12ನೇ ರಾಜ್ಯ ಮಟ್ಟದ ಕದಳಿ ಮಹಿಳಾ ಸಮಾವೇಶಕ್ಕೆ ತೆರೆ

ಕಲಬುರಗಿ

ವಚನ ಸಾಹಿತ್ಯ ನಾಶ ಮಾಡುವ ಹುನ್ನಾರ ನಡೆದಿದ್ದು, ವೈದಿಕಶಾಹಿಗಳಿಂದ ಎಚ್ಚರಿಕೆ ವಹಿಸಬೇಕು ಎಂದು ಮುಖ್ಯಮಂತ್ರಿಗಳ ಸಲಹೆಗಾರ ಹಾಗೂ ಶಾಸಕ ಬಿ.ಆರ್. ಪಾಟೀಲ ರವಿವಾರ ಹೇಳಿದರು.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್, ರಾಜ್ಯ ಕದಳಿ ಮಹಿಳಾ ವೇದಿಕೆ ವತಿಯಿಂದ ಭಾನುವಾರ ನಡೆದ 12ನೇ ರಾಜ್ಯ ಮಟ್ಟದ ಕದಳಿ ಮಹಿಳಾ ಸಮಾವೇಶದ ಸಮಾರೋಪ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು
ಡಾ. ಎಂ.ಎಂ. ಕಲ್ಬುರ್ಗಿ ಹಾಗೂ ಗೌರಿ ಲಂಕೇಶ ಹತ್ಯೆ ಮಾಡಿದವರನ್ನು ಸನ್ಮಾನಿಸುವ ಚಾಳಿ ಮುಂದುವರಿದಿರುವುದು ದುರಂತದ ಸಂಗತಿ ಎಂದು ವಿಷಾದ ವ್ಯಕ್ತಪಡಿಸಿದರು.

ಜಾತಿ ಜನಗಣತಿ ಬಗ್ಗೆ ರಾಜ್ಯದಲ್ಲಿ ವಿವಾದ ಹುಟ್ಟಿದೆ. ಇದರಲ್ಲಿ ನಾವು ಮತ್ತು ಸರ್ಕಾರ ತಪ್ಪು ಮಾಡಿದ್ದೇವೆ. ಲೋಹಿಯಾವಾದಿಯಾಗಿ ಜಾತಿ ಗಣತಿ ಆಗಲೇಬೇಕು. ಅದನ್ನು ಸ್ವಾಗತಿಸಬೇಕು. ನಂತರದಲ್ಲಿ ಚರ್ಚೆ ನಡೆಯಲಿ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ, ಎಂದು ತಿಳಿಸಿದರು

ಸಮಾರೋಪ ನುಡಿಗಳನ್ನಾಡಿದ ಬೀದರ್ ನ ಬಸವಗಿರಿಯ ಬಸವಸೇವಾ ಪ್ರತಿಷ್ಠಾನದ ಡಾ. ಗಂಗಾಂಬಿಕಾ ಅಕ್ಕ, ಚನ್ನಮಲ್ಲಿಕಾರ್ಜುನನ ಮೆಚ್ಚಿನ ಗಿರಿಯ ಸುತ್ತಿ ಕದಳಿ ಹೊಕ್ಕ ಅಕ್ಕಮಹಾದೇವಿ ಕದಳಿ ಎಂಬುದು ತನು, ಕದಳಿ ಎಂಬುದು ಮನ ಎಂಬ ಅನುಭಾವದ ಅರ್ಥವನ್ನು ಮಾಡಿಕೊಳ್ಳಬೇಕು ಎಂದರು.

ಯಾವುದೇ ಧರ್ಮ ಹಾಗೂ ಸಂಘಟನೆ ಅದರ ಅನುಯಾಯಿಗಳನ್ನು ಅವಲಂಬಿಸಿರುತ್ತದೆ ಎನ್ನುವಂತೆ ದೀನ, ದಲಿತ ಮತ್ತು ಸಮಾಜದ ಕಟ್ಟ ಕಡೆಯ ಜನರ ಕಣ್ಣೀರು ಒರೆಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.

ಶರಣೆಯರ ವಚನಗಳಲ್ಲಿ ವೈಚಾರಿಕತೆ, ವೈಜ್ಞಾನಿಕತೆ ಹಾಗೂ ಕ್ರಿಯಾತ್ಮಕತೆ ಕಂಡು ಬರುತ್ತಿದೆ ಎಂದು ಸಮ್ಮೇಳನಾಧ್ಯಕ್ಷೆ ಡಾ. ಮೀನಾಕ್ಷಿ ಬಾಳಿ ಮಾತನಾಡಿ, ವಚನ ದರ್ಶನ ಕೃತಿ ಬಿಡುಗಡೆ ಹಾಗೂ ಕಲ್ಬುರ್ಗಿ ಮತ್ತು ಗೌರಿ ಲಂಕೇಶ ಅವರನ್ನು ಹತ್ಯೆ ಮಾಡಿದವರನ್ನು ಸನ್ಮಾನಿಸಿರುವುದರ ಬಗ್ಗೆ, ಮಹಿಳೆಯರ ಮೇಲಿನ ಅತ್ಯಾಚಾರ,ಅನ್ಯಾಯವನ್ನು ಶರಣ ಸಾಹಿತ್ಯ ಪರಿಷತ್ ಹಾಗೂ ಕದಳಿ ಮಹಿಳಾ‌ ವೇದಿಕೆ ಖಂಡನಾ ನಿರ್ಣಯ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಅಧ್ಯಕ್ಷತೆ ವಹಿಸಿದ್ದ ಸಾಂಸ್ಕೃತಿಕ ಚಿಂತಕ ಶಂಕರ ದೇವನೂರ ಮಾತನಾಡಿ, ಹುಟ್ಟುತ್ತ ಮಗುವಾಗಿ, ಬೆಳೆಯುತ್ತ ಸಾಧಕನಾಗಿ, ಕೊನೆಯಲ್ಲಿ ಬೆಳಕಾಗುವುದೇ ಜೀವನ.‌ ಬದುಕು ಕೂಡ ಹೂವಿನಂತೆ ಮಾಡಿಕೊಳ್ಳುವುದೇ ಶರಣತತ್ವ ಎಂದರು.

ನಮ್ಮ ಮನಸ್ಸು ಜೀವಂತಿಕೆಯ ಸ್ವಭಾವ ಪಡೆಯಬೇಕಾದರೆ ನಾವು ಮತ್ತೆ ಹನ್ನೆರಡನೆ ಶತಮಾನಕ್ಕೆ ಧಾವಿಸುತ್ತದೆ. ಮಾನವಶಕ್ತಿಯ ಪೂರ್ಣ ವಿಕಾಸದ ಶಕ್ತಿಯನ್ನು ಶರಣರು ಕಲ್ಪಿಸಿದರು ಎಂದು ಹೇಳಿದರು.

ಮಾತಿಲ್ಲದವರಿಗೆ ಧ್ವನಿಯಾದ ಶರಣರು, ಅನುಭಾವದೆಡೆಗೆ ಹೋಗುವ ಜಂಗಮವನ್ನು ಕೊಟ್ಟ ಜಗತ್ತಿನ ಏಕೈಕ ಸಂಸ್ಕೃತಿ ಶರಣ ಸಂಸ್ಕೃತಿ. ನಮ್ಮ ಬದುಕು ಪ್ರದರ್ಶನವಾಗಬಾರದು. ನಮ್ಮ ಬದುಕು ನಿದರ್ಶನವಾಗಬೇಕು ಎಂದು ತಿಳಿಸಿದರು.

ಅಖಿಲ ಭಾರತ ಶರಣ ಪರಿಷತ್ ಗೌರವಾಧ್ಯಕ್ಷ ಜಗದ್ಗುರು ಡಾ.‌ ತೋಂಟದ ಸಿದ್ಧರಾಮ ಮಹಾಸ್ವಾಮಿಗಳು, ಭಾಲ್ಕಿಯ ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರು ಸಾನ್ನಿಧ್ಯ ವಹಿಸಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಜಿಪಂ ಮಾಜಿ ಉಪಾಧ್ಯಕ್ಷ ನಿತಿನ್ ವಿ. ಗುತ್ತೇದಾರ, ಪ್ರಕಾಶ ಅಂಗಡಿ, ಶಾಂತಲಿಂಗ ಪಾಟೀಲ ಕೋಳಕೂರ, ಕುಪೇಂದ್ರ ಪಾಟೀಲ, ಬಸವರಾಜ ಮೊರಬದ, ಡಾ. ಶಾಂತಾ ಅಸ್ಟಿಗೆ, ಎಚ್.ಬಿ. ಶೈಲಜಾ, ಜಯಶ್ರೀ ಚಟ್ನಳ್ಳಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಶರಣಕುಮಾರ ಮೋದಿ, ಭಾರತಿ ರೇಷ್ಮೆ ಇತರರು ವೇದಿಕೆಯಲ್ಲಿದ್ದರು.

ಪರಿಷತ್ ಹಿರಿಯ ಉಪಾಧ್ಯಕ್ಷ ಅಪ್ಪಾರಾವ ಅಕ್ಕೋಣಿ ಪ್ರಾಸ್ತಾವಿಕ ಮಾತನಾಡಿದರು. ಸಾರಿಕಾದೇವಿ ಎಲ್. ಕಾಳಗಿ, ಅಂಬಾರಾಯ ಮಡ್ಡೆ ನಿರೂಪಿಸಿದರು. ಡಾ.‌ ಶರಣಬಸಪ್ಪ ವಡ್ಡನಕೇರಿ ಸ್ವಾಗತಿಸಿದರು. ಡಾ. ಮಲ್ಲಿಕಾರ್ಜುನ ವಡ್ಡನಕೇರಿ ವಂದಿಸಿದರು.

Share This Article
Leave a comment

Leave a Reply

Your email address will not be published. Required fields are marked *