ್ಯಕ್ಷರಾಗಿದ್ದ ಇವರು, ವಚನದಲ್ಲಿ ಲಿಂಗ, ಜಂಗಮ, ಭಕ್ತರು ಹೇಗಿರಬೇಕು ಎಂಬುದನ್ನು ಕಾಣಿಸಿದ್ದಾರೆ.  ಪರಿಪೂರ್ಣ ವ್ಯಕ್ತಿತ್ವದ ಜಂಗಮ ಬೇಡಿ, ಸಮಾಜದಲ್ಲಿ ಚಿಕ್ಕವನಾಗುತ್ತಾನೆ.  ಪರಿಪೂರ್ಣ ದೇಹಿಯಾದ ಆತನು ಸಮಾಜದ ಸ್ವಾಸ್ಥ್ಯವನ್ನು ಕಾಪಾಡಬೇಕು.  ಹಾಗೆಯೇ ಲಿಂಗವೆಂಬುದು ವಿಶ್ವವೆಲ್ಲ ವ್ಯಾಪಿಸಿದ ಚೈತನ್ಯವೇ ವಿನಃ ಕಲ್ಲಲ್ಲ.  ಹಾಗೆಯೇ ಭಕ್ತನಾದವನು ಗುರು-ಲಿಂಗ-ಜಂಗಮಕ್ಕೆ ನಿಸ್ವಾರ್ಥದಿಂದ ನೀಡಬೆಕು.  ಈ ಕ್ರಮಗಳು ತಪ್ಪಿದರೆ ಅವು ತಮ್ಮ ಮೌಲ್ಯವನ್ನು ಕಳೆದುಕೊಳ್ಳುತ್ತವೆ” ಎಂದರು.

ನಂತರದಲ್ಲಿ ಮಾತನಾಡಿದ ಪ್ರೊ. ಸುರೇಶ ತಿ. ರಾಜನಾಳ ಅವರು, “ಅರಿವು, ಆಚಾರ, ಅನುಭಾವಗಳನ್ನೇ ಗುರು, ಲಿಂಗ, ಜಂಗಮವೆನ್ನುತ್ತಾರೆ.  ಜಂಗಮ ಎನ್ನುವವನು ಕೇವಲ ನರನಲ್ಲ. ಆತ ಪರಿಪೂರ್ಣ ಅನುಭವಿ. ಆತನಿಗೆ ಬೇಕೆಂಬುದಿಲ್ಲ, ಬೇಡೆಂಬುದಿಲ್ಲ. ಅಂಥವನು ಭಕ್ತರನ್ನು ಕಾಡಿ ಬೇಡಿ ಪಡೆದರೆ ಚಿಕ್ಕವನಾಗುತ್ತಾನೆ. ಸಣ್ಣ ವ್ಯಕ್ತಿಯಾಗುತ್ತಾನೆ. ಹಾಗೆಯೇ ಅರುಹಿನ ಕುರುಹಾದ ಲಿಂಗವನ್ನು ಕೇವಲ ಕಲ್ಲೆಂದು ಭಾವಿಸಲಾಗದು. ಹಾಗೆಯೇ ಭಕ್ತನಾದವನು ಸಹ ಶ್ರದ್ಧಾಭಕ್ತಿಯಿಂದ ಮೊದಲ್ಗೊಂಡು ಸಮರಸ ಭಕ್ತಿಯವರೆಗೆ ಸಾಗಿ ಲಿಂಗವೇ ಆಗುತ್ತಾನೆ. ಹೀಗಾಗಿ ಲಿಂಗ, ಜಂಗಮ, ಭಕ್ತರಾದವರು ಆತ್ಮವಂಚನೆ ಮಾಡಿಕೊಳ್ಳದೆ ನುಡಿದಂತೆ ನಡೆದು ತತ್ವವನ್ನಾಚರಿಸಬೇಕು.  ಇಲ್ಲದಿದ್ದರೆ ಅವರು ಕೂಡಲ ಚನ್ನಸಂಗಮದೇವರಿಂದ ದೂರವಾಗುತ್ತಾರೆ” ಎಂದು ಅರ್ಥೈಸಿದರು.

ಪ್ರೊ. ಸಿದ್ಧಲಿಂಗಪ್ಪ ಬರಗುಂಡಿಯವರು ಈ ವಚನದ ಚಿಂತನೆಯನ್ನು ಮುಂದುವರೆಯಿಸುತ್ತ “ಅತಿ ಮುಖ್ಯವಾದ ತತ್ವವನ್ನು ಹೊಂದಿದ ಜಂಗಮ ಹಾಗೂ ಲಿಂಗ, ಇವೆರಡರ ಮೇಲೆ ಕಡು ಭಕ್ತಿಯನ್ನು ತಾಳಿದ ಭಕ್ತರು ಕೇವಲ ವಸ್ತು ವ್ಯಕ್ತಿಗಳಲ್ಲ.  ಅವರು ನಿರಾಕಾರ ವಸ್ತುವಿನ ಸಾಕಾರ ರೂಪಗಳು ಮತ್ತು ಒಂದೇ ವಸ್ತುವಿನ ಬೇರೆ ರೂಪಗಳು. ಇವನ್ನು ಸರಿಯಾಗಿ ಅರಿತುಕೊಳ್ಳದಿದ್ದರೆ ಉಪಯೋಗವಿಲ್ಲ. 

ಶರಣ ಧರ್ಮದಲ್ಲಿ ಘನಕ್ಕೆ ಘನವಾದ ಜಂಗಮ ಲಿಂಗಗಳು ಅಪಮೌಲ್ಯಕ್ಕೆ ಒಳಗಾದಾಗ ಅವು ತಮ್ಮ ಮಹತ್ವವನ್ನು ಕಳೆದುಕೊಳ್ಳುತ್ತವೆ. ಈ ಹಂತದಲ್ಲಿಯೇ ಚಿನ್ಮಯ ಜ್ಞಾನಿಗಳಾದ ಚನ್ನಬಸವಣ್ಣನವರು ಆಕ್ಷೇಪಣಾರೂಪದಲ್ಲಿ, ನಯವಾಗಿ ಖಂಡಿಸುತ್ತ ಅದೇ ಕಾಲಕ್ಕೆ ಈ ತ್ರಿವಿಧಗಳು ಹೇಗಿರಬೇಕು ಎಂಬುದನ್ನು ಸೂಚಿಸುತ್ತಾರೆ. ಪರಶಿವನ ಸಾಕಾರ ರೂಪನಾದ ಸಾಧಕ ಅನುಭಾವದ ಪರಿಪೂರ್ಣವಸ್ಥೆ ತಾಳಿದಾಗ, ಮಹಾಜ್ಞಾನಿಯಾಗಿ, ಲಿಂಗವೇ ಆಗಿರುತ್ತಾನೆ. ಆತನಿಗೆ ಬೇಕು ಬೇಡವೆಂಬುದಿಲ್ಲ. ಜಂಗಮಕ್ಕೆ ಜಾತಿಯಿಲ್ಲ. ಮಾತಾಪಿತರಿಲ್ಲ.  ಆತ ಎಂದಿಗೂ ಅಂಗವಿಡಿದು ಏನನ್ನೂ ಬೇಡಲಾರ ಹಾಗೂ ಬಯಸಲಾರ. ಆಕಸ್ಮಾತ್‌ ಅಂಗಭಾವದಿಂದ ಬೇಡಿದನಾದರೆ ಅದು ಜಂಗಮ ತತ್ವದಿಂದ ದೂರ.  ಹಾಗೆಯೇ ಲಿಂಗವೆಂಬುದು ಪರಶಿವ ತತ್ವವೇ. ಅದೊಂದು ಮಹಾಬಯಲಿನ ಕುರುಹು ಅದನ್ನು ಕಲ್ಲು ಕುಟಿಗನಿಂದ ಮಾಡಿಸಿದ್ದು ಎಂಬ ಭಾವ ಬಂದರೆ ಲಿಂಗಕ್ಕೆ ಅರ್ಥವಿಲ್ಲ.

ಇದರ ಇನ್ನೂ ಸರಳಾರ್ಥವೆಂದರೆ ಈ ಲಿಂಗವು ತನ್ನದೇ ಸ್ವರೂಪ ಎಂದು ಅರಿಯತಕ್ಕದ್ದು.  ಹಾಗೆಯೇ ಇವುಗಳಿಂದಲೇ ತನ್ನ ಅರಿವನ್ನು ಕಂಡುಕೊಳ್ಳಬೇಕಾದ ಸಾಧಕನು ಅಂಗಭಾವ ನೀಗಿ ಲಿಂಗಭಾವ ಅಳವಡಿಸಿಕೊಳ್ಳಲು ಸಾಗಿದಾತನೇ ಭಕ್ತ. ಆತನ ಪಯಣ ಮಹಾಲಿಂಗದೆಡೆಗೆ.  ಹೀಗಾಗಿ ಆತನಲ್ಲಿರುವುದೆಲ್ಲ (ತನು ಮನ ಭಾವ) ಗುರು ಲಿಂಗ ಜಂಗಮಕ್ಕೆ ಅರ್ಪಿಸಬೇಕು. ಅದೆಲ್ಲ ಪರಶಿವನೆಂಬ ಭಾವವಿರಬೇಕು.  ಹೀಗಿಲ್ಲದಿದ್ದರೆ, ಜಂಗಮಕ್ಕಾಗಲಿ, ಲಿಂಗಕ್ಕಾಗಲಿ, ಭಕ್ತನಿಗಾಗಲಿ ಅರ್ಥವಿಲ್ಲ ಎಂದು ಚನ್ನಬಸವಣ್ಣನವರು ಈ ವಚನದ ಮೂಲಕ ತಿಳಿಹೇಳಿದ್ದಾರೆ” ಎಂದು ತಿಳಿಸಿದರು.

ಪ್ರಾರಂಭದಲ್ಲಿ ಜಯಶ್ರೀ ಬರಗುಂಡಿಯವರು ವಚನ ಪ್ರಾರ್ಥನೆ, ಕೊನೆಯಲ್ಲಿ ವಚನ ಮಹಾಮಂಗಲ ನೇರವೇರಿಸಿಕೊಟ್ಟರು.  ಕಾರ್ಯಕ್ರಮದಲ್ಲಿ ಪಾಂಡಪ್ಪ ಕಳಸಾ, ಡಾ. ಗೀರಿಶ ನೀಲಕಂಠಮಠ,  ಹುಚ್ಚೇಶ ಯಂಡಿಗೇರಿ, ನೇತ್ರಾವತಿ ರಕ್ಕಸಗಿ, ರೇವಣಸಿದ್ಧೇಶ್ವರಮಠ, ರಾಚಣ್ಣ ಕೆರೂರು, ಗೀತಾ ತಿಪ್ಪಾ, ಮಹಲಿಂಗಪ್ಪ ಕರನಂದಿ, ಬಸವರಾಜ ಖಂಡಿ, ದಾಕ್ಷಾಯಣಿ ತೆಗ್ಗಿ, ವಿಶಾಲಕ್ಷಿ ಗಾಳಿ ಇನ್ನಿತರರು, ಮಹಾಮನೆಯ ಕುಟುಂಬದ ಬಂಧುಗಳಲ್ಲದೆ ನೆರೆಹೊರೆಯವರು ಮೊದಲಾದವರು ಸೇರಿದಂತೆ ಬಸವ ಭಾಂಧವರಲ್ಲದೆ ಪಟ್ಟಣದ ಹೊರವಲಯದ ಬಸವ ಕೇಂದ್ರದ ಸದಸ್ಯರು ಪ್ರೊ. ಮಹಾದೇವಯ್ಯ ನೀಲಕಂಠಮಠ, ಮಹೇಂದ್ರಕರ, ಶಿರೂರ ಸರ್, ಪ್ರೊ. ಚಂದ್ರಶೇಖರ ಹೆಗಡೆ, ಡಾ. ಶೈಲಾ ಬೆನಕನಾಳ, ಬಸಯ್ಯ ಭಂಡಾರಿ, ಡಾ. ಸಣ್ಣವೀರಣ್ಣ ದೊಡ್ಡಮನಿ, ಶ್ರೀಮತಿ ಜ್ಯೋತಿ ಶೇಬಿನಕಟ್ಟಿ, ಕವಿತಾ ಬರಗುಂಡಿ, ಶಿವಾನಂದ ಸಿಂದಗಿ, ಕಲಬುರ್ಗಿಯಿಂದ ಮಂಗಳೂರ ಸಿ. ಎಸ್., ಮಹೇಂದ್ರಕರ, ಬೆಂಗಳೂರಿನಿಂದ ಶಿರೂರ ಸರ್ ಮುಂತಾದವರು google meet ಮೂಲಕ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಮಹಾಮನೆ ಜರುಗಲು ಅವಕಾಶ ಮಾಡಿಕೊಟ್ಟ ಮಹಾಮನೆಯ ಕುಟುಂಬದವರಿಗೆ ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರೆಲ್ಲರಿಗೂ ಕಾರ್ಯಕ್ರಮದ ನಿರೂಪಕರು ಸ್ವಾಗತಿಸಿ ಕೊನೆಯಲ್ಲಿ ಶರಣು ಸಮರ್ಪಣೆ ಮಾಡಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FjCpFjdZ7HXLwuA2LCEhga

Share This Article
Leave a comment

Leave a Reply

Your email address will not be published. Required fields are marked *