ಕಲ್ಯಾಣದಲ್ಲಿ ನಡೆದ ಶರಣ ಚಳುವಳಿಯ ಕೊನೆಯ ದಿನಗಳು ಇನ್ನೂ ಅಸ್ಪಷ್ಟವಾಗಿ ಉಳಿದಿವೆ. ಆದರೆ ಆ ಗಂಡಾಂತರದ ಘಟನೆಗಳ ಬಗ್ಗೆ ಹಲವಾರು ಕೃತಿಗಳಲ್ಲಿ ಮಾಹಿತಿಯಿದೆ.
ಬಿಕ್ಕಟ್ಟಿನ ನಂತರ ಶರಣರು ಕಲ್ಯಾಣದಿಂದ ಉಳವಿಗೆ ಧಾವಿಸಿದರು. ಅವರು ನಡೆದ ಮಾರ್ಗವನ್ನು “ದಂಡಿನ ದಾರಿ” ಎಂದು ಜನತೆ ಈಗಲೂ ಅಲ್ಲಲ್ಲಿ ಕರೆಯುತ್ತಾರೆ. ವಿದ್ವಾಂಸರು ಈ ದಾರಿಯನ್ನು ಹೀಗೆ ಗುರುತಿಸಿದ್ದಾರೆ:
ಕಲ್ಯಾಣ-ತೊರಗಲ್ಲು-ಕಡಕೋಳ-ಮೊದಲೂರು-ಮುರಗೋಡ-ಮೂಗಬಸವ-ನಾಗಲಾಪುರ-ಹುಣಸೀಕಟ್ಟಿ-ಕಾದರವಳ್ಳಿಯ ತನಕ ಒಟ್ಟಿಗೆ ಬಂದ ಶರಣರು ನಂತರ ಎರಡು ಗುಂಪುಗಳಾಗಿ ಕವಲಾದರು.
ಒಂದು ಗುಂಪು ಕಕ್ಕೇರಿ-ಲಿಂಗನಮಠ-ಜಂಗಮಹತ್ತಿ-ಜಗಳಬೆಟ್ಟ-ಸಾಂಬ್ರಾಣಿಗೆ ಬಂದು, ಇನ್ನೊಂದು ನಂದಿಹಳ್ಳಿ-ಕಿತ್ತೂರು-ಧಾರವಾಡ- ಸತ್ತೂರುವರೆಗೆ ಬಂದು, ಯಲ್ಲಾಪುರದಲ್ಲಿ ಎಲ್ಲಾ ಸೇರಿ ಉಳಿವೆಗೆ ಬಂದರು.
‘ದಂಡಿನ ದಾರಿ’ಯನ್ನು ಉದ್ದಕ್ಕೂ ಪತ್ತೆಹಚ್ಚುವುದು ಇನ್ನೂ ಸಾಧ್ಯವಾಗಿಲ್ಲ. “ಉಳುವೆ ಮಹಾತ್ಮೆ”ಯಂತಹ ಹಸ್ತಪ್ರತಿಗಳು ಕೆಲವು ಬಿನ್ನಾಭಿಪ್ರಾಯ ತಾಳುತ್ತದೆ. ಇಲ್ಲಿ ಸಂಶೋಧನೆ ಮುಂದುವರೆಯಬೇಕು.
ಬಿಜ್ಜಳನ ಸಂಬಂಧಿ ‘ಅಳಿಯ ಬಿಜ್ಜಳ’ ಸೈನ್ಯದೊಡನೆ ಶರಣರನ್ನು ಉಳವಿಯವರೆಗೆ ಬೆನ್ನೆಟ್ಟಿದ್ದ. ಶರಣರ ಸಂರಕ್ಷಣೆ ಹೊತ್ತು ಉಳವಿವರೆಗೆ ಬಂದು ಚೆನ್ನಬಸವಣ್ಣನವರು ಅಲ್ಲಿಯೇ ಎಳೆಯ ವಯಸ್ಸಿನಲ್ಲಿ ಲಿಂಗೈಕ್ಯರಾದರು.
(‘ಚೆನ್ನಬಸವಣ್ಣನವರ ಷಟ್ ಸ್ಥಲ ವಚನ ಮಹಾಸಂಪುಟ’ ಲೇಖನದಿಂದ ಆಯ್ದ ಮತ್ತು ಸಂಕ್ಷಿಪ್ತಗೊಳಿಸಿರುವ ಭಾಗ – ಮಾರ್ಗ ೫)