’10 ಜನ್ಮಗಳಲ್ಲಿ ಮಾಡುವ ಕೆಲಸವನ್ನು ಒಂದೇ ಜನ್ಮದಲ್ಲಿ ಮಾಡಿದ ಕಲಬುರ್ಗಿ’

ಬಸವ ಮೀಡಿಯಾ
ಬಸವ ಮೀಡಿಯಾ

ವಿಜಯಪುರ

ನಗರದ ಬಿ.ಎಲ್.ಡಿ.ಇ ಸಂಸ್ಥೆಯ ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ಸಂಶೋಧನ ಕೇಂದ್ರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಶನಿವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಡಾ.ಎಂ.ಎಂ.ಕಲಬುರ್ಗಿ ಸಮಗ್ರ ಸಾಹಿತ್ಯ 40 ಸಂಪುಟಗಳ ಲೋಕಾರ್ಪಣೆ ಹಾಗೂ ವಿಚಾರ ಸಂಕಿರಣ ನಡೆಯಿತು.

40 ಸಂಪುಟಗಳನ್ನು ಸಂಪಾದಿಸಿದ ಹಿರಿಯ ಸಂಶೋಧಕ ಡಾ.ವೀರಣ್ಣ ರಾಜೂರ ಮಾತನಾಡಿ ಬೇರೆಯವರು 10 ಜನ್ಮಗಳಲ್ಲಿ ಮಾಡುವ ಸಂಶೋಧನೆ ಕೆಲಸವನ್ನು ಕಲಬುರ್ಗಿ ಅವರು ಒಂದೇ ಜನ್ಮದಲ್ಲಿ ಮಾಡಿದ್ದಾರೆ. ವಚನದ ಆಕರ ಸಾಮಗ್ರಿಗಳನ್ನು ಸಂಗ್ರಹಿಸಿ ಪ್ರಕಟ ಮಾಡುವ ಮೂಲಕ ಕಲಬುರ್ಗಿ ಎಲೆಮರೆಯ ಕಾಯಿಯಂತಿದ್ದ ಬಸವಾದಿ ಶರಣರ ಮತ್ತು ಕನ್ನಡ ಸಾಹಿತ್ಯ ಬೆಳಕಿಗೆ ತಂದಿದ್ದಾರೆ ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಮಹಾಂತೇಶ ಬಿರಾದಾರ, ಕಲಬುರ್ಗಿ ಹಂತಕರು ವಿಜಯಪುರದಲ್ಲೇ ಇದ್ದಾರೆ. ಆದರೆ, ಅವರು ನಿಜವಾದ ಕೊಲೆಗಾರಲ್ಲ, ಕಲಬುರ್ಗಿಯವರ ಬಗ್ಗೆ ಏನೂ ಗೊತ್ತಿಲ್ಲದವರಾಗಿದ್ದಾರೆ. ಕಲಬುರ್ಗಿಯವರ ಬಗ್ಗೆ ಗೊತ್ತಿರುವವರು ಇವರ ಮೂಲಕ ಕೊಲೆ ಮಾಡಿಸಿದರು ಎಂದು ಹೇಳಿದರು.

ಸಂಶೋಧನೆಗಳ ಮೂಲಕ ಡಾ. ಎಂ. ಎಂ. ಕಲಬುರ್ಗಿ ಅವರು ಸತ್ಯ ಹೇಳಿದ ಕಾರಣಕ್ಕೆ ಸಮಾಜ ವಿರೋಧಿ ಎಂದು ಅವರನ್ನು ಒಂದು ವರ್ಗ ಪರಿಗಣಿಸಿತು. ಕಟುವಾಗಿ ಮಾತನಾಡುವವರನ್ನು ಸಮಾಜ ಸಹಿಸುವುದಿಲ್ಲ, ಸುಳ್ಳು ಮಾತನಾಡುವವರನ್ನು ಒಪ್ಪಿಕೊಳ್ಳುತ್ತಿದೆ ಎಂಬುದಕ್ಕೆ ಕಲಬುರ್ಗಿ ನಿದರ್ಶನ ಎಂದು ಮೈಸೂರಿನ ಕುಂದೂರು ಮಠದ ಡಾ. ಶರತ್ಚಂದ್ರ ಸ್ವಾಮೀಜಿ ಹೇಳಿದರು.

ಸಂಶೋಧನೆ ಮೂಲಕ ಚರಿತ್ರೆಯ ಹೆಸರನ್ನು ದುರುಪಯೋಗ ಪಡಿಸಿಕೊಳ್ಳುವವರ ವಿರುದ್ಧ ಹೋರಾಡಬೇಕಿದೆ‌ ಎಂದು ಕಲಬುರ್ಗಿ ಪ್ರತಿಪಾದಿಸಿದ್ದರು. ಸ್ಥಗಿತ ಸಂಶೋಧನೆಗಿಂತ ಸಮಾಜಕ್ಕೆ ಚಲನಶೀಲಾ ಸಂಶೋಧಕರು ಅಗತ್ಯ ಎಂದು ಕಲಬುರ್ಗಿ ಹೇಳುತ್ತಿದ್ದರು ಎಂದರು.

ಅಭಿವ್ಯಕ್ತಿ ಸ್ವಾತಂತ್ರ್ಯ ಹರಣವಾಗುತ್ತಿದೆ. ಜೊತೆಗೆ ಅಭಿವ್ಯಕ್ತಿ ಸ್ವಾತಂತ್ರ್ಯ ದುರುಪಯೋಗವೂ ಆಗುತ್ತಿದೆ. ಜನ ಸಂಕುಚಿತರಾಗುತ್ತಿದ್ದಾರೆ. ಈ ಸಂಕುಚಿತತೆ ತೆಗೆಯಬೇಕು ಎಂದರೆ ಕಲಬುರ್ಗಿ ಸಂಶೋಧನೆಗಳು ನಮಗೆ ಮಾರ್ಗದರ್ಶನವಾಗಬೇಕಿದೆ ಎಂದು ಹೇಳಿದರು.

ಸಾಹಿತಿ ಸಿದ್ದಲಿಂಗ ಪಟ್ಟಣಶೆಟ್ಟಿ ಮಾತನಾಡಿ ಸಾಹಿತಿ ಯು.ಆರ್.ಅನಂತಮೂರ್ತಿ ಅವರ ಬರಹದ ಒಂದಿ ಸಾಲನ್ನು ಕಲಬುರ್ಗಿ ಅವರು ಭಾಷಣವೊಂದರಲ್ಲಿ ಉಲ್ಲೇಖಿಸಿದ್ದನ್ನು ಟಿವಿ ವಾಹಿನಿಯೊಂದು ಎಡಬಿಡದೆ ಪ್ರಸಾರ ಮಾಡಿ, ಜನರನ್ನು ಉದ್ರೇಕಿಸಿ,ಕಲಬುರ್ಗಿಯವರ ಹತ್ಯೆಗೆ ಪ್ರೇರಣೆ ನೀಡಿತು ಎಂದು ವಿಷಾದ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ಭಾಲ್ಕಿಯ ಬಸವಲಿಂಗ ಪಟ್ಟದೇವರು ರಾಜ್ಯದಲ್ಲಿ ನೂರಾರು ಲಿಂಗಾಯತ ನಾಯಕರಿದ್ದಾರೆ, ಆದರೆ ಲಿಂಗಾಯತ ಧರ್ಮದ ಅಸ್ಮಿತೆಯ ಬಗ್ಗೆ ಯಾರೂ ಧ್ವನಿ ಎತ್ತಲಿಲ್ಲ. ಎಂ.ಬಿ. ಪಾಟೀಲರು ಮಾತ್ರ ಈ ಲಿಂಗಾಯತ ಅಸ್ಮಿತೆಯ ಬಗ್ಗೆ ಗಟ್ಟಿಯಾದ ಧ್ವನಿಯಾದರು, ಎಂದು ಹೇಳಿದರು. ಎಂ.ಬಿ. ಪಾಟೀಲರಲ್ಲಿ ಲಿಂಗಾಯತ ತತ್ವದ ಗಟ್ಟಿತನ ಬರಲು ಅವರು ದಿ.ಕಲಬುರ್ಗಿ ಅವರೊಂದಿಗೆ ಇರಿಸಿದ ಒಡನಾಟವೇ ಕಾರಣ, ಎಂದರು.

ಸಚಿವ ಎಂ.ಬಿ.ಪಾಟೀಲ, ಉಮಾದೇವಿ ಕಲಬುರ್ಗಿ, ಡಾ.ವೀರಣ್ಣ ರಾಜೂರ, ಡಾ.ಕೃಷ್ಣ ಕೊಲ್ಹಾರ ಕುಲಕರ್ಣಿ, ಡಾ.ಎಂ.ಎಸ್.ಮದಭಾವಿ, ಸಂಶೋಧಕಿ ಡಾ. ಹನುಮಾಕ್ಷಿ ಗೋಗಿ, ಡಾ. ಸುಭಾಸ ಕನ್ನೂರ ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JjqqFwfw2jf2WxG5glPZ0O

Share This Article
Leave a comment

Leave a Reply

Your email address will not be published. Required fields are marked *