ಕನ್ನಡವೇ ನಮ್ಮ ಸಂಸ್ಕೃತಿ: ಡಾ. ತೋಂಟದ ಸಿದ್ದರಾಮ ಶ್ರೀ

ಬಸವ ಮೀಡಿಯಾ
ಬಸವ ಮೀಡಿಯಾ

ಗದಗ:

ಕರ್ನಾಟಕದಲ್ಲಿ ಕನ್ನಡವೇ ಆಡಳಿತ ಭಾಷೆ ಆಗಬೇಕು, ಕನ್ನಡಪರ ಕಾರ್ಯಕ್ರಮಗಳನ್ನು ಶ್ರೀಮಠ ಸದಾ ನಡೆಸಿಕೊಂಡು ಬಂದಿದೆ. ಕನ್ನಡಕ್ಕೆ ಅಗ್ರಸ್ಥಾನ ಸಿಗಬೇಕು ಎಂದು ಲಿಂಗೈಕ್ಯ ಸಿದ್ದಲಿಂಗ ಶ್ರೀಗಳು ಹೇಳುತ್ತಿದ್ದರು.

ಕನ್ನಡ ನೆಲ ಜಲ ಪರಿಸರ ರಕ್ಷಣೆಗಾಗಿ ಹೋರಾಟ ಮಾಡಿಕೊಂಡು ಬರಲಾಗಿದೆ. ಕನ್ನಡವೆಂದರೆ ಅದು ನಮ್ಮ ಸಂಸ್ಕೃತಿ ಎಂದು ಡಾ. ತೋಂಟದ ಸಿದ್ದರಾಮ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.

ಲಿಂಗಾಯತ ಪ್ರಗತಿಶೀಲ ಸಂಘದ ವತಿಯಿಂದ ನಡೆದ 2773 ನೇ ಶಿವಾನುಭವದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಕರ್ನಾಟಕದಲ್ಲಿ ಕನ್ನಡ ನಾಡು ನುಡಿ ಸಂಸ್ಕೃತಿಯ ಬಗ್ಗೆ ಅಭಿಮಾನ ಹೆಚ್ಚಬೇಕು. ಕನ್ನಡ ಭಾಷೆಯಲ್ಲಿಯೇ ನಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಸಾಧ್ಯ. ಕನ್ನಡಿಗರಿಗೆ ಭಾಷಾಭಿಮಾನ ಇರಬೇಕು ಎಂದರು.

ಉಪನ್ಯಾಸಕರಾಗಿ ಗದುಗಿನ ವಿನಯ್ ಚಿಕ್ಕಟ್ಟಿ ಕಾಲೇಜಿನ ಶ್ರೀಶೈಲ ಬಡಿಗೇರ ‘ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ’ ವಿಷಯದ ಮೇಲೆ ಮಾತನಾಡುತ್ತಾ, ಕರ್ನಾಟಕದಲ್ಲಿ ಕನ್ನಡ ಬೆಳೆಸಬೇಕು. ದಿನನಿತ್ಯದ ಬದುಕಿನಲ್ಲಿ ಮಾತನಾಡುವುದರಿಂದ ಕನ್ನಡ ಬೆಳೆಯುತ್ತದೆ. ಕನ್ನಡ ಭಾಷೆ ಮಾತನಾಡಿದರೆ, ದೇಹದ ಎಲ್ಲಾ ಅಂಗಾಂಗಗಳಿಗೆ ವ್ಯಾಯಾಮವಾಗುತ್ತದೆ ಎಂದು ಸಂಶೋಧನೆಯಿಂದ ತಿಳಿದು ಬಂದಿದೆ.

ಕನ್ನಡಿ ಮೇಲಿನ ಆಸಕ್ತಿ, ಕನ್ನಡ ಭಾಷೆ ಮೇಲಿರಲಿ. ಕನ್ನಡ ಕನ್ನಡಕವಾಗಿರದೇ ಕಣ್ಣಾಗಿರಲಿ. ಹೀಗೆ ಹೇಳುತ್ತ ಕನ್ನಡ ದಲ್ಲಿ ಹೊಸ ರಚನೆಗೆ ಕೈ ಹಾಕಿದ್ದನ್ನು ಅವಲೋಕನ ಮಾಡಿದರು. ಸ್ವತಃ ತಾವೇ ರಚಿಸಿದ ದ್ವಿಪದಿಯನ್ನು ಓದಿದರು.

ಸೋಮಶೇಖರ ಮುನವಳ್ಳಿ ಯುಎಸ್ ಎ ಅವರು ಧಾರವಾಡದ ಎಸ್.ಎಸ್. ಉಪ್ಪಿನ ಇವರ ಸ್ಮರಣಾರ್ಥ ಕೊಡಮಾಡುವ ಮಾಧ್ಯಮ ಪ್ರಶಸ್ತಿಯನ್ನು ಹುಬ್ಬಳ್ಳಿಯ ಹಿರಿಯ ಪತ್ರಕರ್ತೆ ವಿಶಾಲಾಕ್ಷಿ ಅಕ್ಕಿ ಹಾಗೂ ಸಮಾಜ ಸೇವಿಕಾ ಪ್ರಶಸ್ತಿಯನ್ನು ಶಿವಮ್ಮ ಶೇಖರಪ್ಪ ಚಳ್ಳಮರದಗೆ ಕೊಡಮಾಡಲಾಯಿತು.

ಪ್ರಶಸ್ತಿ ಸ್ವೀಕರಿಸಿದ ವಿಶಾಲಾಕ್ಷಿ ಅಕ್ಕಿ ಮಾತನಾಡುತ್ತಾ, ಪತ್ರಿಕೋದ್ಯಮ ಕೆಲಸ ಮಹತ್ವದ್ದು. ಪತ್ರಿಕೆಯವರು ಕನ್ನಡವನ್ನು ಬೇರಾಗಿ ಇಟ್ಟುಕೊಂಡಿದ್ದೇವೆ. ಆದರೂ ಅಚ್ಚಕನ್ನಡದಲ್ಲಿ ಬರೆಯುವವರು ಕಡಿಮೆ. ಪತ್ರಿಕೋದ್ಯಮದಲ್ಲಿ ಸಮಾಜದ ಹೊಣೆಗಾರಿಕೆಯನ್ನು ಪ್ರತಿಪಾದಿಸಲು ಜಾಗವಿದೆ. ತಳಸಮುದಾಯದ ಕಷ್ಟಗಳನ್ನು ಪ್ರಜಾಪ್ರಭುತ್ವದ ಅಡಿಯಲ್ಲಿ ನಿವಾರಿಸುವ ಕೆಲಸ ಮಾಡುವ ಅವಕಾಶವಿದೆ ಎಂದು ಮಾತನಾಡಿದರು.

ವಚನ ಸಂಗೀತ ಸೇವೆಯನ್ನು ಗುರುನಾಥ ಸುತಾರ ಹಾಗೂ ಮೃತ್ಯುಂಜಯ ಹಿರೇಮಠ ನಡೆಸಿಕೊಟ್ಟರು. ಧಾರ್ಮಿಕ ಗ್ರಂಥ ಪಠಣವನ್ನು ಅನುರಾಧ ಗಡಾದ, ವಚನ ಚಿಂತನವನ್ನು ಸಾನ್ವಿ ರಾಜಪ್ಪನವರ ಮಾಡಿದರು.

ದಾಸೋಹ ಸೇವೆಯನ್ನು ಲಿಂ. ತೋಟಪ್ಪ ದುಂದೂರ ಇವರ ಸ್ಮರಣಾರ್ಥ ಸಂಗಮೇಶ ದುಂದೂರ ಹಾಗೂ ಕುಟುಂಬ ವರ್ಗದವರು ವಹಿಸಿದ್ದರು.

ಗದಗ ರಾಜೇಶ್ವರಿ ಕಲಾ ಕುಟೀರ ಮಕ್ಕಳಿಂದ ಆಕರ್ಷಕ ನೃತ್ಯ ಪ್ರದರ್ಶನ ನಡೆಯಿತು. ನಾಡು ನುಡಿ ಗೀತನೃತ್ಯ ರೂಪಕವನ್ನು  ಶ್ರೀ ಚಿಲ್ಲಾಳೇಶ್ವರ ಪ್ರಾಥಮಿಕ ಶಾಲೆ ಗದಗ ಶಿಕ್ಷಕಿ ಅರುಣಾ ಹಳಕಟ್ಟಿ ಹಾಗೂ ಶಿಕ್ಷಕರಿಂದ ಆಯೋಜನೆಗೊಂಡು, ವಿದ್ಯಾರ್ಥಿಗಳಿಂದ  ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡ್ರ ಉಪಾಧ್ಯಕ್ಷ ಡಾ. ಉಮೇಶ ಪುರದ, ಕಾರ್ಯದರ್ಶಿ ವೀರಣ್ಣ ಗೋಟಡಕಿ, ಸಹಕಾರ್ಯದರ್ಶಿ ಸೋಮು ಪುರಾಣಿಕ ಹಾಗೂ ನಾಗರಾಜ ಹಿರೇಮಠ ಸಂಘಟನಾ ಕಾರ್ಯದರ್ಶಿ ಮಹೇಶ್ ಗಾಣಿಗೇರ, ಕೋಶಾಧ್ಯಕ್ಷ ಬಸವರಾಜ ಕಾಡಪ್ಪನವರ ಹಾಗೂ ಶಿವಾನುಭವ ಸಮಿತಿಯ ಸಹ ಚೇರ್ಮನ್ ಶಿವಾನಂದ ಹೊಂಬಳರವರು ಹಾಗೂ ಮಠದ ಭಕ್ತರು ಉಪಸ್ಥಿತರಿದ್ದರು.

ಶಿವಾನುಭವ ಸಮಿತಿ ಚೇರ್ಮನ್ ಐ.ಬಿ. ಬೆನಕೊಪ್ಪ ಸ್ವಾಗತಿಸಿದರು. ಹಾಗೂ ವಿದ್ಯಾ ಗಂಜಿಹಾಳ ಕಾರ್ಯಕ್ರಮ ನಿರೂಪಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/H81yNL3dGRcHb7EBxL5oqr

Share This Article
Leave a comment

Leave a Reply

Your email address will not be published. Required fields are marked *