ಬಸವಕಲ್ಯಾಣ:
ಬಸವತತ್ವ, ಶರಣರ ಮಾನವೀಯ ಮತ್ತು ನೈತಿಕ ಮೌಲ್ಯಗಳನ್ನು ಸಮಾಜದ ಪ್ರತಿ ಮನೆ ಮನೆಗೂ ತಲುಪಿಸುವ ಉದ್ದೇಶದಿಂದ ಕಲ್ಯಾಣ ಕರ್ನಾಟಕ ಪ್ರತಿಷ್ಟಾನ ವತಿಯಿಂದ 15 ಫೆಬ್ರವರಿಯಿಂದ ಮಾರ್ಚ್ 1ರವರೆಗೆ ಸೇಡಂ ತಾಲೂಕಿನ ಬಿಜನಳ್ಳಿ ಗ್ರಾಮದಿಂದ ಬಸವಕಲ್ಯಾಣದವರೆಗೆ “ಕಲ್ಯಾಣ ನಡಿಗೆ ಮತ್ತು ಹರಳಯ್ಯ ಜ್ಯೋತಿ ಪಾದಯಾತ್ರೆ”ಮಹತ್ವಾಕಾಂಕ್ಷಿ ಕಾರ್ಯಕ್ರಮ ನಡೆಯುತ್ತಿದೆ.
ಈ ಪಾದಯಾತ್ರೆಯು ಈಗಾಗಲೇ ಕಲಬುರಗಿ ಜಿಲ್ಲೆಯ 12ಕ್ಕೂ ಹೆಚ್ಚು ಗ್ರಾಮಗಳಲ್ಲಿ ಯಶಸ್ವಿಯಾಗಿ ಜರುಗಿದ್ದು, ಜನಮಾನಸದಲ್ಲಿ ಶರಣರ ಸಂದೇಶವನ್ನು ಬಿತ್ತುತ್ತಿದೆ.

ಇಂದಿನಿಂದ ಬೀದರ ಜಿಲ್ಲೆಯ ಚಿಕ್ಕನಾಗಾವ, ಮುಡಬಿ, ಇಲ್ಲಾಳ ಮತ್ತು ಸಸ್ತಾಪೂರು ಗ್ರಾಮಗಳಲ್ಲಿ ಪಾದಯಾತ್ರೆ ಆರಂಭಗೊಳ್ಳುತ್ತಿದೆ. ಗ್ರಾಮಗ್ರಾಮಾಂತರಗಳಲ್ಲಿ ಭಕ್ತರ ಭವ್ಯ ಸ್ವಾಗತದೊಂದಿಗೆ ಕಾರ್ಯಕ್ರಮಗಳು ನಡೆಯುತ್ತಿವೆ.
ವಿದ್ಯಾರ್ಥಿಗಳಿಗೆ ವಚನ ಸಾಹಿತ್ಯ ವಿತರಣೆ:
ಪಾದಯಾತ್ರೆಯ ಮಹತ್ವದ ಅಂಗವಾಗಿ ವಿವಿಧ ಶಾಲೆಗಳಿಗೆ ಭೇಟಿ ನೀಡಿ ಸುಮಾರು 20,000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವಚನ ಸಾಹಿತ್ಯ ಪುಸ್ತಕಗಳನ್ನು ಉಚಿತವಾಗಿ ವಿತರಿಸಲಾಗುತ್ತಿದೆ. ಶರಣರ ಚಿಂತನೆ, ಸಮಾನತೆ, ಕಾಯಕ, ದಾಸೋಹ, ನೈತಿಕತೆ ಇವುಗಳನ್ನು ಮಕ್ಕಳ ಮನಸ್ಸಿನಲ್ಲಿ ಬಿತ್ತುವ ಮಹತ್ವದ ಪ್ರಯತ್ನ ಇದಾಗಿದೆ.

‘ಕಲ್ಯಾಣ ಕ್ರಾಂತಿ’ನಾಟಕ ಪ್ರದರ್ಶನ:
ಪ್ರತಿದಿನ ಸಂಜೆ ಊರುಗಳಲ್ಲಿ ಶರಣರ ಮಾನವೀಯ ಮತ್ತು ನೈತಿಕ ಹಾಗೂ ಸಮಾನತೆಯ ಚಿಂತನೆಗಳನ್ನು ಜನರಿಗೆ ಮುಟ್ಟಿಸುವ ಸಲುವಾಗಿ ಬಳ್ಳಾರಿ ‘ದಾತ್ರಿ’ ಕಲಾ ತಂಡದಿಂದ “ಕಲ್ಯಾಣ ಕ್ರಾಂತಿ”ನಾಟಕವನ್ನು ಭಕ್ತಿಭಾವದಿಂದ ಪ್ರದರ್ಶಿಸಲಾಗುತ್ತಿದೆ. ಈ ನಾಟಕವು ಶರಣರ ಸಮಾನತೆ ಸಂದೇಶವನ್ನು ಸಜೀವವಾಗಿ ಮೂಡಿಸುತ್ತಿದ್ದು ಜನಮನ ಗೆಲ್ಲುತ್ತಿದೆ.

ಪಾದಯಾತ್ರೆಯಲ್ಲಿ ನೂರಾರು ಬಸವಭಕ್ತರು ಭಾಗಿ:
ಕೊಪ್ಪಳ, ಬಳ್ಳಾರಿ, ಶಿವಮೊಗ್ಗ, ಭದ್ರಾವತಿ, ಬೆಂಗಳೂರು, ಬೀದರ, ಕಲಬುರಗಿ ಸೇರಿದಂತೆ ವಿವಿಧ ಜಿಲ್ಲೆಗಳಿಂದ ನೂರಾರು ಬಸವಭಕ್ತರು ಬಸವಕುಮಾರ ಪಾಟೀಲ ಅಣ್ಣನವರ ಜೊತೆ ಪಾದಯಾತ್ರೆಯಲ್ಲಿ ಭಾಗವಹಿಸಿದ್ದಾರೆ. ಎಲ್ಲ ವರ್ಗದ ಜನರು ಜಾತಿ-ಮತ ಭೇದ ಮೀರಿಸಿ ಬಸವತತ್ವದ ಅಡಿ ಒಂದಾಗಿರುವುದು ವಿಶೇಷವಾಗಿದೆ.

ಮಾರ್ಚ್ 1ರಂದು ಭವ್ಯ ಸಮಾರೋಪ:
ಮಾರ್ಚ್ 1ರಂದು ಬೆಳಿಗ್ಗೆ 8 ಗಂಟೆಗೆ ಬಸವಕಲ್ಯಾಣ ನಗರದ ಬಂದವರ ಓಣಿಯಲ್ಲಿ ಬಿಜನಳ್ಳಿಯಿಂದ ಆಗಮಿಸುವ ಹರಳಯ್ಯ ಜ್ಯೋತಿ ಹಾಗೂ ಬೈರಾಮಡಗಿಯಿಂದ ಆಗಮಿಸುವ ಕಲ್ಯಾಣಮ್ಮ ಜ್ಯೋತಿಯನ್ನು ವಿವಿಧ ಬಸವಪರ ಸಂಘಟನೆಗಳ ನೂರಾರು ಭಕ್ತರು ಭವ್ಯವಾಗಿ ಸ್ವಾಗತಿಸಿ ಬಸವ ಧರ್ಮ ಪೀಠದವರೆಗೆ ಕಲ್ಯಾಣ ನಡಿಗೆಯಲ್ಲಿ ಹೆಜ್ಜೆ ಹಾಕಲಿದ್ದಾರೆ.

ಅದೇ ದಿನ ಬೆಳಿಗ್ಗೆ 10:30ರಿಂದ ಸಂಜೆ 4 ಗಂಟೆಯವರೆಗೆ ಬಸವ ಧರ್ಮಪೀಠ ಮಹಾಮನೆಯ ಭವ್ಯ ಸಭಾಂಗಣದಲ್ಲಿ ಕಲ್ಯಾಣ ನಡಿಗೆ ಹಾಗೂ ಹರಳಯ್ಯ ಜ್ಯೋತಿ ಪಾದಯಾತ್ರೆಯ ಸಮಾರೋಪ ಸಮಾರಂಭ ಮತ್ತು 770 ಶರಣ ಸಂಸತ್ತಿನ ಸಮಾವೇಶ ಹಾಗೂ 770 ಶರಣರಿಗೆ ಶರಣ ವಂದನೆ ಕಾರ್ಯಕ್ರಮ ಭಕ್ತಿಭಾವದಿಂದ ನಡೆಯಲಿದೆ.
ಸಂಜೆ 5:30ರಿಂದ 6:30ರವರೆಗೆ ತ್ರಿಪುರಾಂತದ “ಮಕ್ಕಳ ಸಂಗೀತ ಉದ್ಯಾನವನ”ದವರೆಗೆ ಪಾದಯಾತ್ರೆ ಮೂಲಕ ತೆರಳಿ 770 ಅಮರಗಣಂಗಳಿಗೆ ಕೃತಜ್ಞತೆ ಸಲ್ಲಿಸುವ ಸಲುವಾಗಿ 770 ಶರಣ ಶರಣೆಯರಿಂದ “ಶರಣಾರತಿ” ಮಂಗಳ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಸಂಕಲ್ಪದೊಂದಿಗೆ ಅಂದು ಎರಡು ಮಹತ್ವಪೂರ್ಣ ನಿರ್ಣಯವನ್ನು ಕೈಗೊಳ್ಳಲಾಗುತ್ತಿದೆ.
ಈ ಮಹೋತ್ಸವದಲ್ಲಿ ನಾಡಿನ ವಿವಿಧ ಮಠಾಧೀಶರು, ಚಿಂತಕರು, ಸಾಹಿತಿಗಳು, ಅನುಭಾವಿಗಳು, ಅಪಾರ ಬಸವಭಕ್ತರು ಮತ್ತು ಬಸವಾಭಿಮಾನಿಗಳು ಭಾಗವಹಿಸಲಿದ್ದಾರೆ.

ಕಾರ್ಯಕ್ರಮಕ್ಕೆ ಆಗಮಿಸುವ ಭಕ್ತರಿಗೆ ಬೆಳಗಿನ ಉಪಹಾರ ಮತ್ತು ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಸಮರ್ಪಕವಾಗಿ ಮಾಡಲಾಗಿದೆ. ಸುಮಾರು 2,000ಕ್ಕೂ ಅಧಿಕ ಶರಣ-ಶರಣೆಯರು ಈ ಮಹಾಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.
ಕಾರ್ಯಕ್ರಮದಲ್ಲಿ ಸರ್ವರೂ ಭಾಗಿಯಾಗಿ ಯಶಸ್ವಿಗೊಳಿಸಬೇಕೆಂದು ಕಲ್ಯಾಣ ಮಹಾಮನೆಯ ಸದ್ಗುರು ಬಸವಪ್ರಭು ಸ್ವಾಮೀಜಿ, ಕಲ್ಯಾಣ ಕರ್ನಾಟಕ ಪ್ರತಿಷ್ಟಾನದ ತಾಲೂಕಾ ಅಧ್ಯಕ್ಷರಾದ ಜಗನ್ನಾಥ ಪತಂಗೆ, ಅರಿವು ಆಚಾರ ಅನುಭಾವ ಕೇಂದ್ರದ ಅಧ್ಯಕ್ಷ ಎಸ್.ಎಸ್. ನಾಗರಾಳೆ, ರಾಷ್ಟ್ರೀಯ ಬಸವದಳದ ತಾಲೂಕಾ ಅಧ್ಯಕ್ಷರಾದ ರವಿ ಕೋಳಕೂರ ಹಾಗೂ ಬಸವ ತತ್ವ ಪ್ರಚಾರ ಮತ್ತು ಪ್ರಸಾರ ಕೇಂದ್ರದ ಸಂಗಮೇಶ ತೊಗರಖೇಡ ಅವರು ಕರೆ ನೀಡಿದರು.

ಶರಣರ ಮಾನವೀಯ ಚಿಂತನೆ ನವಸಮಾಜದ ನಿರ್ಮಾಣಕ್ಕೆ ದಾರಿಯಾಗಿದೆ. ಬನ್ನಿ, ಕಲ್ಯಾಣ ನಡಿಗೆಯಲ್ಲಿ ಪಾಲ್ಗೊಳ್ಳೋಣ, ಬಸವ ತತ್ವವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳೋಣ.
