ಬೀದರ
ಲಿಂಗಾಯತ ಮಹಾಮಠವು ಮರಣವೇ ಮಹಾನವಮಿ ಅಂಗವಾಗಿ ಇಲ್ಲಿಯ ಬಸವಗಿರಿಯಲ್ಲಿ ಸೆ. 23 ರಿಂದ ಅಕ್ಟೋಬರ್ 1 ರ ವರೆಗೆ ಕಲ್ಯಾಣ ಕ್ರಾಂತಿ ವಿಜಯೋತ್ಸವ ಹಮ್ಮಿಕೊಂಡಿದೆ. ಮಠದ ಪೀಠಾಧಿಪತಿ ಪ್ರಭುದೇವ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ನಿತ್ಯ ಸಂಜೆ 6.30ಕ್ಕೆ ಒಂದೊಂದು ವಿಷಯದ ಕುರಿತು ವಿಶೇಷ ಉಪನ್ಯಾಸ ಜರುಗಲಿದೆ.
ಸೆ. 24 ರಂದು ಸತಿ ಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ, 25 ರಂದು ಲಿಂಗಾಯತ ಧರ್ಮದಲ್ಲಿ ದೇವಪೂಜೆ, 26 ರಂದು ಲಂಚ ವಂಚನೆಗೆ ಕೈಯಾನದ ಭಾಷೆ, 27 ರಂದು ಆಹಾರವ ಕಿರಿದು ಮಾಡಿರಣ್ಣಾ, 28 ರಂದು ಕಲ್ಯಾಣ ಕ್ರಾಂತಿ, 29 ರಂದು ಹೆಣ್ಣು ಸಾಕ್ಷಾತ್ ಕಪಿಲಸಿದ್ಧ ಮಲ್ಲಿಕಾರ್ಜುನ, 30 ರಂದು ಇಷ್ಟಲಿಂಗ ಪೂಜೆ, ಅ. 1 ರಂದು ಸಂಜೆ 6.30ಕ್ಕೆ ಮರಣವೇ ಮಹಾನವಮಿ- ಕಲ್ಯಾಣ ಕ್ರಾಂತಿ ವಿಜಯೋತ್ಸವ ನಡೆಯಲಿದೆ.

ಸೆ. 23 ರಂದು ಸಂಜೆ 6.30ಕ್ಕೆ ಮ್ಯಾಕ್ಸಿಕೊ ಫೇಷಿಯಲ್ ಸರ್ಜನ್ ಡಾ. ಕಪಿಲ್ ಜಿ. ಪಾಟೀಲ ಕಲ್ಯಾಣ ಕ್ರಾಂತಿ ವಿಜಯೋತ್ಸವವನ್ನು ಉದ್ಘಾಟಿಸುವರು.
ಪ್ರಭುದೇವ ಸ್ವಾಮೀಜಿ ಸಾನಿಧ್ಯ, ನಿವೃತ್ತ ಎಎಸ್‍ಐ ಮಾರುತಿ ಪಾಟೀಲ ಅಧ್ಯಕ್ಷತೆ, ನೀಲಮ್ಮನ ಬಳಗದ ಸಂಧ್ಯಾರಾಣಿ ಅ. ಮುತ್ತಂಗೆ, ಶೋಭಾ ಡಿಗ್ಗೆ ಸಮ್ಮುಖ ವಹಿಸುವರು. ಪ್ರೌಢಶಾಲೆ ಸಹಶಿಕ್ಷಕ ಡಾ. ಶಿವಲಿಂಗ ಹೇಡೆ ಅನುಭಾವ ಮಂಡಿಸುವರು.
ಭಾಲ್ಕಿ ಪುರಸಭೆ ಉಪಾಧ್ಯಕ್ಷ ವಿಜಯಕುಮಾರ ಶರಣಪ್ಪ ರಾಜಭವನ, ಎಪಿಎಂಸಿ ಮಾಜಿ ಅಧ್ಯಕ್ಷ ಶಾಂತಕುಮಾರ ಪನಸಾಲೆ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಉದ್ಯಮಿ ಅಶ್ವಿನಿ ಪ್ರಕಾಶ ಮಲ್ಲಾಸೂರೆ ಭಕ್ತಿ ದಾಸೋಹಗೈಯುವರು ಎಂದು ಲಿಂಗಾಯತ ಮಹಾ ಮಠದ ಪ್ರಕಟಣೆ ತಿಳಿಸಿದೆ.