ಧಾರವಾಡ
ಹಿಂದೂ, ಮುಸ್ಲಿಂ, ಕ್ರೈಸ್ತ್, ಭೌದ್ಧ ಎಂಬ ಭಾವನೆಗೂ ಮಿಗಿಲಾಗಿ ನಾವೆಲ್ಲ ಭಾರತೀಯರು ಎಂಬ ಭಾವ ಹೊಂದಬೇಕು ಎಂದು ಸಾಹಿತಿ ರಂಜಾನ್ ದರ್ಗಾ ಅಭಿಪ್ರಾಯಪಟ್ಟರು.
ಅವರು ನಗರದ ಕವಿವ ಸಂಘದ ರಾ.ಹ. ದೇಶಪಾಂಡೆ ಸಭಾಭವನದಲ್ಲಿ ಬುಧವಾರ ಸಂಜೆ “ಭಾರತ ಏಕತಾ ಆಂದೋಲನ ಮತ್ತು ಬಸವ ಶಾಂತಿ ಮಿಷನ್ ” ಸಹಯೋಗದಲ್ಲಿ 78ನೇ ಸ್ವಾತಂತ್ರೋತ್ಸವದ ನಿಮಿತ್ಯ ಏರ್ಪಡಿಸಿದ್ದ ದೇಶಭಕ್ತಿ ಗೀತೆಗಳ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ದೇಶಪ್ರೇಮ ಎಂದರೆ ಕೇವಲ ದೇಶದ ಭೂಪಟವನ್ನು ಪೂಜಿಸುವುದಲ್ಲ, ಬದಲಾಗಿ ಇಲ್ಲಿರುವ ಸಕಲ ಜೀವಾತ್ಮರನ್ನೂ ಪ್ರೀತಿಸುವದು ಎಂದ ಅವರು, ನಮ್ಮ ದೇಶಕ್ಕೆ ಪ್ರಜಾಪ್ರಭುತ್ವವೇ ಧರ್ಮ ಹಾಗೂ ಸಂವಿಧಾನವೇ ಧರ್ಮ ಗ್ರಂಥವಾಗಿದೆ ಎಂದು ಅವರು ವಿಶ್ಲೇಷಿಸಿದರು.
ಕವಿವ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ, ಕಸಾಪ ಜಿಲ್ಲಾಧ್ಯಕ್ಷ ಲಿಂಗರಾಜ ಅಂಗಡಿ ಮುಖ್ಯ ಅತಿಥಿಗಳಾಗಿದ್ದರು.
ಹಿರಿಯ ಗಾಯಕ ಪಂಡಿತ ಸೋಮನಾಥ ಮರಡೂರ ಅವರಿಗೆ ಸನ್ಮಾನಿಸಲಾಯಿತು. ಗಾಯಕರಾದ ಡಾ. ಜ್ಯೋತಿಲಕ್ಷೀ ಡಿ. ಪಿ, ಅಂಜಲೀನಾ ಗ್ರೇಗರಿ, ಡಾ. ಶ್ರೀಧರ್ ಕುಲಕರ್ಣಿ, ವಿಧುಷಿ ಶ್ರುತಿ ಕುಲಕರ್ಣಿ, ಡಾ. ಶಾರದಾ ಭಟ್, ಸಂಭಾಜಿ ಶಿಂಧೆ, ಕುಮಾರ್ ಮರಡೂರ, ಕುಮಾರಿ ಅಕ್ಷಾ ಮುಲ್ಲಾ ಅವರಿಂದ ದೇಶಭಕ್ತಿಗೀತೆಗಳ ಗಾಯನ ಮನಸೂರೆಗೊಂಡಿತು. ಪಂಡಿತ್ ಅಲ್ಲಮಪ್ರಭು ಕಡಕೋಳ ಅವರಿಂದ ತಬಲವಾದನ, ಪರಶುರಾಮ್ ಕಟ್ಟಿ ಸಂಗಾವಿ ಅವರು ಹಾರ್ಮೋನಿಯಂ ಸಾಥ್ ನೀಡಿದರು.
ಸುಧಾ ಕಬ್ಬೂರ್ ಅವರಿಂದ ಸ್ವಾಗತ, ಮಂಜುನಾಥ ಮೋಹರೆ ಅವರಿಂದ ವಂದನಾರ್ಪಣೆ, ಪ್ರಾಸ್ತಾವಿಕವಾಗಿ ಮಾತನಾಡಿದ ಬಸವಶಾಂತಿ ಮಿಷನ್ ಹಾಗೂ ಭಾರತ್ ಏಕತಾ ಆಂದೋಲನ ಸಮಿತಿ ಅಧ್ಯಕ್ಷ ಮಹಾದೇವ ಹೊರಟ್ಟಿ ಅವರು “ಸಭೆಯಲ್ಲಿ ಮೂರು ನಿರ್ಣಯ ಮಂಡಿಸಿದರು.
1) “ವೈವಿಧ್ಯಮಯ ಸಂಸ್ಕೃತಿ, ಭಾಷೆ, ಧರ್ಮ ಮತ್ತು ಬುಡಕಟ್ಟುಗಳನ್ನು ಹೊಂದಿರುವ ಭಾರತ ದೇಶದಲ್ಲಿ ರಾಷ್ಟ್ರೀಯ ಏಕತೆ, ಸಹೋದರತ್ವ, ಶಾಂತಿ ಮತ್ತು ದೇಶಪ್ರೇಮ ಬೆಳೆಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇದೇ ಆಗಸ್ಟ್ 15 ರಿಂದ ಮುಂದಿನ ಆಗಸ್ಟ್ 15ರ ವರೆಗೆ ಭಾರತ ಏಕತಾ ವರ್ಷ ಎಂದು ಕರೆದು ರಾಷ್ಟ್ರವ್ಯಾಪಿ ಕಾರ್ಯಕ್ರಮ ಸಂಘಟಿಸಬೇಕು.
2) ಹೆಚ್ಚುತ್ತಿರುವ ಮಹಿಳೆ ಮತ್ತು ಮಕ್ಕಳ ಮೇಲೆ ಅತ್ಯಾಚಾರ ತಡೆಗೆ ಉಗ್ರಕ್ರಮ ಕೈಗೊಂಡು ಇಂತ ಹೀನ ಕೃತ್ಯ ಮರುಕಳಿಸದಂತೆ ಜಾಗ್ರತೆ ವಹಿಸಬೇಕು, ಮಾತ್ರವಲ್ಲ ಸರ್ವಧರ್ಮ ಗುರುಗಳು ಸಹ ಈ ಬಗ್ಗೆ ಆಸ್ಥೆ ವಹಿಸಬೇಕು.
3) ಭಾರತವೂ ಸೇರಿದಂತೆ ಜಾಗತಿಕ ತಾಪಮಾನ ವರ್ಧನೆಯಾಗುತ್ತಿದ್ದು, ವಾತಾವರಣ ಸಮತೋಲನ ಮತ್ತು ಜೀವ ಸಂಕುಲದ ಉಳಿವಿಗಾಗಿ ಯುದ್ದೋಪಾದಿಯಲ್ಲಿ ಕ್ರಮ ಕೈಗೊಳ್ಳಬೇಕು, ಇದರ ಅಂಗವಾಗಿ ಪ್ರತಿ ಎಕರೆಗೆ 5 ಗಿಡ ನೆಡುವ ಕಾರ್ಯಕ್ರಮ ಮತ್ತು ಕೆರೆ ಕಟ್ಟೆ ನಿರ್ಮಾಣ ಕಾರ್ಯಗಳನ್ನು ತೀವ್ರವಾಗಿ ಅನುಷ್ಠಾನಗೊಳಿಸಬೇಕು, ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಒತ್ತಾಯಿಸುವದು ಸೇರಿದಂತೆ ರೈತರಲ್ಲಿಯೂ ಈ ಬಗ್ಗೆ ಜಾಗೃತಿ ಮೂಡಿಸಲು ನಿರ್ಣಯ ಕೈಗೊಳ್ಳಲಾಯಿತು. ನಿರ್ಣಯಗಳಿಗೆ ಸಭಿಕರು ಧ್ವನಿಮತದಿಂದ ಬೆಂಬಲಿಸಿದರು.