ಕಲಬುರ್ಗಿ
ಜ್ಞಾನ ವಿಜ್ಞಾನ ಸಮಿತಿಯ ಕಲಬುರ್ಗಿ ಜಿಲ್ಲಾ ಘಟಕದ ಸದಸ್ಯರು ಆಗಸ್ಟ್ 31ರಂದು ಜಗತ್ ವೃತ್ತದಲ್ಲಿ ಡಾ. ಎಂ. ಎಂ. ಕಲ್ಬುರ್ಗಿರವರಿಗೆ ಶ್ರದ್ಧಾಂಜಲಿ ಅರ್ಪಿಸಿದರು.
ಡಾ. ಎಂ. ಎಂ. ಕಲ್ಬುರ್ಗಿರವರ ಹುತಾತ್ಮ ದಿನದ ಸ್ಮರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಶ್ರೀಶೈಲ ಗೂಳಿ ಮಾತನಾಡಿ, ದಾಬೋಲ್ಕರ್, ಪಾನ್ಸರೆ, ಎಂ.ಎಂ. ಕಲಬುರಗಿ, ಗೌರಿ ಲಂಕೇಶ್ ಮುಂತಾದವರು ತಮ್ಮ ಪ್ರಾಣ ಬಲಿದಾನ ಮಾಡಿ ಸಮಾಜಕ್ಕೆ ನವಚಿಂತನೆ ನೀಡಿದವರು ಎಂದರು. ಅವರ ಆದರ್ಶ ಮಾರ್ಗದಲ್ಲಿ ನಾವು ನಡೆವುದೆ ನಮ್ಮ ನೈತಿಕತೆ ಎಂಬುದಾಗಿ ಹೇಳಿದರು.

ನಂತರ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಉಪಾಧ್ಯಕ್ಷೆ ಸುರೇಖಾ “ಹಣೆಬರಹ ಎನ್ನುವುದು ಅಜ್ಞಾನದ ಸಂಕೇತ. ಮಾನವಜಾತಿ ಜ್ಞಾನದಿಂದ ಬದುಕು ಸಾಗಿಸುತ್ತಿದೆ, ಭಯದಿಂದಲ್ಲ ಎಂದು ಹೇಳಿದರು. ಸಂವಿಧಾನದ ಪ್ರಕಾರ ವೈಜ್ಞಾನಿಕ ಮನೋಭಾವ ಬೆಳೆಸುವುದು ಪ್ರಜೆಗಳ ಕರ್ತವ್ಯ,” ಎಂದು ಹೇಳಿದರು.
ಆರ್ ಕೆ ಹುಡುಗಿ ಮಾತನಾಡಿ ಅವೈಜ್ಞಾನಿಕ ಪುರಾಣ ಕಥೆಗಳು ಜನರಲ್ಲಿ ಅಜ್ಞಾನ ಬೆಳೆಸಿವೆ. ಎಂ ಎಂ ಕಲಬುರಗಿ, ದಾಬೋಲ್ಕರ್, ಪಾನ್ಸರೆ, ಗೌರಿ ಲಂಕೇಶ್ ಮತ್ತು ಇತರರು ಈ ಅಜ್ಞಾನಗಳ ವಿರುದ್ಧ ಹೋರಾಡಿದವರು ಎಂದು ಹೇಳಿದರು.

ಸ್ಮರಣಾ ಸಮಾರಂಭದಲ್ಲಿ ಪಾಲ್ಗೊಂಡ ಎಲ್ಲರೂ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳುವ ಪ್ರಮಾಣ ವಚನ ಮಾಡಿದರು.
ಕಾರ್ಯಕ್ರಮದಲ್ಲಿ ವಿವಿಧ ಪ್ರಗತಿಪರ ಸಂಘಟನೆಗಳು ಸಾಮಾಜಿಕ ಜಾಗೃತಿ ಮತ್ತು ವಿವೇಕ ಬುದ್ಧಿಯನ್ನು ಮೂಡಿಸುವ ಮಾತುಗಳು ಮನನೀಯವಾಗಿದ್ದವು.