ಚೌಡಯ್ಯನ ಮೂರ್ತಿಗೆ ಹೆಲಿಕಾಪ್ಟರ್ ನಿಂದ ಪುಷ್ಪವೃಷ್ಟಿ
ಕಲಬುರಗಿ
ನಿಜಶರಣ ಅಂಬಿಗರ ಚೌಡಯ್ಯನವರಂತಹ ಮಹಾತ್ಮರ ತತ್ವಾದರ್ಶಗಳನ್ನು ಬೆಳೆಸಿಕೊಂಡು ಎದೆಯಲ್ಲಿ ಡಾ. ಅಂಬೇಡ್ಕರ ಅವರ ಸಂವಿಧಾನ ಮುಂದಿಟ್ಟುಕೊಂಡು ಶಿಕ್ಷಣ ಪಡೆದುಕೊಳ್ಳಬೇಕು ಎಂದು ಗುಲ್ಬರ್ಗಾ ವಿವಿಯ ಕನ್ನಡ ಅಧ್ಯಯನ ಸಂಸ್ಥೆ ಹಾಗೂ ನಿಜಶರಣ ಅಂಬಿಗರ ಚೌಡಯ್ಯ ಅಧ್ಯಯನ ಪೀಠದ ನಿರ್ದೇಶಕ ಎಚ್.ಟಿ. ಪೋತೆ ಅವರು ಕರೆ ನೀಡಿದರು.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಪಂಚಾಯತ ಹಾಗೂ ಕೋಲಿ ಸಮುದಾಯದ ಆಶ್ರಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ 906 ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಪುಷ್ಪಾರ್ಚನೆ ಮಾಡಿ ವಿಶೇಷ ಉಪನ್ಯಾಸಕರಾಗಿ ಮಾತನಾಡಿದರು.

12ನೇ ಶತಮಾನದ ನಿಜಶರಣ ಅಂಬಿಗರ ಚೌಡಯ್ಯ ಅವರು ಕ್ರಾಂತಿಕಾರಿ ಸ್ವಾಭಿಮಾನಿಗಳಾಗಿದ್ದರು. ಅವರಂತೆಯೇ ಇಂದು ಶಿಕ್ಷಣ ಪಡೆದು ಅರಿವು ಪಡೆದುಕೊಳ್ಳಬೇಕಾಗಿದೆ. ಶಿಕ್ಷಣದಿಂದಲೇ ಸಮಾಜದ ಅಭಿವೃದ್ಧಿ, ಮೀಸಲಾತಿ ಹಕ್ಕು ಸಿಗಲಿವೆ ಎಂದು ಅಭಿಪ್ರಾಯಪಟ್ಟರು.
ವಿಧಾನ ಪರಿಷತ್ ಶಾಸಕರಾದ ತಿಪ್ಪಣ್ಣಪ್ಪ ಕಮಕನೂರ ಮಾತನಾಡಿ, ಅಂಬಿಗರ ಚೌಡಯ್ಯನವರ ಅಭಿವೃದ್ಧಿ ನಿಗಮ ಸ್ಥಾಪಿಸಿ, ಅದಕ್ಕೆ 300 ಕೋಟಿ ಅನುದಾನ ನೀಡುವಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು. ಮಾತಾ ಮಾಣಿಕೇಶ್ವರಿ ಅಭಿವೃದ್ಧಿ ಪ್ರಾಧಿಕಾರ ಮಾಡಲಾಗಿದೆ. ಇದಕ್ಕೆ ಸೂಕ್ತ ಅನುದಾನ ನೀಡಬೇಕು. ಕೋಲಿ ಸಮುದಾಯವನ್ನು ಎಸ್.ಟಿ. ಪಟ್ಟಿಗೆ ಸೇರಿಸಬೇಕೆಂದು ಒತ್ತಾಸೆಯನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಅಲ್ಲಮಪ್ರಭು ಪಾಟೀಲ ಮಾತನಾಡಿ, ಕೋಲಿ ಸಮುದಾಯಕ್ಕೆ ಎಸ್.ಟಿ. ಪಟ್ಟಿಗೆ ಸೇರ್ಪಡೆ ಕುರಿತಾಗಿ ಮುಖ್ಯಮಂತ್ರಿಗಳಿಗೆ ನಿಯೋಗ ಹೋಗಿದ್ದೇವೆ. ಶೀಘ್ರದಲ್ಲೇ ಎಸ್.ಟಿ.ಗೆ ಸೇರಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಶಾಸಕ ತಿಪ್ಪಣ್ಣಪ್ಪನವರ ಮಾತಿಗೆ ಪ್ರತಿಕ್ರಿಯಿಸಿದರು.
ಭಾರತ ಸಂವಿಧಾನ, ಸಂಸತ್ತು ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯು ಸುಮಾರು 9 ಶತಮಾನಗಳ ಮೊದಲೇ ಮುನ್ನುಡಿ ಬರೆದವರು ನಿಜಶರಣ ಅಂಬಿಗರ ಚೌಡಯ್ಯನವರು, ಅವರ ಆದರ್ಶ ಮತ್ತು ನೈತಿಕ ಮೌಲ್ಯಗಳು ನಮ್ಮ ಜೀವನದಲ್ಲಿ ಆಳವಡಿಸಿಕೊಳ್ಳಬೇಕು ಎಂದರು.

ಸುಲಫಲ ಮಠದ ಸಾರಂಗಧಾರ ದೇಶಿಕೇಂದ್ರದ ಮಹಾಸ್ವಾಮೀಜಿ ಮತ್ತು ತೋನಸನಳ್ಳಿಯ ಮಲ್ಲಣ್ಣಪ್ಪ ಮುತ್ಯಾ ಅವರು ಸಾನಿಧ್ಯ ವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಪ್ರತಿಭಾವಂತ ಮಕ್ಕಳಿಗೆ ಲ್ಯಾಪ್ ಟಾಪ್ ಮತ್ತು ಅಂಗವಿಕಲ ಮಕ್ಕಳಿಗೆ ತ್ರಿಚಕ್ರ ಸೈಕಲ್ ವಿತರಿಸಲಾಯಿತು.
ಸಮಾಜದ ಮುಖಂಡರಾದ ಬಸವರಾಜ ಬೂದಿಹಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕಿ ಜಗದೀಶ್ವರಿ ನಾಸಿ ಅವರು ಸ್ವಾಗತಿಸಿದರು. ಶಿವಾನಂದ ಅಣಜಗಿ ನಿರೂಪಿಸಿದರು.
ಇದಕ್ಕೂ ಮುನ್ನ ವಚನಗ್ರಂಥ ಹಾಗೂ ಅಂಬಿಗರ ಚೌಡಯ್ಯನವರ ಮೂರ್ತಿಗೆ ಬಿ. ಫೌಜಿಯಾ ತರನ್ನುಮ್, ಪೋಲಿಸ್ ನಗರ ಆಯುಕ್ತ ಶರಣಪ್ಪ ಎಸ್.ಡಿ, ಎಸ್.ಪಿ. ಅಡ್ಡರೂ ಶ್ರೀನಿವಾಸ, ಗ್ರಾಮೀಣ ಶಾಸಕ ಬಸವರಾಜ ಮತ್ತಿಮಡು, ಸೇರಿದಂತೆ ಅನೇಕ ಗಣ್ಯರು ಪುಷ್ಪಾರ್ಚನೆ ಮಾಡಿದರು. ಪಾಲಿಕೆಯ ಆವರಣದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಮೂರ್ತಿ ಪ್ರತಿಷ್ಠಾಪನೆಗೆ ಗುದ್ದಲಿ ಪೂಜೆ ನೆರವೇರಿಸಲಾಯಿತು. ವಿವಿಧ ವಾಧ್ಯ, ಗೊಂಬೆಗಳ ಪ್ರದರ್ಶನ, ನಾಸಿಕ ಡೋಲ್, ಜನಪದ ಕಲಾ ತಂಡಗಳು, ಹುಲಿ ಕುಣಿತ ಸೇರಿದಂತೆ ವಿವಿಧ ವೇಷಧಾರಿಗಳ ಮೂಲಕ ನಡೆದ ಮೆರವಣಿಗೆಯು ಡಾ.ಎಸ್.ಎಂ. ಪಂಡಿತ್ ರಂಗಮಂದಿರಕ್ಕೆ ತಲುಪಿತು.
ಬಸವರಾಜ ಬಳ್ಳಾರಿ ಭರತನಾಟ್ಯ ಪ್ರದರ್ಶಿಸಿ ಗಮನ ಸೆಳೆದರು. ಬಸವರಾಜ ಶೃಂಗೇರಿ ಹಾಗೂ ಅವರ ತಂಡದಿಂದ ನಾಡಗೀತೆ ಪ್ರಸ್ತುತ ಪಡಿಸಲಾಯಿತು.

ಮಹಾನಗರ ಪಾಲಿಕೆ ಮಹಾಪೌರರಾದ ವರ್ಷಾಜಾನೆ, ಬಿ.ಜಿ. ಪಾಟೀಲ, ಶಶೀಲ ನಮೋಶಿ, ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ, ಕೆಕೆಆರ್ ಟಿಸಿ ಅಧ್ಯಕ್ಷ ಅರುಣಕುಮಾರ ಪಾಟೀಲ, ಕುಡಾ ಅಧ್ಯಕ್ಷ ಮಝಹರಖಾನ್ ಆಲಂ, ಜೆಸ್ಕಾಂ ಅಧ್ಯಕ್ಷ ಪ್ರವೀಣ ಪಾಟೀಲ ಹರವಾಳ, ಮೋಹನಕುಮಾರ, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಸಾಯಿಬಣ್ಣ ನೀಲಪ್ಪಗೊಳ, ರವಿರಾಜ ಕೊರವಿ, ರಮೇಶ್ ನಾಟಿಕಾರ, ಶಿವಾನಂದ ಹೊನಗುಂಟಿ, ಅಶೋಕ ವೀರನಾಯಕ, ಲಚ್ಚಪ್ಪ ಜಮಾದಾರ, ಅಂಬು ಡಿಗ್ಗಿ, ಬಸವರಾಜ ಗುಂಡಲಗೇರಿ, ಶ್ಯಾಮರಾವ ಸುಲ್ತಾನಪುರ, ಶಾಂತಪ್ಪ ಕೂಡಿ, ವಿಜಯಕುಮಾರ ಹದಗಲ್, ಶಿವಶರಣಪ್ಪ ಕೋಬಾಳ, ಅನುಪಮಾ ಕಮಕನೂರು, ಕಾಂಗ್ರೆಸ್ ಮುಖಂಡ ನೀಲಕಂಠರಾವ ಮೂಲಗೆ, ಅವ್ವಣ್ಣ ಮ್ಯಾಕೇರಿ, ವಾಣಿ ಸಗರಕರ, ಸೇರಿದಂತೆ ಜಯಂತ್ಯೋತ್ಸವ ಸಮಿತಿ ಅಧ್ಯಕ್ಷ ಜಯಪ್ರಕಾಶ ಕಮಕನೂರ ಇದ್ದರು.
ಚೌಡಯ್ಯನ ಮೂರ್ತಿಗೆ ಹೆಲಿಕಾಪ್ಟರ್ ನಿಂದ ಪುಷ್ಪವೃಷ್ಟಿ:
ನಿಜ ಶರಣ ಅಂಬಿಗರ ಚೌಡಯ್ಯನವರ ಜಯಂತ್ಯುತ್ಸವದ ನಿಮಿತ್ತ ನಗರದಾದ್ಯಂತ ಚೌಡಯ್ಯನವರ ಚಿತ್ರವುಳ್ಳ ಕೇಸರಿ ಬಾವುಟಗಳು, ಡಿಜೆ ಸದ್ದು, ಘೋಷಣೆಗಳು, ಪುಷ್ಪವೃಷ್ಟಿ, ಕುಣಿತ, ಡೊಳ್ಳಿನ ಸದ್ದು ಕೇಳಿ ಬಂದವು.
ನಗರೇಶ್ವರ ಶಾಲೆಯಿಂದ ಹೊರಟ ಮೆರವಣಿಗೆ ಎಸ್.ಎಂ. ಪಂಡಿತ ರಂಗಮಂದಿರದವರೆಗೆ ಆಗಮಿಸಿತು. ಮೆರವಣಿಗೆ ವೇಳೆ ಚೌಡಯ್ಯನ ಮೂರ್ತಿಗೆ ಹೆಲಿಕಾಪ್ಟರ್ ನಿಂದ ಪುಷ್ಪವೃಷ್ಟಿ ಮಾಡಲಾಯಿತು. ಸಂಜೆಯೂ ಅದ್ದೂರಿ ಮೆರವಣಿಗೆ ಜರುಗಿತು.
