ರಾಯಚೂರು
ನಗರದ ಬಸವ ಕೇಂದ್ರದಲ್ಲಿ ಹುತಾತ್ಮ ಡಾ. ಎಂ.ಎಂ. ಕಲ್ಬುರ್ಗಿಯವರ ಪುಣ್ಯಸ್ಮರಣೆ ಕಾರ್ಯಕ್ರಮ ನಡೆಯಿತು.
ಉಪನ್ಯಾಸಕರಾಗಿ ಆಗಮಿಸಿದ್ದ ಜಯಶ್ರೀ ಮಹಾಜನಶೆಟ್ಟಿ ಅವರು ಮಾತನಾಡುತ್ತ, “ಡಾ. ಎಂ.ಎಂ. ಕಲಬುರ್ಗಿಯವರು ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾಗಿ, ಹಂಪಿ ವಿಶ್ವವಿದ್ಯಾಲಯದ ಕುಲಪತಿಗಳಾಗಿ ಸೇವೆ ಸಲ್ಲಿಸಿದ್ದಾರೆ. ಕನ್ನಡ ನಾಡಿನ ಮೇರು ಸಂಶೋಧಕ, ಕನ್ನಡ ನಾಡಿನ ನೆಲ, ಜಲ, ಭಾಷೆಗಾಗಿ ತಮ್ಮ ಬದುಕನ್ನೇ ಮುಡುಪಾಗಿಟ್ಟಿದ್ದರು. ವಚನ ಸಾಹಿತ್ಯ ಸಂಶೋಧನೆ, ಶಾಸನಗಳ ಸಂಶೋಧನೆ, ಹಸ್ತಪ್ರತಿ ಶಾಸ್ತ್ರ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಕಲ್ಬುರ್ಗಿಯವರ ಕೊಡುಗೆ ಗಣನೀಯ. ಇಂತಹ ಮಹಾನ್ ಚಿಂತಕ, ವಿದ್ವಾಂಸರು ಹುತಾತ್ಮರಾಗಿ ಒಂದು ದಶಕವೇ ಗತಿಸಿ ಹೋಯಿತೆಂದರು”.

ರಾಯಚೂರು ಅ.ಭಾ. ವೀ. ಲಿಂ. ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರ ಪಾಟೀಲ ಮಿರ್ಜಾಪುರ ಅವರನ್ನು ಸತ್ಕರಿಸಲಾಯಿತು.
ಪಿ. ರುದ್ರಪ್ಪ, ಜಿಲ್ಲಾಧ್ಯಕ್ಷರು, ಜಾ. ಲಿಂ. ಮ. ಸಭೆ ಇವರು ಮಾತನಾಡಿ, “ಬಸವಾದಿ ಶರಣರ ತತ್ವಗಳು ಸಮಸಮಾಜದ ನೆಲಗಟ್ಟಿನ ಮೇಲೆ ನಿಂತಿವೆ. ಬಸವಾದಿ ಶರಣರ ಆದರ್ಶಗಳನ್ನು ಸಮಾಜಕ್ಕೆ ತಲುಪಿಸುವ ಉದ್ದೇಶದಿಂದ ಹಾಗೂ ಮುಂಬರುವ ಜನಗಣತಿಯಲ್ಲಿ ಧರ್ಮ ಕಾಲಂನಲ್ಲಿ ‘ಲಿಂಗಾಯತ’ ಉಪಜಾತಿಕಾಲದಲ್ಲಿ ಈಗಿರುವ ತಮ್ಮ ಜಾತಿ ಹೆಸರನ್ನು ಬರೆಸಲು ಕರೆ ಕೊಟ್ಟರು. ಇದರಿಂದ ನಮ್ಮ ಸಮಾಜದ ಒಕ್ಕಟ್ಟನ್ನು ಘನ ಸರ್ಕಾರಕ್ಕೆ ತೋರಿಸಿದಂತಾಗುತ್ತದೆ, ಹಾಗೂ ಸರಕಾರದಿಂದ ಲಭಿಸುವ ಸೌಲತ್ತುಗಳನ್ನು ಪಡೆದುಕೊಳ್ಳಲು ಸಾಧ್ಯ” ಎಂದರು.
ಕೆ. ಶಾಂತಪ್ಪ, ಅಧ್ಯಕ್ಷರು, ಗಂಗಾಮತ ಸಮಾಜ ಮಾತನಾಡಿ, ಸಾಂಸ್ಕೃತಿಕ ನಾಯಕ ಬಸವಣ್ಣನವರು ಎಲ್ಲ ಸಮಾಜದವರನ್ನು ಅಪ್ಪಿಕೊಂಡು ಬೆಳೆಸಿದರು. ಇಂದು ನಾವು ಸಮಸಮಾಜದ ನಿರ್ಮಾಣಕ್ಕಾಗಿ ಶ್ರಮಿಸುವುದು ಅವಶ್ಯ ಎಂದರು.

ಜಂಬಣ್ಣ ಎಗಸಲಾಪುರ, ಅಧ್ಯಕ್ಷರು, ಮಡಿವಾಳ ಸಮಾಜ, ಹಣಮಂತಪ್ಪ ಯಾದವ, ಅಧ್ಯಕ್ಷರು, ಯಾದವ ಸಮಾಜ ಹಾಗೂ ಧನಂಜಯ, ಅಧ್ಯಕ್ಷರು , ಹಡಪದ ಅಪ್ಪಣ್ಣ ಸಮಾಜ ಇವರುಗಳು ಮಾತನಾಡುತ್ತ, ಬಿದ್ದವರನ್ನು ಎತ್ತಿಕೊಂಡು ಸಮಾಜದ ಮುಖ್ಯ ವಾಹಿನಿಗೆ ತಂದು ಸ್ವತಂತ್ರವಾಗಿ ಬದುಕಲು ಅವಕಾಶ ಮಾಡಿಕೊಟ್ಟವರು ಬಸವಣ್ಣನವರು. ಇಂತಹ ಮಹಾನ್ ಪುರುಷನ ಹೆಸರಲ್ಲಿ ನಡೆಯುವ ‘ ಬಸವ ಸಂಸ್ಕೃತಿ ಅಭಿಯಾನಕ್ಕೆ ‘ ತನು, ಮನ, ಧನದಿಂದ ಸಹಾಯ -ಸಹಕಾರ ನೀಡುವುದಾಗಿ ತಿಳಿಸಿದರು.
ಬಸವ ಕೇಂದ್ರದ ಗೌರವಾಧ್ಯಕ್ಷರಾದ ಹರವಿ ನಾಗನಗೌಡರು ಮಾತನಾಡಿ, ಬಸವಾದಿ ಶರಣರು ಸಮಾಜಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸುತ್ತಾ ಶರಣರ ಆಶಯದಂತೆ ಬಸವ ಸಂಸ್ಕೃತಿ ಅಭಿಯಾನ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಒಂದು ತಿಂಗಳವರೆಗೆ ಸಂಚರಿಸಿ, ಬರುವ ಅಕ್ಟೋಬರ್ 5 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೃಹತ್ ಸಮಾರೋಪ ಸಮಾವೇಶ ನಡೆಯುವುದು. ಬಸವ ಸಂಸ್ಕೃತಿ ಅಭಿಯಾನ ಬಸವ ರಥ ಸೆಪ್ಟಂಬರ್ 5 ರಂದು ನಗರದ ಗಂಜ್ ಕಲ್ಯಾಣ ಮಂಟಪಕ್ಕೆ ಬರಲಿದ್ದು, ಅಲ್ಲಿ ಕಾರ್ಯಕ್ರಮ ನಡೆಯಲಿವೆ. ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಕರೆ ಕೊಟ್ಟರು.

ಚಿಕ್ಕಸುಗೂರು ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ಸಾನಿಧ್ಯ ವಹಿಸಿ ಮಾತನಾಡಿ, “ಬಸವ ಸಂಸ್ಕೃತಿ ಅಭಿಯಾನಕ್ಕೆ ನಮ್ಮ ಮಠದಿಂದ ಸಂಪೂರ್ಣ ಸಹಕಾರ ನೀಡುತ್ತೇವೆ. ಬಸವಧರ್ಮದ ಎಲ್ಲ ಕಾರ್ಯಕ್ಕೆ ನಿಮ್ಮೊಂದಿಗೆ ನಾವು ಇರುತ್ತೇವೆ” ಎಂದರು.
ರಾಚನಗೌಡ ಕೋಳೂರ, ಅಧ್ಯಕ್ಷರು ಬಸವ ಕೇಂದ್ರ ಇವರು ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಲ್ಲಿಸಿದ ಸೇವೆಯನ್ನು ಗುರುತಿಸಿ ವಿಜಯವಾಣಿ ದಿನಪತ್ರಿಕೆಯ ಪ್ರತಿಷ್ಠಿತ ‘ ವಿಜಯರತ್ನ ಇಂಟರ್ನ್ಯಾಷನಲ್ 2025 ‘ರ ಪ್ರಶಸ್ತಿಯನ್ನು ಮಲೇಶಿಯಾದಲ್ಲಿ ನಡೆದ ಸಮಾರಂಭದಲ್ಲಿ ನೀಡಿ ಗೌರವಿಸಿದ್ದಕ್ಕಾಗಿ, ಬಸವ ಕೇಂದ್ರದಲ್ಲಿರುವ ಎಲ್ಲ ಸಂಘಟನೆಗಳ ಪರವಾಗಿ ಗೌರವ ಸನ್ಮಾನ ನೀಡಲಾಯಿತು. ಸನ್ಮಾನ ಪತ್ರವನ್ನು ರೇಖಾ ಪಾಟೀಲರು ಓದಿದರು. ಕಾರ್ಯಕ್ರಮದಲ್ಲಿ ಡಾ. ವ್ಹಿ. ಎ. ಮಾಲಿಪಾಟೀಲ, ವಿಜಯಕುಮಾರ ಸಜ್ಜನ, ಚನ್ನಬಸವ ಇಂಜಿನಿಯರ್, ಎಸ್. ಎಲ್. ಕೇಶವರೆಡ್ಡಿ, ಚುಕ್ಕಿ ಸೂಗಪ್ಪ ಸಾಹುಕಾರ್, ಉದಯಕುಮಾರ, ಸಾಹುಕಾರ, ಶಿವನಗೌಡ ಮಾಲಿಪಾಟೀಲ, ಜೆ. ಬಸವರಾಜ್ ವಕೀಲರು, ಸಿ.ಬಿ. ಪಾಟೀಲ್ ವಕೀಲರು, ಅಮರೇಶ್, ಶರಣಬಸವ ಜಾಡಲದಿನ್ನಿ, ಮಲ್ಲಿಕಾರ್ಜುನ ಗುಡುಮನಿ, ಡಾ. ಶಿವಲೀಲಾ ಹವಾಲ್ದಾರ್, ನಾಗರಾಜ್ ಪಾಟೀಲ, ವೆಂಕಣ್ಣ ಆಶಾಪುರ ಮುಂತಾದವರು ಉಪಸ್ಥಿತರಿದ್ದರು.

ವಚನಗಾಯನವನ್ನು ರಾಘವೇಂದ್ರ ಆಶಾಪುರ, ನಾಗೇಶ್ವರಪ್ಪ ಸಂಗಡಿಗರು ನಡೆಸಿಕೊಟ್ಟರು. ಬಸವರಾಜ ಕುರುಗೋಡ ಸ್ವಾಗತಿಸಿದರು, ಚನ್ನಬಸವಣ್ಣ ಮಹಾಜನಶೆಟ್ಟಿ ನಿರೂಪಿಸಿದರು, ನರಸಪ್ಪ ಪತೇಪುರ ವಂದಿಸಿದರು.