ಚಿತ್ರದುರ್ಗ
ನಡೆ ನುಡಿಗಳ ನಡುವೆ ವ್ಯತ್ಯಾಸವಿರದೆ ಸಮನ್ವಯದಿಂದ ಬಾಳಿದರೆ ಅದರಿಂದ ಸೂಳ್ನುಡಿ ಹುಟ್ಟುತ್ತದೆ. ಆಗ ನುಡಿಯಲ್ಲಿ ತುಂಬಿಕೊಂಡಿರುವ ಮಲೀನಕಾರಕ ವಿಚಾರಗಳು ನಿವಾರಣೆಗೊಂಡು ನುಡಿ ಶುದ್ಧವಾಗುತ್ತದೆ. ಅಂತಹ ನುಡಿಯೇ ಶಿವನೊಲುಮೆಯ ನುಡಿಯಾಗಿ ನಡೆಗೂ ಪ್ರೇರಕವಾಗಿರುತ್ತದೆಂಬ ಸದಾಶಯ ೧೨ನೇ ಶತಮಾನದ ಹಿರಿಯ ಅನುಭಾವಿ ಶರಣ ಜೇಡರ ದಾಸಿಮಯ್ಯನವರದಾಗಿತ್ತು.
ಅವರ ರಚನೆಯ ವಚನಗಳ ಸಾರ ನಮಗೆ ಮನದಟ್ಟು ಮಾಡುತ್ತವೆ ಎಂದು ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಆಡಳಿತ ಮಂಡಳಿಯ ಸದಸ್ಯರಾದ ಡಾ.ಬಸವಕುಮಾರ ಸ್ವಾಮೀಜಿ ಅವರು ಅಭಿಪ್ರಾಯಪಟ್ಟರು.
ರವಿವಾರ ಇಲ್ಲಿನ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಮೂಲಕರ್ತೃ ಮುರಿಗೆಯ ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮಿಗಳವರ ಲೀಲಾವಿಶ್ರಾಂತಿ ಸನ್ನಿಧಾನದಲ್ಲಿ ಏರ್ಪಡಿಸಿದ್ದ ಜೇಡರ ದಾಸಿಮಯ್ಯನವರ ಜಯಂತಿ ಶರಣೋತ್ಸವ, ಕನಕ ಗುರುಪೀಠ ತಿಂಥಿಣ ಶಾಖಾಮಠದ ಲಿಂಗೈಕ್ಯ ಶ್ರೀ ಸಿದ್ಧರಾಮಾನಂದ ಪುರಿ ಹಾಗೂ ವೀರಶೈವ ಲಿಂಗಾಯತ ಮಹಾಸಭಾದ ಮಾಜಿ ರಾಷ್ಟ್ರೀಯ ಅಧ್ಯಕ್ಷರಾದ ಭೀಮಣ್ಣ ಖಂಡ್ರೆ ಅವರ ಸ್ಮರಣೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಸಂಸಾರ ಜೀವನದಲ್ಲಿ ಸತಿ ಪತಿಗಳ ನಡುವೆ ಸಾಮರಸ್ಯವಿರದ ಹೊರತು ಅದು ಸುಖೀ ಸಂಸಾರವೆನಿಸಿಕೊಳ್ಳಲು ಸಾಧ್ಯವಿಲ್ಲ. ಹಸಿವಿನ ಕುರಿತಾದ ದಾಸಿಮಯ್ಯನವರ ವಿಶ್ಲೇಷಣೆ ಮಹತ್ವ ಎನಿಸಿದೆ. ಹಸಿವಿನ ಮುಂದೆ ಎಲ್ಲ ಬೋಧನೆ ವೇದನೆಯಾಗುತ್ತದೆ. ಮೊದಲು ಹಸಿವಿಗೆ ಅನ್ನ ಅಗತ್ಯ ಎನ್ನುವ ಅವರ ಮಾತುಗಳಲ್ಲಿ, ನಮಗೆ ಈ ನಿಸರ್ಗ ಎಲ್ಲವನ್ನು ಕೊಟ್ಟಿದೆ ಅದಕ್ಕೆ ನಾವು ಋಣಿಗಳಾಗಿರಬೇಕೆಂಬ ನಿಲುವು ಅವರ ವಚನಗಳಲ್ಲಿ ವ್ಯಕ್ತವಾಗಿದೆ.
ರಾಮನಾಥ ಅಂಕಿತದಲ್ಲಿ ೧೭೬ ವಚನಗಳನ್ನು ರಚಿಸಿರುವ ಅವರು ನಡೆ-ನುಡಿಯ ಬಗ್ಗೆ ಎಲ್ಲಿಲ್ಲದ ಮಹತ್ವ ಕೊಟ್ಟಿದ್ದಾರೆ. ಅಂತಹ ಶರಣರ ವಚನಗಳ ಆಶಯದೊಂದಿಗೆ ಅವರ ತತ್ವದ ಜೊತೆಗೆ ಸಾಗಿರುವ ಕರ್ನಾಟಕದ ಎಷ್ಟೋ ಮಠಗಳು ನಮ್ಮ ಚಿತ್ರದುರ್ಗದ ಬಹನ್ಮಠವನ್ನು ಸೇರಿದಂತೆ ಅನ್ನ, ಅರಿವು, ವಸತಿ ಎಂಬ ತ್ರಿವಿಧ ದಾಸೋಹವನ್ನು ಮಾಡುತ್ತ ಬಡವರ ಪಾಲಿಗೆ ವರದಾನವಾಗಿವೆ ಎಂದು ಹೇಳಿದರು.
ಚಿತ್ರದುರ್ಗದ ಶ್ರೀ ಬೃಹನ್ಮಠದಲ್ಲಿಯೂ ಬಸವಾದಿ ಶಿವಶರಣರ ಆಶಯಕ್ಕೆ ತಕ್ಕ ನಡೆಯೇ ಪ್ರಧಾನವಾಗಿದ್ದರಿಂದ ಇಲ್ಲಿ ಜಾತಿ ಮತ ಪಂಥ ಭೇದವಿಲ್ಲದೆ ಈ ಹಿಂದೆ ನೂರಾರು ಸಾಧಕರು ಯಾವುದೇ ಜಾತಿಯ ಸೋಂಕಿಲ್ಲದೆ ಬಸವತತ್ವ ಮಹಾವಿದ್ಯಾಲಯದಲ್ಲಿ ಪದವಿ ಪಡೆದ ನಾವು ನಮಗೆ ಜಾತಿಯ ವಿಚಾರವೇ ಗೊತ್ತಿಲ್ಲ. ಹಾಗಾಗಿ ಮೊನ್ನೆ ನಮ್ಮನ್ನಗಲಿದ ಕನಕ ಗುರುಪೀಠದ ಶ್ರೀ ಸಿದ್ಧರಾಮಾನಂದಪುರಿ ಸ್ವಾಮೀಜಿ ಅವರದು ಶಿಸ್ತುಬದ್ಧ ನಡೆ ಎಂದರೆ ತಾವು ಪಿಯುಸಿ ಓದುವಾಗ ಪರೀಕ್ಷಾ ಸಮಯದಲ್ಲಿ ಆದ ಒಂದು ಘಟನೆಗೆ ಅವರು ಶಿಕ್ಷಣವನ್ನೇ ತೊರೆದು ಜತೆಗೆ ಮನೆಯನ್ನೇ ಬಿಟ್ಟು ಚಿತ್ರದುರ್ಗದ ಮುರುಘಾಮಠಕ್ಕೆ ಬಂದು ಇಲ್ಲಿ ಧಾರ್ಮಿಕ ದೀಕ್ಷೆ ಪಡೆದರು.
ಎಲ್ಲಾ ಧರ್ಮಗಳನ್ನು ಅಧ್ಯಯನ ಮಾಡುತ್ತ ಒಳ್ಳೆಯ ಸಾಧಕನೆನಿಸಿಕೊಂಡರು. ಇವರ ಜವಾಬ್ದಾರಿಯುತ ನಡೆಗೆ ಕನಕ ಗುರುಪೀಠದ ಹೊಣೆಗಾರಿಕೆ ಸಿಕ್ಕಿತು. ಅದನ್ನು ಕೆಲವೇ ವರ್ಷಗಳಲ್ಲಿ ಸರ್ವತೋಮುಖ ರೀತಿಯಲ್ಲಿ ಮುನ್ನೆಡೆಸಿಕೊಂಡು ಕಡಿಮೆ ಅಂದರೆ ಚಿಕ್ಕವಯಸ್ಸಿನಲ್ಲೇ ಬಯಲಾದರು.
ಅನಾರೋಗ್ಯವಿದ್ದರೂ ಅದಕ್ಕೆ ಗಮನಕೊಡದೆ ಅಹರ್ನಿಶಿ ದುಡಿದರು. ಒಂದು ಗಂಭೀರ ವಿಷಯ ಎಂದರೆ ಅವರ ಎರಡೂ ಕಿಡ್ನಿಗಳು ವಿಫಲವಾದಾಗ ಅವರ ತಾಯಿಯೇ ಒಂದು ಕಿಡ್ನಿ ದಾನ ಮಾಡಿದ್ದು ಅದರಿಂದ ಹತ್ತಾರು ವರ್ಷ ಇದ್ದ ಬಗ್ಗೆ ಹೇಳಿದಾಗ ಸಭೆಯು ಮೌನಕ್ಕೆ ಶರಣಾಗಿತ್ತು. ಅನಾರೋಗ್ಯದಲ್ಲಿಯೂ ಸಹ ಅವರು ಸಮಾಜದ ಆಗುಹೋಗುಗಳ ಬಗ್ಗೆ ಸದಾ ಕಾರ್ಯೋನ್ಮುಖರಾಗಿದ್ದರೆಂದು ಸ್ಮರಿಸಿದರು.
೧೦೨ ವರ್ಷ ಬದುಕಿ ಇನ್ನು ನಿನ್ನೆ ತಾನೇ ಲಿಂಗೈಕ್ಯರಾದ, ಜೀವಿತ ಅವಧಿಯಲ್ಲಿ ಸ್ವಾತಂತ್ರ್ಯ ಸಂಗ್ರಾಮ, ಜೈಲುವಾಸ, ರಾಜಕೀಯ ಪ್ರವೇಶ, ಸಮಾಜ ಸಂಘಟನೆ ಮೂಲಕ ಗೌರವಯುತ ಜೀವನ ನಡೆಸಿದ್ದ ಶತಾಯುಷಿ ಭೀಮಣ್ಣ ಖಂಡ್ರೆಯವರ ಜೀವನದ ಪ್ರಮುಖ ಘಟ್ಟಗಳನ್ನು ಸ್ಮರಿಸಿದರು.
ಮುಖ್ಯಅತಿಥಿಗಳಾಗಿದ್ದ ಬಾಪೂಜಿ ವಿದ್ಯಾಸಂಸ್ಥೆಯ ಸ್ಥಾಪಕರು ಹಾಗೂ ಶರಣ ಸಾಹಿತ್ಯ ಪರಿಷತನ್ ಜಿಲ್ಲಾಧ್ಯಕ್ಷರೂ ಆದ ಕೆ.ಎಂ. ವೀರೇಶ್ ಅವರು ಮಾತನಾಡುತ್ತ, ಜೇಡರ ದಾಸಿಮಯ್ಯನವರು ಹಿರಿಯ ಶರಣ̧ರು ಅವರ ಮಾರ್ಗದರ್ಶನ ಉಳಿದ ಶರಣರಿಗಿತ್ತು. ಅವರು ಅಧಿಕಾರ ಅಂತಸ್ತು ಇವುಗಳಿಂದ ಜೀವನ ಸಾರ್ಥಕವಾಗುವುದಿಲ್ಲ. ನಮ್ಮ ನಡೆ ನುಡಿ ಆದರ್ಶವಾಗಿರಬೇಕೆಂದು ಪ್ರತಿಪಾದಿಸಿದವರು. ಇಂತಹ ಪುಣ್ಯ ಪುರುಷರನ್ನು ಅವರ ಜೀವನ ಮೌಲ್ಯಗಳನ್ನು ಈಗಿನ ಜನಮಾನಸಕ್ಕೆ ತಿಳಿಸುವ ಕಾರ್ಯ ಶ್ರೀ ಬೃಹನ್ಮಠದಿಂದ ನಡೆದಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಸಮಾರಂಭದಲ್ಲಿ ಅಗಲಿದ ಗಣ್ಯರಿಗೆ ಒಂದು ನಿಮಿಷ ಮೌನಾಚಾರಣೆ ಮಾಡಿ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಕಾರ್ಯಕ್ರಮದಲ್ಲಿ ವಿವಿಧ ಸಮಾಜ-ಸಂಘಟನೆಗಳ ಮುಖಂಡರಾದ ಬಸವರಾಜ ಕಟ್ಟಿ, ನಾಗರಾಜ ಸಂಗಮ್, ಪಿ. ವೀರೇಂದ್ರಕುಮಾರ, ಹನುಮಂತ ಗೌಡ್ರು, ಕವಿ ಹೆಚ್.ಡಿ. ಪುರದ ಗಂಗಾಧರಪ್ಪ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.
ಎಸ್.ಜೆ.ಎಂ. ಕಾನೂನು ಮಹಾವಿದ್ಯಾಲಯದ ನಿರ್ವಹಣೆಯಲ್ಲಿ ನಡೆದ ಸಮಾರಂಭಕ್ಕೆ ಜಮುರಾ ಕಲಾವಿದ ಉಮೇಶ ಪತ್ತಾರ ಅವರು ಜೇಡರ ದಾಸಿಮಯ್ಯನವರ ವಚನ ಹಾಡುವುದರ ಮೂಲಕ ಚಾಲನೆ ನೀಡಿದರು. ಅಧ್ಯಾಪಕಿ ಸುನಿತಾ ಮುರಳಿ ಸ್ವಾಗತಿಸಿದರು. ಅಧ್ಯಾಪಕಿ ಅಂಬಿಕಾ ನಿರೂಪಿಸಿದರು. ಪ್ರಾಚಾರ್ಯ ಡಾ. ಎಸ್. ದಿನೇಶ್ ಶರಣು ಸಮರ್ಪಣೆ ಮಾಡಿದರು.
