ಕಳೆದ 15 ವರ್ಷಗಳಿಂದ ಅಣ್ಣೀಗೆರೆಯ ಯಶಸ್ವಿನಿಯೋಗ ಸಂಸ್ಥೆ ಹಳ್ಳಿ ಹಳ್ಳಿಗಳಲ್ಲಿ ಯೋಗದ ಕಾರ್ಯಕ್ರಮಗಳ ಮೂಲಕ ಅರಿವನ್ನು ಮೂಡಿಸುತ್ತಾ ಬಂದಿದೆ.
ಪಾತೇನಹಳ್ಳಿ (ಕಡೂರು)
ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಪಂಚಭೂತಗಳಾದ ನೀರು, ಗಾಳಿ, ಭೂಮಿ, ಆಕಾಶ, ಬೆಂಕಿಗಳ ನಾಶಕ್ಕೆ ಕಾರಣನಾಗಿದ್ದಾನೆ. ಇವು ಸಕಲ ಜೀವಜಂತುಗಳಿಗೆ ಶಕ್ತಿ ತುಂಬುವಂತಹವುಗಳು. ಇವುಗಳನ್ನೇ ಕಲುಷಿತಗೊಳಿಸಿ ತನ್ನ ತಲೆಯ ಮೇಲೆ ತಾನೇ ಚಪ್ಪಡಿ ಎಳೆದುಕೊಳ್ಳುವಂಥ ಕಾರ್ಯ ಮನುಷ್ಯ ಮಾಡುತ್ತಿದ್ದಾನೆ ಎಂದು ಸಾಣೇಹಳ್ಳಿಯ ಡಾ. ಪಂಡಿತರಾಧ್ಯ ಶಿವಾಚಾರ್ಯ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದರು.

ಕಡೂರು ತಾ. ಪಾತೇನಹಳ್ಳಿ ಗ್ರಾಮದಲ್ಲಿ ಯಶಸ್ವಿನಿಯೋಗ ಸಂಸ್ಥೆ, ತಾಲೂಕಾ ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ ಸಯುಕ್ತಾಶ್ರಯದಲ್ಲಿ ನಡೆದ ‘ಶರಣರ ಬೆಳದಿಂಗಳು-29’ ಮತ್ತು ‘ಯೋಗ ದಿನದರ್ಶಿಕೆ ಬಿಡುಗಡೆ’ ಸಮಾರಂಭದ ಸಾನಿಧ್ಯವಹಿಸಿ ಅವರು ಮಾತನಾಡುತ್ತ, ನಾಗರಿಕತೆ ಬೆಳೆದಂತೆಲ್ಲಾ ನಮ್ಮ ಹಿರಿಯರು ಹಾಕಿಕೊಟ್ಟ ಸಂಸ್ಕೃತಿ, ಸಂಸ್ಕಾರ ನಮ್ಮಿಂದ ದೂರವಾಗುತ್ತಿವೆ.

ಇಂತಹ ಸಂದರ್ಭದಲ್ಲಿ ಯೋಗ ನಮಗೆ ಒಂದು ಉತ್ತಮ ಸಾಧನ, ಯೋಗ ನಮ್ಮನ್ನೆಲ್ಲಾ ಒಂದಾಗಿಸಿ ವೇದಿಕೆಯಲ್ಲಿ ತಂದು ನಿಲ್ಲಿಸಿದೆ. ಯೋಗ ಎಂದರೆ ಕೂಡಿಸುವದು, ಜನರ ಆರೋಗ್ಯ ಮತ್ತು ಮಾನಸಿಕ ಸ್ಥಿತಿಗತಿಗಳನ್ನು ಉತ್ತಮ ಪಡಿಸುವುದು ಎಂದರು.

ಕಳೆದ 15 ವರ್ಷಗಳಿಂದ ಅಣ್ಣೀಗೆರೆಯ ಯಶಸ್ವಿನಿಯೋಗ ಸಂಸ್ಥೆ ಹಳ್ಳಿ ಹಳ್ಳಿಗಳಲ್ಲಿ ಇಂತಹ ಯೋಗದ ಕಾರ್ಯಕ್ರಮಗಳ ಮೂಲಕ ಅರಿವನ್ನು ಮೂಡಿಸುತ್ತಾ ಜನರ ಮಧ್ಯೆ ಒಂದು ಬಾಂಧವ್ಯ ಬೆಳೆಸುವ ಕೆಲಸ ಮಾಡುತ್ತಾ ಬಂದಿದೆ. ಇಂದು ಪಾತೇನಹಳ್ಳಿ ಗ್ರಾಮದ ಜನರು ತುಂಬಾ ಶಿಸ್ತಿನಿಂದ ಭಾಗವಹಿಸಿ, ಇಡೀ ಗ್ರಾಮವನ್ನು ಸಿಂಗರಿಸಿ ಸಂಭ್ರಮಿಸುತ್ತಿರುವುದನ್ನು ನೋಡಿ ಸಂತಸವಾಗಿದೆ ಎಂದರು.

ಸಾನಿಧ್ಯ ವಹಿಸಿದ್ದ ಭಗೀರಥ ಪೀಠದ ಪೂಜ್ಯ ಡಾ. ಪುರುಷೋತ್ತಮಾನಂದ ಪುರಿ ಸ್ವಾಮೀಜಿ ಮಾತನಾಡುತ್ತಾ, ಯೋಗವು ನಮ್ಮ ಬದುಕಿನ ದಾರಿ ಸನ್ಮಾರ್ಗದಲ್ಲಿರಬೇಕು ಎಂಬುದನ್ನು ಕಲಿಸುತ್ತದೆ. ಹಳ್ಳಿಗಾಡಿನ ಜನರ ಮನಸ್ಥಿತಿ ಅವರ ದೇಹಾರೋಗ್ಯ ಉತ್ತಮ ಪಡಿಸಲು ಇಂಥ ಕಾರ್ಯಕ್ರಮಗಳು ತುಂಬಾ ಅವಶ್ಯಕತೆಯಾಗಿವೆ ಎಂದರು.

ಕಾರ್ಯಕ್ರಮದ ಉದ್ಘಾಟನೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷ ಜಿ.ಡಿ. ಶಂಕರಪ್ಪ ಮಾಡಿ ಮಾತನಾಡಿದರು. ಡಾ.ಎಚ್ ಎಲ್. ಮಲ್ಲೇಶಗೌಡ್ರು ಗ್ರಾಮೀಣ ಬದುಕಿನ ಅವಸಾನ, ವರ್ತಮಾನ ಪರಿಸ್ಥಿತಿ ಕುರಿತು ಉಪನ್ಯಾಸ ಗೈದರು.
ಬ್ಯಾಗಡೆಹಳ್ಳಿ ಬಸವರಾಜ ಮತ್ತು ಬೀರೂರಿನ ಯೋಗಪಟು ಸೀತಾರಾ ಅವರುಗಳನ್ನು ಸನ್ಮಾನಿಸಲಾಯಿತು. ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷ ಹೆಚ್. ಗಂಗಾಧರ ಶಿವಪುರ ಮತ್ತಿತರರು ವೇದಿಕೆ ಮೇಲಿದ್ದರು.

ಮಕ್ಕಳಿಂದ ನಡೆದ ವಚನಯೋಗ ನೃತ್ಯ ರೂಪಕ ಎಲ್ಲರ ಗಮನ ಸೆಳೆದು, ಮೆಚ್ಚುಗೆ ಪಡೆಯಿತು.
ಶಿಕ್ಷಕ ನಾಗರಾಜ ಸ್ವಾಗತಿಸಿದರು. ಯೋಗ ಶಿಕ್ಷಕ ದೇವೇಂದ್ರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಮಕ್ಕಳಿಂದ ಯೋಗ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ಕೆ. ವಿರುಪಾಕ್ಷಪ್ಪ ನಿರೂಪಣೆ, ರಂಗನಾಥ ಶರಣು ಸಮರ್ಪಣೆ ಮಾಡಿದರು. ನೂರಾರು ಸಂಖ್ಯೆಯಲ್ಲಿ ಜನರು ನೆರೆದಿದ್ದರು.