ಜೇವರ್ಗಿ ಬಸವಪರ ಸಂಘಟನೆಗಳಿಂದ ಶಾಸಕ ಯತ್ನಾಳ ಹೇಳಿಕೆಗೆ ಖಂಡನೆ

ಕಲಬುರ್ಗಿ

ಕರ್ನಾಟಕದ ಸಾಂಸ್ಕೃತಿಕ ನಾಯಕ, ವಿಶ್ವಗುರು ಬಸವಣ್ಣನವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಿ ಅವರ ವಿರುದ್ಧ ಕಾನೂನು ಶಿಸ್ತುಕ್ರಮ ಜರುಗಿಸಬೇಕು ಎಂದು ಜಾಗತಿಕ ಲಿಂಗಾಯತ ಮಹಾಸಭಾ ಜೇವರ್ಗಿ ತಾಲ್ಲೂಕು ಘಟಕದ ಅಧ್ಯಕ್ಷ ನೀಲಕಂಠ ಅವಂಟಿ ಆಗ್ರಹಿಸಿದರು.

ವಕ್ಫ್ ವಿರುದ್ಧ ಬಿಜೆಪಿ ವತಿಯಿಂದ ಬೀದರನಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಬಸವಣ್ಣನವರು ಹೊಳೆಗೆ ಹಾರಿ ಪ್ರಾಣ ಬಿಟ್ಟರು ಎಂಬ ಆಧಾರರಹಿತ ಸುಳ್ಳನ್ನು ತಮ್ಮ ಭಾಷಣದಲ್ಲಿ ಬಳಸಿರುವುದು ಖಂಡನಾರ್ಹವಾಗಿದ್ದು, ಬಸವಣ್ಣನವರ ಬಗ್ಗೆ ಅವರು ಬಹಳ ಹಗುರವಾಗಿ ಮಾತನಾಡಿ ಅಕ್ಷಮ್ಯ ಅಪರಾಧವೆಸಗಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಲಿಂಗಾಯತ ಧರ್ಮ ಸಂಸ್ಥಾಪಕ, ವಿಶ್ವಗುರು ಬಸವಣ್ಣನವರನ್ನು ಅವಮಾನ ಮಾಡಿರುವ ಯತ್ನಾಳ ಅವರಿಗೆ ಇನ್ನು ಮುಂದೆ ಪಕ್ಷ ಹಾಗೂ ಸರ್ಕಾರದ ವತಿಯಿಂದ ಲಿಂಗಾಯತ ಮೀಸಲಾತಿ ಕೋಟಾದಲ್ಲಿ ಯಾವುದೇ ಸೌಲಭ್ಯ ನೀಡಬಾರದು ಎಂದು ವಿಧಾನಸಭಾಧ್ಯಕ್ಷರಿಗೆ ಪತ್ರ ಬರೆದು ಒತ್ತಾಯಿಸಲಾಗುವುದು ಎಂದು ತಿಳಿಸಿದರು.

ಬಸವಣ್ಣನವರ ಕೊನೆಯ ದಿನಗಳು ಹಾಗೂ ಅವರು ಕೂಡಲಸಂಗಮದಲ್ಲಿ ಲಿಂಗೈಕ್ಯರಾದರು ಎಂಬುದಕ್ಕೆ ಈಗಾಗಲೇ ಸಾಕಷ್ಟು ಸಾಕ್ಷಿ, ಪುರಾವೆಗಳು ಹಾಗೂ ಬಸವಣ್ಣನವರು ಮತ್ತು ಸಮಕಾಲೀನ ಶರಣರ ವಚನಗಳಿದ್ದರೂ ತಮ್ಮ ಹರಕು ನಾಲಿಗೆಯನ್ನು ಹರಿಬಿಟ್ಟಿರುವುದು ಯತ್ನಾಳ ಅವರ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿಯಾಗಿದೆ. ಮಾನಸಿಕ ಅಸ್ವಸ್ಥರಂತೆ ಮಾತನಾಡುವದನ್ನು ಕೂಡಲೇ ನಿಲ್ಲಿಸಬೇಕು ಎಂದು ಅವರು ಕಿವಿ ಮಾತು ಹೇಳಿದರು.

ಬಸನಗೌಡ ಎಂಬ ತಮ್ಮ ಹೆಸರಿನ ಹಿನ್ನೆಲೆ ಹಾಗೂ ಪ್ರಭಾವ ಅರಿಯದ ಯತ್ನಾಳ ಬಸವಣ್ಣನವರ ಬಗ್ಗೆ ಏನೋನೋ ಹೇಳಿಕೆ ನೀಡಿರುವುದು ಸರಿಯಲ್ಲ. ನಾನು ಯಾರ ಕ್ಷಮೆ ಕೇಳುವುದಿಲ್ಲ ಎಂಬ ಅವರ ಮರು ಹೇಳಿಕೆಯು ಕೂಡ ಅವರಲ್ಲಿರುವ ಅಜ್ಞಾನವನ್ನು ಪ್ರದರ್ಶಿಸುವಂತಿದ್ದು, ಶಾಸಕ ಬಸನಗೌಡ ಯತ್ನಾಳ ಕೂಡಲೇ ಕ್ಷಮೆ ಯಾಚಿಸಬೇಕು. ಕ್ಷಮೆ ಕೇಳದಿದ್ದರೆ ಮುಂಬರುವ ದಿನಗಳಲ್ಲಿ ಅವರ ವಿರುದ್ಧ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಅವರು ಎಚ್ಚರಿಸಿದರು. ಪತ್ರಿಕಾಗೋಷ್ಠಿಯಲ್ಲಿ ಜೇವರ್ಗಿ ಬಸವ ಕೇಂದ್ರದ ಅಧ್ಯಕ್ಷ ಶರಣಬಸವ ಕಲ್ಲಾ, ಷಣ್ಮುಖಪ್ಪ ವಿ. ಹಿರೇಗೌಡ, ಹಣಮಂತರಾಯ ಪಾಟೀಲ, ನಾಗನಗೌಡ ಜೈನಾಪುರ, ಬಿ.ಜಿ.ಪಾಟೀಲ, ಚಂದ್ರಶೇಖರ ಅನಾದಿ, ಮಹಾಂತೇಶ ಅರವಾಳ ಇತರರಿದ್ದರು.

Share This Article
1 Comment

Leave a Reply

Your email address will not be published. Required fields are marked *