ರಸ್ತೆಗೆ ‘ಬಸವ ಮಾರ್ಗ’ ಎಂದು ನಾಮಕರಣ ಮಾಡಲು ಬಸವ ಸಂಘಟನೆಗಳ ಮನವಿ
ಕಲಬುರಗಿ
ನಗರದಿಂದ ಹುಮನಾಬಾದಗೆ ಹೋಗುವ ಮುಖ್ಯ ರಸ್ತೆಗೆ ಜಗದ್ಗುರು ರೇಣುಕಾಚಾರ್ಯ ಮಾರ್ಗವೆಂದು ಹೆಸರಿಡುವುದರ ವಿರುದ್ಧ ರಾಷ್ಟ್ರೀಯ ಬಸವದಳ, ಜಾಗತಿಕ ಲಿಂಗಾಯತ ಮಹಾಸಭಾ, ಡಾ. ಎಂ.ಎಂ. ಕಲ್ಬುರ್ಗಿ ವಿಚಾರ ವೇದಿಕೆ ಸೇರಿದಂತೆ ಅನೇಕ ಪ್ರಜ್ಞಾವಂತ ಸಂಘಟನೆಯ ಪ್ರಮುಖರು ಸೋಮವಾರ ಸಂಜೆ ಪಾಲಿಕೆಯ ವಲಯ ಆಯುಕ್ತರ ಕಚೇರಿ-3 ಕ್ಕೆ ಭೇಟಿ ನೀಡಿ ಆಕ್ಷೇಪಣೆಯ ಮನವಿ ಪತ್ರ ಸಲ್ಲಿಸಿದರು.
ನಂತರ ಮೇಯರ್ ಯಲ್ಲಪ್ಪ ನಾಯ್ಕೋಡಿ ಹಾಗೂ ಮಹಾನಗರ ಪಾಲಿಕೆ ಕಮಿಷನರ್ ಅವರನ್ನು ಭೇಟಿಯಾಗಿ ಹುಮನಾಬಾದ ರಸ್ತೆಗೆ ಜಗದ್ಗುರು ರೇಣುಕಾಚಾರ್ಯರ ಹೆಸರನ್ನು ನಾಮಕರಣ ಮಾಡಿದರೆ ರಾಜ್ಯಾದ್ಯಂತ ತೀವ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಈಗಾಗಲೇ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಈ ವಿಷಯ ನಿರ್ಧಾರಿಸಲಾಗಿದೆ. ಇದಕ್ಕಾಗಿ ಆಕ್ಷೇಪಣೆಗೆ ಕರೆದಿದ್ದೆವು. ಅದರಂತೆ ನಿಮ್ಮ ತಕರಾರು ಅರ್ಜಿ ಸ್ವೀಕರಿಸಲಾಗಿದೆ. ನಂತರದ ದಿನಗಳಲ್ಲಿ ಈ ವಿಷಯಕ್ಕೆ ಸಂಬಂಧಿಸಿದಂತೆ ವಿವರಣೆಗೆ ಕರೆಯಲಾಗುವುದು ಎಂದು ಮೇಯರ್ ಮತ್ತು ಆಯುಕ್ತರು ಭರವಸೆ ನೀಡಿದರು ಎನ್ನಲಾಗಿದೆ.
ರಸ್ತೆಗೆ ಜಗದ್ಗುರು ರೇಣುಕಾಚಾರ್ಯ ಮಾರ್ಗ ಬದಲು ಇಡೀ ಜಗತ್ತಿಗೆ ಪ್ರೇರಣಾದಾಯಕ ವಚನಗಳನ್ನು ಬರೆದ ಅದರಲ್ಲೂ ವಚನ ಚಳವಳಿಯ ನೇತಾರ ಬಸವಣ್ಣನವರ ಹೆಸರಿಡಬೇಕು. ಈ ರಸ್ತೆಗೆ “ಬಸವ ಮಾರ್ಗ” ಎಂದು ನಾಮಕರಣ ಮಾಡಬೇಕು ಎಂದು ಮನವಿ ಸಲ್ಲಿಸಿದರು. ಕಲಬುರಗಿ ಕಲ್ಯಾಣ ಕರ್ನಾಟಕದ ಹೆಬ್ಬಾಗಿಲು. ಬಸವಾದಿ ಶರಣರ ವಿಚಾರಗಳು ಮುಂದಿನ ಪೀಳಿಗೆಗೆ ಪ್ರೇರಣಾದಾಯಕವಾಗಿವೆ, ಎಂದರು.

ಕಾಲ್ಪನಿಕ ವ್ಯಕ್ತಿ ರೇಣುಕಾಚಾರ್ಯರ ಹೆಸರು ಇಡುವುದಾದರೆ ಉಗ್ರ ಹೋರಾಟ ಮಾಡಲಾಗುವುದು. ಈ ಹಿಂದೆ ಬೇರೆ ಕಡೆ ಶರಣ ಹರಳಯ್ಯನವರ ಹೆಸರಿಡಬೇಕೆಂದು ಅನೇಕ ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮಕೈಗೊಳ್ಳದ ಪಾಲಿಕೆ ಜಗದ್ಗುರು ರೇಣುಕಾಚಾರ್ಯರ ಹೆಸರಿಡಲು ಮುಂದಾಗಿರುವುದು ಏನನ್ನು ತೋರಿಸಿಕೊಡುತ್ತದೆ ಎಂದು ಬಸವ ಭಕ್ತರು ಮೇಯರ್ ಹಾಗೂ ಆಯುಕ್ತರನ್ನು ತರಾಟೆಗೆ ತೆಗೆದುಕೊಂಡರು.
ರಾಷ್ಟ್ರೀಯ ಬಸವ ದಳದ ಮುಖಂಡ ಆರ್.ಜಿ. ಶೆಟಗಾರ, ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಪ್ರಭುಲಿಂಗ ಮಹಾಗಾಂವಕರ್, ಡಾ. ಎಂ.ಎಂ. ಕಲ್ಬುರ್ಗಿ ವಿಚಾರ ವೇದಿಕೆಯ ಮಹಾಂತೇಶ ಕಲ್ಬುರ್ಗಿ, ಪ್ರಮುಖರಾದ ಹಣಮಂತರಾವ ಪಾಟೀಲ, ಅಯ್ಯನಗೌಡ ಪಾಟೀಲ, ಕಲ್ಯಾಣರಾವ ತೊನಸನಹಳ್ಳಿ, ಭೀಮಣ್ಣ ಬೋನಾಳ, ಶಿವಲಿಂಗಪ್ಪ ಗೌಳಿ, ಅಶೋಕ ಘೂಳಿ, ಶಿವಶರಣಪ್ಪ ದೇಗಾಂವ, ರಾಜಶೇಖರ ಯಂಕಂಚಿ, ಸಂಗಮೇಶ ಗುಬ್ಬೆವಾಡ, ಅಂಬಾರಾಯ ಬಿರಾದಾರ, ಬಸವರಾಜ ಭಾವಿ, ಶರಣಪ್ಪ ನಿರಗುಡಿ, ಭಗವಂತ ಕಿರಣಗಿ, ಎಸ್.ಎನ್. ಪಾಟೀಲ, ಸಾಯಬಣ್ಣ ಹೋಳ್ಕರ್, ಮನೋಹರ ಜೀವಣಗಿ, ಅವ್ವಣ್ಣ ಮ್ಯಾಕೇರಿ. ಕೃಷ್ಣಾ ರೆಡ್ಡಿ ಸೇರಿದಂತೆ ಅನೇಕರು ಇದ್ದರು.