ಚನ್ನಗಿರಿ:
ಅನುಭವ ಮಂಟಪದಲ್ಲಿ ಎಲ್ಲಾ ಶರಣ-ಶರಣೆಯರ ಅನುಭವಗಳನ್ನು ಚರ್ಚೆ, ಸಂವಾದ, ಚಿಂತನ- ಮಂಥನ ಮಾಡಿ ಅವುಗಳಿಂದ ಮೂಡಿ ಬಂದಂತಹ ಘನಿಯೇ ವಚನಗಳು ಎಂದು ಪಾಂಡೋಮಟ್ಟಿ ವಿರಕ್ತಮಠದ ಡಾ. ಗುರುಬಸವ ಸ್ವಾಮೀಜಿ ಹೇಳಿದರು.
ಚನ್ನಗಿರಿ ತಾಲ್ಲೂಕಿನ ಪಾಂಡೋಮಟ್ಟಿ ಗ್ರಾಮದ ವಿರಕ್ತಮಠದಲ್ಲಿ ಈಚೆಗೆ ಜ್ಞಾನನಿಧಿ ಅಲ್ಲಮಪ್ರಭುದೇವರ ಜಯಂತ್ಯುತ್ಸವ ಹಾಗೂ ೮೮೧ನೇ ಮಾಸಿಕ ಶಿವಾನುಭವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅಶೀರ್ವಚನ ನೀಡಿದರು.

ಶರಣರ ಕಾಲದಲ್ಲಿ ಜೀವನವು ಅತ್ಮಸ್ಥೈರ್ಯ ಹಾಗೂ ವ್ಯಕ್ತಿತ್ವದ ಮೇಲೆ ಆಧರಿಸಿತ್ತು. ಅನುಭವಮಂಟಪ ಶೂನ್ಯ ಪೀಠದ ಅಧ್ಯಕ್ಷತೆ ಶರಣ ಅಲ್ಲಮಪ್ರಭು ಅವರ ವಿದ್ವತ್ತಿಗೆ ಒಲಿದದ್ದು. ಜ್ಞಾನ ಮತ್ತು ವೈರಾಗ್ಯಕ್ಕೆ ಹೆಸರಾದವರು ಅಲ್ಲಮಪ್ರಭುಗಳು. ಅಲ್ಲಮಪ್ರಭುಗಳು ತತ್ವನಿಷ್ಠೆಗಾಗಿ ಹೋರಾಡಿದ್ದರಿಂದ ಇಂದಿಗೂ ಅವರ ಹೆಸರು ಶಾಶ್ವತವಾಗಿ ಉಳಿದಿದೆ.
ಶರಣರು ಮತ್ತು ದಾರ್ಶನಿಕರು ಸಮಾಜದ ಉನ್ನತಿಗಾಗಿ ಹೋರಾಟ ಮಾಡಿದರು. ಲೌಕಿಕ ವ್ಯವಸ್ಥೆಯನ್ನು ಬದಿಗೊತ್ತಿ ಜನಕಲ್ಯಾಣಕ್ಕಾಗಿ ಹೋರಾಟ ಮಾಡಿದ್ದಾರೆ ಎಂದು ಹೇಳಿದರು.

ಜೀವ ವೈವಿಧ್ಯ ನಿಗಮ ಮಂಡಳಿ ಅಧ್ಯಕ್ಷ ವಡ್ನಾಳ ಜಗದೀಶ ಮಾತನಾಡಿ, ಮಕ್ಕಳಿಗೆ ಪೋಷಕರು ಮಾನವೀಯತೆಯ ಸಂಸ್ಕಾರ ನೀಡಿದರೆ ಮುಂದಿನ ಭವಿಷ್ಯ ಉಜ್ವಲವಾಗಿರುತ್ತದೆ. ಶ್ರಮ ಸಂಸ್ಕೃತಿಯನ್ನು ಶರಣರು ನೀಡಿದ್ದಾರೆ. ಕಾಯಕ ಶ್ರೇಷ್ಠತೆಯನ್ನು ತಿಳಿಸಿದ್ದಾರೆ.
ಮೌಢ್ಯ, ಅಜ್ಞಾನ, ಅಂಧಶ್ರದ್ಧೆ, ಭ್ರಷ್ಟತೆ, ಜಾತೀಯತೆ, ವಂಚನೆ ಇತ್ಯಾದಿ ಸಾಮಾಜಿಕ ಅನಿಷ್ಠಗಳಿಗೆ ದಿವ್ಯ ಔಷಧಿಯನ್ನು ಶರಣರು ಕಂಡುಹಿಡಿದು, ಅನುಭವ ಮಂಟಪ ಎನ್ನುವ ಧಾರ್ಮಿಕ ಸಂಸತ್ತಿನ ಮೂಲಕ ಶರಣರು ನಮಗೆಲ್ಲ ನೀಡಿದರು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ, ಬಸವ ವಿದ್ಯಾ ಸಂಸ್ಥೆಯ ಹಳೆಯ ವಿದ್ಯಾರ್ಥಿನಿ ಎಂಎಸ್ಸಿ ಅಗ್ರಿಯಲ್ಲಿ ಚಿನ್ನದ ಪದಕ ಪಡೆದ ಹೊನ್ನೆಮರದಳ್ಳಿ ಜಿ.ಎ. ವತ್ಸಲ ಅವರಿಗೆ ಗೌರವಿಸಿ ಅಭಿನಂದಿಸಲಾಯಿತು.

ಹೊಳಲ್ಕೆರೆ ಡಾ. ಜಿ.ವಿ. ಮಂಜುನಾಥ ಹಾಗೂ ಡಾ. ಇಂಚರ ಮಾತನಾಡಿದರು. ಮಾಲೂರು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಕೆ.ಆರ್. ಬಸವರಾಜ, ಚಿಕ್ಕೂಲಿಕೆರೆ ಪಾರ್ವತಮ್ಮ, ಪಾಂಡೋಮಟ್ಟಿ ದಾನಾಕ್ಷಮ್ಮ, ಶಕುಂತಲಮ್ಮ, ಗೌರಮ್ಮ, ಸಿದ್ದನಮಠ ಕುಮಾರ, ಡಾ. ರಾಜು, ಧನಂಜಯ್ಯ, ಚನ್ನಬಸಪ್ಪ, ಎಂ.ಬಿ. ನಾಗರಾಜ ಕಾಕನೂರು, ಚಂದ್ರಣ್ಣ, ಶಿವಮೂರ್ತಿ ಮತ್ತಿತರರು ಇದ್ದರು.
