ನಮ್ಮ ತಂದೆ ಧಾರವಾಡದಲ್ಲಿ ಪ್ರಿನ್ಸಿಪಾಲರಾಗಿ ಕೆಲಸ ಮಾಡಿದ್ದರಿಂದ ಪ್ರೊ ಎಂ ಎಂ ಕಲಬುರ್ಗಿಯವರ ಪರಿಚಯವಿತ್ತು. ನಾನೂ ಕೂಡ ಅನೇಕ ಬಾರಿ ಅವರ ಮನೆಗೆ ಹೋಗಿದ್ದೆ. ಕಡಿಮೆ ಮಕ್ಕಳಿರುವ ಸರಕಾರಿ ಶಾಲೆಗಳನ್ನು ಮುಚ್ಚಲು ಪ್ರಸ್ತಾವವಿದ್ದಾಗ ಅದರ ವಿರುದ್ಧ ನಡೆದ ಹೋರಾಟದಲ್ಲಿ ಪ್ರೊ ಕಲ್ಬುರ್ಗಿ ಮತ್ತು ಪಾಟೀಲ ಪುಟ್ಟಪ್ಪನವರ ಜೊತೆ ನಾನೂ ಸೇರಿಕೊಂಡಿದ್ದೆ.
ಪ್ರೊ ಕಲ್ಬುರ್ಗಿಯವರು ತಮ್ಮ ಒಂದು ಕಣ್ಣು ಬಸವಣ್ಣ ಮತ್ತೊಂದು ಕಣ್ಣು ಕನ್ನಡ ಎಂದು ಹೇಳುತ್ತಿದ್ದರು. ಅವರ ಕನ್ನಡ ಪ್ರೇಮವನ್ನು ಮತ್ತು ಹೋರಾಟದ ಹುರುಪನ್ನು ಕಣ್ಣಾರೆ ನೋಡುವ ಅವಕಾಶ ಒಮ್ಮೆ ನನ್ನದಾಗಿತ್ತು.
ಅವರ ಹತ್ಯೆಯಾಗುವ ನಾಲಕ್ಕು ವರ್ಷಗಳ ಮುಂಚಿನ ಮಾತಿದು. ನಾವಿಬ್ಬರು ಬೆಂಗಳೂರಿಗೆ ಬರಲು ರೈಲಿಗೆ ಕಾಯುತ್ತ ಧಾರವಾಡದ ರೈಲು ನಿಲ್ದಾಣದಲ್ಲಿ ಮಾತನಾಡುತ್ತ ಕುಳಿತ್ತಿದ್ದೆವು. ಬರುವ, ಹೋಗುವ ಎಲ್ಲಾ ರೈಲುಗಳ ಬಗ್ಗೆ ಧ್ವನಿವರ್ಧಕದಲ್ಲಿ ನಿರಂತರ ಘೋಷಣೆ ಸಾಗಿತ್ತು.
ಅವುಗಳೆಲ್ಲ ಹಿಂದಿ ಅಥವಾ ಇಂಗ್ಲಿಷ್ನಲ್ಲಿ ಮಾತ್ರವಿದ್ದುದ್ದು ಪ್ರೊ ಕಲ್ಬುರ್ಗಿಯವರನ್ನು ಕೆರಳಿಸಿತು. “ಇದು ಕನ್ನಡ ನಾಡಾಗಿದ್ದರೂ ಬೇರೆ ಭಾಷೆಗಳ ಹಾವಳಿ ಹೆಚ್ಚಾಗೇತಿ, ನಾವು ಸಹಿಸಿಕೊಂಡೇ ಇದ್ರೆ ಇದು ಹೆಚ್ಚಗಿ ಆಕ್ಕೊಂತ ಹೋಗತೈತಿ,” ಎಂದು ಸಿಟ್ಟಿನಿಂದ ಎದ್ದು ನಿಂತರು. ಸ್ಟೇಷನ್ ಮಾಸ್ಟರ್ ಕಚೇರಿಗೆ ಹೋಗಿ ಅಲ್ಲಿ ಆ ಅಧಿಕಾರಿಯನ್ನು ಕಂಡು ತೀವ್ರವಾಗಿ ದಬಾಯಿಸಿದರು.
ಕನ್ನಡದಲ್ಲಿ ವಿವರಣೆ ಕೊಡದೆ ಇದ್ದರೆ ಕರ್ನಾಟಕ ರಕ್ಷಣಾ ವೇದಿಕೆಯವರನ್ನು ಕಳುಹಿಸಿ ಹೋರಾಟ ಮಾಡಿಸ್ತೀನಿ ಅಂತ ಸಿಟ್ಟಿನಿಂದ ಹೇಳಿ ಬಂದರು. ಅವರ ಪ್ರತಿಭಟನೆಯ ಪರಿಣಾಮ ಏನಾಯಿತೋ ನಾನು ಗಮನಿಸಿಲ್ಲ.
ಆದರೆ ನಾವುಗಳು ಸಣ್ಣದು ಅಂತ ಉದಾಸೀನ ಮಾಡುವ ಇಂತ ವಿಷಯಗಳನ್ನೂ ಅವರು ಎಷ್ಟು ಗಂಭೀರವಾಗಿ ತೆಗೆದುಕೊಳ್ಳುತ್ತಿದ್ದರು ಅಂತ ಈ ವಿಷಯ ನೆನಪಾದಾಗೆಲ್ಲ ಅನಿಸುತ್ತದೆ.
ಈ ಒಂದು ಘಟನೆ ನನ್ನ ಹೋರಾಟಕ್ಕೆ ಇನ್ನೊಂದು ಆಯಾಮ ಸೇರಿಸಿತು. ನಾನು ಯಾವುದೇ ಬ್ಯಾಂಕು, ಅಂಚೆ ಕಚೇರಿ, LIC ಕಚೇರಿ, ರೇಲ್ವೆ ಕಚೇರಿ ಇತ್ಯಾದಿಗಳಲ್ಲಿ ಕನ್ನಡದಲ್ಲಿ ಸೇವೆ ಸಿಗದಿದ್ದಾಗ ಕರ್ನಾಟಕದಲ್ಲಿ ಕನ್ನಡ ನುಡಿಯಲ್ಲಿ ಸೇವೆ ನೀಡುವುದು ಕಡ್ಡಾಯ ಅಂತ ಅವರಿಗೆ ತಿಳಿ ಹೇಳುತ್ತೇನೆ ಅಥವಾ ಕೆಲವೊಮ್ಮೆ ಪ್ರತಿಭಟಿಸುತ್ತೇನೆ.
ಪ್ರಕಾಶ ಹೆಬ್ಬಳ್ಳಿ ಅವರು ಬೆಂಗಳೂರಿನಲ್ಲಿ Software Consultant ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಾಮಾಜಿಕ, ಶೈಕ್ಷಣಿಕ ಮತ್ತು ಕನ್ನಡ ಪರ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದಾರೆ.