ಬೆಂಗಳೂರು
ಜಾತಿ ಗಣತಿಯ ಬಗ್ಗೆ ಇರುವ ಗೊಂದಲಗಳ ಮಧ್ಯೆ ಮತ್ತಷ್ಟು ಸಮಸ್ಯೆಗಳು ಕಾಣಿಸುತ್ತಿದೆ.
ಸರ್ವೇ ಮಾಡಲು ಮನೆಗಳಿಗೆ ತೆರಳುವವರು ಪ್ರಶ್ನಾವಳಿ ದೊಡ್ಡದಿರುವುದರಿಂದ, ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಅನ್ನುವ ಕಾರಣ ಕೊಟ್ಟು ಜನರನ್ನು ಕೇಳದೆ ಅವರಷ್ಟಕ್ಕೆ ಅವರೇ ಕೆಲವೊಂದು ವಿವರಗಳನ್ನು ತುಂಬಿಕೊಳ್ಳುತ್ತಿದ್ದಾರೆ.
ಇಂಟರ್ನೆಟ್ಟಿಗೆ ಸಂಬಂಧಿಸಿದ ಸಮಸ್ಯೆಗಳಿಂದ ಆಗುತ್ತಿರುವ ವಿಳಂಬದಿಂದಲೂ ಸಮಯ ಉಳಿಸಲು ಸರ್ವೇ ಚುಟುಕಾಗುತ್ತಿದೆ. ಧರ್ಮ ಜಾತಿಗಳ ಬಗ್ಗೆ ಅವರಲ್ಲಿರುವ ಪಕ್ಷಪಾತಿ ನಿಲುವೂ ಪರಿಣಾಮ ಬೀರುತ್ತಿದೆ.
ಇವೆಲ್ಲಾ ಕಾರಣಗಳಿಂದ ಅನೇಕ ಕಡೆ ಗಣತಿ ಮಾಡುತ್ತಿರುವವರು ತಾವಾಗಿಯೇ ಲಿಂಗಾಯತ ಕುಟುಂಬಗಳು ‘ಹಿಂದೂ’ ಎಂದು ಊಹೆ ಮಾಡಿಕೊಂಡು ಧರ್ಮದ ಕಾಲಮ್ಮಿನಲ್ಲಿ ಅದೇ ರೀತಿ ಮನೆಯವರನ್ನು ಕೇಳದೆ ಬರೆದುಕೊಳ್ಳುತ್ತಿದ್ದಾರೆ ಎನ್ನುವ ಮಾಹಿತಿ ದೊರಕುತ್ತಿವೆ.
ಇದಕ್ಕೆ ಸಂಬಂಧಿಸಿದಂತೆ ಎರಡು ಉದಾಹರಣೆಗಳನ್ನು ಕೊಡಲು ಇಚ್ಚಿಸುತ್ತೇನೆ. ಶಿವಮೊಗ್ಗ ನಗರದಲ್ಲಿ ನನ್ನ ಸ್ನೇಹಿತರ ಮನೆಗೆ ಸರ್ವೆಗೆ ಬಂದವರು ಎಲ್ಲಾ ವಿವರಗಳನ್ನು ಕೇಳಿ ದಾಖಲಿಸಿಕೊಳ್ಳುತ್ತಿರುವಾಗ ಅವರಾಗಿಯೇ ಧರ್ಮದ ಕಾಲಮ್ಮಿನಲ್ಲಿ “ಹಿಂದೂ” ಎಂದು ಬರೆದುಕೊಂಡಿದ್ದರು.
ಇವರು ಆಕ್ಷೇಪಿಸಿದಾಗ ಏಕೆ ಸಾರ್, ನೀವು ಹಿಂದೂಗಳಲ್ಲವೇ ಎಂದು ಕೇಳಿದ್ದಾರೆ, ಅದಕ್ಕೆ ನನ್ನ ಸ್ನೇಹಿತರು ನಾವು ಹಿಂದೂಗಳಲ್ಲ, ಬದಲಾಗಿ ಕ್ರಮಸಂಖ್ಯೆ 11 ರ ಇತರೆ ಕಾಲಮ್ಮಿನಲ್ಲಿ “ಲಿಂಗಾಯತ” ಎಂದು ದಾಖಲಿಸುವಂತೆ ಒತ್ತಾಯ ಮಾಡಿ, ಲಿಂಗಾಯತ ಮತ್ತು ಜಾತಿ ಕಾಲಮ್ಮಿನಲ್ಲಿ “ಸಾದ ಲಿಂಗಾಯತ” ಎಂದೂ ದಾಖಲಿಸಿ ಅದನ್ನು ದೃಢೀಕರಿಸಿಕೊಂಡಿದ್ದಾರೆ.
ಗಣತಿಯ ಬಗ್ಗೆ ಅರಿವು ಮತ್ತು ದಾಖಲಿಸಿಕೊಂಡಿರುವುದನ್ನು ಪರೀಕ್ಷಿಸಲು ಗೊತ್ತಿದ್ದ ಕಾರಣಕ್ಕೆ ಅವರು ಬರೆಯಿಸಿದ್ದ “ಹಿಂದು” ಎಂಬುದನ್ನು “ಲಿಂಗಾಯತ”ಕ್ಕೆ ಬದಲಾಯಿಸಿದ್ದಾರೆ.
ಆದರೆ, ಕಡೂರು ತಾಲೂಕಿನ ಗ್ರಾಮವೊಂದರಲ್ಲಿ ನನ್ನ ಸೋದರ ಸಂಬಂಧಿ ಅವರ ಮನೆಯ ಸಮೀಕ್ಷೆಗೆ ಬಂದವರು ನೇರವಾಗಿ, ಧರ್ಮದ ಕಾಲಮ್ಮಿನಲ್ಲಿ ಅವರೇ “ಹಿಂದೂ” ಎಂದು ದಾಖಲಿಸಿಕೊಂಡು, ಜಾತಿಯ ಕಾಲಮ್ಮಿನಲ್ಲಿ “ವೀರಶೈವ – ಲಿಂಗಾಯತ” ಎಂದು ದಾಖಲಿಸಿಕೊಂಡಿದ್ದಾರೆ. ಇವರು ಲಿಂಗಾಯತ ಎಂದು ಹೇಳುವಾಗ ಇಲ್ಲಾ ಇಲ್ಲಿಯತನಕ 30 ಮನೆ ಸಮೀಕ್ಷೆ ಮಾಡಿದ್ದೇವೆ ಎಲ್ಲರೂ ವೀರಶೈವ – ಲಿಂಗಾಯತ” ಎಂದೇ ಬರೆಯಿಸಿದ್ದಾರೆ ಎಂದು ಹೇಳಿದ್ದಾರೆ.
ಒತ್ತಾಯ ಮಾಡಿ ಇಲ್ಲಾ ನಮಗೆ ಬರಿ “ಲಿಂಗಾಯತ” ಎಂದು ದಾಖಲಿಸಿಕೊಳ್ಳಿ ಎಂದು ಒತ್ತಾಯ ಮಾಡಿದಾಗ ನಮಗೆ ಹುಡುಕುವುದು ತಡವಾಗುತ್ತದೆ, ಸರ್ವರ್ ನಿಧಾನವಾಗಿದೆ, ಒಬ್ಬೊಬ್ಬರು ಒಂದೊಂದು ಹೇಳಿದರೆ ನಮಗೆ ಕಷ್ಟವಾಗುತ್ತೆ ಎಂದೆಲ್ಲಾ ಹೇಳಿದ್ದಾರೆ. ಕೊನೆಗೆ ಇವರ ಒತ್ತಾಯಕ್ಕೆ ಮಣಿದು ಜಾತಿಯ ಕಾಲಮ್ಮಿನಲ್ಲಿ “ಸಾದ ಲಿಂಗಾಯತ” ಮತ್ತು ಉಪ ಪಂಗಡದಲ್ಲಿ “ಸಾದರು” ಎಂದು ದಾಖಲಿಸಿದ್ದಾರೆ.
ನೀವು ಧರ್ಮವನ್ನು ಇತರೆ ಕಾಲಮ್ಮಿನಲ್ಲಿ “ಲಿಂಗಾಯತ” ಎಂದು ಬರೆಸಬೇಕಿತ್ತು ಎಂದು ನಾನು ಕೇಳಿದಾಗ ಅವರು ನಮಗೆ ಏನೂ ಸರಿಯಾಗಿ ಗೊತ್ತಿಲ್ಲ. ನಮ್ಮ ಸ್ವಾಮಿಯವರು (ಸಿರಿಗೆರೆ) ಏನೋ
ಎಲ್ಲರೂ “ಹಿಂದು”, “ಲಿಂಗಾಯತ” ಮತ್ತು “ಸಾದ ಲಿಂಗಾಯತ” ಎಂದು ಬರೆಯಿಸಲು ಹೇಳಿದ್ದಾರಂತೆ. ಜನರಲ್ಲಿ ಗೊಂದಲವಿದೆ, ಗಣತಿಗೆ ಬಂದವರೇ ಏನು ಬರೆಯಿಸಬೇಕೆಂದು ಸೂಚಿಸುತ್ತಿದ್ದಾರೆ ಎಂದು ತಿಳಿಸಿದರು.
ಲಿಂಗಾಯತ ಧರ್ಮೀಯರು ಈ ಕೆಳಗಿನಂತೆ ಬರೆಯಬೇಕು:
ಕ್ರಮ ಸಂಖ್ಯೆ 11.
ಇತರೆ : ಲಿಂಗಾಯತ
ಕ್ರಮ ಸಂಖ್ಯೆ 8.
ಜಾತಿ: ಲಿಂಗಾಯತ ಅಥವಾ ಜೊತೆಗೆ ಉಪ ಪಂಗಡ ಸೇರಿಸಬಹುದು
ಕ್ರಮ ಸಂಖ್ಯೆ 9.
ಉಪ ಪಂಗಡ: ಬರೀ ಉಪ ಪಂಗಡ ಬರೆಯಿಸಬೇಕು
ಧರ್ಮ ಮತ್ತು ಜಾತಿ ಕಾಲಮ್ಮಿನಲ್ಲಿ ನೀವು ಹೇಳುವುದನ್ನು ಸರಿಯಾಗಿ ಬರೆದಿದ್ದಾರೆಯೇ ಅನ್ನುವುದನ್ನು ಖಾತ್ರಿ ಪಡಿಸಿಕೊಳ್ಳುವುದನ್ನು ಮರೆಯದೆ ಜಾಗೃತಿ ವಹಿಸಬೇಕು.