ನರಗುಂದ:
ಕನ್ನಡದ ಜಗದ್ಗುರು ಡಾ. ತೋಂಟದ ಸಿದ್ಧಲಿಂಗ ಶ್ರೀಗಳ ಬಹುತೇಕ ಎಲ್ಲ ಆದರ್ಶಗಳನ್ನು ಮೈಗೂಡಿಸಿಕೊಂಡ ಪೂಜ್ಯ ಶಾಂತಲಿಂಗ ಶ್ರೀಗಳು ಅವರ ಮಾರ್ಗದಲ್ಲಿಯೇ ಸಾಗುತ್ತಿರುವುದು ಶ್ಲಾಘನೀಯವಾದುದು ಅವರು ಸಿದ್ಧಲಿಂಗ ಶ್ರೀಗಳ ಸಾಂಸ್ಕೃತಿಕ ರಾಯಭಾರಿ ಎಂದರೆ ತಪ್ಪಾಗಲಾರದು.
ಸರಕಾರದ ಅನುದಾನವನ್ನು ಬಯಸದೆ ನಿರಂತರವಾಗಿ ತಾಯಿ ಕನ್ನಡಾಂಬೆಯ ತೇರನ್ನೆಳೆಯುತ್ತಿರುವ ಶ್ರೀಮಠದ ಕನ್ನಡ ಕೈಂಕರ್ಯ ಸರ್ವರಿಗೂ ಮಾದರಿಯಾದುದು ಎಂದು ಕರ್ನಾಟಕ ವಿಶ್ವವಿದ್ಯಾಲಯ ಅಧ್ಯಾಪಕರ ಪರಿಷತ್ತಿನ ಅಧ್ಯಕ್ಷ ಡಾ. ವೈ.ಎಂ. ಭಜಂತ್ರಿ ಅಭಿಪ್ರಾಯಪಟ್ಟರು.
ತಾಲೂಕಿನ ಭೈರನಹಟ್ಟಿ ಗ್ರಾಮದ ಶ್ರೀ ದೊರೆಸ್ವಾಮಿ ವಿರಕ್ತಮಠದಲ್ಲಿ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಹಾಗೂ ಶ್ರೀ ದೊರೆಸ್ವಾಮಿ ವಿವಿದೋದ್ದೇಶ ಟ್ರಸ್ಟ್ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕನ್ನಡ ತಿಂಗಳು-೨೦೨೫ ಕನ್ನಡ ರಾಜರು ಉಪನ್ಯಾಸ ಮಾಲೆ ಸಮಾರೋಪ ಸಮಾರಂಭ ಹಾಗೂ ೩೭೭ನೇ ಮಾಸಿಕ ಶಿವಾನುಭವದಲ್ಲಿ ಅವರು ಮಾತನಾಡಿದರು.

ಇತಿಹಾಸವನ್ನು ಅರಿತವರು ಮಾತ್ರ ಇತಿಹಾಸವನ್ನು ಸೃಷ್ಠಿಸಬಹುದು ಆ ನಿಟ್ಟಿನಲ್ಲಿ ಕನ್ನಡದ ರಾಜರು ಎಂಬ ಶಿರ್ಷಿಕೆಯಡಿ ಕನ್ನಡ ನಾಡು ನುಡಿಗೆ ಕೊಡುಗೆಯನ್ನು ನೀಡಿದ ಅರಸರ ಬಗೆಗೆ ಜಾಗೃತಿಯನ್ನು ಮೂಡಿಸಿಸುತ್ತಿರುವ ಶ್ರೀಮಠದ ಕಾರ್ಯ ಅಭಿನಂದನೀಯ.
ಕನ್ನಡ ನಾಡಿನಲ್ಲಿ ಬಹುತೇಕ ರಾಜಮನೆತನಗಳು ಕನ್ನಡ ಭಾಷೆಯನ್ನು ಕಟ್ಟಿ ಬೆಳೆಸುವಲ್ಲಿ ತಮ್ಮದೆಯಾದ ವಿಶಿಷ್ಠ ಕೊಡುಗೆ ನೀಡಿದ್ದಾರೆ ಅಂತಹ ಮಹನೀಯರ ಇತಿಹಾಸವನ್ನು ಯುವಸಮುದಾಯಕ್ಕೆ ಮುಟ್ಟಿಸಿದ್ದು ಪ್ರಸ್ತುತವಾಗಿದೆ ಎಂದು ಹೇಳಿದರು.
ಸಮಾರೋಪ ನುಡಿಗಳನ್ನಾಡಿದ ಕರುನಾಡ ತಾರೆ ಪ್ರಶಸ್ತಿ ಪುರಸ್ಕೃತ ಡಾ. ಸಂಗಮೇಶ ತಮ್ಮನಗೌಡ್ರ ಮಾತನಾಡಿ, ಕನ್ನಡ ಭಾಷೆ ಅತ್ಯಂತ ಸಮೃದ್ಧವಾದ ಬಾಷೆ. ಅದು ಈಗಾಗಲೆ ಸಾಕಷ್ಟು ಬೆಳೆದಿದೆ, ಅದನ್ನು ಉಳಿಸಿಕೊಂಡು ಹೋಗುವಂತಹದು ಕರ್ನಾಟಕದಲ್ಲಿ ಜನಿಸಿದ ಪ್ರತಿಯೊಬ್ಬರ ಜವಾಬ್ಧಾರಿಯಾಗಿದೆ.
ಭಾಷೆ ಬಳಸಿದಷ್ಟು ಬೆಳೆಯುತ್ತಿದೆ ಹೀಗಾಗಿ ಪ್ರತಿಯೊಬ್ಬರು ಮಾತೃಭಾಷೆಯನ್ನು ಕೂಸಿನಂತೆ ಕಾಪಾಡಬೇಕಾಗಿದೆ. ಕನ್ನಡ ಎಂದರೆ ಕೇವಲ ಭಾಷೆಯಲ್ಲ ಅದು ಪ್ರತಿಯೊಬ್ಬ ಕನ್ನಡಿಗನ ಅಂತರಾಳದ ಆತ್ಮ ಅದನ್ನು ರಕ್ಷಣೆ ಮಾಡಬೇಕಾಗಿರುವುದು ನಮ್ಮೆಲ್ಲರ ಹೊಣೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರಬಂಧ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಮಹಾಲಕ್ಷ್ಮಿ ಚಂದನ್ನವರ ಹಾಗೂ ವಿಜ್ಞಾನ ಮಾದರಿ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ನಿವೇದಿತಾ ಹಡಪದ ಮತ್ತು ನಿವೃತ್ತ ಜವಾನ ನಿಂಗಪ್ಪ ಕುರಿ ಅವರನ್ನು ಶ್ರೀಮಠದಿಂದ ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಬಿ.ಎಂ. ಬೆಳಹಾರ, ಜಗದೀಶ ಜ್ಞಾನೋಪಂಥ, ಎಸ್.ಆರ್. ಅಬ್ಬಿಗೇರಿ, ಶಿವಾನಂದ ಶೇಬಣ್ಣವರ, ಬಿ.ಎಂ. ಗೊಜನೂರ, ಮಹಾಂತೇಶ ಸಾಲಿಮಠ, ಧರ್ಮೇಂದ್ರ ಇಟಗಿ, ಪ್ರೊ. ಪಿ.ಎಸ್. ಅಣ್ಣಿಗೇರಿ, ಕೆ.ಟಿ. ಪಾಟೀಲ ಪ್ರಮುಖರು ಉಪಸ್ಥಿತರಿದ್ದರು.
ಪ್ರೊ. ಆರ್. ಬಿ. ಚಿನಿವಾಲರ ಹಾಗೂ ಪ್ರೊ. ಆರ್. ಕೆ. ಐನಾಪೂರ ಕಾರ್ಯಕ್ರಮ ನಿರ್ವಹಿಸಿದರು.
