‘ಗಡಿನಾಡಿನಲ್ಲಿ ಕನ್ನಡದ ತೇರನ್ನು ಎಳೆದ ಗುರುಬಸವ ಸ್ವಾಮಿಗಳವರು’

ನರಗುಂದ

ಲಿಂಗೈಕ್ಯ ಗುರುಬಸವ ಸ್ವಾಮಿಗಳವರು ಪುಸ್ತಕ ಪ್ರೇಮಿಗಳಾಗಿದ್ದರು. ಗಡಿನಾಡ ಭಾಗದಲ್ಲಿ ಕನ್ನಡ ಭಾಷೆಯ ಉಳಿವಿಗಾಗಿ ಹಾಗೂ ಬೆಳವಣಿಗೆಗಾಗಿ ಬೆಳಗಾವಿ ಜಿಲ್ಲೆ ಚಿಂಚಣಿಯಲ್ಲಿ ಕನ್ನಡ ಜಾಗೃತಿ ಪುಸ್ತಕ ಮಾಲೆ ಮೂಲಕ ಹಲವಾರು ಮೌಲ್ವಿಕ ಗ್ರಂಥಗಳನ್ನು ಪ್ರಕಟಿಸಿದ್ದಾರೆ. ಗಡಿನಾಡ ಭಾಗದಲ್ಲಿ ಹಲವಾರು ಕನ್ನಡಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕನ್ನಡದ ಹಲವಾರು ಸಾಹಿತಿಗಳನ್ನು ಹಾಗೂ ಕನ್ನಡಪರ ಸಂಘಟನೆಗಳ ಮುಖಂಡರುಗಳನ್ನು ಕರೆಸಿ ಕನ್ನಡ ಜಾಗೃತಿಗಾಗಿ ಅರಿವು ಮೂಡಿಸಿದ್ದಾರೆ ಎಂದು ಗದಗ ತೋಂಟದಾರ್ಯ ಮಠದ ಡಾ. ಸಿದ್ಧರಾಮ ಮಹಾಸ್ವಾಮಿಗಳು ಹೇಳಿದರು.

ಚಿಂಚಣಿ, ಶಿರೋಳ ತೋಂಟದಾರ್ಯ ಶಾಖಾಮಠದ ಲಿಂಗೈಕ್ಯ ಗುರುಬಸವ ಮಹಾಸ್ವಾಮಿಗಳ ಪ್ರಥಮ ಪುಣ್ಯಸ್ಮರಣೆ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು.

ಶ್ರೀಗಳು ಪುಸ್ತಕೋತ್ಸವವನ್ನು ಮಾಡುತ್ತಿದ್ದರು. ಚಿಂಚಣಿ ಮಠದಲ್ಲಿ ಕನ್ನಡದ ತೇರನ್ನು ನಿರ್ಮಿಸಿ, ಪ್ರತಿವರ್ಷ ನವೆಂಬರ್ ತಿಂಗಳಲ್ಲಿ ಕನ್ನಡದ ತೇರನ್ನು ಎಳೆಯುತ್ತಿದ್ದರು. ಆ ಮೂಲಕ ಗಡಿಭಾಗದಲ್ಲಿ ಕನ್ನಡ ಭಾಷೆಯ ಉಳಿವಿಗಾಗಿ ನಿರಂತರ ಹೋರಾಟ ಮಾಡುತ್ತಾ ಬಂದಿದ್ದಾರೆ.

ಗದುಗಿನ ಲಿಂಗೈಕ್ಯ ಜಗದ್ಗುರುಗಳವರ ಪರಮ ಶಿಷ್ಯರಾಗಿದ್ದು, ಶಿರೋಳ ಮಠವನ್ನು ಉತ್ತುಂಗಕ್ಕೆ ತಂದಿದ್ದಾರೆ, ಇವರು ಬಸವತತ್ವದಂತೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ತತ್ವವನ್ನು ಪ್ರಚುರಪಡಿಸಿದ್ದಾರೆ. ಶಿರೋಳದ ಶ್ರೀ ತೊಂಟದಾರ್ಯ ಜಾತ್ರಾ ಮಹೋತ್ಸವದಲ್ಲಿ ಭಾವೈಕ್ಯತೆ ಸಾರುವ ಸಲುವಾಗಿ ರೊಟ್ಟಿ ಜಾತ್ರೆ ಆರಂಭಿಸಿದರು. ಪ್ರತಿ ಜಾತ್ರೆಯಲ್ಲಿ ಎಲ್ಲ ಜಾತಿಯ ವ್ಯಕ್ತಿಗಳನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿ ಅವರ ನೇತೃತ್ವದಲ್ಲಿ ಜಾತ್ರಾ ಕಾರ್ಯಕ್ರಮಗಳನ್ನು ನೆರವೇರಿಸುತ್ತಿದ್ದರು, ಹೀಗಾಗಿ ಇವರು ಜಗದ್ಗುರು ಸಿದ್ಧಲಿಂಗ ಮಹಾಸ್ವಾಮಿಗಳವರ ಪ್ರೀತಿಯ ಶಿಷ್ಯರಾಗಿದ್ದರು ಎಂದು ಸಿದ್ದರಾಮ ಶ್ರೀಗಳು ಹೇಳಿದರು.

ಮಠದ ಪೂಜ್ಯ ಶ್ರೀಶಾಂತಲಿಂಗ ಸ್ವಾಮಿಗಳವರು ಸಮ್ಮುಖ ವಹಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಶಿರೋಳ ಎಚ್ಚರಸ್ವಾಮಿಮಠದ ಎಚ್ಚರೇಶ್ವರ ಸ್ವಾಮಿಗಳು, ವೀರಯ್ಯ ಹಿರೇಮಠ ಹಾಗೂ ಅಕ್ಕಮಹಾದೇವಿ ಶರಣಮ್ಮನವರು ಉಪಸ್ಥಿತರಿದ್ದರು.

ಮುಖ್ಯ ಅತಿಥಿಗಳಾಗಿ ಬಾಗಲಕೋಟ ಸಂಸದರಾದ ಪಿ.ಸಿ. ಗದ್ದಿಗೌಡ್ರ, ನರಗುಂದದ ಬಿ.ಜೆ. ಪಿ ಯುವ ಮುಖಂಡರಾದ ಉಮೇಶಗೌಡ ಪಾಟೀಲ, ನರಗುಂದ ಕಾಂಗ್ರೆಸ್ ಯುವ ಮುಖಂಡರಾದ ಪ್ರವೀಣ ಯಾವಗಲ್ಲ ಹಾಗೂ ಭರತ ಕುಂಬಾರ ಭಾಗವಹಿಸಿದ್ದರು.

ಶಿರೋಳ ಗ್ರಾಮದ ಭಕ್ತರು ಹಾಗೂ ಮುಖಂಡರುಗಳು ಉಸ್ಥಿತರಿದ್ದರು. ಶಿರೋಳ ಶ್ರೀ ತೊಂಟಾದಾರ್ಯ ಮಠದ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಸ್ವಾಗತವನ್ನು ಉಮೇಶ ಮಾರಿಗುದ್ದಿ ಗೈದರು. ಪ್ರಾಸ್ತವಿಕವಾಗಿ ಬಾಪುಗೌಡ ತಿಮ್ಮನಗೌಡ ಮಾತನಾಡಿದರು. ನಿರೂಪಣೆಯನ್ನು ಸುನೀಲ ಕಳಸದ ನಿರ್ವಹಿಸಿದರು.

Share This Article
Leave a comment

Leave a Reply

Your email address will not be published. Required fields are marked *