ಗದಗ
ಕಲಬುರ್ಗಿಯಲ್ಲಿ ಜನೇವರಿ 17ರಿಂದ 19 ರವರೆಗೆ ನಡೆಯುತ್ತಿರುವ ಸೌಹಾರ್ದ ಕರ್ನಾಟಕ ನೇತೃತ್ವದ ಬಹುತ್ವ ಸಂಸ್ಕೃತಿ ಭಾರತೋತ್ಸವಕ್ಕೆ ಬರಲು ತೋಂಟದಾರ್ಯ ಮಠದ ಡಾ. ತೋಂಟದ ಸಿದ್ದರಾಮ ಮಹಾಸ್ವಾಮಿಗಳಿಗೆ, ಮಠದ ಸದ್ಭಕ್ತರಿಗೆ ಸಾಹಿತಿ, ಹೋರಾಟಗಾತಿ ಡಾ. ಮೀನಾಕ್ಷಿ ಬಾಳಿ ಅಹ್ವಾನ ನೀಡಿ ಮನವಿ ಮಾಡಿದರು.
ಶನಿವಾರ ತೋಂಟದಾರ್ಯ ಮಠದ ಅನುಭವ ಮಂಟಪದಲ್ಲಿ ನಡೆದ ಗದಗ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ನೂತನ ಪದಾಧಿಕಾರಿಗಳ ಸೇವಾದೀಕ್ಷೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಹಿಳೆಯರಿಗೆ ಧಾರ್ಮಿಕ ಸ್ವಾತಂತ್ರ್ಯವಿಲ್ಲದ ಕಾಲದಲ್ಲಿ ಇಷ್ಟಲಿಂಗವನ್ನು ಜನಸಾಮಾನ್ಯರ ಹಸ್ತಕ್ಕಿರಿಸಿ ಅದರ ಉಪಾಸನೆ ಮಾಡುವುದರ ಮೂಲಕ ಎಲ್ಲರೂ ದೈವತ್ವವನ್ನು ಸಾಧಿಸಬಹುದು ಎಂದು ಬಸವಣ್ಣನವರು ಮನುಕುಲಕ್ಕೆ ತಿಳಿಸಿದ್ದಾರೆ, ಎಂದು ಬಾಳಿ ಹೇಳಿದರು.
ಸಿದ್ದರಾಮ ಶ್ರೀಗಳು ಪರಿಷತ್ತಿನ ನೂತನ ಅಧ್ಯಕ್ಷ ಕೆ. ಎ. ಬಳಿಗೇರ ಅವರಿಗೆ ಪರಿಷತ್ತಿನ ಧ್ವಜವನ್ನು ಹಸ್ತಾಂತರಿಸಿ ಕಾರ್ಯಕ್ರಮದಲ್ಲಿ ಮಾತನಾಡಿದರು. ನಮ್ಮ ಸಂವಿಧಾನದ ಆಶಯಗಳೆಲ್ಲ ವಚನ ಸಾಹಿತ್ಯದಲ್ಲಿವೆ, ರಾಜಕೀಯ ಜನಪ್ರತಿನಿಧಿಗಳು ಅನ್ನದೊಳಗೊಂದಗುಳ …..ಎಂಬ ಬಸವಣ್ಣನವರ ವಚನವನ್ನು ಹೇಳುವುದರ ಮೂಲಕ ಪ್ರಮಾಣವಚನ ಸ್ವೀಕರಿಸಬೇಕು, ಎಂದರು.

ವಚನ ಸಾಹಿತ್ಯವನ್ನು ಸರಿಯಾಗಿ ಅಧ್ಯಯನ ಮಾಡಿದರೆ ನಮ್ಮ ಸಮಾಜದಲ್ಲಿರುವ ಮೌಢ್ಯತೆ, ಕಂದಾಚಾರಗಳನ್ನು ಹೋಗಲಾಡಿಸಿ ಸಮಾಜವನ್ನು ಸರ್ವ ವಿಧದಿಂದಲೂ ಸಶಕ್ತ ಗೊಳಿಸಬಹುದು
ಪರಿಷತ್ತಿನ ನೂತನ ಅಧ್ಯಕ್ಷ ಕೆ. ಎ. ಬಳಿಗೇರ ಪ್ರಾಸ್ತಾವಿಕವಾಗಿ ಮಾತನಾಡಿ, ಪರಿಷತ್ತು ಜಿಲ್ಲೆಯಲ್ಲಿ ನಡೆದು ಬಂದ ದಾರಿಯ ಸಿಂಹಾವಲೋಕನ ಮಾಡಿದರು.

ಕಾರ್ಯಕ್ರಮವನ್ನು ಮಾಜಿ ಶಾಸಕ ಡಿ.ಆರ್. ಪಾಟೀಲ ಅವರು ಉದ್ಘಾಟಿಸಿ ಶರಣರ ಜೀವನಾದರ್ಶಗಳನ್ನು, ವಚನಗಳ ತತ್ವ ಸಿದ್ಧಾಂತಗಳನ್ನು ಮನೆಮನೆಗಳಿಗೆ ತಲುಪಿಸಬೇಕು. ಶಾಲಾ-ಕಾಲೇಜಿನ ವಿದ್ಯಾರ್ಥಿಗಳಿಗೆ ವಚನಗಳಲ್ಲಿರುವ ಮೌಲ್ಯಗಳನ್ನು ತಿಳಿಸುವ ಗುರುತರವಾದ ಜವಾಬ್ದಾರಿಯನ್ನು ನೂತನ ಪದಾಧಿಕಾರಿಗಳು ನಡೆಸಿಕೊಡಬೇಕು. ಪರಿಷತ್ತು ಹಾಕಿಕೊಳ್ಳುವ ಎಲ್ಲ ಕಾರ್ಯಕ್ರಮಗಳಲ್ಲೂ ನನ್ನ ಸಹಕಾರವಿದೆ ಎಂದರು.
ಅಧ್ಯಕ್ಷತೆಯನ್ನು ಮಾಜಿ ಸಚಿವರಾದ ಎಸ್.ಎಸ್. ಪಾಟೀಲ ವಹಿಸಿ ಮಾತನಾಡಿ, ಪ್ರತಿಯೊಬ್ಬ ಮಹಿಳೆಯರು ತಮ್ಮ ಮಕ್ಕಳಿಗೆ ವಚನಗಳನ್ನು ಕಲಿಸಿ ಶರಣರ ಜೀವನಾದರ್ಶಗಳನ್ನು ತಿಳಿಸಿ ಸಂಸ್ಕಾರವನ್ನು ಕಲಿಸುವ ಗುರುತರ ಜವಾಬ್ದಾರಿ ವಹಿಸಬೇಕು ಎಂದರು.

ಅತಿಥಿಗಳಾಗಿ ಜಾ.ಲಿಂ. ಮಹಾಸಭಾ ಜಿಲ್ಲಾಧ್ಯಕ್ಷ ಕೆ. ಎಸ್. ಚಟ್ಟಿ, ಶಹಾಪುರ ಸಾಹಿತಿ ವಿಶ್ವರಾಧ್ಯ ಸತ್ಯಂಪೇಟೆ, ಪ್ರಭುಲಿಂಗ ಮಹಾಗಾಂವಕರ, ಯುಪಿಎಸ್ಸಿ ಪರೀಕ್ಷೆಯಲ್ಲಿ ದೇಶಕ್ಕೆ 434 ನೇ ರ್ಯಾಂಕ್ ಪಡೆದ ಯಲ್ಲಪ್ಪ ಗೋಶ್ಯಾಲ್ಲನವರ ಅವರನ್ನು ಹಾಗೂ ಹತ್ತು ಜನ ನೂತನ ದತ್ತಿದಾನಿಗಳನ್ನು ಸನ್ಮಾನಿಸಲಾಯಿತು.
ನಿವೃತ್ತ ಉಪನಿರ್ದೇಶಕರಾದ ಐ. ಬಿ. ಬೆನಕೊಪ್ಪ ಅವರು ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದರು. ಶಸಾಪ ಮಾಜಿ ಅಧ್ಯಕ್ಷ ಎ. ಓ. ಪಾಟೀಲ, ಕಲಬುರ್ಗಿಯ ಸಾಹಿತಿ ಶ್ರೀ ಪ್ರಭು ಖಾನಾಪುರೆ, ಪ್ರಗತಿಶೀಲ ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡ್ರು, ಕದಳಿ ವೇದಿಕೆ ಜಿಲ್ಲಾಧ್ಯಕ್ಷೆ ಸುಧಾ ಹುಚ್ಚಣ್ಣವರ, ಆರ್.ಎಲ್. ಪೊಲೀಸಪಾಟೀಲ, ಡಾ.ಎಸ್. ಸಿ. ಚವಡಿ, ವೀರೇಶ ಬಾದಾಮಿ. ಶೇಖಣ್ಣ ಕಳಸಾಪುರ, ಎಂ. ಕೆ. ಲಮಾಣಿ, ಚಾಂದಸಾಬ ಮುಳಗುಂದ, ಶ್ರೀಮತಿ ಲೀಲಕ್ಕ ಹಸಬಿ, ಜಾಬಣ್ಣವರ, ಗಿರಿಜಾ ಹಸಬಿ, ಬಸವರಾಜ ಕೊಟಗಿ, ಕೆ.ಎಸ್. ಸಾಲಿಮಠ, ತಾಲೂಕುಗಳ ಅಧ್ಯಕ್ಷರು ಹಾಗೂ ಕದಳಿ ವೇದಿಕೆ ಅಧ್ಯಕ್ಷರು ಹಾಜರಿದ್ದರು.
ಶ್ರೀಮತಿ ನೀಲಮ್ಮ ಕುಳಗೇರಿ ಹಾಗೂ ರೇಣುಕಾ ಲಕ್ಕುಂಡಿ ಇವರು ವಚನ ಗಾಯನವನ್ನು, ನಿರೂಪಣೆಯನ್ನು ಕುಮಾರಿ ವರ್ಷಾ ಬಾರಕೇರ ನಿರ್ವಹಿಸಿದರು.
ಇದೇ ಸಂದರ್ಭದಲ್ಲಿ ವಿಜಯಪುರ ಅಕ್ಕಮಹಾದೇವಿ ವಿವಿಯಿಂದ ಗೌರವ ಡಾಕ್ಟರೇಟ್ ಪಡೆದ ಡಾ. ಮೀನಾಕ್ಷಿ ಬಾಳಿ ಅವರನ್ನು ಸತ್ಕರಿಸಲಾಯಿತು.

It is encouraging to see such participation.