ವಚನ ಗಾಯನ ಪರಂಪರೆಯ ಸಮಗ್ರ ಇತಿಹಾಸವೇ ಡಾ ಕಲಬುರ್ಗಿಯವರ ನಾಲಿಗೆ ತುದಿಯಲ್ಲಿತ್ತು
ಕಲಬುರ್ಗಿ
ಡಾ. ಎಂ.ಎಂ. ಕಲಬುರ್ಗಿ ಸರ್ ಗೆ ವಚನಗಳೇ ಪ್ರಾಣ. ಸಂಶೋಧನೆಯೇ ಜೀವಾಳ ಕನ್ನಡದ ಹಿರಿಯ ಸಂಶೋಧಕ ಡಾ. ಎಂ.ಎಂ ಕಲಬುರ್ಗಿಯವರ ಕಗ್ಗೊಲೆ ಕನ್ನಡ ಸಾರಸ್ವತ ಲೋಕವನ್ನು ಬೆಚ್ಚಿಬೀಳಿಸಿತು. ‘ಎನಗಿಂತ ಕಿರಿಯರಿಲ್ಲ ಶಿವಭಕ್ತರಿಗಿಂತ ಹಿರಿಯರಿಲ್ಲ’ ಎಂಬ ವಚನದ ಸಾಲನ್ನು ಅಕ್ಷರಶಃ ಬದುಕುತ್ತಿದ್ದ ಅವರು ಹಿರಿ-ಕಿರಿಯರೆನ್ನದೆ ಅವರ ಬಳಿ ಹೋದವರಿಗೆಲ್ಲ ಮಾರ್ಗದರ್ಶನ ಮಾಡುತ್ತಿದ್ದರು.
ಮೂಲತಃ ಗ್ರಂಥ ಸಂಪಾದನಶಾಸ್ತ್ರಕಾರರಾಗಿದ್ದ ಅವರಿಗೆ ವಚನ ಸಾಹಿತ್ಯದ ಬಗ್ಗೆ ಅಪಾರ ಪ್ರೀತಿ ಗೌರವ ಇತ್ತು. ವಚನ ಸಾಹಿತ್ಯದ ಬಗ್ಗೆ ಯಾರೇ, ಯಾರದೇ ಮಾರ್ಗದರ್ಶನದಲ್ಲಿ ಅಧ್ಯಯನ ಮಾಡುತ್ತಿದ್ದರೂ ಕಲಬುರ್ಗಿ ಸರ್ ಅವರೇ ಅನಧಿಕೃತ ‘ಗೈಡ್’ ಆಗಿ ಸಮರ್ಪಕ ಮಾರ್ಗದರ್ಶನ ಮಾಡುತ್ತಿದ್ದರು.
ಮೂಲತಃ ಹಿಂದೂಸ್ಥಾನಿ ಗಾಯಕಿಯಾದ ನಾನು “ವಚನ ಗಾಯನ ಪರಂಪರೆ : ಒಂದು ಸಂಗೀತಾತ್ಮಕ ಅಧ್ಯಯನ” ಎಂಬ ವಿಷಯದ ಮೇಲೆ ಪಿಎಚ್.ಡಿ.ಗೆ ಕರ್ನಾಟಕ ವಿ.ವಿ.ಯಲ್ಲಿ ನೋಂದಣಿ ಮಾಡಿಸಿದಾಗ ಅತ್ಯಂತ ಸಂಭ್ರಮಪಟ್ಟವರು ಕಲಬುರ್ಗಿಯವರೇ. ಹಾಗೆ ನೋಡಿದರೆ, ನನಗೆ ಆ ವಿಷಯವನ್ನು ಸೂಚಿಸಿದವರು ಹಿರಿಯ ಸಂಗೀತ ವಿಮರ್ಶಕ ಸದಾನಂದ ಕನವಳ್ಳಿಯವರು. ಬಿಡುವಿಲ್ಲದ ದಿನಚರಿಯಲ್ಲೂ ಕಲಬುರ್ಗಿಯವರು ಆರೇಳು ಪಿಎಚ್.ಡಿ. ಮಹಾಪ್ರಬಂಧಗಳಿಗಾಗುವಷ್ಟು ಸಾಮಗ್ರಿಯನ್ನು ನನಗೆ ಒದಗಿಸಿದ್ದರು. “ಸಂಶೋಧನೆಯೆಂದರೆ; ಕಾಟಾಚಾರದ ಬರವಣಿಗೆಯಾಗಬಾರದು, ಆಯ್ದುಕೊಂಡ ವಸ್ತು ವಿಷಯದ ಎಲ್ಲ ಮಗ್ಗಲುಗಳನ್ನು ತಲಸ್ಪರ್ಶಿಯಾಗಿ ವಿಶ್ಲೇಷಿಸಬೇಕು” ಎಂದು ಹೇಳುತ್ತಿದ್ದರು.
ವಚನ ಗಾಯನ ಪರಂಪರೆಯ ಸಮಗ್ರ ಇತಿಹಾಸವೇ ಅವರ ನಾಲಿಗೆ ತುದಿಯಲ್ಲಿತ್ತು. ನಾವು ಗಾಯಕರು ಕೇಳಿಸಿಕೊಳ್ಳಲಾಗದಷ್ಟು ‘ವಚನ ಗಾಯನ’ವನ್ನು ಅವರು ಆಲಿಸಿದ್ದರು. ಹಿಂದೂಸ್ಥಾನಿ ಶಾಸ್ತ್ರೀಯ ಗಾಯನದ ಬಗ್ಗೆ ಕಲಬುರ್ಗಿಯವರಿಗೆ ಹೆಚ್ಚಿನ ಒಲವಿರಲಿಲ್ಲವಾದರೂ ವಚನಗಳನ್ನು ಹಿಂದೂಸ್ಥಾನಿ ಗಾಯನದ ಮೂಲಕ ಜನಸಾಮಾನ್ಯರಿಗೆ ತಲುಪಿಸಬೇಕೆಂಬ ಹಂಬಲ ಇಟ್ಟುಕೊಂಡಿದ್ದರು. ನಾನು ಲಹರಿ ಕಂಪನಿಯಿಂದ ‘ದಾಸವಾಣಿ’ ಧ್ವನಿಮುದ್ರಿಕೆ ಹೊರತರುವ ಸಂದರ್ಭದಲ್ಲಿ ಅವರು ದಾಸರ ಅತ್ಯುತ್ತಮ ಕೀರ್ತನೆಗಳನ್ನು ಆಯ್ಕೆ ಮಾಡಿಕೊಟ್ಟಿದ್ದರು.
ಡಾ. ಕಲಬುರ್ಗಿಯವರಿಗೆ ಕರ್ನಾಟಕದ ಭಕ್ತಿ ಚಳವಳಿಗಳ ಬಗ್ಗೆ, ವಿಶೇಷ ಗೌರವ ಇತ್ತು. ಹನ್ನೆರಡನೆಯ ಶತಮಾನದ ವಚನ ಚಳವಳಿ, ನಂತರ ಬಂದ ಹರಿಹರ-ರಾಘವಾಂಕರ ಸಾಹಿತ್ಯ ಅಷ್ಟೆಯಲ್ಲ, ದಾಸ ಸಾಹಿತ್ಯದ ಬಗ್ಗೆಯೂ ಗೌರವ ಹೊಂದಿದ್ದರು. ಹಾಗಾಗಿಯೇ ವಚನಗಳ ಮತ್ತು ದಾಸರ ಕೀರ್ತನೆಗಳ ದಾಖಲೀಕರಣ ಮಾಡಲು ವಿಶೇಷವಾಗಿ ಶ್ರಮಿಸಿದರು. ಅದಕ್ಕಾಗಿ ಅವರು ಇಂದಿರಾಗಾಂಧಿ ರಾಷ್ಟ್ರೀಯ ಕಲಾಕೇಂದ್ರದ ಮುಖ್ಯಸ್ಥ ಷ. ಶೆಟ್ಟರ ಅವರ ಮನವೊಲಿಸಿ ಹಿಂದೂಸ್ಥಾನಿ ಶಾಸ್ತ್ರೀಯ ಗಾಯನ ಶೈಲಿಯಲ್ಲಿ ಗಾಯಕರಿಂದ ವಚನಗಳು ಮತ್ತು ಕೀರ್ತನೆಗಳನ್ನು ಹಾಡಿಸಿ ದಾಖಲೀಕರಣ ಮಾಡಿಸಿದರು.
ಕರ್ನಾಟಕ ಸರಕಾರ ವಚನಗಳನ್ನು ಸುಗಮ ಸಂಗೀತ ಶೈಲಿಯಲ್ಲಿ ಹಾಡಿಸಿ ದಾಖಲೀಕರಣ ಮಾಡಿದ್ದು ಅವರಿಗೆ ಇಷ್ಟವಾಗಿರಲಿಲ್ಲ. ಆದರೆ ಕವಿಗಳು ಬರೆದ ಭಾವಗೀತೆಗಳನ್ನು ಸುಗಮ ಸಂಗೀತ ಶೈಲಿಯಲ್ಲಿ ಹಾಡಿರುವುದನ್ನು ತುಂಬಾ ಮೆಚ್ಚಿಕೊಂಡಿದ್ದರು.

ಮತ್ತಷ್ಟು ಕವಿಗಳ ಭಾವಗೀತೆಗಳನ್ನು ಸುಗಮ ಸಂಗೀತ ಶೈಲಿಯಲ್ಲಿ ಸಂಯೋಜಿಸಿ ಹಾಡಬೇಕೆಂದು ಪ್ರೇರೇಪಿಸುತ್ತಿದ್ದರು. ಡಾ. ದ.ರಾ. ಬೇಂದ್ರೆ ರಾಷ್ಟ್ರೀಯ ಟ್ರಸ್ಟ್ನ ಅಧ್ಯಕ್ಷರಾಗಿದ್ದಾಗ ಕರ್ನಾಟಕ ಸುಗಮ ಸಂಗೀತ ಪರಿಷತ್ತು, ಬೆಂಗಳೂರು ಅವರ ಸಹಯೋಗದಲ್ಲಿ ಧಾರವಾಡದಲ್ಲಿ ಸುಗಮ ಸಂಗೀತ ತರಬೇತಿ ಶಿಬಿರ ಏರ್ಪಡಿಸಿ ಅನೇಕ ವಿದ್ಯಾರ್ಥಿಗಳಿಗೆ ಭಾವಗೀತೆಗಳ ಗಾಯನದ ತರಬೇತಿ ಕೊಡಿಸಿದ್ದರು.
ಈ ತರಬೇತಿ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿದ್ದ ನನಗೆ ಡಾ. ಸಿದ್ಧಯ್ಯ ಪುರಾಣಿಕ ಅವರ ರಚನೆಗಳನ್ನು ವಿದ್ಯಾರ್ಥಿಗಳಿಗೆ ಕಲಿಸಿಕೊಡಲು ಹೇಳಿದ್ದರು. ಅದರಲ್ಲಿಯೂ ಪಂ. ಸಿದ್ಧರಾಮ ಜಂಬಲದಿನ್ನಿಯವರ ಸಂಯೋಜನೆಯಾದ ‘ಬಾಳಕಡಲಿನಲ್ಲಿ ಮುಳುಗಿ ಮೂರು ಮುತ್ತನು ಕಂಡೆ, ಸ್ನೇಹ ಸೈರಣೆ ಸಮತೆ ಎಂದು ಕರೆದೆ’ ಎಂಬ ಭಾವಗೀತೆ ಅವರ ಅಚ್ಚುಮೆಚ್ಚಿನದು. ನನ್ನ ಗಾಯನವನ್ನು ಅಪಾರವಾಗಿ ಮೆಚ್ಚಿಕೊಳ್ಳುತ್ತಿದ್ದ ಅವರು ಸಿಕ್ಕವರಿಗೆಲ್ಲ ಹೇಳುತ್ತಿದ್ದರು.
“ಜಯದೇವಿ ಮಹಾನ್ ಗಾಯಕಿ ಅದಾಳ.. ಹಿಂದೂಸ್ಥಾನಿ ಗಾಯನದಾಗ ದೊಡ್ಡ ಸಾಧನೆ ಮಾಡ್ಯಾಳ.. ಆದರೆ ಆಕಿ ಸಂಗೀತದ ಮೇಲೆ ಅಧ್ಯಯನಪೂರ್ಣ ಬರವಣಿಗಿ ಮಾಡೋ ಸ್ಕಾಲರ್ ಆಗಬೇಕು” ಅಂತ ನನ್ನನ್ನು ಬರವಣಿಗೆಯಲ್ಲಿ ಮುಂದುವರೆಯಲು ಒತ್ತಾಯಿಸುತ್ತಿದ್ದರು.
ನಾನು ‘ವಚನ ಗಾಯನ ಪರಂಪರೆ : ಒಂದು ಸಂಗೀತಾತ್ಮಕ ಅಧ್ಯಯನ’- ವಿಷಯದ ಮೇಲೆ ಪಿಎಚ್.ಡಿ. ಪ್ರಬಂಧ ಸಿದ್ಧಪಡಿಸಿ ಅವರ ಕೈಗಿಟ್ಟಾಗ “ಪಿಎಚ್.ಡಿ. ಪದವಿ ಸಿಕ್ಕಮೇಲೆ ತಕ್ಷಣ ಇದನ್ನು ಪುಸ್ತಕರೂಪದಾಗ ತಗೊಂಡು ಬಾ” ಎಂದಿದ್ದರು. ಅವರ ಒತ್ತಾಸೆಯಿಂದಾಗಿಯೇ ನನ್ನ ಪಿಎಚ್.ಡಿ. ಪ್ರಬಂಧ ಹೊಸಪೇಟೆಯ ಪಲ್ಲವ ಪ್ರಕಾಶನದಿಂದ ಪ್ರಕಾಶಿತಗೊಂಡಿತು.
“ನೀನು ಗಾಯಕಿಯಾಗಿ ಮಾತ್ರವಲ್ಲ ಒಬ್ಬ ಲೇಖಕಿಯಾಗಿಯೂ ಬೆಳೆಯಬೇಕು” ಎಂದು ಕಲಬುರ್ಗಿ ಸರ್ ಅವರು ನುಡಿದಿದ್ದರು. ನನ್ನ ಮೊದಲ ಸಂಶೋಧನಾ ಕೃತಿ- “ವಚನ ಸಂಗೀತ ರತ್ನ : ಪಂ. ಸಿದ್ಧರಾಮ ಜಂಬಲದಿನ್ನಿ” ಮುದ್ರಣಗೊಂಡು ಹೊರಬಂದಾಗ ಒಂದು ಪ್ರತಿ ಕೊಡಲು ಅವರ ಮನೆಗೆ ಹೋಗಿದ್ದೆ. ಆ ಪುಸ್ತಕವನ್ನು ಕೈಯಲ್ಲಿ ಹಿಡಿದುಕೊಂಡು ಸಂಭ್ರಮದಿಂದ ಅವರ ಹೆಂಡತಿಯನ್ನು ಕರೆದು “ಏಯ್ ಬಾ ಇಲ್ಲಿ.. ಜಯದೇವಿ ಬಂದಾಳ.. ಹಂಗೆ ಬಂದಿಲ್ಲ. ಈ ಸಲ ಕೈಯಾಗ ಹೊಸ ಪುಸ್ತಕ ತಂದಾಳ.. ತಾನೇ ಬರೆದಿದ್ದು.. ನಾ ಹೇಳಿಧಂಗ ಬರವಣಿಗೇನೂ ಆಕಿ ಕೈಹಿಡಿದಾದ ನೋಡು” ಅಂತ ಹೇಳಿ ಹಿರಿ ಹಿರಿ ಹಿಗ್ಗಿದ್ದರು. ಅಷ್ಟು ಮಾತ್ರವಲ್ಲ ನನ್ನ ಮೊದಲ ಕೃತಿಯ ಒಟ್ಟಾರೆ ವಿನ್ಯಾಸದ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಅವರ ಮನೆಗೆ ಯಾರೇ ವಿದ್ಯಾರ್ಥಿಗಳು ಬಂದು ಮಾರ್ಗದರ್ಶನ ಕೇಳಿದಾಗ ಪರಿಪೂರ್ಣ ಮಾಹಿತಿ ನೀಡಿ ಕಳಿಸುತ್ತಿದ್ದರು. ಕಲಬುರ್ಗಿ ಸರ್ ಅವರ ಮಾರ್ಗದರ್ಶನ ಇಲ್ಲದೆ ಹೋಗಿದ್ದರೆ, ನಾನು ಲೇಖಕಿಯಾಗಿ ರೂಪುಗೊಳ್ಳುವುದು ಸಾಧ್ಯವೇ ಇರಲಿಲ್ಲ. ಹಾಗಂತ ಅವರು ತಮ್ಮಲ್ಲಿ ಬಂದ ವಿದ್ಯಾರ್ಥಿಗಳಿಗೆ ಹೊಗಳುತ್ತಿದ್ದರು ಎಂದು ಯಾರೂ ಭಾವಿಸಬಾರದು. ತಪ್ಪುಗಳನ್ನು ಎತ್ತಿ ತೋರಿಸಿ ಕಟುವಾದ ಮಾತುಗಳಲ್ಲಿ ಬೈಯುತ್ತಿದ್ದರು. “ನನ್ನಿಂದ ಬೈಯಿಸಿಕೊಂಡವರು ಮಹಾನ್ ಲೇಖಕರಾಗ್ಯಾರ” ಎಂದು ಹೇಳುತ್ತಿದ್ದರು.
ನಮ್ಮ ಕೆಲಸವಿದ್ದಾಗಲೂ ಅವರೇ ಫೋನ್ ಮಾಡಿ ಮನೆಗೆ ಬರಲು ಹೇಳುತ್ತಿದ್ದರು. ಒಮ್ಮೆ ನನಗೆ ಪಿಎಚ್.ಡಿ. ಮಹಾಪ್ರಬಂಧದ ಕುರಿತು ಚರ್ಚಿಸಲು ಮನೆಗೆ ಬಾ ಎಂದು ಹೇಳಿದ್ದರು. ಸಮಯ ಕೂಡಾ ತಿಳಿಸಿದ್ದರು. ನಿಗದಿತ ಸಮಯ ಮೀರಿ ಹೋದ ನನಗೆ ನೀರಿಳಿಸಿಬಿಟ್ಟರು. “ಸಮಯ ಪ್ರಜ್ಞೆ ಇಲ್ಲದವರು ಜೀವನದಲ್ಲಿ ಯಾವತ್ತೂ ಮುಂದೆ ಬರುವುದಿಲ್ಲ. ನೀನು ಗಾಯಕಿಯಾಗಿ, ಲೇಖಕಿಯಾಗಿ ಎತ್ತರಕ್ಕೆ ಬೆಳೆಯಬೇಕೆಂದರೆ ಸಮಯ ಪ್ರಜ್ಞೆ ರೂಢಿಸಿಕೊಳ್ಳಬೇಕು” ಎಂದು ಎಚ್ಚರಿಸಿದ್ದರು.
ಕಲಬುರ್ಗಿ ಸರ್ ಅವರು ತಾವು ಹೇಳಿದ್ದೇ ಸರಿ ಎಂದು ಯಾವತ್ತೂ ವಾದಿಸುತ್ತಿರಲಿಲ್ಲ. ನಾನು ಹಾಡಿದ ಯಡಿಯೂರು ‘ಸಿದ್ಧಲಿಂಗೇಶ್ವರ ವಾಣಿ’ ಸಿಡಿಯನ್ನು ಮೊದಲ ಬಾರಿಗೆ ಕೇಳಿದಾಗ ‘ನನಗ್ಯಾಕೋ ಗಾಯನ ಹಿಡಿಸಲಿಲ್ಲ’ ಎಂದಿದ್ದರು. ಅವರ ಮಾತು ಕೇಳಿಸಿಕೊಂಡ ನಾನು ಸುಮ್ಮನಾಗಿದ್ದೆ. ಒಂದು ವಾರದ ನಂತರ ಅವರೇ ಫೋನ್ ಮಾಡಿ “ಜಯದೇವಿ, ‘ಸಿದ್ಧಲಿಂಗೇಶ್ವರ ವಾಣಿ’ ಸಿ.ಡಿ.ಯನ್ನು ಮತ್ತೊಮ್ಮೆ ಕೇಳಿದೆ.. ಅದರ ಬಗ್ಗೆ ಸದಾನಂದ ಕನವಳ್ಳಿಯವರ ಜೊತೆ ಚರ್ಚಿಸಿದೆ. ನೀನು ಅದ್ಭುತವಾಗಿ ಹಾಡಿರುವಿ.. ನಿನ್ನ ಸಂಯೋಜನೆ ಸಹ ಅತ್ಯುತ್ತಮವಾಗಿದೆ. ನಿನಗೆ ಉಜ್ವಲ ಭವಿಷ್ಯವಿದೆ” ಎಂದು ಹೊಗಳಿ ಮಾತನಾಡಿದರು. ‘ಆವತ್ತು ಹಾಗೆ ಹೇಳಿದ್ದೀರಿ’ ಎಂದು ನೆನಪಿಸಿದಾಗ, ‘ನನ್ನನ್ನು ನಾ ತಿದ್ದಿಕೊಂಡೆ’ ಎಂದು ಹೇಳಿ ದೊಡ್ಡವರಾದರು.
ವಚನಗಳನ್ನಾಗಲಿ, ಕೀರ್ತನೆಗಳನ್ನಾಗಲಿ ಹಾಡುವಾಗ ಗಾಯಕರು ಅರ್ಥ ಮತ್ತು ಉಚ್ಚಾರಣೆಗೆ ಹೆಚ್ಚು ಗಮನ ನೀಡಬೇಕೆಂದು ಒತ್ತಿ ಒತ್ತಿ ಹೇಳುತ್ತಿದ್ದರು. ಅರ್ಥ ಕೆಡದಂತೆ ಹಾಡುವುದನ್ನೇ.. ಕೇಡಿಲ್ಲವಾಗಿ ಹಾಡುವ ಕ್ರಮ ಎಂದು ಪ್ರತಿಪಾದಿಸುತ್ತಿದ್ದರು. ವಚನಗಳನ್ನು ಕಲಬುರ್ಗಿಯವರಷ್ಟು ಸೂಕ್ಷ್ಮವಾಗಿ, ತಲಸ್ಪರ್ಶಿಯಾಗಿ ಅಧ್ಯಯನ ಕೈಗೊಳ್ಳುತ್ತಿದ್ದ ಇನ್ನೊಬ್ಬ ವಿದ್ವಾಂಸರನ್ನು ನಾನು ಕಂಡಿಲ್ಲ.
ಗಾಯಕರಿಗೆ ವಚನಗಳನ್ನು ಆಯ್ಕೆ ಮಾಡಿಕೊಡುವಾಗ ಕಲಬುರ್ಗಿಯವರು ಸಾಮಾಜಿಕ ಸಂಗತಿಗಳ ಮೇಲೆ ಬೆಳಕು ಚೆಲ್ಲುವ ವಚನಗಳಿಗೆ ಮೊದಲ ಆದ್ಯತೆ ನೀಡುತ್ತಿದ್ದರು. ಭಕ್ತಿಪ್ರಧಾನವಾದ ವಚನಗಳಿಗೆ ಎರಡನೇ ಪ್ರಾಶಸ್ತ್ಯ ಕೊಡುತ್ತಿದ್ದರು. ಅವರು ಸ್ವತಃ ನಡೆದಾಡುವ ವಿಶ್ವಕೋಶವಾಗಿದ್ದರು, ಮಾತ್ರವಲ್ಲ ಅವರ ಮನೆಯಲ್ಲಿ ಅಪಾರ ಸಂಖ್ಯೆಯ ಗ್ರಂಥ ರಾಶಿಯ ‘ಲೈಬ್ರರಿ’ ಇತ್ತು. ಓದಿನ ಹಂಬಲ ಇರುವ, ಅಧ್ಯಯನಾಸಕ್ತ ಎಲ್ಲರಿಗೂ ಪುಸ್ತಕಗಳನ್ನು ಎರವಲು ಕೊಡುತ್ತಿದ್ದರು. ಪುಸ್ತಕಗಳನ್ನು ಹಿಂತಿರುಗಿಸದಿದ್ದಾಗ ಅತ್ಯಂತ ಕಠೋರವಾಗಿ ನಡೆದುಕೊಳ್ಳುತ್ತಿದ್ದರು.
ಹಂಪಿಯ ಕನ್ನಡ ವಿ.ವಿ.ಯ ಕುಲಪತಿಯಾಗಿ ನಿವೃತ್ತರಾಗಿದ್ದ ಅವರಿಗೆ ಯಾವುದೇ ಹಮ್ಮುಬಿಮ್ಮುಗಳಿರಲಿಲ್ಲ. ಜ್ಞಾನಕಾಂಕ್ಷಿಯಾಗಿ ಬಂದ ಎಲ್ಲರಿಗೂ ಸಮಾನವಾಗಿ ನೆರವು ನೀಡುತ್ತಿದ್ದರು. ನಾವೇನಾದರೂ ‘ಸಂಪರ್ಕದಲ್ಲಿ’ ಇಲ್ಲದೆ ಹೋದರೆ ತಾವೇ ಕರೆಮಾಡಿ ಸಂಶೋಧನೆಯ ಪ್ರಗತಿಯ ಬಗ್ಗೆ ವಿಚಾರಿಸುತ್ತಿದ್ದರು. ಅಧ್ಯಯನದಲ್ಲಿ ನಮಗೆ ಆಸಕ್ತಿ ಕಡಿಮೆಯಾಗಿದೆ ಎಂದು ಕಂಡುಬಂದರೆ ಪರಿಪರಿಯಾಗಿ ಮನವೊಲಿಸಿ ಅಧ್ಯಯನದತ್ತ ವಾಲುವಂತೆ ಮಾಡುತ್ತಿದ್ದರು. ಅವರೊಂದಿಗೆ ನಿರಂತರ ಚರ್ಚೆ ನಡೆಸುತ್ತಿದ್ದ ನನಗೆ ಸಾವಿರಾರು ಪುಸ್ತಕಗಳನ್ನು ಅರ್ಥೈಸಿಕೊಂಡ ಅನುಭವವಾಗುತ್ತಿತ್ತು. ಸಾಮಾನ್ಯವಾಗಿ ಹಿಂದೂಸ್ಥಾನಿ ಶಾಸ್ತ್ರೀಯ ಗಾಯಕರಾದ ನಾವು ರಾಗ, ಸ್ವರ, ಲಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತೇವೆ. ಓದು ಬರಹದ ಬಗ್ಗೆ ಹೆಚ್ಚಿನ ಒಲವು ಇರುವುದಿಲ್ಲ. ‘ಸಂಗೀತಗಾರರು ವಚನಗಳನ್ನು, ಸಾಹಿತ್ಯ ಕೃತಿಗಳನ್ನು ಹೆಚ್ಚು ಗಮನವಿಟ್ಟು ಓದಬೇಕು’ ಆಗ ಮಾತ್ರ ಗಾಯನ ಪರಿಪೂರ್ಣಗೊಳ್ಳುತ್ತದೆ’ ಎಂದು ಪ್ರತಿಪಾದಿಸುತ್ತಿದ್ದರು.
ನಮ್ಮಲ್ಲಿ ಬಹುತೇಕ ಸಂಗೀತಗಾರರು ಯಾಂತ್ರಿಕವಾಗಿ, ಶಾಸ್ತ್ರೀಯ ಚೌಕಟ್ಟಿನಲ್ಲಿ ಹಾಡುವುದನ್ನು ರೂಢಿಸಿಕೊಂಡಿರುತ್ತಾರೆ. ಹಾಗಾಗಿಯೇ ವೈಚಾರಿಕ ಸಂಗತಿಗಳ ತಿಳವಳಿಕೆ ಹೊಂದಿರುವುದಿಲ್ಲ. ಹಿಂದೂಸ್ಥಾನಿ ಗಾಯನ ಹೆಚ್ಚು ಸೃಜನಶೀಲವೂ, ಅರ್ಥಪೂರ್ಣವೂ ಆಗಬೇಕಾದರೆ ಸಂಗೀತಗಾರರು ಸಾಹಿತ್ಯ ಸಂಸ್ಕೃತಿ ಹಾಗೂ ವಿವಿಧ ನೆಲೆಯ ವೈಚಾರಿಕ ಸಂಗತಿಗಳನ್ನು ತಿಳಿದುಕೊಳ್ಳುವುದು ಅಗತ್ಯವೆಂದು ಭಾವಿಸಿದ್ದರು. ಕಲಬುರ್ಗಿ ಸರ್ ಅವರಿಗೆ ಹಿಂದೂಸ್ಥಾನಿ ಗಾಯನ ಕ್ಷೇತ್ರದ ದಿಗ್ಗಜರಾದ ಭಾರತರತ್ನ ಡಾ. ಭೀಮಸೇನ ಜೋಶಿ, ಡಾ. ಗಂಗೂಬಾಯಿ ಹಾನಗಲ್, ಡಾ. ಮಲ್ಲಿಕಾರ್ಜುನ ಮನಸೂರ, ಕುಮಾರ ಗಂಧರ್ವ, ಡಾ. ಬಸವರಾಜ ರಾಜಗುರು ಅವರ ಒಡನಾಟವಿತ್ತು. ಅವರ ಗಾಯನದ ಬಗ್ಗೆ ಅಪಾರ ಗೌರವ ಹೊಂದಿದ್ದರು.
ಕಲಬುರ್ಗಿ ಸರ್ ಅವರಿಗೆ ವಿವಾದಗಳು ಸುತ್ತಿಕೊಳ್ಳುತ್ತಿದ್ದವು. ಆ ಸಂದರ್ಭದಲ್ಲಿ ಕೆಲ ಅವಕಾಶವಾದಿಗಳು ಅವರನ್ನು ವಿಲನ್ ಮಾಡಲು ಯತ್ನಿಸುತ್ತಿದ್ದರು. ಆದರೆ ಅವರು ಜಾತಿ-ಕುಲ ಮೀರಿ ಸ್ನೇಹ ಸಂಬಂಧಗಳನ್ನು ಅಪ್ಪಿಕೊಳ್ಳುತ್ತಿದ್ದರು.
ವಿಜಯಪುರದ ಫ.ಗು. ಹಳಕಟ್ಟಿ ಅಧ್ಯಯನ ಕೇಂದ್ರ ಮೂಲಕ ಹೊರತಂದ ಇಬ್ರಾಹಿಂ ಆದಿಲ್ ಶಾ ಕಾಲದ ಸಾಹಿತ್ಯ ಸಂಪುಟಗಳು ಕಲಬುರ್ಗಿಯವರ ಧರ್ಮನಿರಪೇಕ್ಷ ಗುಣಕ್ಕೆ ಸಾಕ್ಷಿಯಾಗಿ ನಿಲ್ಲುತ್ತವೆ. ಹರಿಹರ-ರಾಘವಾಂಕರ ಕಾವ್ಯ ಸಂಗ್ರಹ, ವಚನಗಳ ಸಮಗ್ರ ಸಂಪುಟು-ಪ್ರಕಟಣೆ ಅವರ ಇಚ್ಚಾಶಕ್ತಿಯ ಪ್ರತೀಕಗಳು. ಓದುವ ಆಸಕ್ತಿಯ ವಿದ್ಯಾರ್ಥಿಗಳಿಗೆ, ಸಂಶೋಧಕರಿಗೆ ಅವರ ಮನೆಯ ಬಾಗಿಲು ಅತ್ಯಂತ ‘ಸೌಜನ್ಯ’ದಿಂದ ತೆರೆದಿರುತ್ತಿತ್ತು.
ವಿದ್ಯಾರ್ಥಿಗಳ ವೇಷದ ‘ಹಂತಕರಿಗೂ’ ಮನೆಯೊಳಗೆ ಕಾಲಿಡಬೇಡ ಎನ್ನಲಿಲ್ಲ. ಬೆಳ್ಳಗಿರುವುದನ್ನೆಲ್ಲ ಕಿಂಚಿತ್ ಸಂಶಯಿಸದೆ ಹಾಲೆಂದು ನಂಬುತ್ತಿದ್ದ ಕಲಬುರ್ಗಿ ಸರ್ ಕಾಲನ ವಶವಾದರು. ವಚನಗಾಯನ ಪರಂಪರೆ ಅವರಿಗೆ ಸದಾ ಋಣಿ.
ಕಲಬುರ್ಗಿಯವರ ಸಂಗೀತದ ಆಸಕ್ತಿಯ ಇನ್ನೊಂದು ಮುಖವನ್ನು ತುಂಬಾ ಅಚ್ಚುಕಟ್ಟಾಗಿ ಕಣ್ಣಿಗೆ ಕಾಣುವಂತೆ ಮನಮುಟ್ಟುವಂತೆ ಬರೆದಿದ್ದೀರ. ಧನ್ಯವಾದಗಳು.🙏
ಶರಣಾರ್ಥಿಗಳು ಮ್ಯಾಮ್….
ಅದೆಷ್ಟು ಹೃದಯಸ್ಪರ್ಶಿಯಾಗಿ ಬರೆದಿದ್ದಿರೀಯೆಂದರೆ ಮುಖಾಮುಖಿ ಸಂವಾದ ನಡೆದಂತೆ ಇದೆ. ಅಂತಹ ಮಹಾತ್ಮರ ಸಂಪರ್ಕದಲ್ಲಿದ್ದು ಸಾಹಿತ್ಯಿಕ ಕೃಷಿ ಮಾಡಿದ ನೀವೇ ಧನ್ಯರು. ಅವರ ಸ್ಪೂರ್ತಿಯ ಮಾತುಗಳೇ ನಿಮ್ಮ ಜೀವನದಲ್ಲಿ ಮುಂದೆಯೂ ಸಾಧನೆಗೆ ಸೋಪಾನವಾಗಲಿ. ,
ಪೂಜ್ಯ ಕಲಬುರ್ಗಿ ಗುರುಗಳ ಕುರಿತ ನಿಮ್ಮ ಬರಹವನ್ನು ಓದಿ ನನ್ನ ರಂಗ ಸಾಧನೆಗೂ ಅವರಿಂದಾದ ಉಪಕಾರದ ಸ್ಮರಣೆ ಮಾಡಿಕೊಳ್ಳಬೇಕೆಂದು ಪ್ರೇರಣೆಯಾಯಿತು ಮೇಡಂ. ಗುರುಗಳೊಂದಿಗೆ ಇದ್ದ ನಿಮ್ಮ ಸಾಂಸ್ಕೃತಿಕ ಸಂಬಂಧ ಸೇತುವನ್ನು ತುಂಬಾ ಆಪ್ತವಾಗಿ ಬರೆದಿದ್ದೀರಿ ಅಭಿನಂದನೆಗಳು ತಮಗೆ 💐💐🙏🎭🙏🇮🇳.
ಮಾರ್ಗದರ್ಶಿ ನಮ್ಮ ಕಲಬುರ್ಗಿ ಮಾಸ್ತರರೊಂದಿಗಿನ ಒಡನಾಟವನ್ನು ಕಣ್ಣಿಗೆ ಕಟ್ಟುವಂತೆ ಬರೆದಿದ್ದೀರಿ. ಓದಿ ಖುಷಿಯಾಯಿತು. ಧನ್ಯವಾದಗಳು.
ಕಲ್ಬುರ್ಗಿರವರ ಪ್ರೋತ್ಸಾಹದಿಂದ ಜಯದೇವಿ ಜಂಗಮಶೇಟ್ಟಿ ಅವರು ಉತ್ತಮ ಗಾಯಕರದ್ದುದು ಸಂತೋಷ.