ಗದಗ್
ಗದುಗಿನಲ್ಲಿ ಸೆಪ್ಟೆಂಬರ್ 22ರಂದು ನಡೆದ ಜಾಗತಿಕ ಲಿಂಗಾಯತ ಮಹಾಸಭಾದ ಆರನೇ ಸರ್ವಸಾಮಾನ್ಯ ವಾರ್ಷಿಕ ಮಹಾಸಭೆಯಲ್ಲಿ ತಾಲೂಕಾ, ಜಿಲ್ಲಾ, ರಾಜ್ಯ ಹಾಗೂ ಕೇಂದ್ರ ಸಮಿತಿ ಪದಾಧಿಕಾರಿಗಳ ಆಯ್ಕೆಗಾಗಿ ಚುನಾವಣೆ ನಡೆಸಲು ನಿರ್ಣಯ ಅಂಗೀಕರಿಸಲಾಗಿದೆ.
ಐದು ವರ್ಷ ಪೂರ್ಣಾವಧಿ ಮುಗಿದ ಈ ಎಲ್ಲ ಸಮಿತಿಗಳಿಗೆ ಫೆಬ್ರವರಿ ಕೊನೆಯೊಳಗಾಗಿ ಚುನಾವಣೆ ಮಾಡಿ ಮುಗಿಸಲಾಗುವುದು.
ಸದ್ಯಕ್ಕೆ ಚುನಾವಣೆಯ ರೂಪುರೇಷೆ, ನಿಯಮಾವಳಿಗಳು ಸಿದ್ಧವಾಗುತ್ತಿವೆ. ಅವುಗಳನ್ನು ಕೇಂದ್ರ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಚರ್ಚಿಸಿ ನಿರ್ಧರಿಸಲಾಗುತ್ತದೆ, ಎಂದು JLMನ ಪದಾಧಿಕಾರಿಗಳೊಬ್ಬರು ಹೇಳಿದರು.
ಅಕ್ಟೋಬರ್ 15ರೊಳಗೆ ಕೇಂದ್ರ ಕಾರ್ಯಕಾರಿ ಸಮಿತಿ ಸಭೆ ಸೇರುತ್ತದೆ. ಡಿಸೆಂಬರ್ ಮಧ್ಯದಲ್ಲಿ ಚುನಾವಣೆ ಆರಂಭಿಸಲಾಗುವುದು. ಫೆಬ್ರುವರಿ 28ರೊಳಗೆ ಚುನಾವಣೆ ಪ್ರಕ್ರಿಯೆ ಮುಗಿಸುವ ಉದ್ಧೇಶ ಹೊಂದಲಾಗಿದೆ, ಎಂದು ಹೇಳಿದರು.
ಕೇಂದ್ರ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಯಾವ ಯಾವ ತಾಲೂಕು, ಜಿಲ್ಲೆಗಳಲ್ಲಿ ಚುನಾವಣೆ ನಡೆಸಬೇಕೆಂದು ನಿರ್ಧಾರವಾಗುತ್ತದೆ. ರಾಜ್ಯ ಹಾಗೂ ಕೇಂದ್ರ ಸಮಿತಿ ಚುನಾವಣೆ ಯಾವಾಗ ನಡೆಸಬೇಕೆಂಬುದನ್ನು ಸಹ ಚರ್ಚಿಸಿ ತೀರ್ಮಾನಿಸಲಾಗುವುದು.
ಎಲ್ಲಾ ಮಟ್ಟದಲ್ಲೂ 21 ಜನ ಪದಾಧಿಕಾರಿ ಸದಸ್ಯರು ಹಾಗೂ 05 ಜನ ನಾಮನಿರ್ದೇಶನ ಸದಸ್ಯರಿರುತ್ತಾರೆ. ಪದಾಧಿಕಾರಿಗಳು ಚುನಾವಣೆ ಮೂಲಕ ಆಯ್ಕೆಗೊಳ್ಳಲಿದ್ದಾರೆ.
ತಾಲೂಕ ಘಟಕಕ್ಕೆ ಗ್ರಾಮ ಘಟಕದ ಪದಾಧಿಕಾರಿಗಳಿಂದ, ಜಿಲ್ಲಾ ಪದಾಧಿಕಾರಿಗಳು ತಾಲೂಕಿನ ಪದಾಧಿಕಾರಿಗಳಿಂದ ಆಯ್ಕೆಯಾಗುತ್ತಾರೆ.
ಜಿಲ್ಲಾ ಘಟಕಗಳ ಪದಾಧಿಕಾರಿಗಳು ಮತ್ತು ಸದಸ್ಯರು, ರಾಜ್ಯಮಟ್ದಲ್ಲಿ ಈಗಿರುವ ಪದಾಧಿಕಾರಿಗಳು, ಪೋಷಕರು, ಮಹಾಪೋಷಕರು, ಸೇರಿ ರಾಜ್ಯ, ರಾಷ್ಟ್ರೀಯ ಪದಾಧಿಕಾರಿಗಳನ್ನು ಆರಿಸುತ್ತಾರೆ.
ರಾಜ್ಯಮಟ್ಟದವರು ರಾಷ್ಟ್ರೀಯ ಪದಾಧಿಕಾರಿಗಳನ್ನು ಆರಿಸುತ್ತಾರೆ. ಇದೆಲ್ಲವೂ ಪ್ರಾತಿನಿಧಿಕ ಚುನಾವಣೆ ಆಗಿರುತ್ತದೆ.