ಜಿಲ್ಲಾಡಳಿತ ಜಾತ್ಯಾತೀತವಾಗಿ ಬಸವ ಜಯಂತಿ ಆಚರಿಸಲಿ: ಮಂಡ್ಯ ಲಿಂಗಾಯತ ಮಹಾಸಭಾ

ಬಸವ ಮೀಡಿಯಾ
ಬಸವ ಮೀಡಿಯಾ

ಬಸವಣ್ಣನವರ ಭಾವಚಿತ್ರ ಅಳವಡಿಕೆ ಆದೇಶ ಉಲ್ಲಂಘನೆ

ಮಂಡ್ಯ

ಹನ್ನೆರಡನೇ ಶತಮಾನದಲ್ಲಿ ಸಮಸಮಾಜ ನಿರ್ಮಾಣದ ಸಾಮಾಜಿಕ ಕ್ರಾಂತಿಯನ್ನು ನಡೆಸಿದ ವಿಶ್ವಗುರು ಬಸವಣ್ಣನವರ ಜಯಂತಿಯನ್ನು ಒಂದು ಜಾತಿಗೆ ಸೀಮಿತವಾಗಿರಿಸದೆ ಜಾತ್ಯಾತೀತವಾಗಿ ಆಚರಣೆ ಮಾಡಬೇಕೆಂದು ಲಿಂಗಾಯತ ಮಹಾಸಭಾ ಅಧ್ಯಕ್ಷ ಎಂ.ಎಸ್. ಮಂಜುನಾಥ ಬೆಟ್ಟಹಳ್ಳಿ ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.

ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿರುವ ಅವರು, ಜಗಜ್ಯೋತಿ ಬಸವಣ್ಣನವರು 900 ವರ್ಷಗಳ ಹಿಂದೆ ಜಾತಿವ್ಯವಸ್ಥೆ ಹಾಗೂ ಮೌಢ್ಯಾಚರಣೆಯ ವಿರುದ್ಧ ಸಾಮಾಜಿಕ ಕ್ರಾಂತಿಯನ್ನು ನಡೆಸಿದ ಮಹಾಮಾನವತಾವಾದಿ. ಸರ್ಕಾರ ಬಸವಪ್ರಜ್ಞೆಯನ್ನು ನಾಡಿನಾದ್ಯಂತ ಹರಡಬೇಕೆಂದು ಅನುಭವ ಮಂಪಟ ರಥಯಾತ್ರೆಯನ್ನು ನಡೆಸುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದ್ದಾರೆ.

ಜಾತಿ, ವರ್ಣ, ವರ್ಗರಹಿತವಾಗಿ ಪ್ರತಿಯೊಬ್ಬರೂ ಬಸವಣ್ಣನವರ ಆದರ್ಶಗಳನ್ನು ಪಾಲಿಸಬೇಕೆಂದು ಸರ್ಕಾರವೇ ವಿಶೇಷವಾಗಿ ಈ ಬಾರಿಯ ಬಸವಜಯಂತಿಯನ್ನು ಆರ್ಥಪೂರ್ಣವಾಗಿ ಆಚರಿಸಲು ಮುಂದಾಗಿದೆ. ಆದರೆ, ಜಿಲ್ಲಾಡಳಿತ ಬಸವಣ್ಣನವರನ್ನು ಕೇವಲ ಒಂದು ಜಾತಿಗೆ ಸಮೀಕರಿಸಿ ಆಹ್ವಾನ ಪತ್ರಿಕೆಯನ್ನು ಮುದ್ರಣ ಮಾಡಿಸಿರುವುದು ಖಂಡನೀಯ.

ಜಿಲ್ಲಾಧಿಕಾರಿಗಳು ಜಾತ್ಯಾತೀತವಾಗಿ ಬಸವಣ್ಣನವರ ಅನುಯಾಯಿಗಳು ಹಾಗೂ ಎಲ್ಲಾ ಸಮುದಾಯದ ಸಂಘಟನೆಗಳ ಮುಖಂಡರ ಸಭೆಯನ್ನು ಕರೆದು ಆಹ್ವಾನ ಪತ್ರಿಕೆಯಲ್ಲಿ ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಸಂಘಟನೆಗಳ ಹೆಸರನ್ನು ಹಾಕಿಸಬೇಕೆಂದು ಅವರು ತಿಳಿಸಿದ್ದಾರೆ.

ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯನವರು ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಭಾವಚಿತ್ರವನ್ನು ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ಹಾಕಬೇಕೆಂದು ಆದೇಶ ನೀಡಿದ್ದರೂ ಪೊಲೀಸ್, ಆರೋಗ್ಯ, ಶಿಕ್ಷಣ, ಪಂಚಾಯಿತಿ ಸೇರಿದಂತೆ ಮಂಡ್ಯ ಜಿಲ್ಲೆಯ ಬಹುತೇಕ ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರಗಳು ಇರುವುದಿಲ್ಲ. ಆದೇಶ ಹೊರಬಂದು ಎರಡು ವರ್ಷಗಳು ಕಳೆದರೂ ಯಾವುದೇ ಕ್ರಮ ಕೈಗೊಳ್ಳದಿರುವುದು ವಿಷಾದನೀಯ.

ಮಂಡ್ಯ ಜಿಲ್ಲಾ ಪಂಚಾಯಿತಿ ಕಾವೇರಿ ಸಭಾಂಗಣ, ನಗರಸಭೆ, ಪುರಸಭೆಯ ಸಭಾಂಗಣಗಳಲ್ಲಿ ಬಸವಣ್ಣನವರ ಭಾವಚಿತ್ರವನ್ನು ಅಳವಡಿಸುವಂತೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅವರು ತಿಳಿಸಿದ್ದಾರೆ.

ಈ ಬಾರಿಯ ಬಸವ ಜಯಂತಿಯನ್ನು ಕಡ್ಡಾಯವಾಗಿ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಭಾವಚಿತ್ರವನ್ನಿಟ್ಟು ಆಚರಣೆ ಮಾಡುವ ಬಗ್ಗೆ, ಎಲ್ಲಾ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಗಳಿಗೆ ತಾವು ಸೂಕ್ತ ಆದೇಶ ನೀಡಬೇಕೆಂದು ಒತ್ತಾಯಿಸಿದ್ದಾರೆ.

ಜಗಜ್ಯೋತಿ ಬಸವಣ್ಣನವರ ಪುತ್ಥಳಿಯನ್ನು ಮಂಡ್ಯ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಸ್ಥಾಪಿಸಬೇಕೆಂಬ ಬಹುದಿನಗಳ ಬೇಡಿಕೆ ಇದುವರೆಗೂ ಬೇಡಿಕೆಯಾಗಿಯೇ ಉಳಿದಿದೆ. ಈ ಬಗ್ಗೆ ಉನ್ನತಮಟ್ಟದ ಸಭೆ ನಡೆಸಿ ಅನುಮತಿ ಪಡೆದು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.

ಮೆಣಸಗೆರೆ ಶಿವಲಿಂಗಪ್ಪ, ಮಾಗನೂರು ಯೋಗೇಂದ್ರ ಸುಂಡಳ್ಳಿ ಸೋಮಶೇಖರ, ಶಿವರುದ್ರಸ್ವಾಮಿ ಲೋಕಸಭಾ ಪುಟ್ಟ ಬಸಪ್ಪ ಬಳೆಅತ್ತಿಗುಪ್ಪೆ ಪ್ರಸನ್ನ ಕುಮಾರ್ ಮತ್ತಿತರರು ಮನವಿಪತ್ರ ಸಲ್ಲಿಸುವ ಸಂದರ್ಭದಲ್ಲಿ ಇದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/CMDnqQbFJjwCptS1HUXnEd

Share This Article
Leave a comment

Leave a Reply

Your email address will not be published. Required fields are marked *