ಕಲಬುರಗಿಯಲ್ಲಿ ಎರಡು ದಿನಗಳ ವಿಜೃಂಭಣೆಯ ಬಸವ ಜಯಂತಿ

ಕಲಬುರಗಿ

ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ೮೯೨ನೇ ಜಯಂತ್ಯುತ್ಸವನ್ನು ಏ.೨೯ ಹಾಗೂ ೩೦ರಂದು ಎರಡು ದಿನಗಳ ಕಾಲ ಅತ್ಯಂತ ವಿಜೃಂಭಣೆ ಹಾಗೂ ವಿಶಿಷ್ಠ ರೀತಿಯಲ್ಲಿ ಆಚರಿಸಲಾಗುವುದು ಎಂದು ಬಸವ ಜಯಂತಿ ಉತ್ಸವ ಸಮಿತಿ ಅಧ್ಯಕ್ಷ ಶಾಸಕ ಎಂ.ವೈ. ಪಾಟೀಲ ತಿಳಿಸಿದರು.

ಏ. ೨೯ರಂದು ಸಂಜೆ ೫ ಗಂಟೆಗೆ ನಗರದ ಶರಣಬಸವೇಶ್ವರ ಜಾತ್ರಾ ಮೈದಾನದಲ್ಲಿ ಬಸವಾಭಿಮಾನಿಗಳ ಬೃಹತ್ ಬಹಿರಂಗ ಸಮಾವೇಶ ಜರುಗಲಿದೆ. ೩೦ರಂದು ಬೆಳಗ್ಗೆ ೭.೩೦ಕ್ಕೆ ಜಗತ್ ವೃತ್ತದ ಬಸವೇಶ್ವರ ಪುತ್ಥಳಿ ಆವರಣದಲ್ಲಿ ಷಟಸ್ಥಲ ಧ್ವಜಾರೋಹಣ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ರಕ್ತದಾನ ಶಿಬಿರ ಆಯೋಜಿಸಲಾಗಿದ್ದು, ಸಂಜೆ ೪ ಗಂಟೆಗೆ ನಗರೇಶ್ವರ ಶಾಲೆಯಿಂದ ಸೂಪರ್ ಮಾರ್ಕೆಟ್ ಮಾರ್ಗವಾಗಿ
ಬಸವಣ್ಣನವರ ಭಾವಚಿತ್ರ ಹಾಗೂ ವಿವಿಧ ಕಾಯಕ ಶರಣರ ಭಾವಚಿತ್ರಗಳ ಮೆರವಣಿಗೆ ನಡೆಯಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

೨೯ರಂದು ಸಂಜೆ ೪ ಗಂಟೆಗೆ ಶರಣಬಸವೇಶ್ವರ ದೇವಸ್ಥಾನದಿಂದ ಲಾಲ್‌ಗೇರಿ ಕ್ರಾಸ್ ಮಾರ್ಗವಾಗಿ ಸೂಪರ್ ಮಾರ್ಕೆಟ್ ಮೂಲಕ ಬಸವೇಶ್ವರ ಪುತ್ಥಳಿವರೆಗೆ ಮಹಿಳಾ ಬೈಕ್ ರ‍್ಯಾಲಿ ನಡೆಯಲಿದೆ. ನಡೆಯುವ ಬಹಿರಂಗ ಸಭೆಯ ಸಾನ್ನಿಧ್ಯವನ್ನು ಶಿರೂರಿನ ಬಸವಲಿಂಗ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಲಿದ್ದಾರೆ. ಬೆಳವಿಯ ಶರಣಬಸವ ದೇವರು ನೇತೃತ್ವ, ಯಡ್ರಾಮಿ ವಿರಕ್ತ ಮಠದ ಸಿದ್ಧಲಿಂಗ ಸ್ವಾಮಿಗಳು ಸಾನ್ನಿಧ್ಯ ವಹಿಸಲಿದ್ದಾರೆ. ಶರಣಬಸವವೇಶ್ವರ ವಿದ್ಯಾವರ್ಧಕ ಸಂಘದ ಚೇರ್ ಪರ್ಸ್ನ್ ಡಾ. ದಾಕ್ಷಾಯಿಣಿ ಎಸ್. ಅಪ್ಪ ಅವರು ಉದ್ಘಾಟಿಸಲಿದ್ದಾರೆ. “ವ್ಯಕ್ತಿತ್ವ ಮತ್ತು ಬಸವಣ್ಣ” ವಿಷಯ ಕುರಿತು ಚಿಂತಕ ಎಸ್.ಜಿ. ಸಿದ್ಧರಾಮಯ್ಯ ಉಪನ್ಯಾಸ ನೀಡಲಿದ್ದಾರೆ. ಶಾಸಕ ಎಂ.ವೈ. ಪಾಟೀಲ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಸಚಿವರಾದ ಪ್ರಿಯಾಂಕ್ ಖರ್ಗೆ, ಶರಣಬಸಪ್ಪ ದರ್ಶನಾಪುರ, ಡಾ. ಶರಣಪ್ರಕಾಶ ಪಾಟೀಲ, ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್. ಪಾಟೀಲ, ಶಾಸಕರಾದ ಡಾ. ಅಜಯಸಿಂಗ್, ಕನೀಜ್ ಫಾತಿಮಾ, ಅಲ್ಲಮಪ್ರಭು ಪಾಟೀಲ, ಬಸವರಾಜ ಮತ್ತಿಮಡು, ಸಂಸದರಾದ ರಾಧಾಕೃಷ್ಣ ದೊಡ್ಡಮನಿ, ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಯ ಶಾಸಕರು, ಮಾಜಿ ಶಾಸಕರು, ಸಂಸದರು ಹಾಗೂ ಸಮಾಜದ ಪ್ರಮುಖರು ಭಾಗವಿಸಲಿದ್ದಾರೆ ಎಂದು ತಿಳಿಸಿದರು.

ಇದೇ ಮೊದಲ ಬಾರಿಗೆ ವೀರಶೈವ-ಲಿಂಗಾಯತ ಸಮಾಜದ ಎಲ್ಲ ವಿವಿಧ ಕಾಯಕ ಸಮಾಜಗಳ ಸಂಘಟನೆ, ಒಳಪಂಗಡ ಮರೆತು ಒಂದಾಗಿ ಬಸವ ಜಯಂತಿ ಆಚರಿಸಲಾಗುತ್ತಿದೆ. ಮೇಲಾಗಿ ಈ ಬಾರಿ ಯಾರ ಬಳಿಯೂ ಚಂದಾ ಪಟ್ಟಿ ಕೂಡ ಎತ್ತಿಲ್ಲ. ಸಮಾಜದ ಮುಖಂಡರುಗಳು ಸ್ವಚ್ಛೆಯಿಂದ ತನು,ಮನ, ಧನ ಸೇವೆ ಸಲ್ಲಿಸಲು ಮುಂದೆ ಬಂದಿದ್ದಾರೆ. ಶರಣರ ವಚನಗಳು ಹಾಗೂ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಸಂವಿಧಾನ ಎರಡೂ ಒಂದೇ. ವಚನ-ಸಂವಿಧಾನ ಸಮಾಜದಲ್ಲಿ ಐಕ್ಯತೆ, ಸಮಾಜದ ಸ್ವಾಸ್ಥ್ಯ ಹಾಗೂ ಸಮಾನತೆ ತರಬಲ್ಲವು ಎಂದು ಎಂ.ವೈ. ಪಾಟೀಲ ಹೇಳಿದರು.

ಶಾಸಕರಾದ ಬಿ.ಆರ್. ಪಾಟೀಲ, ಶಶೀಲ್ ಜಿ. ನಮೋಶಿ, ಶರಣು ಮೋದಿ, ಮುಖಂಡರಾದ ಚಂದು ಪಾಟೀಲ, ಸೋಮಶೇಖರ ಗೋನಾಯಕ, ಅರುಣಕುಮಾರ ಪಾಟೀಲ, ಶರಣು ಭೂಸನೂರ, ಸಂಗಮೇಶ್ವರ ನಾಗನಳ್ಳಿ, ಡಾ. ಶ್ರೀಶೈಲ ಘೂಳಿ, ಪ್ರಭುಲಿಂಗ ಮಹಾಗಾಂವಕರ್, ಸಂಗಮೇಶ ನಾಗನಳ್ಳಿ, ಆರ್.ಕೆ. ಹುಡಗಿ, ಆರ್.ಜಿ. ಶೆಟಗಾರ ಇತರರು ಸುದ್ದಿಗೋಷ್ಠಿಯಲ್ಲಿ ಇದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/CMDnqQbFJjwCptS1HUXnEd

Share This Article
Leave a comment

Leave a Reply

Your email address will not be published. Required fields are marked *